ಕಾಯಂ ಪಡಿತರ ಚೀಟಿಗೆ ಜುಲೈ ಡೆಡ್ ಲೈನ್
ಆರ್. ತಾರಾನಾಥ್
ಕ.ಪ್ರ. ವಾರ್ತೆ ಚಿಕ್ಕಮಗಳೂರು ಜೂ.28
ರಾಜ್ಯದಲ್ಲಿ 12 ಲಕ್ಷ ಕಾಯಂ ಪಡಿತರ ಚೀಟಿಗಳು ರದ್ದಾಗಲು ಇನ್ನೊಂದೇ ತಿಂಗಳು ಬಾಕಿ ಇದೆ.
ನಿಖರವಾಗಿ ಹೇಳುವುದಾದರೆ ಜುಲೈ 31ರ ನಂತರ ಈ ಎಲ್ಲಾ ಪಡಿತರ ಚೀಟಿಗಳು ಗಂಟು ಮೂಟೆ ಕಟ್ಟಿ ಕಚೇರಿಯ ಕಡತದ ಯಾವುದೋ ಒಂದು ಮೂಲೆಗೆ ಸೇರಲಿವೆ.
ಕಾಯಂ ಪಡಿತರ ಚೀಟಿ ಪಡೆಯಲು ಭಾವಚಿತ್ರ, ಬೆರಳಚ್ಚು- ಬಯೋವುಟ್ರಿಕ್ ನೀಡಿದ್ದರೆ ಕೂಡಲೇ ತಾಲೂಕು ಕಚೇರಿ ಅಥವಾ ಗ್ರಾಪಂ ಕಚೇರಿಗೆ ತೆರಳಿ, ಪಡಿತರ ಚೀಟಿಯನ್ನು ಪಡೆಯಿರಿ, ಈ ಕಾಲಾವಕಾಶ ಇನ್ನೊಂದು ತಿಂಗಳು ಮಾತ್ರ. ಕೊಟ್ಟ ಸಮಯ ಮೀರಿದರೆ ಪಡಿತರ ಚೀಟಿ ಕೈ ತಪ್ಪುವ ಸಾಧ್ಯತೆ ಇದೆ.
ಕಾಯಂ ಪಡಿತರ ಚೀಟಿಯನ್ನು ಪಡೆಯದೆ ಇರುವುದನ್ನು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಗಂಭೀರವಾಗಿ ಪರಿಗಣಿಸಿದೆ.
ಇದಕ್ಕೆ ಬಲವಾದ ಕಾರಣವೆಂದರೆ- ವಿತರಣೆ ಆಗದ ಕಾಯಂ ಪಡಿತರ ಚೀಟಿದಾರರ ಹೆಸರಿಗೆ ಹೋಗುತ್ತಿರುವ ಆಹಾರಧಾನ್ಯವನ್ನು ತಡೆ ಹಿಡಿಯುವುದು ಇದರ ಮೂಲ ಉದ್ದೇಶವಾಗಿದೆ. ಈ ಸಂಬಂಧ ಆಹಾರ ಇಲಾಖೆಯ ಆಯುಕ್ತರು ಜೂ.15 ರಂದು ಆದೇಶ ಹೊರಡಿಸಿದ್ದಾರೆ.
29 ಲಕ್ಷ ಕಾರ್ಡ್ ವಿತರಣೆ: ತಾತ್ಕಾಲಿಕ ಪಡಿತರ ಚೀಟಿಯಿಂದ ಕಾಯಂ ಪಡಿತರ ಚೀಟಿಯಾಗಿ ಬದಲಿಸಲು ಇಲಾಖೆಯ ದತ್ತಾಂಶದಲ್ಲಿ ಅವಕಾಶ ಕಲ್ಪಿಸಲಾಗಿದೆ.
ಇದರಲ್ಲಿ ಇಲ್ಲಿಯವರೆಗೆ 41 ಲಕ್ಷ ಪಡಿತರ ಚೀಟಿದಾರರು ಭಾವಚಿತ್ರ ಮತ್ತು ಬೆರಳಚ್ಚು- ಬಯೋವುಟ್ರಿಕ್ ಅನ್ನು ಸಲ್ಲಿಸಿದ್ದಾರೆ.
ಇದರಲ್ಲಿ 29 ಲಕ್ಷ ಪಡಿತರ ಚೀಟಿದಾರರು ಪಡಿತರ ಚೀಟಿಗಳನ್ನು ತಾಲೂಕು ಕಚೇರಿಗಳಿಂದ ಮತ್ತು ಗ್ರಾಪಂ ಕಚೇರಿಗಳಿಂದ ತೆಗೆದುಕೊಂಡು ಹೋಗಿದ್ದಾರೆ.
ಆದರೆ, ಇನ್ನೂ 12 ಲಕ್ಷ ಪಡಿತರ ಚೀಟಿದಾರರು ಪಡಿತರ ಚೀಟಿಗಳನ್ನು ತೆಗೆದುಕೊಂಡು ಹೋಗಿರುವುದಿಲ್ಲ.
ಈ ಎಲ್ಲಾ ಪಡಿತರ ಚೀಟಿಗಳನ್ನು ಆಹಾರ ನಿರೀಕ್ಷಕರು ಪರಿಶೀಲಿಸಿ ಅನುಮೋದನೆ ನೀಡಿದ್ದು, ಈ ಎಲ್ಲಾ ಪಡಿತರ ಚೀಟಿಗಳಿಗೆ ಆಹಾರಧಾನ್ಯವನ್ನು ಹಂಚಿಕೆಗೆ ನೀಡಲಾಗುತ್ತಿದೆ. ಇದರಿಂದ ಪಡಿತರ ದುರುಪಯೋಗವಾಗುವ ಸಾಧ್ಯತೆ ಇದೆ.
