ಚಿಕ್ಕಮಗಳೂರು

ಸಿಡಿಎ ಅಧ್ಯಕ್ಷಗಾದಿ ಮೇಲೆ ಕಣ್ಣು

Published On :

ಕಪ್ರ ವಾರ್ತೆ, ಚಿಕ್ಕಮಗಳೂರು, ಜೂ.11
ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಸಿಡಿಎ) ಅಧ್ಯಕ್ಷಗಾದಿಯ ಮೇಲೆ ಹಲವರ ಕಣ್ಣು ಬಿದ್ದಿದೆ.
 ಆಕಾಂಕ್ಷಿಗಳ ಸಂಖ್ಯೆ ಅರ್ಧ ಡಜನ್ ದಾಟಿದೆ. ಆದರೆ ಈ ಕುರಿತು ಕೆಪಿಸಿಸಿಗೆ ಡಿಸಿಸಿಯಿಂದ ಅಧಿಕೃತವಾಗಿ ಪಟ್ಟಿ ಈವರೆಗೆ ಹೋಗಿಲ್ಲ.
 ಇನ್ನು 4- 5 ದಿನಗಳಲ್ಲಿ ಆಕಾಂಕ್ಷಿಗಳ ಪಟ್ಟಿ ಇನ್ನಷ್ಟು ಬೆಳೆಯುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
 ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಿಡಿಎ ಹೊರತುಪಡಿಸಿ ಬೇರೆ ಯಾವುದೇ ನಿಗಮ, ಮಂಡಳಿಗಳಿಲ್ಲ. ಆದ್ದರಿಂದ ಜಿಲ್ಲಾ ಕೇಂದ್ರದಲ್ಲಿರುವವರು ಸಿಡಿಎ ಅಧ್ಯಕ್ಷ ಸ್ಥಾನಕ್ಕೆ ಪ್ರಯತ್ನ ನಡೆಸುತ್ತಾರೆ. ಈ ಹುದ್ದೆಗೆ ಬೇರೆ ತಾಲೂಕಿನವರ್ಯಾರು ಪ್ರಯತ್ನ ನಡೆಸುವುದಿಲ್ಲ.
ಡಜನ್‌ಗಟ್ಟಲೆ ಆಕಾಂಕ್ಷಿಗಳು: ಹಾಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಲ್ಲಿ ವೆಂಕಟೇಶ್ ನಾಯ್ಡು, ಶ್ರೀಧರ್ ಉರಾಳ,  ಕೆ.ಎಂ. ನಾಗರಾಜ್, ಹಿರೇಮಗಳೂರು ರಾಮಚಂದ್ರ, ಕೆ.ಎಂ. ಗುರುರಾಜ, ಮಲ್ಲೇದೇವರಹಳ್ಳಿ ರಾಜು, ಡಾ. ಡಿ.ಎಲ್. ವಿಜಯಕುಮಾರ್, ಚಂದ್ರೇಗೌಡ, ಸೈಯದ್ ಹನೀಫ್ ಅವರ ಹೆಸರುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿವೆ.
 ಇವರುಗಳು ಇಷ್ಟಕ್ಕೇ ಸುಮ್ಮನಾಗಿಲ್ಲ. ಇವರಲ್ಲಿ ಕೆಲವು ಮಂದಿ ಆಕಾಂಕ್ಷಿಗಳು ಪಕ್ಷದ ನಾಯಕರ ಮೂಲಕ ಲಾಬಿ ನಡೆಸುವ ದಾರಿಯಲ್ಲಿ ಸಾಗುತ್ತಿದ್ದಾರೆ.
ಪಟ್ಟಿ ನೀಡಲು ಸೂಚನೆ; ಜಿಲ್ಲಾ ಹಾಗೂ ರಾಜ್ಯಮಟ್ಟದ ನಿಗಮ ಮತ್ತು ಮಂಡಳಿಗಳಿಗೆ ನಾಮ ನಿರ್ದೇಶನಗೊಳ್ಳಲು  ಇಚ್ಚಿಸಿರುವ ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರ ಪಟ್ಟಿ ಕಳುಹಿಸಿಕೊಡುವಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಇತ್ತೀಚೆಗೆ ನಡೆದ ಪಕ್ಷದ ಜಿಲ್ಲಾ ಅಧ್ಯಕ್ಷರ ಸಭೆಯಲ್ಲಿ ಸೂಚನೆ ನೀಡಿತ್ತು.
