ಚಿಕ್ಕಮಗಳೂರು

ಮಕ್ಕಳನ್ನು ಸನ್ಮಾರ್ಗದಲ್ಲಿ ಬೆಳಸಿ: ಪಾಲಕರಿಗೆ ಸಚಿವರ ಸಲಹೆ

Published On :

ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜೂ.30
ಮಕ್ಕಳು ದೇವರಿಗೆ ಸಮಾನ. ಅವರ ಮನಸ್ಸಿನಲ್ಲಿ ಕಲ್ಮಶಗಳಾಗಲಿ, ಕೆಟ್ಟ ಹೃದಯಗಳಾಗಲಿ ಇರುವುದಿಲ್ಲ ಎಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.
ನಗರದ ಅಂಜುಮಾನ್ ಎ ಖುದಾಂ ವೆಲ್ ಫೇರ್ ಚಾರಿಟೇಬಲ್ ಟ್ರಸ್ಟ್ ಕುವೆಂಪು ಕಲಾಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಒಂದರಿಂದ ಹತ್ತನೆ ತರಗತಿವರೆಗಿನ ಮಕ್ಕಳು ದೇವರಿಗೆ ಸಮಾನ. ನಾವು ವಯಸ್ಕರಾಗುತ್ತಿದ್ದಂತೆ ಕೆಟ್ಟವರಾಗುತ್ತಾ ಹೋಗುತ್ತೇವೆ. ಸ್ವಜನ ಪಕ್ಷಪಾತ, ಭ್ರಷ್ಟಾಚಾರಗಳಂತಹ ದುರ್ಗುಣಗಳು ನಮ್ಮನ್ನು ಆವರಿಸಿಕೊಳ್ಳುತ್ತವೆ. ಆದರೆ, ಮಕ್ಕಳು ಹಾಗಿಲ್ಲ. ಅವರನ್ನು ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬೆಳೆಸಬೇಕು ಎಂದು ಕರೆ ನೀಡಿದರು.
ಸಂವಿಧಾನದ ಆಶಯ: ಹಲವಾರು ಧರ್ಮ, ಸಹಸ್ರಾರು ಜಾತಿ, ಭಾಷೆಗಳಿರುವ ಈ ದೇಶದಲ್ಲಿ ಎಲ್ಲರೂ ಸಾಮರಸ್ಯದಿಂದ ಬದುಕುವ ಸಂವಿಧಾನದ ಆಶಯಕ್ಕೆ ಬದ್ಧರಾಗಿ ನಡೆದುಕೊಳ್ಳುವ ಅವಶ್ಯಕತೆ ಇದೆ ಎಂದರು. ಬೌದ್ಧ, ಜೈನ, ಸಿಖ್ ಹಾಗೂ ಹಿಂದೂ ಧರ್ಮದಂತಹ ನಾಲ್ಕಾರು ಧರ್ಮಗಳಿಗೆ ಜನ್ಮ ನೀಡಿದ ಈ ನಾಡಿನಲ್ಲಿ ಕ್ರೈಸ್ತ ಹಾಗೂ ಇಸ್ಲಾಂ ಧರ್ಮಗಳೂ ಅಸ್ತಿತ್ವ ಹೊಂದಿವೆ. ಇಲ್ಲಿ ಹೃದಯ ಮತ್ತು ಮನಸ್ಸುಗಳನ್ನು ಒಡೆಯುವುದಕ್ಕೆ ಅವಕಾಶವಾಗಬಾರದು. ಎಲ್ಲರ ಮನಸ್ಸನ್ನು ಜೋಡಿಸುವ ಕೆಲಸವಾಗಬೇಕು. ಇತರರಿಗೆ, ಇತರ ಸಮುದಾಯಗಳಿಗೆ ನೋವಾಗದ ಹಾಗೆ ನಡೆದುಕೊಳ್ಳಬೇಕು. ಇದು ಸಂವಿಧಾನದ ಹಾಗೂ ಸರ್ಕಾರದ ಆಶಯ ಎಂದು ಹೇಳಿದರು.
ಶ್ಲಾಘನೀಯ: ವಿಧಾನಪರಿಷತ್ ಸದಸ್ಯೆ ಗಾಯಿತ್ರಿ ಶಾಂತೇಗೌಡ ಮಾತನಾಡಿ, ಟ್ರಸ್ಟ್‌ನಿಂದ ನಡೆಯುತ್ತಿರುವ ಈ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಒಂದು ಸಮುದಾಯಕ್ಕೆ ಸೀಮಿತವಾಗಿರದೆ ಎಲ್ಲ ವರ್ಗದವರನ್ನು ಪರಿಗಣಿಸಿರುವುದು ಶ್ಲಾಘನೀಯ. ವಿದ್ಯೆ ಕದಿಯುವ ಸೊತ್ತಲ್ಲ. ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಸಾಧನೆ ಮಾಡಲು ಸಂಘ-ಸಂಸ್ಥೆಗಳಿಂದಾಗಲಿ, ಸರ್ಕಾರದಿಂದಾಗಲಿ ನೆರವು ದೊರೆತಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
 ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಎಲ್ಲ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಟ್ರಸ್ಟ್ ವತಿಯಿಂದ  ಪುರಸ್ಕರಿಸಲಾಯಿತು. ಅಂಜುಮನ್ ಎ ಖುದಾಂ ಟ್ರಸ್ಟ್‌ನಿಂದ ಉತ್ತರಾಖಂಡ ರಾಜ್ಯದಲ್ಲಿ ಸಂಭವಿಸಿದ ಜಲಪ್ರಳಯದಲ್ಲಿ ಸಂತ್ರಸ್ತರಾದವರಿಗೆ 51 ಸಾವಿರ ರು.ಗಳ ನೆರವು ಘೋಷಿಸಲಾಯಿತು. ಘಟನೆಯಲ್ಲಿ ಸಾವಿಗೀಡಾದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
 ಟ್ರಸ್ಟ್ ಅಧ್ಯಕ್ಷ ಮಹಮ್ಮದ್ ಹನೀಫ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಲ್. ಮೂರ್ತಿ, ಜಮೀಲ್ ಪಾಷಾ, ಅಬ್ದುಲ್ ಸತ್ತಾರ್, ಅಬ್ದುಲ್ ಖಾದರ್, ಸೈಯ್ಯದ್ ಆಹ್ಮದ್, ಸಿ. ಅಬ್ದುಲ್ ಸತ್ತಾರ್, ಮೊಹಿಯುದ್ದೀನ್ ರಷಾದಿ ಭಾಗವಹಿಸಿದ್ದರು.
ಕರೆಯದೆ ಬಂದ ಅತಿಥಿ: ಕಾರ್ಯಕ್ರಮಗಳಿಗೆ ಅತಿಥಿಗಳನ್ನು ಆಹ್ವಾನಿಸುತ್ತಾರೆ. ಅವರು ಕೊನೆ ಕ್ಷಣದಲ್ಲಿ ಕೈ ಕೊಡುವುದು ಸಹಜ. ಆದರೆ, ಇಲ್ಲಿನ ಕುವೆಂಪು ಕಲಾಮಂದಿರದಲ್ಲಿ ಭಾನುವಾರ ನಡೆದ ಅಂಜುಮಾನ್ ಎ ಖುದಾಂ ವೆಲ್‌ಫೇರ್ ಚಾರಿಟಬಲ್ ಟ್ರಸ್ಟ್‌ನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರು ಕರೆಯದೆ ಅತಿಥಿಯಾಗಿ ಆಗಮಿಸಿದ್ದರು.
ಅವರು ತಮ್ಮ ಭಾಷಣದಲ್ಲಿ ಈ ಸಮಾರಂಭಕ್ಕೆ ಕರೆಯದೆ ಬಂದ ಅತಿಥಿ ತಾವೆಂದು ಹೇಳುವ ಜತೆಗೆ ಇದಕ್ಕೆ ಕಾರಣವನ್ನು ನೀಡಿದರು.
 ಆಸ್ಕರ್ ಫರ್ನಾಂಡಿಸ್ ಅವರು ಕೇಂದ್ರ ಸಚಿವರಾದ ನಂತರ ಉಡುಪಿಗೆ ಇದೇ ಮೊದಲ ಬಾರಿಗೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಅಲ್ಲಿ ಅವರಿಗೆ ಅಭಿನಂದನಾ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿದ್ದು, ಆ ಸಮಾರಂಭದಲ್ಲಿ ಸಚಿವ ಅಭಯಚಂದ್ರ ಜೈನ್ ಹಾಗೂ ಸಂಸದ ಜಯಪ್ರಕಾಶ್ ಹೆಗ್ಡೆ ಅವರು ಪಾಲ್ಗೊಳ್ಳುತ್ತಿರುವುದರಿಂದ ತಮಗೆ ಈ ಸಮಾರಂಭದಲ್ಲಿ ಭಾಗವಹಿಸುವ ಜವಾಬ್ದಾರಿ ವಹಿಸಿದರು ಎಂದು ಸಚಿವರು ಹೇಳಿದರು.
ನಾವು ಚುನಾವಣೆಗೆ ನಿಂತಾಗ ಯಾರೂ ಆಹ್ವಾನಿಸದೆ ಮನೆ ಮನೆಗೆ ತೆರಳಿ ಮತ ಕೇಳಿದ್ದೇವೆ. ಹಾಗಿರುವಾಗ ಈಗ ಅಹಂಕಾರ ಸಲ್ಲದು. ಜನರು ಸರ್ಕಾರದ ಆಧಾರ ಸ್ತಂಭಗಳು. ಜನರನ್ನು ಬಿಟ್ಟು ತಾವಿಲ್ಲ ಎಂದ ಸಚಿವರು, ತಮ್ಮನ್ನು ಭೇಟಿ ಮಾಡಲು ಅಪಾಯಿಂಟ್‌ಮೆಂಟ್ ಅಗತ್ಯವಿಲ್ಲ. ಎಲ್ಲಿ ಬೇಕಾದರೂ ತಮ್ಮನ್ನು ಭೇಟಿ ಮಾಡಿ ಮಾತನಾಡಬಹುದು ಎಂದರು.
ದೂರವಾಣಿಯಲ್ಲಿ ಕರೆ ಮಾಡಿದರೂ ತಾವು ಮಾತನಾಡುವ ಸರಳತೆ ಹೊಂದಿರುವುದಾಗಿ ತಿಳಿಸಿದ ಅವರು, ಯಾವುದೇ ಕೆಲಸ ಕಾರ್ಯಗಳಿದ್ದರೂ ತಮ್ಮ ಅಧಿಕಾರದ ಇತಿಮಿತಿಯಲ್ಲಿ ನೆರವಾಗುವುದಾಗಿ ವಾಗ್ದಾನ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.