ಬರ ನಿರೋಧಕ ಬಿತ್ತನೆ ಬೀಜ ಇಂದಿನ ಅಗತ್ಯ
ಕ.ಪ್ರ ವಾರ್ತೆ, ಚಿಕ್ಕಮಗಳೂರು, ಮಾ. 5
ಬರ ನಿರೋಧಕ ಬಿತ್ತನೆ ಬೀಜ ಬಳಕೆ ಕೃಷಿಯ ಇಂದಿನ ಅವಶ್ಯಕತೆ ಎಂದು ನಬಾರ್ಡ್ ಪ್ರಧಾನ ಮುಖ್ಯ ವ್ಯವಸ್ಥಾಪಕ ಡಾ.ಎಸ್.ಎನ್. ಜಿನ್ಹಾ ಹೇಳಿದ್ದಾರೆ.
ನಬಾರ್ಡ್, ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆ ಹಾಗೂ ಬೆಳವಾಡಿ ಸುಸ್ಥಿರ ಕೃಷಿ ಯೋಜನೆ ಸಂಯುಕ್ತಾಶ್ರಯದಲ್ಲಿ ಪ್ರಾರಂಭಿಸಿರುವ ಉದ್ಭವಗಣಪತಿ ಸಮುದಾಯ ಬೀಜ ಕೇಂದ್ರವನ್ನು ಇತ್ತೀಚೆಗೆ ಬೆಳವಾಡಿಯಲ್ಲಿ ಉದ್ಘಾಟಿಸಿ ಮಾತನಾಡಿದರು.
ಕೃಷಿಯಲ್ಲಿ ಮಣ್ಣು, ಬೀಜ, ನೀರು ಪ್ರಮುಖ ಅಂಶ. ಮಣ್ಣು ಕೃಷಿಕರ ಜೀವನದ ಆತ್ಮ. ಆಲದ ಮರವಾಗಿ ಹೆಮ್ಮರವಾಗುವ ತಾಕತ್ತು ಇರುವುದು ಚಿಕ್ಕದಾದ ಬೀಜಕ್ಕೆ. ಭೂಮಿ ಫಲವತ್ತುಗೊಳಿಸಲು ನೀರು ಅಗತ್ಯ. ವಿವಿಧ ಕಾರಣಗಳಿಂದ ನೀರಿನ ಕೊರತೆ ವ್ಯಾಪಕವಾಗಿ ಕಾಡುತ್ತಿದೆ. ವಾತಾವರಣದ ಬದಲಾವಣೆಯಿಂದ ಕರ್ನಾಟಕ ದೇಶದಲ್ಲೆ ಹೆಚ್ಚು ಬರಪೀಡಿತ ಎನಿಸಿಕೊಳ್ಳುತ್ತಿದೆ. ಇಂತಹ ಸಂದರ್ಭ ಬರ ನಿರೋಧಕ ಬೀಜ ಬಳಸುವುದು ಇಂದಿನ ಕೃಷಿ ಪದ್ಧತಿಯಲ್ಲಿ ಅತ್ಯಗತ್ಯ. ವಿಶೇಷವಾಗಿ ಸಾಂಪ್ರದಾಯಿಕ ಬಿತ್ತನೆ ಬೀಜ ಬಳಕೆಯಿಂದ ಮಾತ್ರ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ರೈತಗೆ ನೆರವು ಉದ್ದೇಶ: ಸ್ಥಳೀಯ ತಳಿಗೆ ಕಡಿಮೆ ನೀರು ಅಲ್ಲಿಯ ವಾತಾವರಣಕ್ಕೆ ಒಗ್ಗಿರುತ್ತವೆ. ಹಾಗಾಗಿ ರೈತರಿಗೆ ಸಾಂಪ್ರದಾಯಿಕ ಬಿತ್ತನೆ ಬೀಜವನ್ನು ಒದಗಿಸಿ ಅವರು ಬೆಳೆದ ನಂತರ ದುಪ್ಪಟ್ಟು ಪ್ರಮಾಣದ ಬಿತ್ತನೆ ಬೀಜ ಸಂಗ್ರಹಿಸಿ ಮತ್ತಷ್ಟು ರೈತರಿಗೆ ನೆರವಾಗುವುದೇ ಸಮುದಾಯ ಬೀಜ ಕೇಂದ್ರದ ಆಶಯ ಎಂದರು.
ಕೃಷಿ ಅಭಿವೃದ್ಧಿಗೆ ನೆರವು ಜೊತೆಗೆ ಅತಿಸೂಕ್ಷ್ಮ ಹಣಕಾಸು ವ್ಯವಸ್ಥೆ, ರಸ್ತೆ, ಸೇತುವೆ, ಅಂಗನವಾಡಿ ಕಟ್ಟಡ, ಕೆರೆ, ಕಟ್ಟೆಗಳ ನಿರ್ಮಾಣಕ್ಕೆ ಸಹಾಯಹಸ್ತ ಚಾಚುತ್ತಿದೆ. ಬೆಳವಾಡಿ ಬೀಜ ಕೇಂದ್ರ ದೇಶದಲ್ಲೆ ಮಾದರಿಯ ಕೇಂದ್ರವಾಗಲೆಂದು ಡಾ. ಜಿನ್ಹಾ ಹಾರೈಸಿದರು.
ತಾಪಂ ಅಧ್ಯಕ್ಷ ಬಿ.ಎಸ್. ಬಸವರಾಜು ಮಾತನಾಡಿ, ಅಂತರ್ಜಲಮಟ್ಟ ಕುಗ್ಗಿ ರೈತರಿಗೆ ಬಹಳಷ್ಟು ತೊಂದರೆಯಾಗಿದೆ. ಕೊಳವೆ ಬಾವಿ ಹಾಗೂ ಕೆರೆ, ಕಟ್ಟೆಗಳ ಮರುಪೂರಣಕ್ಕೆ ನಬಾರ್ಡ್ ನೆರವು ನೀಡಬೇಕೆಂದು ಕೋರಲಾಗಿದೆ ಎಂದು ಹೇಳಿದರು.
ಬಿ.ಆರ್. ಚನ್ನವೀರೇಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಿದ್ದಲಿಂಗೇಗೌಡ ಸ್ವಾಗತಿಸಿ, ಬೀರೇಗೌಡ ವಂದಿಸಿದರು. ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

