ಚಿಕ್ಕಮಗಳೂರು

ಗೋರಕ್‌ಸಿಂಗ್ ವರದಿ ತಿರಸ್ಕಾರ ಸರಿಯಲ್ಲ: ಬೆಳೆಗಾರರ ಸಂಘ ಆಕ್ರೋಶ

Published On :

ಕ.ಪ್ರ ವಾರ್ತೆ, ಸಾಗರ, ಮಾ.5
ಮುಂಗಡಪತ್ರದಲ್ಲಿ ಗೋರಕ್ ಸಿಂಗ್ ವರದಿ ಜಾರಿಗೊಳಿಸದೆ ಅಡಕೆ ಬೆಳೆಗಾರರ ಬೇಡಿಕೆ ತಿರಸ್ಕರಿಸಿದ ಕೇಂದ್ರ ಯುಪಿಎ ಸರ್ಕಾರದ ವರ್ತನೆಯನ್ನು ಪ್ರಾಂತ್ಯ ಅಡಕೆ ಬೆಳೆಗಾರರ ಸಂಘ ತೀವ್ರ ಖಂಡಿಸಿದೆ.
ಈ ಬಗ್ಗೆ ಸಂಘದ ಅಧ್ಯಕ್ಷ ಬಿ.ಆರ್. ಜಯಂತ್ ಪತ್ರಿಕಾ ಹೇಳಿಕೆ ನೀಡಿ, ಮಲೆನಾಡಿನ ಅಡಕೆ ಬೆಳೆಗಾರರು ಗೋರಕ್ ಸಿಂಗ್ ವರದಿಯ ಪೂರ್ಣ ಅನುಷ್ಠಾನಕ್ಕೆ 3 ವರ್ಷದಿಂದ ತಾಲೂಕಿನಿಂದ ಹಿಡಿದು ರಾಜ್ಯಾದ್ಯಂತ ಹೋರಾಟದ ಮೂಲಕ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿದ್ದಾರೆ. ಕೇಂದ್ರ ಸರ್ಕಾರ ಹಾಗೂ ಸಚಿವರು ವರದಿ ಅನುಷ್ಠಾನ ಕುರಿತು ಭರವಸೆ ಮಾತು ಆಡುತ್ತಿದ್ದಾರೆ ಎಂದಿದ್ದಾರೆ.
ಆತಂಕದಲ್ಲಿ ಜೀವನ: ಉಚ್ಚ ನ್ಯಾಯಾಲಯವೂ ಗೋರಕ್ ಸಿಂಗ್ ವರದಿ ಜಾರಿಗೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಮಲೆನಾಡಿನ ಅಡಕೆ ಬೆಳೆಗಾರರಲ್ಲಿ ಬಹುತೇಕ ಸಣ್ಣ ಹಾಗೂ ಅತಿ ಸಣ್ಣ ಹಿಡುವಳಿದಾರರಾಗಿದ್ದು, ಕೊಳೆರೋಗ, ಹಳದಿ ಎಲೆರೋಗ, ಬೇರುಹುಳು ಬಾಧೆ, ಧಾರಣೆ ಕುಸಿತ, ಕೂಲಿಕಾರ್ಮಿಕರ ಕೊರತೆ,  ಗೊಬ್ಬರದ ಬೆಲೆಯಲ್ಲಿ ಭಾರೀ ಏರಿಕೆ ಇನ್ನಿತರ ಸಮಸ್ಯೆಗಳಿಂದ ಬೆಳೆಗಾರರು ಆತಂಕದಲ್ಲಿ ಜೀವನ ಸಾಗಿಸುವಂತೆ ಆಗಿದೆ ಎಂದವರು ತಿಳಿಸಿದ್ದಾರೆ.   
ಗೋರಕ್‌ಸಿಂಗ್ ವರದಿಯನ್ನು ಯಥಾವತ್ತು ಜಾರಿಗೊಳಿಸಿದರೆ, ಮಲೆನಾಡಿನ ಅಡಕೆ ಬೆಳೆಗಾರರಿಗೆ ಸ್ವಲ್ಪಮಟ್ಟಿನ ನೆರವು ಸಿಗುತ್ತದೆ. ಈ ಬಾರಿ ಬಜೆಟ್ಟಿನಲ್ಲಿ ಗೋರಕ್‌ಸಿಂಗ್ ವರದಿ ಅನುಷ್ಠಾನಗೊಳಿಸುವ ಮೂಲಕ ಬೆಳೆಗಾರರ ಸಹಾಯಕ್ಕೆ ಬರಬಹುದು ಎನ್ನುವ ನಿರೀಕ್ಷೆ ಬೆಳೆಗಾರರು ಹೊಂದಿದ್ದರು.
ಹುಸಿ ಭರವಸೆ: ಕಾಂಗ್ರೆಸ್ ನಾಯಕರು ನೀಡಿರುವ ಭರವಸೆ ಹುಸಿ ಎನ್ನುವುದು ಬಹಿರಂಗವಾಗಿದ್ದು, ಗೋರಕ್ ಸಿಂಗ್ ವರದಿ ಜಾರಿಗೊಳಿಸಲು ನಿರಾಕರಿಸುತ್ತಿರುವ ಕೇಂದ್ರದ ವರ್ತನೆಯಿಂದಾಗಿ ಮಲೆನಾಡು ಜಿಲ್ಲೆಗಳ ಆರ್ಥಿಕ ಚಟುವಟಿಕೆಗಳಿಗೆ ಭಾರೀ ಹಿನ್ನಡೆ ಆಗಿದೆ.
ಗೋರಕ್ ಸಿಂಗ್ ವರದಿ ಜಾರಿಗೊಳಿಸುವಲ್ಲಿ ಕಾಂಗ್ರೆಸ್ ನಾಯಕರು ತೋರಿಸುವ ನಿರ್ಲಕ್ಷ್ಯ ಮತ್ತು ಅಸಮರ್ಥ ನಡೆಯನ್ನು ಅಡಕೆ ಬೆಳೆಗಾರರೆಲ್ಲರೂ ತೀವ್ರವಾಗಿ ಖಂಡಿಸಬೇಕಾದದ್ದು ಅನಿವಾರ್ಯವಾಗಿದೆ ಎಂದು ಸಂಘದ ಅಧ್ಯಕ್ಷ ಬಿ.ಆರ್. ಜಯಂತ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.