ಜಾನುವಾರುಗಳ ಕುಡಿವ ನೀರಿಗೆ ತತ್ವಾರ
ಕ.ಪ್ರ.ವಾರ್ತೆ,ಚಿಕ್ಕಮಗಳೂರು, ಮಾ.3
ಬರ ಪೀಡಿತ ಜಿಲ್ಲೆಯ 4 ತಾಲೂಕುಗಳಲ್ಲಿ ಜಾನುವಾರುಗಳ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ.
- ಹೈನುಗಾರಿಕೆ ಅವಲಂಬಿತ ರೈತರು ಜಾನುವಾರುಗಳ ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದಾರೆ.
ಜನರಿಗೆ ಸಮರ್ಪಕವಾಗಿ ಕುಡಿಯುವ ನೀರಿಗೆ ಸರ್ಕಾರ ಒತ್ತು ನೀಡಿದೆ. ಆದರೆ, ಜಾನುವಾರುಗಳಿಗೆ ಕುಡಿಯುವ ನೀರು ಸರಬರಾಜಿಗೆ ಯಾವುದೇ ಕ್ರಮವನ್ನು ಈವರೆಗೆ ತೆಗೆದುಕೊಂಡಿಲ್ಲ. ಅದುದರಿಂದ 4 ತಾಲೂಕುಗಳಲ್ಲಿರುವ 3,82,245 ಜಾನುವಾರುಗಳಿಗೆ ಮುಂದೆ ಕಷ್ಟದ ದಿನಗಳು ಎದುರಾಗಲಿವೆ.
ಕಳೆದ ಬಾರಿ ಸಕಾಲದಲ್ಲಿ ಮಳೆ ಬರದೆ ರಾಜ್ಯದ 28 ಜಿಲ್ಲೆಗಳ 157 ತಾಲೂಕುಗಳಲ್ಲಿ ಬರ ಬಂದಿದ್ದು, ಇವುಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ 4 ತಾಲೂಕುಗಳು ಸೇರಿಕೊಂಡಿವೆ.
ಸರ್ಕಾರ ಬರ ನಿರ್ವಹಣೆಗೆ ಈ ಎಲ್ಲಾ ತಾಲೂಕುಗಳಿಗೆ ಹಂತ ಹಂತವಾಗಿ ಹಣ ಬಿಡುಗಡೆ ಮಾಡುತ್ತಿದ್ದು, ಈ ಅನುದಾನವನ್ನು ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಹಾಗೂ ಗೋಶಾಲೆಗಳಲ್ಲಿ ಜಾನುವಾರುಗಳಿಗೆ ಮೇವು ಪೂರೈಕೆಗೆ ಮಾತ್ರ ವೆಚ್ಚ ಮಾಡಬೇಕು. ಅನುದಾನ ಲಭ್ಯತೆ ಇಲ್ಲದೇ ಯಾವುದೇ ದುರಸ್ತಿ ಕಾಮಗಾರಿಗಳನ್ನು ತೆಗೆದುಕೊಳ್ಳಬಾರದು. ಪ್ರಕೃತಿ ವಿಕೋಪದಿಂದ ಆದಂತಹ ಹಾನಿಗೆ ಮಾತ್ರ ಬಳಸಿಕೊಳ್ಳಬೇಕೆಂದು ಸರ್ಕಾರ ಸುತ್ತೋಲೆಯಲ್ಲಿ ಹೇಳಿದೆ.
ರು. 16 ಕೋಟಿ ವೆಚ್ಚ: ರಾಜ್ಯ ಸರ್ಕಾರ ಜಿಲ್ಲೆಯ ತರೀಕೆರೆ, ಕಡೂರು, ಚಿಕ್ಕಮಗಳೂರು ಹಾಗೂ ಮೂಡಿಗೆರೆ ತಾಲೂಕುಗಳ ಬರ ಪೀಡಿತ ಪ್ರದೇಶಗಳಿಗೆ ಈವರೆಗೆ ಒಟ್ಟು ರು. 16 ಕೋಟಿ ಬಿಡುಗಡೆ ಮಾಡಿದೆ. ಬಿಡುಗಡೆ ಮಾಡಿರುವ ಹಣವನ್ನು ಬೋರ್ವೆಲ್ಗಳ ಆಳಪಡಿಸಲು ಬಳಸಿಕೊಳ್ಳಲಾಗಿದೆ. ಇದರ ಜತೆಗೆ ಕೆಲವು ಕಡೆಗಳಲ್ಲಿ ಮೇವು ಕೇಂದ್ರಗಳನ್ನು ತೆರೆಯಲಾಗಿತ್ತು.
ಟ್ಯಾಂಕರ್ಗಳ ಮೂಲಕ ಕುಡಿಯುವ ನೀರು ಮತ್ತು ಬೋರ್ವೆಲ್ ಅಳಪಡಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಆದರೆ, ಕಳೆದ ಒಂದು ತಿಂಗಳಲ್ಲಿ ಜಿಲ್ಲೆಯಾದ್ಯಂತ ಅಲ್ಪಸ್ವಲ್ಪ ಮಳೆಯಾಗಿದ್ದರಿಂದ ಸದ್ಯ ಜಾನುವಾರುಗಳ ಮೇವಿನ ಕೇಂದ್ರಗಳನ್ನು ಮುಚ್ಚಲಾಗಿದೆ. ಮುಂದಿನ ಪರಿಸ್ಥಿತಿ ನೋಡಿ ಮತ್ತೆ ಮೇವು ಕೇಂದ್ರಗಳನ್ನು ತೆರೆಯಲಾಗುವುದು.
