ಚಿಕ್ಕಮಗಳೂರು

ಮಠಕ್ಕೆ ದಾನಶೂರರು, ದೇವಸ್ಥಾನಕ್ಕೆ ಜಿಪುಣರು

Published On :

-ಆರ್. ತಾರಾನಾಥ್
ಕ.ಡ.ವಾರ್ತೆ, ಚಿಕ್ಕಮಗಳೂರು, ಮಾ. 15
ರಾಜ್ಯ ಸರ್ಕಾರಕ್ಕೆ ಮಠಗಳ ಮೇಲಿರುವಷ್ಟು ಭಕ್ತಿ, ಮುಜರಾಯಿ ದೇವಸ್ಥಾನಗಳ ಮೇಲಿಲ್ಲ.
   ಮಠಾಧೀಶರು ಕೇಳಲೀ, ಕೇಳದೆ ಇರಲೀ, ಸರ್ಕಾರ ದಾನಶೂರರಂತೆ ಅಳೆದು ಅಳೆದು ಜನತೆಯ ಹಣವನ್ನು ಮಠಗಳಿಗೆ ನೀಡುತ್ತಿದೆ. ಆದರೆ, ಮುಜರಾಯಿ ದೇವಸ್ಥಾನಗಳ ಪಾಲಿಗೆ ಜಿಪುಣರಂತೆ ನಡೆದುಕೊಂಡಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ 2008- 09 ರಿಂದ 2011- 12ರವರೆಗೆ ರಾಜ್ಯ ಸರ್ಕಾರ ಮಠ ಮತ್ತು ದೇವಸ್ಥಾನಗಳಿಗೆ ಬಿಡುಗಡೆ ಮಾಡಿರುವ ಅನುದಾನ 25.76 ಕೋಟಿ, ಇದರಲ್ಲಿ ಮಠಗಳ ಪಾಲು 17.82 ಕೋಟಿ, ಇನ್ನುಳಿದ 7.94 ಕೋಟಿಯಲ್ಲಿ ಖಾಸಗಿ ಒಡೆತನದಲ್ಲಿರುವ ದೇವಸ್ಥಾನಗಳಿಗೆ ಹೆಚ್ಚಿನ ಅನುದಾನ  ಹೋಗಿದೆ. ಇದರಲ್ಲಿ ಹೆಚ್ಚೆಂದರೆ ಸುಮಾರು 40 ಮುಜರಾಯಿ ದೇವಸ್ಥಾನಗಳ ಅಭಿವೃದ್ಧಿಗೆ ಅಲ್ಪಸ್ವಲ್ಪ ಹಣವನ್ನು ನೀಡಲಾಗಿದೆ.
ಮಠಗಳಿಗೆ ಅನುದಾನ: 2008ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮಠಗಳಿಗೆ ಬಿಡುಗಡೆ ಮಾಡಿರುವ ಅನುದಾನ ಬಳಕೆ ಮಾಡುವ ಸಂಬಂಧ ಒಂದು ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು.
   ಅದು, ಮಠಗಳಿಗೆ ನೇರವಾಗಿ ಹಣ ಬಿಡುಗಡೆ ಮಾಡುವುದು. ಈ ಹಿಂದೆ ಮಠಗಳಿಗೆ ಅನುದಾನ ಬಿಡುಗಡೆ ಮಾಡುವಾಗ ಅಲ್ಲಿನ ಕಾಮಗಾರಿಯ ಬಗ್ಗೆ ಕ್ರಿಯಾ ಯೋಜನೆ ತಯಾರಿಸಿ ಲೋಕೋಪಯೋಗಿ ಇಲಾಖೆಯ ವರದಿಯ ಆಧಾರದ ಮೇಲೆ ಹಂತ ಹಂತವಾಗಿ ಹಣ ಬಿಡುಗಡೆ ಮಾಡಲಾಗುತ್ತಿತ್ತು.
    ಆದರೆ, ಇದೀಗ ಇದರ ಅವಶ್ಯಕತೆ ಇಲ್ಲ. ರಾಜ್ಯ ಸರ್ಕಾರ ಜಿಲ್ಲಾಡಳಿತಕ್ಕೆ ಹಣ ಬಿಡುಗಡೆ ಮಾಡಲಿದೆ. ಜಿಲ್ಲಾಡಳಿತ ಆಯಾ ಮಠಗಳಿಗೆ ಅನುದಾನ ಮಂಜೂರು ಮಾಡಲಿದೆ. ಅದರ ಬಳಕೆ ಬಗ್ಗೆ ಕೊನೆಯಲ್ಲಿ ವರದಿ ನೀಡಲೇಬೇಕೆಂಬ ಕಡ್ಡಾಯವಾದ ನಿಯಮ ಏನೂ ಇಲ್ಲ.
  ಅಂದರೆ ಸಾರ್ವಜನಿಕರ ಹಣವನ್ನು ಮನಸ್ಸಿಗೆ ಬಂದಂತೆ ಖರ್ಚು ಮಾಡಬಹುದು. ಅದರ ಬಗ್ಗೆ ಪ್ರಶ್ನೆ ಮಾಡುವ, ಮಾಹಿತಿ ಕೇಳುವ ನಿಯಮಕ್ಕೆ ಇತಿಶ್ರೀ ಹಾಡಿದೆ.
