ಸರ್ಕಾರದ ಕ್ರಮ ವಿರೋಧಿಸಿ 13 ರಂದು ಪ್ರತಿಭಟನೆ
ಕಪ್ರ ವಾರ್ತೆ ಚಿಕ್ಕಮಗಳೂರು ಜು.11
ನಗರ ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗೆ ಬಿಜೆಪಿ ಸರ್ಕಾರದಲ್ಲಿ ಮಂಜೂರಾದ ಅನುದಾನವನ್ನು ಉದ್ದೇಶಪೂರ್ವಕವಾಗಿ ತಡೆಹಿಡಿದಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ನಗರ ಬಿಜೆಪಿ ಘಟಕದಿಂದ ಜು. 13 ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ನಗರ ಬಿಜೆಪಿ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಹೇಳಿದ್ದಾರೆ.
ಅಂದು ಬೆಳಿಗ್ಗೆ 11.30 ರಿಂದ 12.30ರವರೆಗೆ ನಗರ ಪ್ರವೇಶಿಸುವ 6 ಪ್ರಮುಖ ವೃತ್ತಗಳಲ್ಲಿ ಏಕ ಕಾಲದಲ್ಲಿ ರಸ್ತೆ ತಡೆ ನಡೆಸಿ ನಗರದ ಅಭಿವೃದ್ಧಿಗೆ ಅನ್ಯಾಯವಾಗುತ್ತಿರುವ ಕಾಂಗ್ರೆಸ್ ಧೋರಣೆಯ ಬಗ್ಗೆ ಜನರಿಗೆ ಮನವರಿಕೆ ಮಾಡಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜಕೀಯ ದುರುದ್ದೇಶ: ಶಾಸಕರು ವಿಶೇಷ ಕಾಳಜಿ ವಹಿಸಿ ಬಸವನಹಳ್ಳಿ ಕೆರೆ ಏರಿಯನ್ನು ದ್ವಿಪಥ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಿದ್ದಾರೆ. ಇದೇ ರಸ್ತೆಗೆ ಹೊಂದಿಕೊಂಡಿರುವ ಕತ್ರಿಮಾರಮ್ಮ ದೇವಸ್ಥಾನದ ಬಳಿ ಸೇತುವೆ ದುರಸ್ತಿ ಕಾಣದೇ ವಾಹನ ಸವಾರರು ಮೃತಪಟ್ಟಿರುವ ಅವಘಡಗಳು ಸಂಭವಿಸಿವೆ.
ಇಷ್ಟೆಲ್ಲ ಸಾವು ನೋವು ಸಂಭವಿಸಿರುವ ಈ ಸೇತುವೆ ಅಗಲೀಕರಣ ಮಾಡಿ ಅಭಿವೃದ್ಧಿಪಡಿಸಲು ಹಣ ಮಂಜೂರು ಮಾಡಿಸಿದರೆ ಇದನ್ನು ರಾಜಕೀಯ ದುರುದ್ದೇಶದಿಂದ ನೋಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಕೋಟ್ಯಂತರ ರುಪಾಯಿ ಹಣ: ಐ.ಜಿ. ರಸ್ತೆ ಮತ್ತು ಆರ್.ಜಿ. ರಸ್ತೆ ಅಗಲೀಕರಣದ ನಂತರ ಸಿಕ್ಕ ಅಲ್ಪ ಅವಧಿಯಲ್ಲೇ ಕೋಟ್ಯಂತರ ರುಪಾಯಿ ಹಣವನ್ನು ನೀಡಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಫುಟ್‌ಪಾತ್ ಒಳಗೊಂಡಂತೆ ರಸ್ತೆಯನ್ನು ಡಾಂಬರೀಕರಣ ಮಾಡಿ ಅಭಿವೃದ್ಧಿ ಪಡಿಸಲಾಯಿತು.
ಆ ಸಂದರ್ಭದಲ್ಲಿ ನಗರದ ಅಭಿವೃದ್ಧಿ ಸಹಿಸದ ಕಾಂಗ್ರೆಸ್ಸಿಗರು ಚುನಾವಣೆ ನೆಪವೊಡ್ಡಿ ಅಭಿವೃದ್ಧಿ ಕೆಲಸವನ್ನು ಸ್ಥಗಿತಗೊಳಿಸಿದ್ದರು. ಈ ಸಂಬಂಧ ಕ್ಷೇತ್ರದ ಜನತೆ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸಿದ್ದು ಬಹಿರಂಗ ಸತ್ಯ.
