ಚಿಕ್ಕಮಗಳೂರು

ಗ್ಯಾಸ್ ಪೈಪ್ ಅಳವಡಿಕೆಗೆ ಭೂಮಿ ವಶ

Published On :

ಕ.ಪ್ರ.ವಾರ್ತೆ  ಮೂಡಿಗೆರೆ  ಜು.26 ಕಾಫಿ ನಾಡಿನ ತವರೂರೆಂದೇ ಪ್ರಸಿದ್ಧಿಯಾಗಿರುವ ಮಲೆನಾಡು ಪ್ರದೇಶದ ಹೆಬ್ಬಾಗಿಲು ಮೂಡಿಗೆರೆ ತಾಲೂಕು ಈಗ ಸಮಸ್ಯೆ ಸುಳಿಯಲ್ಲಿ ಸಿಲುಕಿದೆ ಎಂದು ಕರವೇ ಗೌರವಾಧ್ಯಕ್ಷ ಹೊರಟ್ಟಿ ರಘು ತಿಳಿಸಿದ್ದಾರೆ.
   ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೀವನದಿ ಹೇಮಾವತಿಯಲ್ಲಿ ಮರಳು ದಂಧೆಕೋರರಿಂದ ಅಕ್ರಮ ಮರಳು ಗಣಿಗಾರಿಕೆ ನಡೆದು, ನದಿ ತನ್ನ ನೈಜ ಸ್ವರೂಪವನ್ನೇ ಬದಲಾಯಿಸಿ ಮೃತ್ಯು ಕೂಪವಾಗಿ ಬದಲಾಗಿದೆ.
ಯೋಜನೆ ಕೈಬಿಡಿ: ಕಾಡಾನೆ ಹಾವಳಿಯಿಂದ ರೈತರು- ಬೆಳೆಗಾರರು ತತ್ತರಿಸಿ ಹೋಗುತ್ತಿದ್ದಾರೆ. ಈ ಬಾರಿ ಬಿಡದೆ ಸುರಿಯುತ್ತಿರುವ ಮಳೆಯಿಂದ ವಾಣಿಜ್ಯ ಬೆಳೆಗಳಾದ ಕಾಫಿ, ಅಡಕೆ, ಕೊಳೆ ರೋಗಕ್ಕೆ ತುತ್ತಾಗುತ್ತಿದೆ. ಇವೆಲ್ಲದರ ನಡುವೆ ಸರ್ಕಾರಗಳು ಹುಲಿ ಯೋಜನೆ, ಡೀಮ್ಡ್ ಫಾರೆಸ್ಟ್ ತೆರವು, ಗ್ಯಾಸ್ ಪೈಪ್ ಅಳವಡಿಕೆಗೆ ರೈತರ ಜಮೀನನ್ನು  ಬಲವಂತವಾಗಿ ಬಿಡಿಸಲು ಹೊರಟಿರುವುದು ಸರಿಯಲ್ಲ ಎಂದರು.
   ತಕ್ಷಣವೇ ಈ ಮೂರು ಯೋಜನೆಗಳನ್ನು ಕೈಬಿಡಬೇಕು ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆಯನ್ನು ನೀಡಿದರು.
ಗಂಡಾಂತರಕ್ಕೆ ಸಿದ್ಧ: ಮೂಡಿಗೆರೆ ತಾಲೂಕಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ಹಿಂದೆ ಎಂ.ಆರ್.ಪಿ.ಎಲ್. ಪೈಪ್ ಅಳವಡಿಕೆ ಹಾಗೂ ಇತ್ತೀಚೆಗೆ ನಂದಿಕೂರಿನಿಂದ ಹಗರೆಯವರೆಗೆ ವಿದ್ಯುತ್ ಲೈನ್ ಅಳವಡಿಕೆಯಿಂದ ಈಗಾಗಲೇ ಸಾಕಷ್ಟು ಭೂಮಿ ಕಳೆದುಕೊಂಡಿರುವ ರೈತರು ಮತ್ತೊಮ್ಮೆ ಗಂಡಾಂತರಕ್ಕೆ ಸಿದ್ಧರಾಗಬೇಕಿದೆ ಎಂದರು.
  ಸುಮಾರು ರು, 650 ಕೋಟಿ ವೆಚ್ಚದಲ್ಲಿ 384 ಕಿ.ಮೀ ದೂರ ಮಂಗಳೂರಿನಿಂದ- ಬೆಂಗಳೂರಿಗೆ ಗ್ಯಾಸ್ ಸಾಗಿಸಲು ತಾಲೂಕಿನ ಗುತ್ತಿ, ಮೂಲರಹಳ್ಳಿ, ಗೌಡಹಳ್ಳಿ, ಹೊರಟ್ಟಿ, ದೇವವೃಂದ, ಹಾರ್ಮಕ್ಕಿ, ಕನ್ನೆಹಳ್ಳಿ, ಹುರುಡಿ, ಹೆಗ್ಗರವಳ್ಳಿ, ಚಿಕ್ಕರಡಿಗೆ ಮೂಲಕ ಹಾಸನ ಜಿಲ್ಲೆಗೆ ಪ್ರವೇಶಿಸಲಿದ್ದು. 11 ಹಳ್ಳಿಗಳ ಮೂಲಕ ಸಾಗಿಹೋಗಲಿದೆ.
ಯೋಜನೆಗೆ ಸಮ್ಮತಿ: ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಈ ಯೋಜನೆಗೆ ಸಮ್ಮತಿ ಸೂಚಿಸಿದ್ದು, ಜಿಲ್ಲಾಡಳಿತ  ಕೃಷಿಕರಿಗೆ 2 ತಿಂಗಳ ಹಿಂದೆಯೇ ನೋಟಿಸ್ ಜಾರಿ ಮಾಡಿದೆ. ಸರ್ಕಾರದ ಯೋಜನೆಗಳಿಗೆ ತಮ್ಮ ಭೂಮಿಯನ್ನು ಬಿಟ್ಟು ಕೊಟ್ಟು ರೈತರು ಗುಳೆ ಹೋಗುವ ಪರಿಸ್ಥಿತಿ ಎದುರಾಗಿದೆ ಎಂದವರು ಆತಂಕ ವ್ಯಕ್ತಪಡಿಸಿದರು.
ಕರವೇ ಅಧ್ಯಕ್ಷ ದಾರದಹಳ್ಳಿ ಪ್ರಸನ್ನ,  ಜಿ.ಬಿ. ಧರ್ಮವೀರ್, ಬಾಲು ಮೊದಲಾದರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.