 ಅದರನ್ವಯ ಶುಕ್ರವಾರದಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ನಿಗಮ, ಮಂಡಳಿಗಳಲ್ಲಿ ವಿವಿಧ ಹುದ್ದೆ ಬಯಸುವವರ ಪಟ್ಟಿ ಸಿದ್ಧಪಡಿಸಿ ಕೆಪಿಸಿಸಿಗೆ ಕಳುಹಿಸಿಕೊಡಲಾಗುವುದು ಎಂದು ಪಕ್ಷದ ಜಿಲ್ಲಾಧ್ಯಕ್ಷ ಎಂ.ಎಲ್. ಮೂರ್ತಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.
ಬೆಳೆಯಲಿರುವ ಪಟ್ಟಿ: ಆದ್ದರಿಂದ ನಿಗಮ, ಮಂಡಳಿಗಳಲ್ಲಿನ ವಿವಿಧ ಸ್ಥಾನಗಳ ಆಪೇಕ್ಷಿತರು ಶುಕ್ರವಾರದ ನಂತರ ತಮ್ಮ ಹೆಸರನ್ನು ಸೂಚಿಸಲಿದ್ದಾರೆ. ಅದ್ದರಿಂದ ಸಿಡಿಎ ಅಧ್ಯಕ್ಷರ ಸ್ಥಾನದ ಆಕಾಂಕ್ಷಿಗಳ ಪಟ್ಟಿ ಇನ್ನಷ್ಟು ಬೆಳೆಯಲಿದೆ. ಆಕಾಂಕ್ಷಿಗಳಲ್ಲಿ  ಹಲವು ಮಂದಿ ಹೇಳುವುದು, ಪಕ್ಷಕ್ಕಾಗಿ ದುಡಿದಿದ್ದೇವೆ. ಈಗ ಪಕ್ಷ ಅಧಿಕಾರದಲ್ಲಿದ್ದರಿಂದ ಸಿಡಿಎ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡುವ ಮೂಲಕ ಅವಕಾಶ ನೀಡುವಂತೆ ಪಕ್ಷದ ಮುಖಂಡರಿಗೆ ಮನವಿ ಮಾಡಿದ್ದೇವೆ ಎನ್ನುತ್ತಿದ್ದಾರೆ.
ಅವಕಾಶ: ಕಳೆದ ಏಳೆಂಟು ವರ್ಷಗಳಿಂದ ಸಿಡಿಎ ಅಧ್ಯಕ್ಷ ಮತ್ತು ನಾಮ ನಿರ್ದೇಶಕರ ಸ್ಥಾನ ಬಿಜೆಪಿಯವರ ಪಾಲಾಗಿದ್ದವು. ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರದಲ್ಲಿರುತ್ತದೆಯೋ, ಅದೇ ರಾಜಕೀಯ ಪಕ್ಷ ತಮ್ಮ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ನಿಗಮ ಮತ್ತು ಮಂಡಳಿಗಳ ಕೆಲವು ಸ್ಥಾನಗಳಿಗೆ ನೇಮಕ ಮಾಡಿಕೊಳ್ಳಲಿದೆ. ಅದರಂತೆ ಸಿಡಿಎ ಅಧ್ಯಕ್ಷ ಹಾಗೂ ಸದಸ್ಯರ ಸ್ಥಾನಗಳಲ್ಲಿ ಬಿಜೆಪಿಯವರು ಇದ್ದರು.
 ಕಾಂಗ್ರೆಸ್ ಪಕ್ಷಕ್ಕೆ ಅಲ್ಲಿ ಯಾವುದೇ ತರಹದ ಅವಕಾಶ ಇರಲಿಲ್ಲ. ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದರಿಂದ ಅಧ್ಯಕ್ಷ ಹಾಗೂ ಇನ್ನುಳಿದ 4 ಸದಸ್ಯರ ಸ್ಥಾನಗಳಿಗೆ ತಮ್ಮ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಪಕ್ಷ ಆಯ್ಕೆ ಮಾಡಿಕೊಳ್ಳುವುದರಿಂದ ಕೆಲವು ಮಂದಿ ಅಧ್ಯಕ್ಷ ಸ್ಥಾನಕ್ಕೆ ಮತ್ತೆ ಕೆಲವರು ಸದಸ್ಯರ ಸ್ಥಾನಕ್ಕೆ ನಾಮ ನಿರ್ದೇಶನಗೊಳ್ಳಲು ಆಸಕ್ತಿ ತೋರಿದ್ದಾರೆ.
