ಬ್ಯಾಂಕ್ ಸೇವೆ ಸದುಪಯೋಗವಾಗಲಿ: ಸಂಸದ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜೂ.28
ಕೇಂದ್ರ ಸರ್ಕಾರದಿಂದ ಬರುವ ಯೋಜನೆಗಳು ರೈತರಿಗೆ ಬ್ಯಾಂಕಿನ ಮುಖಾಂತರ ತಲುಪುವುದಕ್ಕೆ ಗ್ರಾಮೀಣ ಭಾಗಗಳಲ್ಲಿ ಬ್ಯಾಂಕುಗಳ ಅವಶ್ಯಕತೆ ಇದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.
ಆಲ್ದೂರು ಹಾಗೂ ಮಾಗಡಿ- ಕೈಮರದಲ್ಲಿ ಕೆನರಾ ಬ್ಯಾಂಕ್ ನೂತನ ಗ್ರಾಮೀಣ ಶಾಖೆಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಬ್ಯಾಂಕುಗಳಿಂದ ಕೃಷಿ, ವಿದ್ಯಾಭ್ಯಾಸ, ವಾಹನ, ಗೃಹ ಸಾಲಗಳನ್ನು ತೆಗೆದುಕೊಳ್ಳಲು ಅತ್ಯಂತ ಸರಳ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಪಡೆದ ಸಾಲವನ್ನು ಸಮಯಕ್ಕೆ ಸರಿಯಾಗಿ ಮರು ಪಾವತಿ ಮಾಡುವವರು ಗ್ರಾಮೀಣ ಭಾಗದ ರೈತರು ಎಂದರು.
ಒಂದು ಕುಟುಂಬದವರು ಒಂದೇ ಕಸುಬನ್ನು ಮಾಡುವುದರ ಬದಲು ಬೇರೆ ಬೇರೆ ಉದ್ಯೋಗವನ್ನು ಮಾಡಬೇಕು. ನಿರುದ್ಯೋಗಿ ಯುವಕ, ಯುವತಿಯರಿಗೆ ರುಡ್ಸೆಟ್ ಸಂಸ್ಥೆಯ ಮೂಲಕ ಉಚಿತ ತರಬೇತಿ ನೀಡಿ, ಬ್ಯಾಂಕ್ ಮೂಲಕ ಸಾಲ ನೀಡಲಾಗುತ್ತಿದೆ. ಇದರ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.
ಸಾಲ ಮನ್ನಾ ಯೋಜನೆ: ಕೇಂದ್ರದಿಂದ ಬರುವ ಯೋಜನೆಗಳನ್ನು ಅಧಿಕಾರಿಗಳು ಸಮರ್ಪಕವಾಗಿ ಅರ್ಹ ಫಲಾನುಭವಿಗಳಿಗೆ ವಿತರಿಸಬೇಕು. ಇತ್ತೀಚೆಗೆ ಕೇಂದ್ರ ಸರ್ಕಾರ 72 ಸಾವಿರ ಕೋಟಿ ಸಾಲ ಮನ್ನಾ ಮಾಡಿದೆ. ಆದರೆ, ಸಾಲ ಮನ್ನಾ ಯೋಜನೆಗೆ ಕಾಯದೆ ರೈತರು ಸಾಲ ಮರುಪಾವತಿ ಮಾಡಿದಲ್ಲಿ ಬ್ಯಾಂಕ್ ಅಭಿವೃದ್ಧಿ ಜೊತೆಗೆ ತಮ್ಮ ಅಭಿವೃದ್ಧಿಯಾಗುತ್ತದೆ ಎಂದು ರೈತರಿಗೆ ಕಿವಿ ಮಾತು ಹೇಳಿದರು.