ಕಾಂಗ್ರೆಸ್ಸಿಗರು ಕಲ್ಲು ಹಾಕಿದ್ದಾರೆ: ರತ್ನಗಿರಿ ರಸ್ತೆಯ ಸೇತುವೆ ಅಭಿವೃದ್ಧಿಗೆ ಹಣ ಬಿಡುಗಡೆಯಾಗಿ ಟೆಂಡರ್ ಪ್ರಕ್ರಿಯೆ ಮುಗಿದಿದ್ದರೂ ಅದಕ್ಕೆ ತಡೆಯೊಡ್ಡಿದ್ದಾರೆಂದರೆ ಇವರ ಜನಪರ ಕಾಳಜಿಯನ್ನು ಪ್ರದರ್ಶಿಸುತ್ತದೆ. ಪಾರ್ವತಿಪುರ ರಸ್ತೆಯಲ್ಲಿರುವ ಮೇಲ್ಸೇತುವೆ ಹೊಸದಾಗಿ ಮಾಡಿ ಅಭಿವೃದ್ಧಿಪಡಿಸದಿದ್ದರೆ ನಿತ್ಯ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತದೆ ಎಂದು ಗ್ರಾಮಸ್ಥರ ದೂರುಗಳಿದ್ದವು.
ಕಿರಿದಾದ ಸೇತುವೆ ಅಗಲೀಕರಣ ಮಾಡದಿದ್ದರೆ ಅನಾಹುತ ತಪ್ಪಿದ್ದಲ್ಲ ಎಂದು ಪರಿಗಣಿಸಿ ಹಣ ಮಂಜೂರು ಮಾಡಿಸಿದರೆ ಅದಕ್ಕೂ ಕಾಂಗ್ರೆಸ್ಸಿಗರು ಕಲ್ಲು ಹಾಕಿರುವುದು ಗುಟ್ಟಾಗಿ ಉಳಿದಿಲ್ಲ ಎಂದು ಹೇಳಿದರು.
ಅಭಿವೃದ್ಧಿ ವಿರೋಧಿಗಳು: ನಗರದಲ್ಲಿ ಒಳಚರಂಡಿ ನಿರ್ಮಾಣ ಮಾಡಲಾಗುತ್ತಿದೆ. ಕೆಎಂಆರ್‌ಪಿ ಯೋಜನೆಯಡಿ ನಗರದ ವಿವಿಧ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ.
ಉಳಿದಂತೆ ಯುಜಿಡಿಗಾಗಿ ಅಗೆದಿರುವ ರಸ್ತೆಗಳನ್ನು ಅಭಿವೃದ್ಧಿಪಡಿಸಲು ನಗರೋತ್ಥಾನ ಯೋಜನೆಯಡಿ 30 ಕೋಟಿ ರುಪಾಯಿ ಹಣ ಬಿಜೆಪಿ ಸರ್ಕಾರ ಮಂಜೂರು ಮಾಡಿದ್ದು, ಜಿಲ್ಲಾಧಿಕಾರಿಗಳ ಬಳಿ ಕಡತ ಬಂದಿದೆ. ಸರ್ಕಾರ ಬದಲಾದ ಹಿನ್ನಲೆಯಲ್ಲಿ ಕಾಂಗ್ರೆಸ್‌ನ ಕೆಲವು ಅಭಿವೃದ್ಧಿ ವಿರೋಧಿಗಳು ಜಿಲ್ಲಾಧಿಕಾರಿಗಳಿಂದ ಹಣ ಬಿಡುಗಡೆಯಾಗದಂತೆ ತಡೆ ಹಾಕಿದ್ದಾರೆ.
ಈ ಹಣ ಬಿಡುಗಡೆಯಾಗಿದ್ದರೆ ನಗರದ ಎಲ್ಲಾ ರಸ್ತೆಗಳು ಡಾಂಬರೀಕರಣಗೊಳ್ಳಲಿವೆ ಎಂದು ತಿಳಿಸಿದರು.
ಮಂಜೂರಾದ ಹಣವನ್ನು ತಡೆಹಿಡಿಯಬೇಕೆಂದು ಹೇಳಿಲ್ಲ, ಪರಿಶೀಲಿಸುವಂತೆ ಸರ್ಕಾರವನ್ನು ಮನವಿ ಮಾಡಲಾಗಿದೆ ಎಂದು ಸುಳ್ಳು ಹೇಳಿರುವ ಕಾಂಗ್ರೆಸ್ಸಿಗರು ಜನರ ಮುಂದೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ ವರಸಿದ್ಧಿ ವೇಣುಗೋಪಾಲ್, ಮಂಜೂರಾದ ಹಣವನ್ನು ತಡೆ ಹಿಡಿರುವುದನ್ನು ಖಂಡಿಸಿ ಚಿಕ್ಕಮಗಳೂರಿನ ಶಾಸಕ ಸಿ.ಟಿ. ರವಿ ಹಾಗೂ ಶೃಂಗೇರಿ ಕ್ಷೇತ್ರದ ಶಾಸಕ ಡಿ.ಎನ್. ಜೀವರಾಜ್ ಅವರು ಜು. 15 ರಂದು ವಿಧಾನಸಭೆಯ ಅಧಿವೇಶನದಲ್ಲಿ ಧರಣಿ ನಡೆಸಲಿದ್ದಾರೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

