ಕನ್ನಡಿಗರಿಗೆ ನೆಮ್ಮದಿ ನೀಡುವವರಾರು..?
ಕಡೂರು: ಪ್ರಾದೇಶಿಕ ಅಸಮಾನತೆ, ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಹಾಗೂ ರಾಷ್ಟ್ರದ್ರೋಹಿಗಳ ನಡುವೆ ಬದುಕುತ್ತಿರುವ ಕನ್ನಡಿಗರಿಗೆ ನೆಮ್ಮದಿ ಕೊಡುವವರು ಯಾರು ಎಂಬ ಬಗ್ಗೆ ಪ್ರತಿಯೊಬ್ಬರೂ ಚಿಂತಿಸುವ ಅಗತ್ಯವಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಗೊ.ರು. ಚನ್ನಬಸಪ್ಪ ಹೇಳಿದರು.
ಕಡೂರು ತಾಲೂಕು ನಿಡಘಟ್ಟ ಚಟ್ಟನಹಳ್ಳಿಯಲ್ಲಿ ಕಸಾಪದಿಂದ ಆಯೋಜಿಸಿದ್ದ ಮಹಾಕವಿ ಲಕ್ಷೀಶ ವೇದಿಕೆಯಲ್ಲಿ ಆರಂಭಗೊಂಡ ಎರಡನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ಆತ್ಮಸ್ಥೈರ್ಯಕ್ಕೆ ಅಗತ್ಯ: ಕನ್ನಡಿಗರು ಪರಭಾಷೆಯ ಹೊಡೆತ ಅನುಭವಿಸುವ ಮೂಲಕ ತಮ್ಮ ನೆಲೆ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದು, ಪ್ರಾದೇಶಿಕ ಅಸಮಾನತೆ ನಡುವೆ ಬದುಕುತ್ತಿರುವ ಕನ್ನಡಿಗರು ಅನುಭವಿಸುತ್ತಿರುವ ಸ್ಥಿತಿಯ ಬಗ್ಗೆ ಕವಿ ಜಿ.ಎಸ್. ಶಿವರುದ್ರಪ್ಪನವರ ಕವಿತೆಯ ಸಾಲುಗಳನ್ನು ಉದಾಹರಿಸಿ ಮಾತನಾಡಿ, ಕನ್ನಡಿಗರಲ್ಲಿ ಆತ್ಮಸ್ಥೈರ್ಯ ತುಂಬಲು ಇಂತಹ ಸಾಹಿತ್ಯ ಸಮ್ಮೇಳನಗಳ ಅಗತ್ಯವಿದೆ ಎಂದರು.
ಕೇವಲ ಪಟ್ಟಣ ಪ್ರದೇಶಗಳಿಗಷ್ಟೇ ಸೀಮಿತವಾಗಿದ್ದ ಕನ್ನಡ ಸಮ್ಮೇಳನಗಳನ್ನು ಗ್ರಾಮಾಂತರ ಪ್ರದೇಶಗಳಲ್ಲೂ ನಡೆಸುವ ಮೂಲಕ ಜನರಲ್ಲಿ ಕನ್ನಡದ ಬಗ್ಗೆ ಸ್ವಾಭಿಮಾನ ಮೂಡಿಸುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಹೇಳಿದರು.
ಕನ್ನಡದ ಶ್ರೀಮಂತಿಕೆ: ಸಮ್ಮೇಳನ ಉದ್ಘಾಟಿಸಿದ ಶಾಸಕ ಡಾ ವೈ.ಸಿ. ವಿಶ್ವನಾಥ್, ಕನ್ನಡ ಭಾಷೆ ಇತರೆ ಎಲ್ಲ ಭಾಷೆಗಳಿಗಿಂತ ಶ್ರೀಮಂತ ಹಾಗೂ ಪ್ರಾಚೀನವಾಗಿದ್ದು, ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿ ಬಂದಿರುವುದು ಕನ್ನಡದ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ ಎಂದರು.
