ಜಿಲ್ಲೆಯಲ್ಲಿ ಮಳೆಗೆ ರು. 29.13 ಕೋಟಿ ನಷ್ಟ
ಕಪ್ರ ವಾರ್ತೆ ಚಿಕ್ಕಮಗಳೂರು ಜು.11
ಮುಂಗಾರು ಮಳೆ ಆರಂಭವಾಗಿ ಒಂದು ತಿಂಗಳು ಕಳೆಯುವುದರೊಳಗೆ ಜಿಲ್ಲೆಯಲ್ಲಿ ವರುಣನ ಅಬ್ಬರಕ್ಕೆ ಆಗಿರುವ ನಷ್ಟ ರು. 29.13 ಕೋಟಿ. ನಿಖರವಾಗಿ ಹೇಳುವುದಾದರೆ, ರು. 2913.56 ಲಕ್ಷ. ಮಳೆಗೆ ಹಾನಿ ಸಂಭವಿಸಿದ್ದರಲ್ಲಿ ಹೆಚ್ಚಿನ ಪಾಲು ಮಲೆನಾಡು ಪ್ರದೇಶ.
ನೆರೆ ಪೀಡಿತ ಪ್ರದೇಶಗಳ ಜಿಲ್ಲೆಗಳಿಗೆ ತಾಲೂಕುವಾರು ಸಂಖ್ಯೆಗಳ ಆಧಾರದ ಮೇಲೆ ರಾಜ್ಯ ಸರ್ಕಾರ ಜೂ. 16 ರಂದು ಹಣ ಬಿಡುಗಡೆ ಮಾಡಿದೆ. 5 ಕ್ಕಿಂತ ಹೆಚ್ಚು ತಾಲೂಕುಗಳು ಹೊಂದಿರುವ ಜಿಲ್ಲೆಗಳಿಗೆ ರು. 20 ಲಕ್ಷ ಬಿಡುಗಡೆ ಮಾಡಿದ್ದು, ಆ ಪೈಕಿ ಚಿಕ್ಕಮಗಳೂರು ಜಿಲ್ಲೆಗೂ ರು. 20 ಲಕ್ಷ ಬಂದಿದೆ.
ಜಿಲ್ಲೆಗೆ ಆಗಿರುವ ನಷ್ಟ ರು. 29.13 ಕೋಟಿ. ಆದರೆ, ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದು ರು. 20 ಲಕ್ಷ. ಮಳೆ, ಪ್ರವಾಹದಿಂದಾಗಿ ಆಗಿರುವ ಜೀವಹಾನಿ, ಜಾನುವಾರು ಹಾನಿ, ಮನೆ ಹಾನಿ, ಬೆಳೆ ಹಾನಿಗೆ ಈವರೆಗೆ ರು. 13.094 ಲಕ್ಷ ಪರಿಹಾರ ವಿತರಣೆಯಾಗಿದೆ.
ಶೇ. 135.9 ಮಳೆ: ಕಳೆದ ಜನವರಿ 1 ರಿಂದ ಜುಲೈ 11ರವರೆಗೆ ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಅಂದರೆ, ಶೇ. 135.9 ರಷ್ಟು ಮಳೆಯಾಗಿದೆ. ಆದರೆ, ಇದು, ತಾಲೂಕು ಕೇಂದ್ರಗಳಲ್ಲಿ ಬಿದ್ದ ಮಳೆಯ ಅಂಕಿ ಅಂಶ ಮಾತ್ರ.
ಚಿಕ್ಕಮಗಳೂರು- ವಾಡಿಕೆ ಮಳೆ 357 ಮಿ.ಮೀ. (ಬಿದ್ದ ಮಳೆ- 523.2), ಕಡೂರು- 211 (248.6), ಕೊಪ್ಪ- 1114 (1421.6), ಮೂಡಿಗೆರೆ- 930 (1255.2), ಎನ್.ಆರ್.ಪುರ- 630 (912.6) ಶೃಂಗೇರಿ- 1430 (1970.9), ತರೀಕೆರೆ- 322 (453) ಮಿ.ಮೀ. ಮಳೆ ಬಿದ್ದಿದೆ. ಜಿಲ್ಲಾಡಳಿತ ಪ್ರತಿ ವರ್ಷ ತಾಲೂಕು ಕೇಂದ್ರಗಳಲ್ಲಿ ಬಿದ್ದ ಮಳೆಯ ವರದಿಯನ್ನು ಸರ್ಕಾರಕ್ಕೆ ಕಳುಹಿಸಿಕೊಡುತ್ತಿದೆ. ವಾಸ್ತವಿಕವಾಗಿ ಹೇಳುವುದಾದರೆ, ಕಡೂರು ಹಾಗೂ ತರೀಕೆರೆ ತಾಲೂಕಿನ ಕೆಲವು ಪ್ರದೇಶಗಳಿಗೆ ಈವರೆಗೆ ಸಮರ್ಪಕವಾಗಿ ಮಳೆ ಬಂದಿಲ್ಲ.
