ನೀರಿನ ಸಮಸ್ಯೆ ನಿವಾರಣೆಗೆ ಆಗ್ರಹ
ಚಿಕ್ಕಮಗಳೂರು: ಗ್ರಾಮಸಭೆಯಲ್ಲಿ ತಮ್ಮ ಅಳಲು ಕೇಳಲು ಜನಪ್ರತಿನಿಧಿಗಳೇ ಇಲ್ಲದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು ಗ್ರಾಪಂ ಒಳಗೆ ಪ್ರವೇಶಿಸಿ ಧರಣಿ ನಡೆಸುವುದರ ಜೊತೆಗೆ ಕಚೇರಿ ಬಾಗಿಲು ಮುಚ್ಚಿ ಪ್ರತಿಭಟನೆ ನಡೆಸಿದ ಘಟನೆ ಕಡೂರು ತಾಲೂಕಿನ ಬಾಣೂರಿನಲ್ಲಿ ಮಂಗಳವಾರ ನಡೆಯಿತು.
ಬರದ ಛಾಯೆ ಮುಸುಕಿರುವ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಿನಿಂದ ತಾಲೂಕಿನ ಚಿಕ್ಕಬಾಣೂರು ಮತ್ತು ಗುಬ್ಬಿಹಳ್ಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಹನಿ ನೀರಿಗಾಗಿ ಜನ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಗ್ರಾಪಂ ಸಭೆ: ಬಾಣೂರಿನ ಗ್ರಾಪಂ ಕಚೇರಿಯಲ್ಲಿ ಮಂಗಳವಾರ ಗ್ರಾಮಸಭೆ ಏರ್ಪಡಿಸಲಾಗಿತ್ತು. ಈ ವಿಷಯವನ್ನು ಅರಿತ ಚಿಕ್ಕಬಾಣೂರು ಮತ್ತು ಗುಬ್ಬಿಹಳ್ಳಿ ಗ್ರಾಮಸ್ಥರು ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಬೆಳಗ್ಗೆ ಗ್ರಾಮ ಪಂಚಾಯಿತಿ ಕಚೇರಿಗೆ ಆಗಮಿಸಿದರು.
ಆದರೆ, ಗ್ರಾಮಸಭೆಯಲ್ಲಿ ಗ್ರಾಪಂ ಅಧ್ಯಕ್ಷರು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗೈರು ಹಾಜರಾಗಿದ್ದರು. ನಂತರ ಮೊಬೈಲ್ ಮೂಲಕ ಅವರನ್ನು ಸಂಪರ್ಕಿಸಿದರೆ ಸ್ವಿಚ್ ಆಫ್ ಮಾಡಿಕೊಳ್ಳಲಾಗಿತ್ತು. ಇದರಿಂದ ರೊಚ್ಚಿಗೆದ್ದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಗ್ರಾಮಸ್ಥರು ಕರವೇ ಹೋಬಳಿ ಅಧ್ಯಕ್ಷ ದಿನೇಶ್ ಶಿವಪುರ ನೇತೃತ್ವದಲ್ಲಿ ಗ್ರಾಪಂ ಬಾಗಿಲು ಹಾಕಿ ಧರಣಿ ಆರಂಭಿಸಿದರು.
ಕಾರ್ಯದರ್ಶಿಗೆ ತರಾಟೆ: ಒಂದು ಗಂಟೆ ಕಳೆದ ನಂತರ ಸ್ಥಳಕ್ಕಾಗಮಿಸಿದ ಗ್ರಾಪಂ ಕಾರ್ಯದರ್ಶಿ ರೇಣುಕಾಪ್ರಸಾದ್ ಅವರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು ಬರದ ಹಿನ್ನೆಲೆಯಲ್ಲಿ ತಮ್ಮ ಹಳ್ಳಿಯ ಹಳ್ಳ ಕೆರೆ, ಬೋರ್ವೆಲ್ ಮತ್ತು ಬಾವಿ ಬತ್ತಿ ಹೋಗಿದ್ದು, ಕಳೆದ 6 ತಿಂಗಳಿನಿಂದ ಕುಡಿಯಲು ನೀರಿಲ್ಲದೇ ಪರದಾಡುತ್ತಿದ್ದರೂ, ನಮ್ಮತ್ತ ಏಕೆ ತಿರುಗಿ ನೋಡುತ್ತಿಲ್ಲ ಎಂದು ಪ್ರಶ್ನಿಸಿದರು.
