ಒತ್ತುವರಿ ಅರಣ್ಯ ಭೂಮಿ ತೆರವಿಗೆ ಆಗ್ರಹ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜು.23
ಜಿಲ್ಲೆಯ ಘೋಷಿತ ಮೀಸಲು ಅರಣ್ಯದಲ್ಲಿರುವ ಒತ್ತುವರಿ ಭೂಮಿಯನ್ನು ತೆರವುಗೊಳಿಸುವಂತೆ ಪರಿಸರವಾದಿಗಳು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಅಧಿಕೃತ ಅರಣ್ಯ ಎಂದು ಘೋಷಿತವಾಗಿರುವ ಮೀಸಲು ಅರಣ್ಯ ಸೇರಿದಂತೆ ಅಭಯಾರಣ್ಯ, ರಾಷ್ಟ್ರೀಯ ಉದ್ಯಾವನ ಪ್ರದೇಶದ ಒತ್ತುವರಿ ತೆರವು ಕಾರ್ಯ ಸ್ವಾಗತಾರ್ಹ ಎಂದು ಭದ್ರಾ ವೈಲ್ಡ್ ಲೈಫ್ ಕನ್ವೆನ್ಷನ್ ಟ್ರಸ್ಟ್ನ ಡಿ.ವಿ. ಗಿರೀಶ್, ವೈಲ್ಡ್ ಕ್ಯಾಟ್- ಸಿ ಶ್ರೀದೇವ್ ಹುಲಿಕೆರೆ, ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸ. ಗಿರಿಜಾಶಂಕರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈಗಾಗಲೇ ಘೋಷಿತವಾಗಿರುವ ಅರಣ್ಯ ಭೂಮಿ ಒತ್ತುವರಿ ಕಾನೂನು ವಿರೋಧಿ ಹಾಗೂ ಸವೋಚ್ಚ ನ್ಯಾಯಾಲಯ ಈ ಪ್ರಕರಣಗಳಲ್ಲಿ ಒಟ್ಟು ಭೂ ಭಾಗದಲ್ಲಿ ಇರಬೇಕಾದ ಅರಣ್ಯದ ಪ್ರಮಾಣ ರಕ್ಷಣೆಗೆ ತನ್ನ ಆದೇಶಗಳ ಮೂಲಕ ತೆರವುಗೊಳಿಸಲು ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಮತ್ತು ವಾತಾವರಣದಲ್ಲಾಗುತ್ತಿರುವ ಏರುಪೇರು, ಕುಡಿಯುವ ನೀರಿನ ಮೂಲಗಳ ಸಂರಕ್ಷಣೆ ಹಿನ್ನೆಲೆಯಲ್ಲಿ ರಕ್ಷಿತಾರಣ್ಯಗಳ ಉಳಿವು ಅನಿವಾರ್ಯ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಒತ್ತುವರಿದಾರರೂ ತೆರವಿಗೆ ಸಹಕರಿಸಬೇಕೆಂಬುದು ಮನವಿ ಮಾಡಿದ್ದಾರೆ.
40 ಸಾವಿರ ಎಕರೆ ಘೋಷಿತ ಅರಣ್ಯ ಒತ್ತುವರಿ: ಜಿಲ್ಲೆಯಲ್ಲಿ ಒಟ್ಟು ನಾಲ್ಕು ಅರಣ್ಯ ವಿಭಾಗಗಳಿದ್ದು, ಚಿಕ್ಕಮಗಳೂರು, ಕೊಪ್ಪ ಪ್ರಾದೇಶಿಕ ಅರಣ್ಯ ವಿಭಾಗಗಳು, ಕುದುರೆಮುಖ ಹಾಗೂ ಭದ್ರಾ ವನ್ಯಜೀವಿ ವಿಭಾಗ ಮತ್ತು ಭದ್ರಾವತಿ ಅರಣ್ಯ ವಿಭಾಗಕ್ಕೆ ಸೇರಿರುವ ತರೀಕೆರೆ ತಾಲೂಕಿನ ಕೆಲವು ಭಾಗದಲ್ಲಿ ಒಟ್ಟು 40 ಸಾವಿರ ಎಕರೆ ಘೋಷಿತ ಅರಣ್ಯ ಒತ್ತುವರಿಯಾಗಿದೆ. ಒತ್ತುವರಿದಾರರ ಸಂಖ್ಯೆಯನ್ನು ತೆಗೆದುಕೊಂಡಾಗ ಇದು 4 ಸಾವಿರದಿಂದ 5 ಸಾವಿರ ಮಂದಿಯಾಗಬಹುದು. 5 ಸಾವಿರ ಮಂದಿ ಅರಣ್ಯ ಒತ್ತುವರಿದಾರರ ಬಗ್ಗೆ ಧ್ವನಿ ಎತ್ತುವ ಪ್ರತಿನಿಧಿಗಳು, ಜಿಲ್ಲೆಯ ಜನಸಂಖ್ಯೆಯ ಉಳಿದ 11 ಲಕ್ಷ ಮಂದಿಯ ಬಗ್ಗೆ ಯೋಚಿಸುತ್ತಿಲ್ಲವೆನಿಸುತ್ತದೆ.