ಅದುದರಿಂದ ಆಹಾರ ನಿರೀಕ್ಷಕರಿಂದ ಅನುಮೋದಿಸಲ್ಪಟ್ಟು ವಿತರಣೆ ಮಾಡದೇ ಇರುವ ಪಡಿತರ ಚೀಟಿಗಳಿಗೆ ಜೂನ್ ಮಾಹೆಯಿಂದಲೇ ಆಹಾರ ಧಾನ್ಯ ವಿತರಣೆಯನ್ನು ವಿಶೇಷವಾಗಿ ಪರಿಶೀಲಿಸಲಾಗುತ್ತಿದೆ.
ತಾತ್ಕಾಲಿಕ ಪಡಿತರ ಚೀಟಿದಾರರು ತಮ್ಮ ಪಡಿತರ ಚೀಟಿಯನ್ನು ತೋರಿಸಿ, ಆಹಾರಧಾನ್ಯವನ್ನು ತೆಗೆದುಕೊಳ್ಳುವಾಗ ನ್ಯಾಯಬೆಲೆ ಅಂಗಡಿ ಹಂತದಲ್ಲಿ ಸಿದ್ಧಪಡಿಸಿರುವ ವಿತರಣೆ ಮಾಡದೇ ಇರುವ ಪಡಿತರ ಚೀಟಿಗಳ ಪಟ್ಟಿಯಲ್ಲಿ ಪಡಿತರ ಚೀಟಿದಾರರ ವಿತರಣೆ ಪ್ರಮಾಣವನ್ನು ನಮೂದಿಸಿ ಸಹಿ ಪಡೆದು ಜುಲೈ ತಿಂಗಳಲ್ಲಿ ಖಾಯಂ ಪಡಿತರ ಚೀಟಿಯನ್ನು ತಂದು ಆಹಾರ ಧಾನ್ಯವನ್ನು ಪಡೆದುಕೊಳ್ಳಲು ಸೂಚಿಸಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.
ಅಂದರೆ, ವಿತರಣೆಗೆ ಸಿದ್ದವಿರುವ ಕಾಯಂ ಪಡಿತರ ಚೀಟಿಯನ್ನು ಜುಲೈ 31 ರೊಳಗೆ ಪಡೆಯಬೇಕು. ಇಲ್ಲವಾದಲ್ಲಿ ಅವುಗಳ ವಿತರಣೆಯನ್ನು ಕೈ ಬಿಡಬೇಕೆಂದು ಜೂ. 13 ರಂದು ನಡೆದ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರ ಸಭೆಯಲ್ಲಿ ಹಿರಿಯ ಅಧಿಕಾರಿಗಳು ಮೌಖಿಕವಾಗಿ ಸೂಚನೆ ನೀಡಿದ್ದಾರೆ.
ಬಯೋವುಟ್ರಿಕ್: 2010ರಲ್ಲಿ ನೀಡಲಾಗಿರುವ ಪಡಿತರ ಚೀಟಿಗಳಿಗೆ ಹೊಸದಾಗಿ ಭಾವಚಿತ್ರ ಮತ್ತು ಬೆರಳಚ್ಚು- ಬಯೋವುಟ್ರಿಕ್ ಮಾಹಿತಿಯನ್ನು ಅಳವಡಿಸಬೇಕಾಗಿದ್ದು, ಈ ಕೆಲಸ ಜರೂರಾಗಿ ಮುಗಿಸಬೇಕೆಂದು ಇಲಾಖೆಯ ಉನ್ನತಾಧಿಕಾರಿಗಳು ಉಪ ನಿರ್ದೇಶಕರುಗಳಿಗೆ ಸೂಚನೆ ನೀಡಿದ್ದಾರೆ.
ಸದ್ಯ ಈ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಹಳೇ ಕಾರ್ಡ್ಗಳಿಗೆ ಹೊಸದಾಗಿ ಮಾಹಿತಿ ಸೇರ್ಪಡೆ ಮಾಡುವ ದೊಡ್ಡ ಹೊರೆ ಇಲಾಖೆಯ ಮೇಲೆ ಬಿದ್ದಿರುವುದರಿಂದ ವಿತರಣೆಯಾಗದೆ ಇರುವ ಕಾಯಂ ಪಡಿತರ ಚೀಟಿಯ ಬಗ್ಗೆ ಇಲಾಖೆಯವರಾಗಲೀ, ನ್ಯಾಯಬೆಲೆ ಅಂಗಡಿಯವರಾಗಲೀ ಅಷ್ಟೇನೂ ತಲೆ ಕೆಡಿಸಿಕೊಳ್ಳುವುದಿಲ್ಲ.
ಅದುದರಿಂದ ಭಾವಚಿತ್ರ ಮತ್ತು ಬೆರಳಚ್ಚು- ಬಯೋವುಟ್ರಿಕ್ ಸಲ್ಲಿಸಿರುವವರು ನಿಗದಿತ ಸಮಯದೊಳಗೆ ಕಾಯಂ ಪಡಿತರ ಚೀಟಿಯನ್ನು ಪಡೆಯಬೇಕು. ಇಲ್ಲದೆ ಹೋದರೆ ಅವುಗಳು ರದ್ದಾಗಲಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