ಸುರಕ್ಷಿತ: ವಿಧಾನಪರಿಷತ್ ಸದಸ್ಯೆ ಗಾಯಿತ್ರಿ ಶಾಂತೇಗೌಡ ಮಾತನಾಡಿ, ಬ್ಯಾಂಕ್ಗಳಲ್ಲಿ ನಿಮ್ಮ ಹಣ ಸುರಕ್ಷಿತವಾಗಿರುವುದಲ್ಲದೆ ಯಾವುದೇ ಅವ್ಯವಹಾರಕ್ಕೆ ಅವಕಾಶವಿರುವುದಿಲ್ಲ. ರೈತರು ಅಗತ್ಯಕ್ಕೆ ತಕ್ಕಂತೆ ಸಾಲ ಪಡೆದು ಅಭಿವೃದ್ಧಿ ಹೊಂದಿ ಸಾಲದ ಮರುಪಾವತಿ ಮಾಡಬೇಕು ಎಂದರು.
ಮೂಡಿಗೆರೆ ಶಾಸಕ ಬಿ.ಬಿ. ನಿಂಗಯ್ಯ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಬ್ಯಾಂಕಿನ ಸೇವೆ ಹೆಚ್ಚಾಗಿ ಆಗಬೇಕು. ಉತ್ತಮ ರಾಷ್ಟ್ರ ನಿರ್ಮಾಣವಾಗಲು ಬ್ಯಾಂಕಿನ ಪಾತ್ರ ಅಗತ್ಯ. ಬ್ಯಾಂಕ್ಗಳು ನಮ್ಮ ತಾಯಿ ಇದ್ದಂತೆ. ಅಗತ್ಯವಿದ್ದಾಗ ಸಾಲದ ಸಹಾಯ ಪಡೆದು ಮರುಪಾವತಿಸಿದಾಗ ಇತರರಿಗೂ ಸಹಾಯ ಮಾಡಿದಂತಾಗುತ್ತದೆ. ಸಾರ್ವಜನಿಕ ಕ್ಷೇತ್ರದಲ್ಲಿ ಜನರ ಪ್ರೀತಿ ವಿಶ್ವಾಸ ಪಡೆದು ಕೆಲಸ ಮಾಡುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ಶಿವಮೊಗ್ಗ ವೃತ್ತ ಕಚೇರಿಯ ಉಪ ಪ್ರಬಂಧಕ ಎಂ.ಎಂ. ಚಿನಿವಾರ್ ಮಾತನಾಡಿ, ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸುತ್ತಿದೆ. ಅವುಗಳನ್ನು ಪಡೆಯಲು ಬ್ಯಾಂಕ್ಗಳು ಅತ್ಯವಶ್ಯಕವಾಗಿವೆ. ಗ್ರಾಮೀಣ ಭಾಗದಲ್ಲಿ 4.5 ಲಕ್ಷಕ್ಕೂ ಕಡಿಮೆ ಆದಾಯ ಇರುವ ಕುಟುಂಬದ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಸರ್ಕಾರ ಸಾಲ ನೀಡಿ ಬಡ್ಡಿ ಕಟ್ಟುತ್ತಿದ್ದು, ಇದರ ಸದುಪಯೋಗ ಪಡೆಯಬೇಕು ಎಂದು ಹೇಳಿದರು.
ಈ ತಿಂಗಳಲ್ಲಿಯೇ ಶಿವಮೊಗ್ಗದಲ್ಲಿ ಮೂರು, ಚಿಕ್ಕಮಗಳೂರಿನ ಆಲ್ದೂರು ಮತ್ತು ಮಾಗಡಿ-ಕೈಮರಗಳಲ್ಲಿ ಗ್ರಾಮೀಣ ಶಾಖೆಗಳನ್ನು ಪ್ರಾರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮದ ಶಾಖೆಗಳಲ್ಲೂ ಎ.ಟಿ.ಎಂ. ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷ ಬಸವರಾಜ್, ಸದಸ್ಯ ಕೃಷ್ಣೇಗೌಡ, ಗ್ರಾಪಂ ಅಧ್ಯಕ್ಷೆ ಶಶಿಕಲಾ ಉಪಸ್ಥಿತರಿದ್ದರು. ಎಜೆಎಂ ಸತೀಶ್ ಚಂದ್ರಶೆಟ್ಟಿ ಸ್ವಾಗತಿಸಿದರು, ಮಮತಾ ಕಾರ್ಯಕ್ರಮ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

