ಚಿಕ್ಕಮಗಳೂರು

ಭರವಸೆ ಈಡೇರಿಸಲು ನಿರಂತರ ಪ್ರಯತ್ನ

Published On :

ಕ.ಪ್ರ.ವಾರ್ತೆ, ಶೃಂಗೇರಿ, ಜು.15
ಚಿಕ್ಕಮಗಳೂರು- ಉಡುಪಿ ಲೋಕಸಭಾ ಉಪಚುನಾವಣೆ ವೇಳೆಯಲ್ಲಿ ಮಲೆನಾಡು ಭಾಗದ ಅಡಕೆ ಬೆಳೆಗಾರರ ಸಮಸ್ಯೆ, ಗೋರಕ್ ಸಿಂಗ್ ವರದಿ ಅನುಷ್ಠಾನ, ಸಾಲಮನ್ನಾ ವಿಚಾರಗಳ ಬಗ್ಗೆ ಭರವಸೆ ನೀಡಿದ್ದೆವು. ಅದರಂತೆ ನಿರಂತರ ಪ್ರಯತ್ನ ನಡೆಸುತ್ತಲೇ ಇದ್ದೇವೆ ಎಂದು ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ತಿಳಿಸಿದರು.
ಅವರು ಸೇಮವಾರ ಪಟ್ಟಣದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಸ್ಪಂದನೆ ಮುಖ್ಯ: ಸುಳ್ಳು ಭರವಸೆ ನೀಡಿ ಚುನಾವಣೆಯಲ್ಲಿ ಗೆದ್ದು ಅಡಕೆ ಬೆಳೆಗಾರರಿಗೆ ವಂಚಿಸಿದ್ದಾರೆ ಎಂದೇ ಬಿಂಬಿಸಲಾಗುತ್ತಿದೆ. ತನಗೆ ಜನಸಾಮನ್ಯರ ಸಮಸ್ಯೆಗಳಿಗೆ ಸ್ಪಂದಿಸುವುದೇ ಮುಖ್ಯ ಹೊರತು ಕೇವಲ  ರಾಜಕಾರಣವಲ್ಲ ಎಂದರು.
ಕ್ಷೇತ್ರದ್ಯಾಂತ ನಿರಂತರ ಪ್ರವಾಸ ಮಾಡಿ ಸಮಸ್ಯೆಗೆ ಸ್ಪಂದಿಸಿ, ಪರಿಹಾರಕ್ಕೆ ಯತ್ನಿಸುತ್ತಲೇ ಇದ್ದೇನೆ. ಈ ಭಾಗದ ಅಡಕೆ ಬೆಳೆಗಾರರ ಸಮಸ್ಯೆಯ ಅರಿವಿದೆ. ಅವರ ಬೇಡಿಕೆ ಈಡೇರಿಸಲು ಕೇಂದ್ರ ಕೃಷಿ, ಹಣಕಾಸು ಸಚಿವರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಶೀಘ್ರದಲ್ಲಿ ಈ ಸಮಸ್ಯೆ ಪರಿಹರಿಸಲಾಗುವುದು. ಅಡಕೆ ಹಳದಿ ರೋಗ ಪ್ಯಾಕೇಜ್ ಬಿಡುಗಡೆ, ಸಾಲಮನ್ನಾ, ಪರ್ಯಾಯ ಬೆಳೆ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ನಾವು ಕೇವಲ ಚುನಾವಣೆ ದೃಷ್ಟಿಯಿಂದ ಇದನ್ನು ಹೇಳಿಲ್ಲ. ಬಿಜೆಪಿ, ಜೆಡಿಎಸ್‌ಗಳು ಇದನ್ನೇ ಟೀಕಾ ವಸ್ತುವನ್ನಾಗಿ ಬಳಸಿಕೊಂಡಿದೆ ಎಂದರು.
ಸೇವಕರಾಗಿ ಕೆಲಸ: ಅಧಿಕಾರಿಗಳು ಯಾವುದೇ ಒತ್ತಡಗಳಿಂದ ಕೆಲಸ ಮಾಡದೇ ಜನರ ಸೇವಕರಾಗಿ ಕೆಲಸ ಮಾಡಬೇಕು. ಯಾವುದೇ ಪಕ್ಷದ ಪರವಾಗಿ ಕೆಲಸ ಮಾಡುವ ಅಗತ್ಯವಿಲ್ಲ. ಪಕ್ಷಪಾತ ನಡೆಸದೇ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕು. ಅಭಿವೃದ್ಧಿ ಕಾರ್ಯಗಳಿಗೆ ಒಳ್ಳೆ ಮನಸ್ಸು ಇರಬೇಕು. ಕೇವಲ ಅಧಿಕಾರವೊಂದಿದ್ದರೆ ಸಾಲದು ಎಂದರು..
ಕೆಪಿಸಿಸಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಲ್. ಮೂರ್ತಿ ಮಾತನಾಡಿ, ಅಡಕೆ ಬೆಳೆಗಾರ ಸಮಸ್ಯೆಗೆ ಸ್ಪಂದಿಸುತ್ತಿದ್ದೇವೆ. ಈ ಅಧಿವೇಶನ ಮುಗಿದ ನಂತರ ಸಭೆ ಕರೆದು ಚರ್ಚೆ ನಡೆಸಿ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಿ ಅವರ ಗಮನಕ್ಕೆ ತರಲಾಗುವುದು. ನಿಜವಾಗಿ ತೊಂದರೆಗೊಳಗಾದ ರೈತರಿಗೆ ಪರಿಹಾರ ನೀಡಲಾಗುವುದು. ಒತ್ತುವರಿ ಸಮಸ್ಯೆ, ನೀರಾವರಿ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆ ಬಗ್ಗೆ ಚರ್ಚಿಸಿ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದರು.
ಉಡುಪಿ ಜಿಲ್ಲಾ ಕಾಂಗ್ರೆಸ್‌ನ ಅಮರನಾಥ ಶೆಣೈ, ಕೆಪಿಸಿಸಿ ಕಿಸಾನ್ ಘಟಕದ ರಾಜ್ಯ ಉಪಾಧ್ಯಕ್ಷ ಸಚಿನ್ ಮೀಗ, ಎಐಸಿಸಿ ಸದಸ್ಯೆ ಬಿ.ಸಿ. ಗೀತ, ರಾಜಶೇಖರ್, ನಟರಾಜ್, ಕಾನೋಳ್ಳಿ ಕೃಷ್ಣಪ್ಪ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.