ಡಾಂಬರಿಲ್ಲದೆ ಮರುಗುತ್ತಿದೆ ರಸ್ತೆ
ಕ.ಪ್ರ.ವಾರ್ತೆ ಶೃಂಗೇರಿ ಜೂ.13
ಇಲ್ಲಿ ದಿನನಿತ್ಯ ನೂರಾರು ವಾಹನ ಸಂಚರಿಸುತ್ತಿದ್ದು, ರಸ್ತೆಯಿದ್ದರೂ ಇಲ್ಲದಂತಾಗಿದೆ. ಅತ್ತ ಡಾಮರು ರಸ್ತೆಯೂ ಅಲ್ಲ. ಇತ್ತ ಮಣ್ಣು ರಸ್ತೆಯೂ ಅಲ್ಲ. ಹೊಂಡ ಗುಂಡಿಗಳೇ ಅಧಿಕವಾಗಿದ್ದು, ಮಳೆಗಾಲದಲ್ಲಿ ಹೊಂಡಗುಂಡಿಗಳಲ್ಲಿ ನೀರು ತುಂಬಿಕೊಳ್ಳುತ್ತದೆ.
ಕೆಲವೆಡೆ ಕಾಲುವೆಗಳಿಲ್ಲ. ರಸ್ತೆಯೂ ಒಂದೇ ಕಾಲುವೆಯೂ ಒಂದೇ ಎಂಬಂತಾಗಿದೆ. ರಸ್ತೆ ಸಂಪೂರ್ಣ ಡಾಂಬರು ಕಾಣದೇ ದಶಕಗಳೇ ಕಳೆದಿವೆ. ಕೆಲಮೊಮ್ಮೆ ಅಲ್ಲಲ್ಲಿ ತೇಪೆ ಹಾಕುವ ಕಾಮಗಾರಿ ನಡೆದಿದ್ದು, ಈ ಭಾಗದಲ್ಲಿ ಸುರಿಯುವ ಧಾರಾಕರ ಮಳೆಯ ಜೊತೆಗೆ ಆ ಹೊಂಡಗಳಿಗೆ ತುಂಬಿದ ತೇಪೆಯು ಕಿತ್ತುಕೊಂಡು ಹೋಗುತ್ತದೆ.
ಮುಖ್ಯರಸ್ತೆಯ ದುಃಸ್ಥಿತಿ: ಇದು ತಾಲೂಕಿನ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಒಂದಾದ ಮರ್ಕಲ್ ಪಂಚಾಯಿತಿ ಯಡದಾಳು ಗ್ರಾಮದ ಹುಲುಗಾರು ಮಾಣಿಬೈಲು ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯ ದುಃಸ್ಥಿತಿ. ಈ ರಸ್ತೆ ಡಾಂಬರು ಕಾಣದೇ ಹಲವು ವರ್ಷಗಳೇ ಕಳೆದಿವೆ. ಜಲ್ಲಿಕಲ್ಲುಗಳು ಕಿತ್ತೆದ್ದಿವೆ. ಅಲ್ಲಲ್ಲಿ ಹೊಂಡಗುಂಡಿಗಳು, ಮಳೆಗಾಲದಲ್ಲಿ ಮಳೆಯ ನೀರು ರಸ್ತೆ ಮೇಲೆಯ ಹರಿದು, ಹೊಂಡಗುಂಡಿಗಳಲ್ಲಿ ತುಂಬಿ ನಿಲ್ಲುವುದರಿಂದ ಸಂಚಾರಿಗಳಿಗೆ ಪ್ರಯಾಣವೇ ದುಸ್ತರವಾಗಿದೆ.
ವಾರ್ಡ್ ಸಭೆ, ಗ್ರಾಮಸಭೆ, ಜನಸ್ಪಂದನ ಸಭೆ, ಚುನಾವಣೆ ವೇಳೆಯಲ್ಲಿ ಅಧಿಕಾರಿ, ಜನಪ್ರತಿನಿಧಿಗಳು ಈ ಮಾರ್ಗದಲ್ಲಿ ಅದೆಷ್ಟು ಬಾರಿ ಓಡಾಡಿದರೂ ಅವರ ಗಮನಕ್ಕೆ ಇಲ್ಲಿನ ದುರವಸ್ಥೆ ಬಾರದಿರುವುದು ಆಶ್ಚರ್ಯವೇ ಸರಿ. ಗ್ರಾಮಸ್ಥರು ಈ ಬಗ್ಗೆ ಸಂಬಂಧಿಸಿದವರು ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.
ಗ್ರಾಮಸಭೆ, ಜನಸ್ಪಂದನ ಸಭೆಗಳಲ್ಲಿ ಮನವಿ, ಅಹವಾಲುಗಳಿಗೆ ಬೆಲೆಯೇ ಇಲ್ಲ. ನಿತ್ಯ ಸಂಚಾರಿಗಳ ಪಾಲಿಗೆ ಹೊಂಡಗುಂಡಿಗಳ ದರ್ಶನವೇ ಸರಿ.