ಗ್ರಾಪಂ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸದೇ ಹಣ ದೊರೆಯುವ ಕಾಮಗಾರಿ ಮಾತ್ರ ಮಾಡುತ್ತಿದ್ದಾರೆ. ಲಂಚ ನೀಡಿದವರಿಗೆ ಮತ್ತು ಸಂಬಂಧಿಕರಿಗೆ ಮಾತ್ರ ಸರ್ಕಾರದ ಸವಲತ್ತುನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಗ್ರಾಮಸ್ಥರ ಕಿಡಿ: ಗ್ರಾಮ ಸಭೆಗೇ ಬಾರದ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಅಧಿಕಾರದಲ್ಲಿ ಏಕಿರಬೇಕು ಎಂದು ಕಿಡಿಕಾರಿದ ಗ್ರಾಮಸ್ಥರು ಸರಿಯಾಗಿ ಕಾರ್ಯನಿರ್ವಹಿಸಿ ಸಮಸ್ಯೆಗೆ ಸ್ಪಂದಿಸದಿದ್ದಲ್ಲಿ ರಾಜಿನಾಮೆ ನೀಡಿ ತೆರಳಿ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ಗ್ರಾಪಂ ಸದಸ್ಯ ನಟೇಶ್ ಅವರೊಂದಿಗೂ ವಾಗ್ವಾದ ನಡೆಸಿದ ಗ್ರಾಮಸ್ಥರು ಟ್ಯಾಂಕರ್ ಮುಖಾಂತರವಾದರೂ ಗ್ರಾಮಗಳಿಗೆ ಕುಡಿಯುವ ನೀರನ್ನು ತಕ್ಷಣ ಒದಗಿಸುವಂತೆ ಒತ್ತಾಯಿಸಿದರು.
ಸಾಯಲು ವಿಷಕೊಡಿ: ಈ ಹಂತದಲ್ಲಿ ಅಧಿಕಾರಿಗಳ ವರ್ತನೆಯಿಂದ ರೊಚ್ಚಿಗೆದ್ದ ಮಹಿಳೆಯರು ಮತ್ತು ಗ್ರಾಮಸ್ಥರು ಖಾಲಿ ಕೊಡಗಳಳೊಂದಿಗೆ ಗ್ರಾಪಂ ಕಚೇರಿಗೆ ನುಗ್ಗಿ ತಮಗೆ ಕುಡಿಯಲು ನೀರು ಕೊಡಿ, ಇಲ್ಲ ಸಾಯಲು ವಿಷ ನೀಡಿ ಎಂದು ಆಗ್ರಹಿಸಿ ಧರಣಿ ಆರಂಭಿಸಿದರು.
ಗ್ರಾಪಂನಲ್ಲಿ ಹಣವಿಲ್ಲದಿದ್ದರೆ ಹೇಳಿ ನಾವೆಲ್ಲಾ ಮನೆ ಮನೆಯಲ್ಲಿ ಚಂದಾ ಎತ್ತಿ ನೀಡುತ್ತೇವೆ ಅದರಿಂದಲಾದರೂ ಕುಡಿಯುವ ನೀರಿನ ಕೊರತೆ ನೀಗಿಸಿ ಎಂದು ಆಗ್ರಹಿಸಿದರು.
ವಾರದ ಗಡುವು: ಪರಿಸ್ಥಿತಿ ಕೈಮೀರುವುದನ್ನು ಅರಿತ ಸಖರಾಯಪಟ್ಟಣ ಠಾಣಾಧಿಕಾರಿ ಕೆ.ಎನ್. ಗಿರೀಶ್ ಮಧ್ಯ ಪ್ರವೇಶಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಕುಡಿಯುವ ನೀರಿನ ವ್ಯವಸ್ಥೆಗೆ ಒಂದು ವಾರದ ಗಡುವು ನೀಡಿ ಪ್ರತಿಭಟನೆ ಹಿಂಪಡೆದುಕೊಳ್ಳುವಂತೆ ಮನವಿ ಮಾಡಿದರು.
ಗ್ರಾಪಂ ಕಾರ್ಯದರ್ರ್ಶಿ ಎರಡು ದಿನಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಸರಿಪಡಿಸುವ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಸಮಸ್ಯೆ ಪರಿಹಾರಕ್ಕೆ ವಾರದ ಗಡುವು ನೀಡಿದ ಗ್ರಾಮಸ್ಥರು ಬೇಡಿಕೆ ಈಡೇರದಿದ್ದಲ್ಲಿ ಗ್ರಾಪಂ ಕಚೇರಿಗೆ ಬೀಗ ಹಾಕುವ ಎಚ್ಚರಿಕೆ ನೀಡಿ ಪ್ರತಿಭಟನೆ ಕೈ ಬಿಟ್ಟರು. ಕರ್ನಾಟಕ ರಕ್ಷಣಾ ವೇದಿಕೆ ಮುಖಂಡ ಗಂಗೂ ಟೈಲರ್, ಗ್ರಾಮಸ್ಥರಾದ ರಾಜಣ್ಣ, ಸತೀಶ್, ವನಜಾಕ್ಷಿ, ದ್ರಾಕ್ಷಾಯಣಮ್ಮ, ಯಶೋಧ, ಮಮತ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

