ಚಿಕ್ಕಮಗಳೂರು

ಕುಡಿವ ನೀರಿನ ಯೋಜನೆಗೆ ಆದ್ಯತೆ

Published On :

ಕ.ಪ್ರ ವಾರ್ತೆ, ಕಡೂರು, ಮಾ.12
ಕಡೂರು ಹಾಗೂ ಬೀರೂರಿನ ಪುರಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತದಾರರು ಬಹುಮತ ನೀಡಿರುವ ಹಿನ್ನೆಲೆಯಲ್ಲಿ ಭದ್ರಾ ನದಿಯಿಂದ ಎರಡೂ ಪಟ್ಟಣಗಳಿಗೆ ಶಾಶ್ವತ ಕುಡಿಯುವ ನೀರೊದಗಿಸುವ ಕಾಮಗಾರಿಗೆ ಪ್ರಯತ್ನಿಸಲಾಗುವುದು, ಕಡೂರಿನಲ್ಲಿ ಜೆಡಿಎಸ್ ಅವಧಿಯಲ್ಲಿ ನಡೆದಿರುವ ಹಗರಣಗಳನ್ನು ತನಿಖೆ ಮಾಡಿಸಲಾಗುವುದು ಎಂದು ಕಾಂಗ್ರೆಸ್ ಹೇಳಿದೆ.
ಕಡೂರು, ಬೀರೂರಿನ ಪುರಸಭೆಗಳಲ್ಲಿ ಚುನಾಯಿತರಾದ ಕಾಂಗ್ರೆಸ್ ಆಭ್ಯರ್ಥಿಗಳಿಗೆ ಬ್ಲಾಕ್ ಕಾಂಗ್ರೆಸ್ ಘಟಕಗಳಿಂದ ಅಭಿನಂದಿಸಿ ಪಟ್ಟಣದ ನಂದಿ ಕ್ರೀಡಾಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ಕಳೆದ ಬಾರಿ ಕಡೂರು ಪುರಸಭೆಯಲ್ಲಿ ಆಡಳಿತ ನಡೆಸಿದ ಜೆಡಿಎಸ್ ಜನವಿರೋಧಿ ಮತ್ತು ಹಗರಣದ ಆಡಳಿತದಿಂದ ಬೇಸತ್ತ ಜನರು ಕಾಂಗ್ರೆಸನ್ನು ಬೆಂಬಲಿಸಿದ್ದಾರೆ. ಬಿಜೆಪಿ ರಾಜ್ಯದಲ್ಲಿ ನಡೆಸುತ್ತಿರುವ ಕೆಟ್ಟ ಆಡಳಿತದಿಂದಾಗಿ ಬೀರೂರಿನಲ್ಲಿ ಮತದಾರರು ನಯವಾಗಿಯೇ ಬಿಜೆಪಿ ತಿರಸ್ಕರಿಸಿ ಕಾಂಗ್ರೆಸ್ಸನ್ನು ಗೆಲ್ಲಿಸಿದ್ದಾರೆ ಎಂದರು.
ಅಕ್ರಮಗಳ ತನಿಖೆ: ಜನರ ನಿರೀಕ್ಷೆಗೆ ತಕ್ಕಂತೆ ಪಾರದರ್ಶಕ ಹಾಗೂ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ನಿಟ್ಟಿನಲ್ಲಿ ಆಡಳಿತ ನಡೆಸಲು ಕ್ರಮ ಕೈಗೊಳ್ಳಲಾಗುವುದು. ಜೆಡಿಎಸ್ ಅವಧಿಯಲ್ಲಿ ನಡೆದಿರುವ ಅಕ್ರಮಗಳನ್ನು ತನಿಖೆ ನಡೆಸಲಾಗುವುದು. ಅವಳಿ ಪಟ್ಟಣಗಳಿಗೆ ಭದ್ರಾ ನದಿಯಿಂದ ನೀರೊದಗಿಸುವ ಮಹತ್ತರ ಯೋಜನೆಯ ಕಾಮಗಾರಿ ಚುರುಕುಗೊಳಿಸುವಂತೆ ನಿಯೋಗ ತೆರಳಿ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಲಾಗುವುದು. 10 ವರ್ಷದಿಂದ ಒಂದು ನಿವೇಶನ ನೀಡದಿದ್ದ ಬಗ್ಗೆ ಕ್ರಮ ಕೈಗೊಂಡು ವಸತಿಹೀನರಿಗೆ ನಿವೇಶನ ನೀಡುವ ಕುರಿತು ಸದಸ್ಯರು ಕ್ರಮ ಕೈಗೊಳ್ಳಲಿದ್ದಾರೆ. ಜನರಿಗೆ ಉತ್ತಮ ರಸ್ತೆ, ಬೀದೀದೀಪ, ಚರಂಡಿಗಳ ನಿರ್ಮಾಣಕ್ಕೆ ಕ್ರಮ ಸೇರಿದಂತೆ ಎರಡೂ ಪಟ್ಟಣಗಳ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.
ಪುರಸಭೆಯ ಕಾಂಗ್ರೆಸ್ ಸದಸ್ಯರಿಗೆ ಶೀಘ್ರದಲ್ಲಿಯೆ ಕರ್ತವ್ಯಗಳ ಬಗ್ಗೆ ತರಬೇತಿ ಕಾರ್ಯಗಾರ ಹಮ್ಮಿಕೊಂಡು ಮಾರ್ಗದರ್ಶನ ಮಾಡಲಾಗುವುದು ಎಂದರು.
 ಗೋಷ್ಠಿಯಲ್ಲಿ ಕಾಂಗ್ರೆಸ್‌ನ ಕೆ.ಬಿ. ಮಲ್ಲಿಕಾರ್ಜುನ್, ಕೆ.ಎಂ. ಕೆಂಪರಾಜು, ಎಂ.ಎಚ್. ಚಂದ್ರಪ್ಪ, ಕೆ.ಎಂ. ವಿನಾಯಕ, ಕಡೂರು ಸಿ. ನಂಜಪ್ಪ, ಮಹೇಶ್ ಒಡೆಯರ್, ಸಾವಿತ್ರಿ ಗಂಗಪ್ಪ, ಕೆ.ಎಸ್. ಆನಂದ್, ಕೆ.ಎಚ್. ರಂಗನಾಥ್, ಕೆ.ಜಿ. ಶ್ರೀನಿವಾಸಮೂರ್ತಿ, ಶರತ್ ಕೃಷ್ಣಮೂರ್ತಿ, ಕೆ.ಎನ್. ಬೊಮ್ಮಣ್ಣ, ಬೋರ್‌ಲೆ ಶಿವಣ್ಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.