ಆದರೂ ಬಿತ್ತನೆಯಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚಿನ ಪ್ರಗತಿ ಸಾಧಿಸಲಾಗಿದೆ. ಮಲೆನಾಡಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಬಂದಿದೆ. ಇದರಿಂದಾಗಿ ಅಡಕೆ ಮತ್ತು ಕಾಫಿ ತೋಟಗಳಲ್ಲಿ ಕೀಟ ಬಾಧೆ ಕಾಣಿಸಿಕೊಂಡಿದೆ. ಬಯಲುಸೀಮೆಯಲ್ಲಿ ಇದಕ್ಕೆ ತದ್ವಿರುದ್ಧವಾದ ವಾತಾವರಣ ಇದೆ. ಸಕಾಲದಲ್ಲಿ ಮಳೆ ಇಲ್ಲದೆ ಬೆಳೆಗಳು ಒಣಗುತ್ತಿವೆ. ರೈತರಲ್ಲಿ ಆತಂಕ ಎದುರಾಗಿದೆ.
ನಷ್ಟ: ಜುಲೈ ತಿಂಗಳ ಆರಂಭದಲ್ಲಿ ಬಿಡುವಿಲ್ಲದೆ ಸುರಿದ ಮಳೆ ಅತಿ ಹೆಚ್ಚು ನಷ್ಟ ಸಂಭವಿಸಿದ್ದು ಮಲೆನಾಡಿನ ತಾಲೂಕುಗಳಲ್ಲಿ, ನೆರೆ ಬಂದಿದ್ದರಿಂದ ಕೆಲವು ಪ್ರದೇಶಗಳು ಜಲಾವ್ರತವಾಗಿದ್ದವು.
ಮತ್ತೆ ಕೆಲವೆಡೆ ರಸ್ತೆ ಸಂಪರ್ಕ ಕಡಿದು ಹೋಗಿತ್ತು. ಇದರಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿತ್ತು.
ಜಿಲ್ಲಾಡಳಿತ ಸರ್ಕಾರಕ್ಕೆ ಸಲ್ಲಿಸಿರುವ ವರದಿಯ ಪ್ರಕಾರ ಜಿಲ್ಲೆಯಲ್ಲಿ ಈವರೆಗೆ ಮಳೆಯಿಂದಾಗಿ ಆಗಿರುವ ನಷ್ಟ ರು. 29.13 ಕೋಟಿ ರುಪಾಯಿ. ಇದರಲ್ಲಿ ಮಲೆನಾಡಿನ ತಾಲೂಕುಗಳಲ್ಲಿ 190 ಹೆಕ್ಟೇರ್‌ಗಳಲ್ಲಿ ಬತ್ತದ ಸಸಿಮಡಿ ಹಾಳಾಗಿದ್ದು, ಇದರಿಂದ ರು. 12.11 ಲಕ್ಷ ರುಪಾಯಿಯಷ್ಟು ಹಾನಿ ಸಂಭವಿಸಿದೆ. ಜಿಲ್ಲೆಯಲ್ಲಿ 272.44 ಕಿ.ಮೀ. ವ್ಯಾಪ್ತಿಯ ರಸ್ತೆ ಹಾಳಾಗಿದ್ದು, ಇದರ ಅಂದಾಜು ಹಾನಿ ರು. 2002.80 ಲಕ್ಷ, 53 ಸೇತುವೆ ಮತ್ತು ಮೋರಿಗಳು ಹಾಳಾಗಿದ್ದು, ಇದರಿಂದ ರು. 312 ಲಕ್ಷ ನಷ್ಟವಾಗಿದೆ. 12 ಟ್ಯಾಂಕ್‌ಗಳು ಹಾಳಾಗಿದ್ದರಿಂದ ರು. 71 ಲಕ್ಷ, 52 ಸರ್ಕಾರಿ ಕಟ್ಟಡಗಳಿಗೆ ಹಾನಿಯಾಗಿದ್ದರಿಂದ ರು. 164.90 ಲಕ್ಷ, 3 ನೀರು ಸರಬರಾಜು ಕೇಂದ್ರಗಳಿಗೆ ಹಾನಿಯಾಗಿದ್ದರಿಂದ ರು. 21 ಲಕ್ಷ ಹಾಗೂ 74 ಭೂ ಕುಸಿತ ಉಂಟಾಗಿದ್ದು, ಇದರಿಂದ ರು. 329.75 ಲಕ್ಷ ಹಾನಿ ಸಂಭವಿಸಿದೆ.