ತೆರವುಗೊಳಿಸಬಾರದು: ಕೆಲವರು ಸಿ ಮತ್ತು ಡಿ ದರ್ಜೆ ಭೂಮಿಯನ್ನು ಒತ್ತುವರಿ ಮಾಡುವವರಿಂದ ತೆರವುಗೊಳಿಸಿ ಅವರನ್ನು ಭೂ ರಹಿತರನ್ನಾಗಿ ಮಾಡಬಾರದೆಂದು ವಾದಿಸುತ್ತಿದ್ದಾರೆ. ಆದರೆ. ಈ ಸಂಬಂಧ ಎಲ್ಲರೂ ಯೋಚಿಸಬೇಕು, ಈ ದೇಶದ ಕಾನೂನಿನಂತೆ ಒತ್ತುವರಿಯೆಂದಾದಕ್ಷಣ ಅದು ಅಕ್ರಮ ಮತ್ತು ಕಾನೂನುಬಾಹಿರವಾಗುತ್ತದೆ. ಆದ್ದರಿಂದ ಸರ್ಕಾರಕ್ಕೆ ಸೇರಿದ ಯಾವುದೇ ರೀತಿ ಭೂಮಿಯಾದರೂ ಅದರಲ್ಲೂ ಅದು ಅರಣ್ಯ ಭೂಮಿಯಾಗಿದ್ದರೆ ಅದನ್ನು ತೆರವುಗೊಳಿಸಲೇಬೇಕು.
ವ್ಯತಿರಿಕ್ತ ಪರಿಣಾಮ: ಕಾನೂನಿನಂತೆ ಮುಂದಿನ ದಿನಗಳಲ್ಲಿ ಆ ಭೂಮಿಯನ್ನು ಹಿಂದಕ್ಕೆ ಪಡೆದು ಮಂಜೂರು ಮಾಡಿಸಿಕೊಳ್ಳಬಹುದು. ಕಾನೂನಿನ ಅಡಿ ಪರಿಹಾರ ಕಂಡುಕೊಳ್ಳುವುದು, ಮುಂದಿನ ದಿನಗಳಲ್ಲಿ ಆಗಬಹುದಾದ ಅಥವಾ ಬದಲಾಗಬಹುದಾದ ಕಾನೂನಿನ ದೃಷ್ಟಿಯಲ್ಲಿ ಒಳ್ಳೆಯದು ಎನಿಸುತ್ತದೆ. ಒತ್ತುವರಿ ತೆರವುಗೊಳಿಸದಂತೆ ಪ್ರತಿಭಟನೆಗಳು ಆರಂಭವಾಗಿವೆ. ಆದರೆ, ಅರಣ್ಯ ಭೂಮಿಯನ್ನು ತೆರವುಗೊಳಿಸದೆ ಹಾಗೆ ಬಿಡುವುದರಿಂದ ಅದರಿಂದಾಗುವ ವ್ಯತಿರಿಕ್ತ ಪರಿಣಾಮಗಳನ್ನು ಮತ್ತೆ ಈ ಸಮಾಜವೇ ಎದುರಿಸಬೇಕಾಗುತ್ತದೆ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕಾನೂನುಬದ್ಧವಾಗಿ ಭೂಮಿಯನ್ನು ಪಡೆಯುವ ಸಂಪ್ರದಾಯ ಉತ್ತಮ ಎನಿಸುತ್ತದೆ. ನ್ಯಾಯಾಲಯದ ತೀರ್ಮಾನವನ್ನು ದಿಕ್ಕರಿಸದೆ, ನ್ಯಾಯಸಮ್ಮತವಾಗಿ ಭೂಮಿ ಪಡೆಯುವ ಮಾರ್ಗಗಳನ್ನು ಹುಡುಕಬೇಕಾಗಿದೆ.
ಜಿಲ್ಲೆಯಾದ್ಯಂತ ಒಟ್ಟು 15,508 ಮಂದಿ 39,555 ಎಕರೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿರುವುದು ದಾಖಲೆಗಳಿಂದ ತಿಳಿದು ಬರುತ್ತದೆ. ಇದರಲ್ಲಿ ಚಿಕ್ಕಮಗಳೂರು ತಾಲೂಕಿನಲ್ಲಿ 1,791 ಮಂದಿ, 9,446 ಎಕರೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿದರೆ, ಕೊಪ್ಪ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅರಣ್ಯ ಭೂಮಿ ಒತ್ತುವರಿಯಾಗಿದೆ. ಈ ತಾಲ್ಲೂಕಿನಲ್ಲಿ ಒಟ್ಟು 7,168 ಕುಟುಂಬಗಳು 24,017 ಎಕರೆ ಭೂಮಿಯನ್ನು ಒತ್ತುವರಿ ಮಾಡಿವೆ. ತರೀಕೆರೆ ತಾಲ್ಲೂಕಿನಲ್ಲಿ 1,804 ಮಂದಿ 4,722 ಎಕರೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ.