ರಾಜ್ಯದ ಜನರಲ್ಲಿ ಕನ್ನಡಾಭಿಮಾನ ಮೂಡಿಸುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸೇವೆ ಮರೆಯಲಾಗದು. ಈ ನಿಟ್ಟಿನಲ್ಲಿ ಕವಿ ಲಕ್ಷೀಶನ ಜನ್ಮಸ್ಥಳವಾದ ದೇವನೂರಿನಲ್ಲಿ ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.
ವ್ಯಕ್ತಿರಿಕ್ತ ಪರಿಣಾಮ: ಸಮ್ಮೇಳನಾಧ್ಯಕ್ಷರ ನುಡಿ ನುಡಿದ ಚಟ್ಟನಹಳ್ಳಿ, ಕೇಂದ್ರ ಸರ್ಕಾರ ಹೊರಡಿಸಿರುವ ಶಿಕ್ಷಣ ಹಕ್ಕು ಕಾಯಿದೆಯಿಂದಾಗಿ ಎಲ್ಲ ಮಾತೃಭಾಷೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಈ ಬಗ್ಗೆ ನಾಡಿನ ಚಿಂತಕರು ಸಭೆ ಸೇರಿ ಸಾಧಕ ಭಾಧಕ ಕುರಿತು ಚರ್ಚಿಸಿ ಸರ್ಕಾರದ ಕಣ್ಣು ತೆರೆಸಬೇಕಿದೆ. ಕನ್ನಡ ಸಾಹಿತ್ಯದಲ್ಲಿ ಏನಿದೆ ಎಂದು ಕೇಳುವರಿಗೆ ಎನಿಲ್ಲ ಎಂದು ಹೇಳಬೇಕಿದೆ ಎಂದರು.
ಕನ್ನಡ ಸಾಹಿತ್ಯದಲ್ಲಿ ಧಾರ್ಮಿಕ ಚಿಂತನೆ ಇದೆ. ಸಾಮಾಜಿಕ ಕಳಕಳಿಯಿದ್ದು, ಅನ್ಯಾಯದ ವಿರುದ್ಧ ಹೋರಾಡುವ ಗುಣವಿದೆ. ಪ್ರತಿಯೊಬ್ಬರಿಗೆ ಕನ್ನಡ ತಾಯಿ ಸೃಷ್ಟಿಸಿರುವ ಪಾತ್ರವಿದ್ದು, ಆ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದಾಗ ಮಾತ್ರ ಅದು ಆದರ್ಶ ಪ್ರಾಯವಾಗುತ್ತದೆ ಎಂದು ಹೇಳಿದರು.
ಸ್ಮರಣ ಸಂಚಿಕೆ: ಸಾಹಿತಿ ಹೂಸೂರು ಪುಟ್ಟರಾಜುರವರ ಸಂಪಾದಕತ್ವದ ಬಯಲ ಬೆಳಕು ಸ್ಮರಣ ಸಂಚಿಕೆಯನ್ನು ಜಿ.ಪಂ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಬಿಡುಗಡೆ ಮಾಡಿದರು.
ಸಮಾರಂಭಕ್ಕೂ ಮುನ್ನ ಸಮ್ಮೇಳನಾಧ್ಯಕ್ಷರನ್ನು ದೇವನೂರಿನ ಪ್ರಮುಖ ಬೀದಿಗಳಲ್ಲಿ ಸಾಲಂಕೃತ ರಥದಲ್ಲಿ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಮೆರವಣೆಗೆ ಮಾಡಲಾಯಿತು.
ಕೆರೆಗೋಡು ಮಠದ ಗುರುಪರದೇಶಿ ಕೇಂದ್ರ ಶ್ರೀ, ಜಿಪಂ ಸದಸ್ಯ ಕಲ್ಮರುಡಪ್ಪ, ಪ್ರಪುಲ್ಲಾ ಮಂಜುನಾಥ್, ಕಸಾಪ ಜಿಲ್ಲಾಧ್ಯಕ್ಷ ಎನ್.ಎಸ್. ಶಿವಸ್ವಾಮಿ, ತಾಲೂಕು ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಮೊದಲಾದವರು ಉಪಸ್ಥಿತರಿದ್ದರು. ಗಂಗಾಧರ್ ನಿರೂಪಿಸಿದರು. ಬಿ.ಎಚ್. ಸೋಮಶೇಖರ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

