ವಿದ್ಯಾರ್ಥಿಗಳಿಗೆ ರು. 500 ಕೋಟಿ ಶಿಕ್ಷಣ ಸಾಲ
ಕ.ಪ್ರ ವಾರ್ತೆ, ಚಿಕ್ಕಮಗಳೂರು, ಮಾ. 8
ಐದುನೂರು ಬಾಲಕಿಯರು ಸೇರಿದಂತೆ ಮೂರುವರೆ ಸಾವಿರ ವಿದ್ಯಾರ್ಥಿಗಳಿಗೆ ರು. 500 ಕೋಟಿ ಶಿಕ್ಷಣ ಸಾಲ ಸಹಾಯಧನ ಕೆನರಾ ಬ್ಯಾಂಕ್ ನೀಡುತ್ತಿದೆ ಎಂದು ಬ್ಯಾಂಕಿನ ಉಪ ಪ್ರಧಾನ ವ್ಯವಸ್ಥಾಪಕರಾದ ಎಂ.ಎಂ. ಚಿನಿವಾರ ಹೇಳಿದ್ದಾರೆ.
ನಗರದ ಕೆನರಾ ಬ್ಯಾಂಕ್ ಮುಖ್ಯಶಾಖೆ ಆವರಣದಲ್ಲಿ ವಿಶ್ವಮಹಿಳಾ ದಿನಾಚರಣೆ ಅಂಗವಾಗಿ ಶುಕ್ರವಾರದಿಂದ ಮೂರು ದಿನಗಳ ಕಾಲ ಆಯೋಜಿಸಿರುವ ಉತ್ಸವ- 2013 ಉದ್ಘಾಟನಾ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಮಹಿಳಾ ಸಬಲೀಕರಣಕ್ಕೆ ಕೆನರಾ ಬ್ಯಾಂಕ್ ಒತ್ತು ನೀಡಿದೆ. ಇಂದು ವಿಶ್ವ ಮಹಿಳಾ ದಿನಾಚರಣೆಯನ್ನು ಕೆನರಾ ಬ್ಯಾಂಕ್ ದೇಶಾದ್ಯಂತ ವೈಶಿಷ್ಟ್ಯ ಪೂರ್ಣವಾಗಿ ಆಚರಿಸುತ್ತಿದೆ. ಸ್ತ್ರೀಶಕ್ತಿ ಸಂಘಗಳ ಉತ್ಪನ್ನಗಳಿಗೆ ಮಾರುಕಟ್ಟೆ ಸೃಷ್ಟಿಸುವ ಹಿನ್ನಲೆಯಲ್ಲಿ ಮೇಳಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಅಡಮಾನ ಸಾಲ ಯೋಜನೆ: ಸ್ವಂತ ಕೈಗಾರಿಕೆ ಅಥವಾ ಉದ್ದಿಮೆ ಹೊಂದಲು ಮಹಿಳೆಯರಿಗೆ ರು. 10 ಲಕ್ಷವರೆಗೂ ಶೇ.0.5 ಕಡಿಮೆ ಬಡ್ಡಿ ದರದಲ್ಲಿ ಅಡಮಾನ ಕೇಳದೆ ಸಾಲ ನೀಡುವ ಯೋಜನೆಯನ್ನು ಇಂದಿನಿಂದ ಕೆನರಾ ಬ್ಯಾಂಕ್ ಆರಂಭಿಸಲಿದೆ. ರು. 4.5 ಲಕ್ಷಕ್ಕಿಂತ ಕಡಿಮೆ ಆದಾಯವಿರುವ ಪೋಷಕರ ಮಕ್ಕಳ ವಿದ್ಯಾಭ್ಯಾಸ ಸಾಲದ ಬಡ್ಡಿಯನ್ನು ಬ್ಯಾಂಕ್ ಸಹಾಯಧನವಾಗಿ ಭರಿಸಲಿದೆ ಎಂದ ಚಿನಿವಾರ್, ದೇಶದಲ್ಲಿ 30 ಸಾವಿರ ಸ್ತ್ರೀಶಕ್ತಿ-ಗುಂಪುಗಳಿಗೆ ಬ್ಯಾಂಕ್ ನೆರವು ನೀಡಿದ್ದು ಶೇ.80ರಷ್ಟು ಮರುಪಾವತಿಯಾಗಿದೆ ಎಂದು ಹೇಳಿದರು.