ಲಕ್ಕವಳ್ಳಿ ಅರಣ್ಯ ಪ್ರದೇಶದಲ್ಲೂ ಒತ್ತುವರಿಯಾಗಿದ್ದು, ಇಲ್ಲಿ 542 ಮಂದಿ 1,325 ಎಕರೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿದ್ದರೆ, ಕುದುರೆಮುಖದಲ್ಲಿ 122 ಮಂದಿ 175 ಎಕರೆ ಭೂಮಿ ಒತ್ತುವರಿ ಮಾಡಿಕೊಂಡಿದ್ದು, ಭದ್ರಾ ವನ್ಯಜೀವಿ ವಿಭಾಗದಲ್ಲಿ 81 ಮಂದಿ 270 ಎಕರೆ ಭೂಮಿಯನ್ನು ಒತ್ತುವರಿ ಮಾಡಿದ್ದಾರೆ.
ಕೆಲವು ಕಡೆ ಒತ್ತುವರಿಯನ್ನು ಅರಣ್ಯ ಇಲಾಖೆ ತೆರವು ಮಾಡಿದೆ. ಆ ರೀತಿ 756 ಕುಟುಂಬಗಳು ಒತ್ತುವರಿ ಮಾಡಿದ್ದ 2,282 ಎಕರೆ ಭೂಮಿ ತೆರವುಗೊಳಿಸಲಾಗಿದೆ. ಇನ್ನೂ 37,245 ಎಕರೆ ಒತ್ತುವರಿ ತೆರವಾಗಬೇಕಾಗಿದೆ.
ಜಿಲ್ಲೆಯ ಅರಣ್ಯ ಸಂಪತ್ತು ನಶಿಸಿದರೆ ಆಗುವ ಅನಾಹುತಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿ ಅರಣ್ಯಗಳ ಪ್ರಾಮುಖ್ಯತೆ ಹಾಗೂ ಅನಿವಾರ್ಯತೆಯನ್ನು ಅರ್ಥಮಾಡಿಕೊಂಡು ಮಾತನಾಡುತ್ತಿಲ್ಲವೆಂದು ಹೇಳಬೇಕಾಗಿದೆ.
ಮನುಷ್ಯ ಹಾಗೂ ಪ್ರಾಣಿ ಸಂಕುಲದ ಉಳಿವಿಗೆ ಅರಣ್ಯಗಳು ಉಳಿಯಬೇಕೆಂದು ಜನಪ್ರತಿನಿಧಿಗಳು ಇಂದು ಧ್ವನಿಯೆತ್ತಬೇಕಾಗಿದೆ. ಒತ್ತುವರಿದಾರರ ಮನಮೊಲಿಸಿ, ಅವರ ಬದುಕಿಗೆ ಬೇರೆ ಮಾರ್ಗ ಹುಡುಕುವ ಕೆಲಸವನ್ನೂ ಮಾಡಬೇಕು. ಅತ್ಯಂತ ಕಡಿಮೆ ಭೂಮಿಯನ್ನು ಒತ್ತುವರಿ ಮಾಡಿರುವವರ ಬದುಕಿನ ಬಗ್ಗೆ ಆಲೋಚನೆ ಮಾಡಬೇಕಾದದ್ದು ಅತ್ಯಂತ ಅವಶ್ಯಕ. ಆ ಹಿನ್ನೆಲೆಯಲ್ಲಿ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಘೋಷಿತ ಅರಣ್ಯಗಳ ಒತ್ತುವರಿಯನ್ನು ನಿಲುಗಡೆ ಮಾಡಬಾರದು. ಶೇ.3 ರಷ್ಟಿರುವ ರಕ್ಷಿತಾರಣ್ಯ ಸೇರಿದಂತೆ ಉಳಿದ ಘೋಷಿತ ಅರಣ್ಯಗಳ ರಕ್ಷಣೆ ಎಲ್ಲಾ ದೃಷ್ಟಿಯಿಂದಲೂ ಅತ್ಯಂತ ಅನಿವಾರ್ಯ. ಈ ಹಿನ್ನೆಲೆಯಲ್ಲಿ ಸರ್ಕಾರ ಅಧಿಕಾರಿಗಳ ಮೇಲೆ ಒತ್ತಡ ಹಾಕದೆ ಈ ಘೋಷಿತ ಅರಣ್ಯಗಳ ರಕ್ಷಣೆ ಬಗ್ಗೆ ಬಿಗಿ ನಿಲುವು ತಾಳಬೇಕೆಂದು ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

