ನೂರನೇ ದಿನಕ್ಕೆ ಕಾಲಿಟ್ಟ ರೈತರ ಚಳುವಳಿ
ಕನ್ನಡಪ್ರಭವಾರ್ತೆ, ತರೀಕೆರೆ, ಮಾ.8
ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ತರೀಕೆರೆ ತಾಲೂಕು ಶಾಖೆಯಿಂದ ಪಟ್ಟಣದ ಮಿನಿ ವಿಧಾನ ಸೌಧದ ಆವರಣದಲ್ಲಿ ಭದ್ರಾ ಜಲಾಶಯದಿಂದ ನೀರನ್ನು ಒದಗಿಸಿ ತರೀಕೆರೆ ತಾಲೂಕಿಗೆ ಸಮಗ್ರ ನೀರಾವರಿ ವ್ಯವಸ್ಥೆ ಕಲ್ಪಿಸಿ ಮತ್ತು ಭದ್ರಾ ಮೇಲ್ದಂಡೆ ಯೋಜನೆ ಪಥ ಬದಲಾವಣೆಗೆ ಒತ್ತಾಯಿಸಿ ತಾಲೂಕಿನ ರೈತರು ನೆಡೆಸುತ್ತಿರುವ ಬೃಹತ್ ಚಳುವಳಿ ಶುಕ್ರವಾರಕ್ಕೆ ಬರೋಬ್ಬರಿ ನೂರನೇ ದಿವಸಕ್ಕೆ ಕಾಲಿಟ್ಟಿದೆ.
ತಾಲೂಕಿನ ಕೆರೆಗಳೆಲ್ಲಾ ಬತ್ತಿ ಭೂ ಪ್ರದೇಶದ ಅಂತರ್ಜಲವೆಲ್ಲಾ ಕುಸಿದು ಹೋಗಿ, ರೈತರ ಜಮೀನು ತೋಟ ಹೊಲ ಗದ್ದೆಗಳೆಲ್ಲಾ ಒಣಗಿ ಹೋಗಿ ಜನ ಜಾನುವಾರುಗಳು ಕುಡಿಯುಲು ನೀರಿಲ್ಲದೆ ಬೇರೆ ದಾರಿ ಕಾಣದೆ ರೈತರು ಗುಳೆ ಹೋಗುವ ಪರಿಸ್ಥಿತಿ ಬಂದಿದ್ದರೂ ಸರ್ಕಾರ ಮಾತ್ರ ದೀರ್ಘ ಮೌನ ವಹಿಸಿದೆ ಎಂದು ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುನೇನೆಯ ಪ್ರಧಾನ ಕಾರ್ಯದರ್ಶಿ ಸುರೇಶ್ ರೈತ ಮುಖಂಡ ಎಸ್.ಎನ್. ರವಿ ಆರೋಪಿಸಿದ್ದಾರೆ.
ಈ ಬಗ್ಗೆ ಅವರು ಪತ್ರಿಕಾ ಹೇಳಿಕೆ ನೀಡಿದ್ದು ವಿವರ ಈ ರೀತಿ ಇದೆ.
ವಿವಿಧ ರೀತಿಯ ಚಳುವಳಿ: ರೈತಸಂಘದ ತಾಲೂಕು ಶಾಖೆಯಿಂದ ತರೀಕೆರೆ ಮಿನಿ ವಿಧಾನಸೌಧದ ಬಳಿ ನ.30ರಂದು ಪ್ರಾರಂಭಗೊಂಡ ರೈತರ ಅನಿರ್ದಿಷ್ಟಾವಧಿ ಚಳುವಳಿ ಇಂದಿಗೆ ಸುದೀರ್ಘ ನೂರು ದಿನ ಮುಟ್ಟಿದೆ. ಈ ಮಧ್ಯೆ ರೈತರು ರಸ್ತೆತಡೆ ಚಳುವಳಿ, ಬರಗಾಲದ ಭೀಕರತೆ ಬಿಂಬಿಸುವ ಒಣಗಿದ ಅಡಿಕೆ ಮರಗಳ ಮತ್ತು ಸಸಿಗಳನ್ನು ಪ್ರದರ್ಶಿಸಿದ ಚಳುವಳಿ, ಕಾಲೇಜು ವಿದ್ಯಾರ್ಥಿಗಳಿಂದ ಮಾನವ ಸರಪಳಿ ಇತ್ಯಾದಿ ವಿವಿಧ ಹಂತದ ಚಳುವಳಿಯನ್ನು ರೈತರು ಒಗ್ಗಟ್ಟಿನಿಂದ ಮತ್ತು ಅಷ್ಟೇ ಉತ್ಸಾಹದಿಂದ ನೆಡೆಸುತ್ತಿದ್ದಾರೆ ಎಂದು
ತಿಳಿಸಿದ್ದಾರೆ.