ಜಿಲ್ಲೆಯ ಅಭಿವೃದ್ಧಿಗೆ ಕೆನರಾ ಬ್ಯಾಂಕ್ ಬದ್ಧವಾಗಿದೆ. ಜಿಲ್ಲಾಡಳಿತದೊಂದಿಗೆ ಸಹಕರಿಸಿ ಹೆಚ್ಚಿನ ಸೇವೆ, ಸೌಲಭ್ಯ ನೀಡಲಿದೆ. ಈಗಾಗಲೇ 21 ಅತಿಸಣ್ಣ ಶಾಖೆಗಳನ್ನು ಜಿಲ್ಲೆಯಲ್ಲಿ ತೆರೆದು ಜನಸಾಮಾನ್ಯರಿಗೆ ವಿವಿಧ ಸೌಲಭ್ಯಗಳನ್ನು ನೀಡುತ್ತಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ವಿ. ಯಶವಂತ್ ಉತ್ಸವ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯನ್ನು ಕೈಗಾರಿಕೆಯಲ್ಲಿ ಅಭಿವೃದ್ಧಿ ಹೊಂದಿದ ಜಿಲ್ಲೆಯನ್ನಾಗಿಸಲು ಬ್ಯಾಂಕ್ಗಳು ಹೆಚ್ಚಿನ ಆಸಕ್ತಿ ತೋರಬೇಕು. ಗ್ರಾಮೀಣ ರೈತರಿಗೆ ಫಸಲು ಶೇಖರಣೆ ಸೇರಿದಂತೆ ವಿವಿಧ ರೀತಿಯ ಸಾಲಗಳು ಸುಲಭವಾಗಿ ಸಿಗುವಂತಾಗಬೇಕು ಎಂದು ಹೇಳಿದರು.
ಮಹಿಳಾ ದಿನಾಚರಣೆಗೆ ಮಹಿಳಾ ಕಾಳಜಿ ಸೀಮಿತವಾಗದಿರಲಿ, ನಿತ್ಯದ ಗೊಂದಲ, ಸಮಸ್ಯೆ ಮಹಿಳೆಯ ಬಗೆಗಿನ ಧೋರಣೆಯಿಂದ ಗೊತ್ತಾಗುತ್ತಿದೆ. ಮಹಿಳಾ ಸಮಾನತೆ ಬಗ್ಗೆ ಸಮಾಜ ಬದಲಾಗದಿದ್ದರೆ ಕಾನೂನಿನಿಂದಷ್ಟೇ ಪ್ರಯೋಜನವಾಗದು. ಮಹಿಳಾ ಸ್ವಸಹಾಯ ಗುಂಪುಗಳ ಉತ್ಪಾದನೆಗೆ ಮಾರುಕಟ್ಟೆ ಒದಗಿಸುವ ಈ ಯೋಜನೆ ಉಪಯುಕ್ತ ಎಂದರು.
ಮಹಿಳೆಯರು ಸ್ವಾಭಿಮಾನಿಗಳಾಗಿ: ಮಹಿಳಾ ಜಾಗೃತಿ ಸಂಘದ ಅಧ್ಯಕ್ಷೆ ಗೌರಮ್ಮ ಬಸವೇಗೌಡ ಮಾತನಾಡಿ, ದೆಹಲಿಯಲ್ಲಿ ನಡೆದ ಮಹಿಳಾ ದೌರ್ಜನ್ಯ ದೇಶಾದ್ಯಂತ ಮಹಿಳೆಯರ ಮನದಲ್ಲಿ ಬಲವಾಗಿ ನಾಟಿದೆ. ಸೃಷ್ಟಿಯ ನಿಯಮವನ್ನು ಒಪ್ಪಲೇಬೇಕು. ಮಹಿಳೆಯರು ಸ್ವಾಭಿಮಾನಿಗಳಾಗಬೇಕು. ಸಂಘ ಹಾಗೂ ಬ್ಯಾಂಕ್ಗಳು ನೀಡುವ ನೆರವನ್ನು ಉತ್ಪಾದಕತೆಗೆ ಬಳಸಿ ಸ್ವಾವಲಂಬಿಗಳಾಗಬೇಕು. ಮಹಿಳೆಯರಿಗೆ ಶೇ.33ರ ಮೀಸಲಾತಿ ಇನ್ನೂ ಸಿಗದಿರುವುದಕ್ಕೆ ಶಾಸನ ಮಾಡುವ ಪುರುಷರೇ ಕಾರಣ ಎಂದರು.
ವಾಣಿಜ್ಯೋದ್ಯಮಿ ಎಂ. ಶಂಕರಮೂರ್ತಿ ಶುಭ ಹಾರೈಸಿದರು. ಹಿರಿಯ ಗ್ರಾಹಕರಾದ ಗೋಪಾಲ್, ರವಿಶಂಕರ್, ಶಾಹೀಬ್ ಆಲಿ, ಬ್ಯಾಂಕ್ ಸಂಸ್ಥಾಪಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಹಿರಿಯ ವ್ಯವಸ್ಥಾಪಕ ಮಾಲತೇಶ್ರಾವ್ ಸ್ವಾಗತಿಸಿ, ವ್ಯವಸ್ಥಾಪಕರಾದ ಮಮತಾ ಕಾರ್ಯಕ್ರಮ ನಿರೂಪಿಸಿ, ವಿನಯ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