 ಅಧ್ಯಕ್ಷ ಸ್ಥಾನ ಒಂದೇಯಾದರೂ ಆಕಾಂಕ್ಷಿಗಳ ಪಟ್ಟಿಯಲ್ಲಿ ಸದ್ಯ 9 ಮಂದಿ ಇದ್ದಾರೆ. ಇವರಲ್ಲಿ ಅಧ್ಯಕ್ಷರ ಹುದ್ದೆ ಯಾರ ಪಾಲಾಗಲಿದೆ ಎಂಬ ಕುತೂಹಲದ ಪ್ರಶ್ನೆಗೆ ಉತ್ತರ ಸಿಗಬೇಕಾದರೆ ಇನ್ನಷ್ಟು ದಿನ ಕಾಯಬೇಕು.

ಸಿಡಿಎ ಅಧ್ಯಕ್ಷರ ರಾಜಿನಾಮೆ
ಚಿಕ್ಕಮಗಳೂರು: ಸಿಡಿಎ (ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರ) ಅಧ್ಯಕ್ಷ ಬಿ. ರಾಜಪ್ಪ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಕಳೆದ ಎರಡು ದಿನಗಳ ಹಿಂದೆಯಷ್ಟೆ ಅವರು ನಗರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಿಗೆ ರಾಜಿನಾಮೆ ಪತ್ರವನ್ನು ತಲುಪಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಆದ್ದರಿಂದ ಅಧ್ಯಕ್ಷರ ರಾಜಿನಾಮೆಗೆ ಸಂಬಂಧಿಸಿದಂತೆ ನಾಟಕೀಯ ಪ್ರಹಸನಕ್ಕೆ ತೆರೆ ಬಿದ್ದಿದೆ.
ರಾಜಿನಾಮೆಗೆ ಸೂಚನೆ: ರಾಜ್ಯದಲ್ಲಿ ನೂತನ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯ ಮೇರೆಗೆ ರಾಜ್ಯದ ಎಲ್ಲಾ ನಿಗಮ, ಮಂಡಳಿಗಳ ಅಧ್ಯಕ್ಷರು ಮತ್ತು ಸದಸ್ಯರು ರಾಜಿನಾಮೆ ನೀಡಬೇಕೆಂದು ಸರ್ಕಾರದ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದರು.
ಈ ಆದೇಶವನ್ನು ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಅಧ್ಯಕ್ಷರ ಮತ್ತು ನಾಮ ನಿರ್ದೇಶಕರ ಗಮನಕ್ಕೆ ತಂದಿದ್ದರು. ಅದ್ದರಿಂದ ಇಬ್ಬರು ಸದಸ್ಯರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ಆದರೆ, ಅಧ್ಯಕ್ಷರು ಮಾತ್ರ ರಾಜಿನಾಮೆ ನೀಡಿರಲಿಲ್ಲ.
ಇದಕ್ಕೆ ಅಧ್ಯಕ್ಷರು ತಮ್ಮ ವೈಯಕ್ತಿಕ ಕಾರಣ ನೀಡಿದ್ದರು. ಆದರೆ ಸರ್ಕಾರದ ಆದೇಶ ಪಾಲನೆ ಮಾಡಬೇಕಾಗಿರುವುದು ಆಯುಕ್ತರ ಜವಬ್ದಾರಿಯಾಗಿದ್ದರಿಂದ ಸರ್ಕಾರದ ಸುತ್ತೂಲೆ ರಿಜಿಸ್ಟರ್ ಪೋಸ್ಟ್ ಮೂಲಕ ಅಧ್ಯಕ್ಷರಿಗೆ ತಲುಪಿಸುವ ಕೆಲಸವನ್ನು ಆಯುಕ್ತರು ಮಾಡಿದ್ದರು.
ಖಂಡನೆ: ಅಧ್ಯಕ್ಷರು ಈ ಪತ್ರ ಸ್ವೀಕರಿಸದೇ ಇದ್ದುದರಿಂದ ಆಯುಕ್ತರು ಸಿಡಿಎ ಕಚೇರಿಯಲ್ಲಿರುವ ಅಧ್ಯಕ್ಷರ ಕೊಠಡಿಗೆ ಸರ್ಕಾರದ ಸುತ್ತೋಲೆ ಪತ್ರವನ್ನು ಅಂಟಿಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷರು, ಆಯುಕ್ತರ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದರು. ಈ ಎಲ್ಲಾ ಗೊಂದಲ ತಿಳಿಯಾಗುತ್ತಿದ್ದಂತೆ ಸಿಡಿಎ ಅಧ್ಯಕ್ಷ ಬಿ. ರಾಜಪ್ಪ 2 ದಿನದ ಹಿಂದೆಯಷ್ಟೇ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.