ಪ್ರಮುಖ ಸಂಪರ್ಕ ರಸ್ತೆ: ಇದು ಸುಮಾರು ಸುತ್ತಮುತ್ತಲಿನ 30 ಕ್ಕೂ ಅಧಿಕ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ಕೇಂದ್ರ ಬಿಂದು ರಸ್ತೆಯಾಗಿದೆ. ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಕಿಗ್ಗಾ ಋಷ್ಯಶೃಂಗೆಶ್ವರ ದೇವಾಲಯ, ಪ್ರಸಿದ್ಧ ಪ್ರೇಕ್ಷಣಿಯ ಸ್ಥಳ ಸಿರಿಮನೆ ಜಲಪಾತಕ್ಕೆ ಸಂಪರ್ಕ ಕಲ್ಪಿಸುತ್ತದೆ.
ರಾ.ಹೆ. 13ರ ಮಂಗಳೂರು ಶಿವಮೊಗ್ಗ ಮಂಗಳೂರು ರಸ್ತೆಗೆ ಸಂಪರ್ಕ ಕಲ್ಪಿಸುತ್ತದೆ. ಕೊಡಗು, ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ವಿವಿಧೆಡೆಗಳಿಂದ ಪ್ರವಾಸಿಗರು ಇದೇ ರಸ್ತೆಯ ಮೂಲಕ ಸಂಚರಿಸುತ್ತಾರೆ. ಯಡದಾಳು, ಗುಬ್ಬಗೋಡು, ಗಂಡಘಟ್ಟ, ಕಡ್ಲೋಡಿ, ದಿಂದೋಡಿ, ಹೆಕ್ತೂರು, ಯಡದಳ್ಳಿ, ಹೊಳೆಹೊದ್ದು, ಸುಂಕದಮಕ್ಕಿ, ಸೇರಿಂದಂತೆ ಸುತ್ತಮುತ್ತಲಿನ 30 ಕ್ಕೂ ಅಧಿಕ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುತ್ತದೆ.
ಬಸ್ಸು ಸಂಚಾರವಿಲ್ಲ: ಆಶ್ಚರ್ಯವೆಂದರೆ ಈ ಮಾರ್ಗದಲ್ಲಿ ಖಾಸಗಿ ವಾಹನ ಓಡಾಡುವುದು ಬಿಟ್ಟರೆ ಬಸ್ಸು ಸಂಚಾರದ ವ್ಯವಸ್ಥೆಯಿಲ್ಲ. ಕೆಲ ಸಮಯದವರೆಗೆ ಬಸ್ಸು ಓಡಾಟವಿತ್ತು. ರಸ್ತೆ ಅವ್ಯವಸ್ಥೆಯಿಂದ ಅದೂ ಸ್ಥಗಿತಗೊಂಡಿತು. ಇಲ್ಲಿನ ಗ್ರಾಮಸ್ಥರಿಗೆ ಖಾಸಗಿ ವಾಹನ ಬಿಟ್ಟರೆ ಕಾಲ್ನಡಿಯೇ ಗತಿ.
ಇವರಿಗೆ ವಾಹನ ಸಂಚಾರ ಮಾಡಬೇಕಾದರೆ ಯಡದಳ್ಳಿ, ದಿಂದೋಡಿ, ಹುಲುಗಾರು ಮೂಲಕ ಹದಿನೈದಕ್ಕೂ ಅಧಿಕ ಕಿ.ಮಿ. ಸುತ್ತಿ ನೆಮ್ಮಾರು ಅಥವಾ ಕಿಗ್ಗಾ ಶೃಂಗೇರಿಗೆ ಹೋಗಬೇಕು. ಕೋಟಿಗಟ್ಟಲೆ ನಕ್ಸಲ್ ಪ್ಯಾಕೇಜ್ ಇಲ್ಲಿ ಯಾವುದೇ ಪ್ರಯೋಜನವಾಗಿಲ್ಲ.
ಸರ್ಕಾರ,ಇಲಾಖೆ.ಜನಪ್ರತಿ ನಿದಿಗಳು ಇಲ್ಲಿನ ಮೂಲ ಸೌಕರ್ಯಗಳಲ್ಲಿ ಪ್ರಮುಖವಾದ ರಸ್ತೆಯ ಅಭಿವೃದ್ದಿಗೆ ಆದ್ಯತೆ ನೀಡದೇ ಎಚ್ಚರ ಗೊಳ್ಳದಿರುವುದು ಆಶ್ಸರ್ಯವಾಗಿದೆ.ಇನ್ನಾದರೂ ಸರ್ಕಾರ,ಜನಪ್ರತಿನಿದಿಗಳು ಇತ್ತ ಗಮನ ಹರಿಸಿ ಈ ಭಾಗದ ರಸ್ತೆಯ ಅಭಿವೃದ್ದಿಯತ್ತ ಗಮನ ಹರಿಸಲಿ.
-ನೆಮ್ಮಾರ್ ಅಬೂಬಕರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

