ಸ್ತ್ರೀಯರ ಶೋಷಣೆಗೆ ಅನಕ್ಷರತೆ ಕಾರಣ
ಕಪ್ರ ವಾರ್ತೆ, ಚಿಕ್ಕಮಗಳೂರು
ಸ್ತ್ರೀಯರ ಶೋಷಣೆಗೆ ಅನಕ್ಷರತೆ, ಅಜ್ಞಾನದ ಜೊತೆಗೆ ಸಮಾಜದಲ್ಲಿನ ಆಗುಹೋಗುಗಳ ಬಗ್ಗೆ ತಿಳುವಳಿಕೆಯ ಕೊರತೆಯೇ ಕಾರಣ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎ. ಪಾಟೀಲ್ ಹೇಳಿದ್ದಾರೆ.
ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪಂಚಾಯಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಜಿಲ್ಲಾ ಮಟ್ಟದ ಮಹಿಳೆಯರ ಕಾನೂನುಗಳ ತರಬೇತಿ ಕಾರ್ಯಾಗಾರ ಮತ್ತು ಚಿಕ್ಕಮಗಳೂರು ತಾಲೂಕು ಮಟ್ಟದ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ ಕುರಿತು ಜಾಗೃತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಒಗ್ಗಟ್ಟು, ಛಲ ಹೊಂದಿದಾಗ ಮಾತ್ರ ಯಶಸ್ಸು ಹೊಂದುವ ಜೊತೆಗೆ ಶೋಷಣೆಯಿಂದ ದೂರವಾಗಲು ಸಾಧ್ಯ. ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆ 1908ರ ಮಾ.8ರಂದು ನ್ಯೂಯಾರ್ಕ್ನಲ್ಲಿ ಮಹಿಳೆಯರು ಸಮಾನ ಹಕ್ಕುಗಳಿಗಾಗಿ ಸಂಘಟಿತರಾಗಿ ಹೋರಾಡಿದ ದಿನ. ಮಹಿಳೆಯರ ದಿನಾಚರಣೆ ಕೇವಲ ಒಂದು ದಿನದ ಆಚರಣೆಗೆ ಸೀಮಿತವಾಗದೆ ತಮ್ಮ ಹಕ್ಕುಗಳಿಗಾಗಿ ಸಂಘಟಿತ ಹೋರಾಟ ನಡೆಸಬೇಕು ಎಂದರು.
ಹೆಣ್ಣು ಭ್ರೂಣ ಹತ್ಯೆ ತಡೆಯುವ ಅವಶ್ಯಕತೆ ಇದೆ. ಮಹಿಳೆಯರು ಸಮಾಜದಲ್ಲಿ ಆರ್ಥಿಕ, ಶೈಕ್ಷಣಿಕವಾಗಿ ಸಬಲಗೊಳ್ಳುವುದರೊಂದಿಗೆ ಉತ್ತಮ ಜೀವನ ರೂಢಿಸಿಕೊಳ್ಳಬೇಕೆಂದರು.
ಕಾನೂನು ಅರಿವಿರಲಿ: ಪ್ರಧಾನ ಸಿವಿಲ್ ನ್ಯಾಯಾಧೀಶೆ ಬಿ.ವಿ. ರೇಣುಕಾ ಮಾತನಾಡಿ, ಮಹಿಳೆಯರು ಕಾನೂನುಗಳ ಬಗ್ಗೆ ಅರಿವನ್ನು ಹೊಂದುವುದರಿಂದ ಶೋಷಣೆ ತಡೆಗಟ್ಟಲು ಸಾಧ್ಯ. ಮಹಿಳೆಯರು ಪಿತ್ರಾರ್ಜಿತ ಆಸ್ತಿ ಪಡೆಯುವಾಗ ಕೌಟುಂಬಿಕ ಸಂಬಂಧಗಳನ್ನು ಹಾಳುಗೆಡಿಸಿಕೊಳ್ಳದೆ ಆಸ್ತಿ ಹಾಗೂ ಸಂಬಂಧಗಳೆರಡನ್ನು ಉಳಿಸಿಕೊಳ್ಳಬೇಕೆಂದರು.
ಬಾಲ್ಯ ವಿವಾಹ ಕಾನೂನಿನ ವಿರೋಧವಾಗಿದೆ. ಕಾನೂನು ಸೇವಾ ಪ್ರಾಧಿಕಾರದಿಂದ ಮಹಿಳೆಯರಿಗೆ ಉಚಿತ ಕಾನೂನು ಅರಿವು ನೀಡಲಾಗುವುದು ಎಂದು ಹೇಳಿದರು.
ವಕೀಲರ ಸಂಘದ ಕಾರ್ಯದರ್ಶಿ ಸಿ.ಪಿ. ದುಗ್ಗೇಗೌಡ ಮಾತನಾಡಿ, ಮಹಿಳೆಯರು ತಮಗಿರುವ ಕಾನೂನುಗಳ ಬಗ್ಗೆ ಅರಿವು ಹೊಂದುವುದರ ಜೊತೆಗೆ ಅವುಗಳ ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ನಾರಾಯಣ ಶೇರಿಗಾರ್ ಅವರು ವರದಕ್ಷಿಣೆ ನಿಷೇಧ ಕಾಯ್ದೆ, ವೈದ್ಯಾಧಿಕಾರಿ ಡಾ.ಎಂ. ಶಶಿಕಲಾ ಅವರು ಹೆಣ್ಣು ಮಕ್ಕಳ ಆರೋಗ್ಯ ಸಂರಕ್ಷಣೆ ಹಾಗೂ ಪೋಷಕಾಂಶಗಳ ಮಹತ್ವ ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣ ಲಿಂಗ ಪತ್ತೆ ನಿಷೇಧ ಕಾಯ್ದೆ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಮಮತಾ, ಪಿತ್ರಾರ್ಜಿತ ಆಸ್ತಿಯಲ್ಲಿ ಮಹಿಳೆಯರಿಗೆ ಇರುವ ಹಕ್ಕುಗಳ ಬಗ್ಗೆ, ನ್ಯಾಯವಾದಿ ಸುಜೇಂದ್ರ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ ಕುರಿತು ಉಪನ್ಯಾಸ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎಚ್.ಜಿ. ಚಂದ್ರಶೇಖರಯ್ಯ ಸ್ವಾಗತಿಸಿದರು. ಜ್ಞಾನಪೂರ್ಣ ನಿರೂಪಿಸಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಸ್.ಆರ್. ವೆಂಕಟೇಶ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

