ಚಿಕ್ಕಮಗಳೂರು

ಭಾಷೆ ಉಳಿವಿಗೆ ಸಾಹಿತ್ಯ ಕಾರ್ಯಕ್ರಮ ಅಗತ್ಯ

Published On :

ಕ.ಪ್ರ.ವಾರ್ತೆ ,   ತರೀಕೆರೆ ,    ಜೂ.23
ಕನ್ನಡ ಸಾಹಿತ್ಯದ ಕಾರ್ಯಕ್ರಮಗಳು ಭಾಷೆ ಉಳಿವಿಗೆ ಮಹತ್ತರ ಪಾತ್ರ ವಹಿಸುತ್ತದೆ ಎಂದು ಲಕ್ಕವಳ್ಳಿ ಜೈನ್ ಶಾಲೆ ಪ್ರಾಚಾರ್ಯರಾದ ಅನುಸೂಯ ತಿಳಿಸಿದ್ದಾರೆ.
ಅವರು ಲಕ್ಕವಳ್ಳಿ ಹೋಬಳಿ ಕಸಾಪ ವತಿಯಿಂದ ಸಮೀಪದ ಲಕ್ಕವಳ್ಳಿ ಪಾಂಡುಜಾದವ್ ಅವರ ನಿವಾಸದಲ್ಲಿ ಏರ್ಪಡಿಸಲಾಗಿದ್ದ ಮನೆಯಂಗಳದಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹತ್ತರ ಪಾತ್ರ: ವೈಜ್ಞಾನಿಕತೆ ಬೆಳೆದಂತೆ ನಮ್ಮ ಸಂಸ್ಕೃತಿ ಸಂಸ್ಕಾರ ದಿಕ್ಕುತಪ್ಪುತ್ತಿವೆ. ಇಂತಹ ಸಂದರ್ಭದಲ್ಲಿ  ಸಾಹಿತ್ಯ ಕಾರ್ಯಕ್ರಮ ನಾಡು-ನುಡಿ ಭಾಷೆಯ ಉಳಿವಿಗೆ ಮಹತ್ತರ ಪಾತ್ರ ವಹಿಸುತ್ತದೆ. ಮಹಿಳೆಯರು  ಇಂತಹ ಕಾರ್ಯಕ್ರಮದಲ್ಲಿ ಹೆಚ್ಚು ಭಾಗವಹಿಸಬೇಕು ಎಂದು ತಿಳಿಸಿದರು.
ಗ್ರಾಮಜ್ಯೋತಿ ಪ್ರೌಢಶಾಲೆ ಪ್ರಾಚಾರ್ಯ ರಾಜಣ್ಣ ಗೌಡ ಮಾತನಾಡಿ, ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡಾಗ ಜ್ಞಾನ ವೃದ್ಧಿ ಜೊತೆಯಲ್ಲಿ ನಮ್ಮ ಇತಿಹಾಸ ಪರಂಪರೆ ತಿಳಿಯಲು ಸಾಧ್ಯ.
ದೂರದರ್ಶನ ವೀಕ್ಷಣೆ ಒಂದು ಮನರಂಜನೆ ಆಗಬೇಕೆ ಹೊರತು ಉದ್ಯೋಗವಾಗಬಾರದು ಎಂದು ತಿಳಿಸಿದ ಅವರು, ಪೋಷಕರು ಅದರಿಂದ ದೂರವಿದ್ದು, ಮಕ್ಕಳನ್ನು ದೂರವಿರುವಂತೆ ಸಲಹೆ ನೀಡುವುದು ಉತ್ತಮ ಎಂದು ತಿಳಿಸಿದರು.
ವಿಷಾದಕರ: ತಾಲೂಕು ಕಸಾಪ ಅಧ್ಯಕ್ಷ ಜಿ. ಸುಬ್ರಹ್ಮಣ್ಯ ಮಾತನಾಡಿ, ಭಾಷೆ ಸಂಸ್ಕೃತಿಯ ಪ್ರತಿಬಿಂಬ. ಭಾಷೆ  ನಾಶವಾದರೆ ಸಂಸ್ಕೃತಿ ನಾಶವಾದಂತೆ, ನಮ್ಮ ನಡೆ-ನುಡಿ., ಆಚಾರ-ವಿಚಾರ, ಉಡುಗೆ- ತೊಡುಗೆಗಳು ಬದಲಾಗುತ್ತಿವೆ. ಅನ್ಯ ಭಾಷೆಯಡಿಗೆ ಮನೆ ಹೊಕ್ಕಿರುವುದು ವಿಷಾದಕರ ಎಂದು ಅವರು ತಿಳಿಸಿದರು.
ಆಧುನಿಕತೆ ಹೆಸರಿನಲ್ಲಿ ಪೋಷಕರು ಮಕ್ಕಳಿಗೆ ಅನ್ಯ ಭಾಷೆಯ ವ್ಯಾಮೋಹ ಬೆಳೆಸಿದಲ್ಲಿ ಅದರ ಪರಿಣಾಮವನ್ನು ತಾವೇ ಅನುಭವಿಸುವ ಕಾಲ ದೂರವಿಲ್ಲ ಎಂದು ತಿಳಿಸಿದ ಅವರು ಕುಟುಂಬದಲ್ಲಿ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸಿ ಕುಟುಂಬ ವರ್ಗದವರನ್ನು ಮಿಗಿಲಾಗಿ ಮಕ್ಕಳನ್ನು ಹೆಚ್ಚು ತೊಡಗಿಸುವ ಕಾರ್ಯ ಆಗಬೇಕಿದೆ ಎಂದು ಹೇಳಿದರು.  
ಪಾಂಡುಜಾದವ್ ಮಾತನಾಡಿ, ಕನ್ನಡ ಕಾರ್ಯಕ್ರಮಗಳನ್ನು ಮನೆ ಮನೆಗೆ ತರುವ ಮೂಲಕ ಜಾಗೃತಿ ಉಂಟುಮಾಡುವುದರೊಂದಿಗೆ ಮಾನವೀಯ ಸಂಬಂಧ ಬಲಗೊಳಿಸುವ ನಿಟ್ಟಿನಲ್ಲಿ ಪರಿಷತ್ತಿನ ಕಾರ್ಯ ನಿಜಕ್ಕೂ ಶ್ಲಾಘನೀಯವಾದುದು ಎಂದರು.
ಲಕ್ಕವಳ್ಳಿ ಕಸಾಪ ಹೋಬಳಿ ಅಧ್ಯಕ್ಷೆ ಸಂಧ್ಯಾ ದತಾತ್ರಿ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯ ಕೆ.ಪಿ. ಕುಮಾರ್, ಚಕ್ರವರ್ತಿ, ಎಂ. ಚಂದ್ರಶೇಖರ್, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾಬಾಯಿ, ನಾಗೇಶ್, ರಮೇಶ್, ಮಲ್ಯಾನಾಯ್ಕ ಭಾಗವಹಿಸಿ ಮಾತನಾಡಿದರು.
ಈಶ್ವರ ಭಜನಾ ಮಂಡಳಿಯವರಿಂದ ಭಜನೆ, ಕನ್ನಡಗೀತಾ ಗಾಯನ ಏರ್ಪಡಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.