ರು. 13.94 ಲಕ್ಷ ಪಾವತಿ: ಜಿಲ್ಲೆಯಲ್ಲಿ ಮಳೆ, ಪ್ರವಾಹದಿಂದಾಗಿ ಆಗಿರುವ ಜೀವಹಾನಿ, ಜಾನುವಾರು ಹಾನಿ, ಮನೆ ಹಾನಿ, ಬೆಳೆ ಹಾನಿಗಳಿಗೆ ಈವರೆಗೆ ರು. 13.94 ಲಕ್ಷ ರುಪಾಯಿ ಪಾವತಿಸಲಾಗಿದೆ.
ಈವರೆಗೆ ಜಿಲ್ಲೆಯಲ್ಲಿ 7 ಜೀವಹಾನಿಯಾಗಿದ್ದು, ಇವರಲ್ಲಿ 6 ಮಂದಿ ಸಿಡಿಲು ಬಡಿದು ಮೃತಪಟ್ಟಿದ್ದರೆ, ಓರ್ವರು ನೆರೆಗೆ ಸಿಲುಕಿ ಮೃತಪಟ್ಟಿದ್ದಾರೆ. ಮೃತ ಕುಟುಂಬಗಳಿಗೆ ತಲಾ ರು. 1.50 ಲಕ್ಷದಂತೆ ರು. 10.50 ಲಕ್ಷ ಪರಿಹಾರ ಪಾವತಿಸಲಾಗಿದೆ.
ಪ್ರವಾಹದಿಂದಾಗಿ 8 ಜಾನುವಾರುಗಳು ಮೃತಪಟ್ಟಿದ್ದು, ಇವುಗಳ ಮಾಲೀಕರಿಗೆ ರು. 59 ಸಾವಿರ ವಿತರಣೆ ಮಾಡಲಾಗಿದೆ.
ಹಾನಿ ಸಂಭವಿಸಿದ 30 ಮನೆಗಳ ಮಾಲೀಕರಿಗೆ ರು. 1.88 ಲಕ್ಷ ರುಪಾಯಿ ಪಾವತಿಸಲಾಗಿದೆ. ಇದರ ಜತೆಗೆ ಬೆಳೆ ಹಾನಿಗೆ ರು. 1200 ಪರಿಹಾರ ಪಾವತಿಸಲಾಗಿದೆ.
ತಾತ್ಕಾಲಿಕ ಪರಿಹಾರ: ಕಳೆದ ಮೂರು ವರ್ಷಗಳಿಂದ ಚಿಕ್ಕಮಗಳೂರು ಜಿಲ್ಲೆ ಪ್ರಕೃತಿಯ ಕೆಂಗಣ್ಣಿಗೆ ಗುರಿಯಾಗುತ್ತಿದೆ. ಒಂದೆಡೆ ಅತಿವೃಷ್ಠಿ, ಇನ್ನೊಂದೆಡೆ ಅನಾವೃಷ್ಠಿ. ಇವರೆಡು ಪರಿಸ್ಥಿತಿಗಳು ರೈತರಿಗೆ ಆಗಾಗ ಸಂಕಷ್ಟದ ದಿನಗಳನ್ನು ತಂದೊಡ್ಡುತ್ತಿವೆ.
ಮಳೆಯಿಂದಾಗಿ ಮಲೆನಾಡಿನಲ್ಲಿ ಪ್ರತಿ ವರ್ಷ ಅಪಾರ ಹಾನಿ ಸಂಭವಿಸುತ್ತಲೇ ಇದೆ. ಆದರೆ, ಸರ್ಕಾರ ಪ್ರಕೃತಿ ವಿಕೋಪದಡಿ ಜಿಲ್ಲೆಗೆ ನೀಡುತ್ತಿರುವ ಅನುದಾನದ ಪ್ರಮಾಣ ತೀರ ಕಡಿಮೆ. ಪ್ರಸಕ್ತ ಸಾಲಿನಲ್ಲಿ ಸರ್ಕಾರ ಬಿಡುಗಡೆ ಮಾಡಿರುವ ಅನುದಾನದಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಬಂದಿರುವುದು ಕೇವಲ ರು. 20 ಲಕ್ಷ. ಅಂದರೆ ನಿರೀಕ್ಷಿತ ಮಟ್ಟದಲ್ಲಿ ಸರ್ಕಾರದಿಂದ ಹಣ ಬಿಡುಗಡೆಯಾಗುತ್ತಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