ಮುಜರಾಯಿ ದೇವಾಲಯ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು 869 ಮುಜರಾಯಿ ದೇವಸ್ಥಾನಗಳಿವೆ.
ಇವುಗಳಲ್ಲಿ ಚಿಕ್ಕಮಗಳೂರು ತಾಲೂಕಿನಲ್ಲಿ 432, ಮೂಡಿಗೆರೆ ತಾಲೂಕಿನಲ್ಲಿ 71,  ಶೃಂಗೇರಿ- 91, ಕೊಪ್ಪ- 136, ಕಡೂರು- 48, ತರೀಕೆರೆ- 66, ಎನ್.ಆರ್.ಪುರ ತಾಲೂಕಿನಲ್ಲಿ 25 ದೇವಸ್ಧಾನಗಳಿವೆ.
   ಇಲ್ಲಿನ ಬಹಳಷ್ಟು ದೇವಸ್ಥಾನಗಳು ಹಳೆಯದಾಗಿದ್ದು, ಅವುಗಳ ಅಭಿವೃದ್ಧಿಗೆ ಹಣದ ಅವಶ್ಯಕತೆ ಇದೆ. ಸರ್ಕಾರ ಮಠಗಳಿಗೆ ಕೇಳದೆ ಹಣ ನೀಡುತ್ತಿದೆ. ಕೆಲವು ಖಾಸಗಿ ದೇವಸ್ಥಾನಗಳ ಆಡಳಿತ ಮಂಡಳಿಯವರಿಗೆ ಕೇಳಿದಾಗ ಶಾಸಕರ ಶಿಫಾರಸ್ಸು ಪತ್ರದ ಮೇಲೆ ಅನುದಾನ ನೀಡಲಾಗುತ್ತಿದೆ. ಆದರೆ, ಮುಜರಾಯಿ ದೇವಸ್ಥಾನಗಳ ಬಗ್ಗೆ  ಸಾರ್ವಜನಿಕರು ತಲೆ ಕೆಡಿಸಿಕೊಳ್ಳುತ್ತಿಲ್ಲ. ಅವುಗಳಿಗೆ ಜೀರ್ಣೋದ್ಧಾರದ ಅವಶ್ಯಕತೆ ಇದ್ದರೂ ಕೂಡ ಸ್ವಚ್ಛತೆಯಿಂದ ಯಾರೂ ಕೂಡ ಅನುದಾನ ಕೋರಿ ಸರ್ಕಾರಕ್ಕೆ ಅರ್ಜಿ ಸಲ್ಲಿಸುತ್ತಿಲ್ಲ. ಅದುದರಿಂದ ಅವುಗಳು ಅನುದಾನ ಪಡೆಯುವಲ್ಲಿ ಹಿಂದೆಯೇ ಉಳಿದುಕೊಂಡಿವೆ.
ಸಿಸಿ ಟೀವಿ ಅಳವಡಿಕೆ: ರಾಜ್ಯ ಸರ್ಕಾರ ದೇವಸ್ಥಾನಗಳ ಜಾಗವನ್ನು ಒತ್ತುವರಿ ತೆರವುಗೊಳಿಸಲು ಸರ್ವೇ ಮಾಡಿಸಲು ಹಾಗೂ ದೊಡ್ಡ ದೇವಸ್ಥಾನಗಳಲ್ಲಿ ಸಿಸಿ ಟೀವಿ ಅಳವಡಿಸಲು ಕ್ರಮ ಕೈಗೊಂಡಿದೆ.
  ಆದರೆ, ಜೀರ್ಣೋದ್ಧಾರ ಹಾಗೂ ಅಲ್ಲಿ ಭಕ್ತರಿಗೆ ಬೇಕಾದ ಮೂಲಭೂತ ಸೌಲಭ್ಯದ ಬಗ್ಗೆ ವರದಿ ತರಿಸಿಕೊಂಡು, ಅವುಗಳಿಗೆ ಪ್ರತ್ಯೇಕವಾದ ಹಣವನ್ನು ಬಿಡುಗಡೆ ಮಾಡಲು ಈವರೆಗೆ ಯಾವುದೇ ರೀತಿಯಲ್ಲೂ ಮುಂದಾಗಿಲ್ಲ.
   ಕಳೆದ ನಾಲ್ಕು ವರ್ಷಗಳಲ್ಲಿ ಜಿಲ್ಲೆಯ ದೇವಸ್ಥಾನ ಹಾಗೂ ಮಠಗಳಿಗೆ ಸರ್ಕಾರ 25.76 ಕೋಟಿ ಬಿಡುಗಡೆ ಮಾಡಿದ್ದು, 2012-13ನೇ ಸಾಲಿನಲ್ಲಿ ಈವರೆಗೆ 8 ಕೋಟಿ ಬಿಡುಗಡೆ ಮಾಡಿದೆ. ಜಿಲ್ಲೆಗೆ ಕೋಟ್ಯಂತರ ರುಪಾಯಿ ಬಂದರೂ ಸಹ ಅದು ಮುಜರಾಯಿ ದೇವಸ್ಥಾನಗಳ ಪಾಲಿಗೆ ಕನ್ನಡಿಯೊಳಗಿನ ಗಂಟಾಗಿ ಉಳಿದುಕೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.