ವಚನ ಸಾಹಿತ್ಯ ಬದುಕಿನ ಸಿಂಚನ: ರಾಜೇಗೌಡ
ಕ.ಪ್ರ.ವಾರ್ತೆ,ಚಿಕ್ಕಮಗಳೂರು,ಜು.25
ಬದುಕಿಗೆ ಬೇಕಾದ ಸಾರ ಸತ್ವವನ್ನು ನೀಡಿದ ವಚನ ಸಾಹಿತ್ಯ ಬದುಕಿನ ಸಿಂಚನ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ ಹೇಳಿದರು.
ಉಪ್ಪಳ್ಳಿಯ ಮಾಡೆಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮತ್ತು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಗುರುವಾರ ಆಯೋಜಿಸಿದ್ದ ಲಿಂ. ಮುಗುಳವಳ್ಳಿ ನಂಜಪ್ಪಶೆಟ್ಟಿ ಸ್ಮಾರಕ ತಾಲೂಕು ಮಟ್ಟದ ವಚನ ಸೌರಭ ವಚನ ಗಾಯನ, ಪ್ರಬಂಧ, ರಸಪ್ರಶ್ನೆ ಸ್ಪರ್ಧೆಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಚನ ಮಾರ್ಗದರ್ಶಿ: ವಚನ ಸಾಹಿತ್ಯ ಬದುಕಿನಲ್ಲಿ ಹೊಸ ಆಯಾಮುವನ್ನು ಕಟ್ಟಿ ಕೊಟ್ಟಿದ್ದು, ಅತ್ಯಂತ ಸರಳವಾಗಿ ಜನಪ್ರಿಯಗೊಂಡಿದೆ. 12ನೇ ಶತಮಾನದ ಈ ವಚನಾಮೃತ ಸವಿದಷ್ಟೂ ಸಿಹಿ. ಇದನ್ನು ಮಕ್ಕಳಿಗೆ ಪರಿಚಯಿಸುವ ಅತ್ಯುತ್ತಮ ಯೋಜನೆ ವಚನ ಸೌರಭ ಎಂದ ರಾಜೇಗೌಡ, ವಚನಕಾರರ ಆಶಯಗಳು ನಮಗಿಂದು ಮಾರ್ಗದರ್ಶಿಯಾಗಿದೆ ಎಂದರು.
ಪ್ರಧಾನ ಭಾಷಣ ಮಾಡಿದ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಚಟ್ನಳ್ಳಿ ಮಹೇಶ್, ಅರಿವೇ ಗುರು, ಆಚಾರವೇ ಶಿಷ್ಯ ಎಂದು ವಚನ ಸಾಹಿತ್ಯ ಸಾರುವ ಮೂಲಕ ಶಿಕ್ಷಣದ ಮಹತ್ವವನ್ನು ಎತ್ತಿ ಹಿಡಿದಿದೆ. ನಮ್ಮ ಪರಂಪರೆಯ ವಾರಸುದಾರರು ವಚನಕಾರರು. ಸ್ವಾತಂತ್ರ್ಯ, ಸಹೋದರತೆ ಮತ್ತು ಸಮಾನತೆಯನ್ನು 800 ವರ್ಷಗಳ ಹಿಂದೆಯೆ ಪ್ರತಿಪಾದಿಸಿದ್ದು ವಚನ ಸಾಹಿತ್ಯ. ಶರಣರ ಬದುಕು ಮತ್ತು ಬರಹದಲ್ಲಿ ಸಮಕಾಲೀನ ಸಂದರ್ಭದ ಎಲ್ಲಾ ಸಮಸ್ಯೆಗಳಿಗೆ ಸಮೃದ್ಧ ಪರಿಹಾರಗಳಿವೆ ಎಂದು ಹೇಳಿದರು.
ಮೌಲ್ಯಗಳನ್ನು ಬೆಳೆಸಬೇಕಾಗಿದೆ: ವಚನಗಳಲ್ಲಿ ಶಬ್ಧ ಚಮತ್ಕಾರದ ಜೊತೆಗೆ ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ಜವಾಬ್ದಾರಿಯಿದೆ. ಮನಸ್ಸನ್ನು ಹದ- ಮುದಗೊಳಿಸುತ್ತದೆ. ಮಕ್ಕಳ ಮನಸ್ಸಿನಲ್ಲಿ ಸತ್ಯ, ಶಾಂತಿ, ಕರುಣೆ, ಪರೋಪಕಾರ, ಭಕ್ತಿ ಮತ್ತಿತರ ಸದ್ಗುಣಗಳ ಸದ್ಭಾವನೆಗಳ ಮೌಲ್ಯ ಬಿತ್ತಿ ಬೆಳೆಯುವ ಅಗತ್ಯವಿದೆ ಎಂದರು.
ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಪ್ರಭುಲಿಂಗಶಾಸ್ತ್ರಿ ಮಾತನಾಡಿ, ವಚನವೆಂದರೆ ಬರಿ ಮಾತಲ್ಲ, ಅದೊಂದು ಬದುಕಿನ ಭರವಸೆ. ನಡೆ ನುಡಿ ಒಂದಾಗುವುದೆ ವಚನ ಸಾಹಿತ್ಯದ ಅಶಯವೆಂದರು.
ಮಾಡೆಲ್ ಶಾಲಾ ಪ್ರಾಂಶುಪಾಲ ಎಂ.ಎನ್. ಷಡಕ್ಷರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಯಕ, ದಾಸೋಹ, ಸುಸಂಸ್ಕೃತ ನಡವಳಿಕೆಯನ್ನು ಕಲಿಸುವ ವಚನ ಸಾಹಿತ್ಯ ವ್ಯಾಪಕವಾಗಬೇಕು. ಶರಣರ ಅಶಯದಂತೆ ಬದುಕಿ ಬಾಳಿದ ಮುಗುಳವಳ್ಳಿ ನಂಜಪ್ಪಶೆಟ್ಟರ ಸ್ಮರಣಾರ್ಥ ವಚನ ಸೌರಭವನ್ನು ಆಯೋಜಿಸಿದ್ದು ನಿರಂತರವಾಗಿ ನಡೆಸಿಕೊಂಡು ಹೋಗುವ ಆಶಯವಿದೆ. ವಿಜೇತರಿಗೆ ಬಹುಮಾನಗಳ ಜೊತೆಗೆ ಸುಂದರ ರೋಲಿಂಗ್ ಟ್ರೋಫಿಯನ್ನು ನೀಡುತ್ತಿದ್ದೇವೆ ಎಂದರು.
ಮಾಡೆಲ್ ಶಾಲಾ ಆಡಳಿತಾಧಿಕಾರಿ ವಿಶಾಲಾ ಷಡಕ್ಷರಿ ಮತ್ತು ಮುಖ್ಯ ಶಿಕ್ಷಕ ಎಸ್.ಎಂ. ಮಲ್ಲೇಶಪ್ಪ ಉಪಸ್ಥಿತರಿದ್ದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಭಾರತಿ ಶಿವರುದ್ರಪ್ಪ ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ಸೂರಿ ಶ್ರೀನಿವಾಸ ವಂದಿಸಿದರು. ಶಿಕ್ಷಕಿ ಜ್ಯೋತಿ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

