'ಕಿರು ಅರಣ್ಯ ಒತ್ತುವರಿ ತೆರವುಗೊಳಿಸಿ'
ಕ.ಪ್ರ.ವಾರ್ತೆ, ನರಸಿಂಹರಾಜಪುರ, ಜೂ.25 ಮೆಣಸೂರು ಗ್ರಾಪಂ ವ್ಯಾಪ್ತಿಯ ರಾವೂರಿನ ಕಿರು ಅರಣ್ಯ ಪ್ರದೇಶದಲ್ಲಿ ವ್ಯಕ್ತಿಯೊಬ್ಬರು ಒತ್ತುವರಿ ಮಾಡಿದ್ದು, ಅದನ್ನು ತೆರವು ಮಾಡಿಸಬೇಕು ಎಂದು ಹಿಡುವಳ್ಳಿ, ರಾವೂರು ಗ್ರಾಮಸ್ಥರು ಒತ್ತುವರಿ ಪ್ರದೇಶದ ಸಮೀಪದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಈಗ ಒತ್ತುವರಿ ಮಾಡಿದ ವ್ಯಕ್ತಿ ಈ ಹಿಂದೆ 2008ರಲ್ಲೇ ಕಿರು ಅರಣ್ಯವನ್ನು ಒತ್ತುವರಿ ಮಾಡಿ ರಬ್ಬರ್ ಗಿಡ ನೆಟ್ಟಿದ್ದರು. ಅದಕ್ಕೆ ಗ್ರಾಮಸ್ಥರು ವಿರೋಧ ಇರಲಿಲ್ಲ. ಆದರೆ ಈಗ ಮತ್ತೆ ಕಿರು ಅರಣ್ಯವನ್ನು ಒತ್ತುವರಿ ಮಾಡಿ ಸುವರ್ಣ ಗೆಡ್ಡೆ ನೆಟ್ಟಿದ್ದಾರೆ ಎಂಬುದು ಗ್ರಾಮಸ್ಥರು ಆರೋಪ.
ಈ ಪ್ರದೇಶದಲ್ಲಿ ವನ್ಯ ಜೀವಿಗಳಾದ ಕಾಡು ಕುರಿ, ಜಿಂಕೆ, ಸಾರಂಗ, ನವಿಲು, ಮೊಲ, ಕಾಡುಹಂದಿ ಮುಂತಾದ ಪ್ರಾಣಿಗಳಿದ್ದು, ಈ ಜಾಗವನ್ನು ಒತ್ತುವರಿ ಮಾಡಿದರೆ ವನ್ಯ ಜೀವಿಗಳಿಗೆ ತೊಂದರೆಯಾಗುತ್ತೆದೆ. ಇವುಗಳ ರಕ್ಷಣೆಗಾಗಿ ಅರಣ್ಯ ಇಲಾಖೆಯವರು ಒತ್ತುವರಿ ಜಾಗವನ್ನು ಖುಲ್ಲಾ ಮಾಡಿಸಬೇಕು ಎಂದು ಪ್ರತಿಭಟನೆ ಮಾಡುತ್ತಿದ್ದ ಗ್ರಾಮಸ್ಥರ ಆಗ್ರಹವಾಗಿತ್ತು. ನೂರಾರು ಗ್ರಾಮಸ್ಥರು ಬೆಳಗ್ಗೆಯಿದಲೇ ಒತ್ತುವರಿ ಪ್ರದೇಶದ ಸಮೀಪ ಮಳೆ ಲೆಕ್ಕಿಸದೆ ಪ್ರತಿಭಟನೆ ನಡೆಸಿದರು.
ಅಧಿಕಾರಿಗಳ ಆಗಮನ: ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ನರಸಿಂಹರಾಜಪುರ ವಲಯ ಅರಣ್ಯಾಧಿಕಾರಿ ಕೇಶವಮೂರ್ತಿ, ತಹಸೀಲ್ದಾರ್ ಕೃಷ್ಣಮೂರ್ತಿ ಹಾಗೂ ಪೊಲೀಸ್ ಠಾಣಾಧಿಕಾರಿ ಜಯ ಅಗಮಿಸಿ ಸ್ಥಳ ಪರೀಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರೊಂದಿಗೆ ಮಾತನಾಡಿದ ವಲಯ ಅರಣ್ಯಾಧಿಕಾರಿ ಕೇಶವಮೂರ್ತಿ, ತಕ್ಷಣಕ್ಕೆ ಒತ್ತುವರಿ ಜಾಗವನ್ನು ಖುಲ್ಲಾ ಮಾಡಿಸಲು ಸಾಧ್ಯವಿಲ್ಲ. ಈ ಜಾಗಕ್ಕೆ ಸಂಬಂಧಿಸಿದ ದಾಖಲೆ ಪರಿಶೀಲಿಸಬೇಕಾಗಿದೆ. ಒತ್ತುವರಿ ಪ್ರದೇಶ ಅರಣ್ಯ ಜಾಗದಲ್ಲಿದ್ದರೆ ಖಂಡಿತ ಖುಲ್ಲಾ ಮಾಡಿಸಲಾಗುವುದು. ನಮ್ಮ ಇಲಾಖೆಗೆ 15 ದಿನಗಳ ಕಾಲವಕಾಶ ಬೇಕು ಎಂದರು.
ಜಂಟಿ ಸರ್ವೆ: ತಹಸೀಲ್ದಾರ್ ಕೃಷ್ಣಮೂರ್ತಿ ಗ್ರಾಮಸ್ಥರೊಂದಿಗೆ ಮಾತನಾಡಿ, ಕಂದಾಯ ಹಾಗೂ ಅರಣ್ಯ ಇಲಾಖೆ ಜಂಟಿ ಸರ್ವೆ ಮಾಡಿಸುತ್ತೇವೆ. ಕಿರು ಅರಣ್ಯ ಪ್ರದೇಶದಲ್ಲಿ ಒತ್ತುವರಿ ಮಾಡಿದ್ದರೆ ಅಂತಹ ಜಾಗ ಯಾರಿಗೂ ಮಂಜೂರು ಆಗುವುದಿಲ್ಲ. ಕಾನೂನನ್ನು ಯಾರೂ ಉಲ್ಲಂಘಿಸಬಾರದು ಎಂದರು.
ಅಧಿಕಾರಿಗಳು ನೀಡಿದ ಭರವಸೆ ಮೇಲೆ ಗ್ರಾಮಸ್ಥರು ತಮ್ಮ ಪ್ರತಿಭಟನೆ ಹಿಂತೆಗೆದುಕೊಂಡರು. ಆದರೆ, ಮುಂದಿನ 15 ದಿನಗಳಲ್ಲಿ ಒತ್ತುವರಿ ಪ್ರದೇಶ ಖುಲ್ಲಾ ಮಾಡಿಸದಿದ್ದರೆ ನಾವೇ ಖುಲ್ಲಾ ಮಾಡುತ್ತೇವೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