ಕಾಳಜಿ ಇಲ್ಲ: ಸರ್ಕಾರ ಜಿಲ್ಲೆಗೆ ಬಿಡುಗಡೆ ಮಾಡಿರುವ 16 ಕೋಟಿಯಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ತೊಟ್ಟಿ ನಿರ್ಮಾಣಕ್ಕೆ ಈವರೆಗೆ ಒಂದು ರುಪಾಯಿ ಖರ್ಚು ಮಾಡಿಲ್ಲ. ಜನರಿಗೆ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆಯೇ ಹೊರತು ಜಾನುವಾರುಗಳಿಗೆ ನೀರು ಪೂರೈಕೆಯ ಬಗ್ಗೆ ಯಾವುದೇ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಂಡಿಲ್ಲ.
ಮುಂದಿನ ದಿನಗಳಲ್ಲಿ ಜಿಲ್ಲೆಯ 153 ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ಬರಬಹುದೆಂದು ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ ಅಂದಾಜು ಮಾಡಿ, ಆ ಗ್ರಾಮಗಳನ್ನು ಪಟ್ಟಿ ಮಾಡಿ, ಕೆಲವು ಮುಂಜಾಗ್ರತಾ ಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆದರೆ, ಇಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ತೊಟ್ಟಿ ನಿರ್ಮಾಣಕ್ಕೆ ಈವರೆಗೆ ಯಾವುದೇ ಸಿದ್ಧತೆಯೂ ನಡೆದಿಲ್ಲ.
ಜಾನುವಾರುಗಳ ತೊಟ್ಟಿ ನಿರ್ಮಾಣಕ್ಕೆ ಯಾವುದೇ ಇಲಾಖೆಯಲ್ಲೂ ಪ್ರತ್ಯೇಕವಾದ ಕಾರ್ಯಕ್ರಮಗಳಿಲ್ಲ. 2012ರ ಜುಲೈನಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿನ ತೊಟ್ಟಿ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದರೆ, ಈವರೆಗೆ ಯಾವುದೇ ಗ್ರಾಮ ಪಂಚಾಯ್ತಿ ಬೇಡಿಕೆಯ ಪಟ್ಟಿಯನ್ನು ಜಿಲ್ಲಾ ಪಂಚಾಯ್ತಿಗೆ ಸಲ್ಲಿಸಿಲ್ಲ.
ಜಿಲ್ಲಾಡಳಿತ, ಬರ ನಿರ್ವಹಣೆಗೆ ಹೋಬಳಿವಾರು ವಿಚಾಕ್ಷಣ ಅಧಿಕಾರಿಗಳನ್ನು ನೇಮಕ ಮಾಡಿದೆ. ಜಾನುವಾರುಗಳ ಸಂರಕ್ಷಣೆಗಾಗಿ ಮೇವಿನ ಜತೆಗೆ ಕುಡಿಯುವ ನೀರಿಗಾಗಿ ತೊಟ್ಟಿ ನಿರ್ಮಾಣಕ್ಕೆ ಆದ್ಯತೆ ನೀಡಿದರೆ ಜಾನುವಾರು ಸಾಕುತ್ತಿರುವವರಲ್ಲಿರುವ ಆತಂಕ ದೂರವಾಗಬಹುದು.
ನೀರಿಲ್ಲದೆ ಎತ್ತುಗಳನ್ನು ಮಾರಿದೆ
ನಮ್ಮೂರಿನಲ್ಲಿ ಸುಮಾರು 3 ಸಾವಿರ ದನ ಮತ್ತು ಎಮ್ಮೆಗಳಿರಬಹುದು. ಕಳೆದ ಒಂದು ತಿಂಗಳಿಂದ ಇವುಗಳಿಗೆ ನೀರಿಗೆ ತುಂಬಾ ತೊಂದರೆಯಾಗಿದೆ. ಇಲ್ಲಿನ ಕೆರೆಯ ಅಂಗಳದಲ್ಲಿ ಜೇಸಿಬಿಯಿಂದ ಗುಂಡಿ ಹೊಡೆಸಿ ಊರಿನ ಪಕ್ಕದಲ್ಲಿರುವ ಜಮೀನಿನವರಿಗೆ ಒತ್ತಾಯಿಸಿ ಅಲ್ಲಿಂದ ನೀರನ್ನು ಈ ಗುಂಡಿಗೆ ಹಾಯಿಸಿ, ಈ ನೀರನ್ನು ದನಗಳಿಗೆ ಕುಡಿಯಲು ಹಾಗೂ ಮೈ ತೊಳೆಯಲು ಬಳಸಿಕೊಳ್ಳಲಾಗುತ್ತಿದೆ ಎನ್ನುತ್ತಾರೆ ಚಿಕ್ಕಮಗಳೂರು ತಾಲೂಕಿನ ಕರ್ತಿಕೆರೆ ಗ್ರಾಮದವರು.
ಮನೆಯಲ್ಲಿ 2 ಜೊತೆ ಎತ್ತುಗಳಿದ್ದವು. ಮೇವು, ನೀರಿಲ್ಲದೆ ಒಂದು ಜತೆ ಮಾರಿದ್ದೇವೆ. ದನಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ನಮ್ಮೂರಲ್ಲಿ ಇಲ್ಲ, ಅಕ್ಕಪಕ್ಕದ ಊರಿನಲ್ಲೂ ಇದೆ ಸಮಸ್ಯೆ. ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಆಗಬೇಕು. ಇಲ್ಲದೆ ಹೋದರೆ ಮುಂದೆ ತುಂಬಾ ಕಷ್ಟವಾಗಲಿದೆ.
- ಆರ್. ತಾರಾನಾಥ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