ಹುಸಿಯಾದ ಭರವಸೆಗಳು: ರೈತರು ನಡೆಸುತ್ತಿದ್ದ ಚಳುವಳಿಯ ಸ್ಥಳಕ್ಕೆ ರಾಜ್ಯದ ಅನೇಕ ಗಣ್ಯರು ಭೇಟಿ ನೀಡಿ ರೈತರನ್ನು ಸಾಂತ್ವನಗೊಳಿಸುವ ಭರವಸೆಯ ಮಹಾಪೂರವನ್ನೇ ಹರಿಸಿದರು. ರೈತರನ್ನು ಉದ್ದೇಶಿಸಿ ಅನೇಕ ಭಾಷಣಗಳೇ ಹರಿದವು. ಆದರೆ ರೈತರು ಇಷ್ಟ ಪಡುವ ಭದ್ರಾ ನೀರು ಮಾತ್ರ ತಾಲೂಕಿಗೆ ಹರಿಯಲಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದು ಈ ಮೊದಲೇ ಭೀಕರ ಬರಗಾಲದಿಂದ ತತ್ತರಿಸಿರುವ ರೈತರು ನೀರಿನ ಆಸರೆ ದೊರೆಯದೆ ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ ಎಂದಿದ್ದಾರೆ.
ಆಳವಾದ ಕಾಲುವೆ: ಭದ್ರಾ ಮೇಲ್ದಂಡೆ ಯೋಜನೆ ತಾಲೂಕಿನಲ್ಲಿ 39 ಕಿ.ಮೀ.ಉದ್ದದ ಕಾಲುವೆ ಮತ್ತು 6.9 ಕೀ.ಮೀ ಆಳವಾದ ಸುರಂಗ ಮಾರ್ಗದ ಮೂಲಕ 21.5 ಟಿಎಂಸಿ ನೀರು ತಾಲೂಕಿನ ತೀರ ತಗ್ಗು ಪ್ರದೇಶದಲ್ಲಿ ತೆಗೆದುಕೊಂಡು ಹೋಗುವುದರಿಂದ ತಾಲೂಕಿನ ಭೂಪ್ರದೇಶದ ಅಂತರ್ಜಲ ಕುಸಿದು ಹೋಗಿ, ತಾಲೂಕಿನ ತೋಟ, ಜಮೀನು, ಹೊಲ ಗದ್ಗೆಗಳು, ಕೆರೆಕಟ್ಟೆಗಳು, ಕೊರೆಬಾವಿಗಳು, ಹಳ್ಳ ಕೊಳ್ಳಗಳು ನೀರಿಲ್ಲದೆ ಒಣಗಿ ಹೋಗುತ್ತವೆ ಎಂದು ತಿಳಿಸಿದ್ದಾರೆ.
ತಾಲೂಕು ಶಾಖೆಯ ಎಲ್ಲಾ ಪದಾಧಿಕಾರಿಗಳ ನೇತೃತ್ವದಲ್ಲಿ ರೈತರ ಸಹಕಾರದಿಂದ ಅನಿರ್ಧಿಷ್ಟಾವಧಿ ಚಳುವಳಿ ನಡೆಸುತ್ತಿದ್ದು ಇದೀಗ ಚಳುವಳಿ ನೂರನೇ ದಿವಸಕ್ಕೆ ಕಾಲಿಟ್ಟಿದೆ. ಮುಂದೆ ಸರ್ಕಾರ ಈ ಬಗ್ಗೆ ಗಮನ ಹರಿಸದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಅವರು ತಿಳಿಸಿದ್ದಾರೆ.
ಅಜ್ಜಂಪುರದಿಂದ ತರೀಕೆರೆವರೆಗೆ ರೈತರು ಕಾಲ್ನಡಿಗೆ ಜಾಥಾ ನಡೆಸುವುದಾಗಿ ಸಂಘ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

