ಚಿಕ್ಕಮಗಳೂರು

ಜಾಗೃತಿಗಾಗಿ ಹಿಂದೂ ಪರಿಷತ್ ಬೈಕ್ ರ್ಯಾಲಿ

Published On :

ಕ.ಪ್ರ.ವಾರ್ತೆ, ಚಿಕ್ಕಮಗಳೂರು,  ಮೇ 1
ಚುನಾವಣಾ ಬಹಿರಂಗ ಪ್ರಚಾರಕ್ಕೆ ಇನ್ನು ಕೇವಲ 48 ಗಂಟೆಗಳು ಮಾತ್ರ ಬಾಕಿ ಇದ್ದು, ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಚುರುಕಾಗಿದೆ.
ನಗರದಲ್ಲಿ ಬಿಜೆಪಿ ಯುವ ಮೋರ್ಚಾ ಬುಧವಾರ ಏರ್ಪಡಿಸಿದ್ದ ಬೈಕ್ ರ್ಯಾಲಿಯಲ್ಲಿ ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಸಚಿವ ಸಿ.ಟಿ. ರವಿ ಅವರು ಬೈಕ್ ಚಾಲನೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು.
ಬಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್ ಕಾರ್ಯಕರ್ತರು ಮತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತ್ಯೇಕವಾಗಿ ಬೈಕ್ ರ್ಯಾಲಿ ನಡೆಸಿದರು.
ಜೆಡಿಎಸ್ ಅಭ್ಯರ್ಥಿ ಎಸ್.ಎಲ್. ಧರ್ಮೇಗೌಡ ಅವರು ರೋಡ್ ಶೋ ಮೂಲಕ ಮತಯಾಚನೆ ಮಾಡಿದರು. ಇಲ್ಲಿನ ಹಳೇ ತಾಲೂಕು ಕಚೇರಿಯಿಂದ ಹೊರಟ ರೋಡ್ ಶೋ ನಗರದ ಪ್ರಮುಖ ರಸ್ತೆಗಳಲ್ಲಿ ಹಾದು ಹೋಯಿತು.
ಎಲ್ಲೆಡೆ ಪ್ರಚಾರ; ಚಿಕ್ಕಮಗಳೂರಿನಲ್ಲಿ ಸಂತೆ ದಿನವಾಗಿದ್ದು, ಇದೇ ದಿನ ಬೈಕ್ ರ್ಯಾಲಿ ಹಾಗೂ ರೋಡ್ ಶೋ ನಡೆದಿದ್ದರಿಂದ ಹಲವು ಸಮಯ ಟ್ರಾಫಿಕ್ ಜಾಮ್ ಆಗಿತ್ತು. ವಾಹನಗಳ ಚಾಲಕರಿಗೆ ಕಿರಿ ಕಿರಿಯಾಗಿತ್ತು. ಪ್ರಮುಖ ರಸ್ತೆಗಳಲ್ಲಿ ಚುನಾವಣಾ ಪ್ರಚಾರಕರು ನೂರಾರು ಸಂಖ್ಯೆಯಲ್ಲಿ ನಗರದೆಲ್ಲೆಡೆ ಕಂಡು ಬರುತ್ತಿದ್ದರು.
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ಬುಧವಾರ ಚಿಕ್ಕಮಗಳೂರಿಗೆ ಆಗಮಿಸಿದ್ದರು. ಅವರು ಇಲ್ಲಿನ ವಿಜಯಪುರ ಗಣಪತಿ ಪೆಂಡಾಲ್ ಮೈದಾನದಲ್ಲಿ ಪಕ್ಷದ ಅಭ್ಯರ್ಥಿ ಎಸ್.ಎಲ್. ಧರ್ಮೇಗೌಡರ ಪರವಾಗಿ ಮತಯಾಚನೆ ಮಾಡಿದರು.
ಜೆಡಿಎಸ್‌ಗೆ ಸೇರ್ಪಡೆ: ಇಲ್ಲಿಗೆ ಆಗಮಿಸಿದ್ದ ಜನರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಇರಲಿಲ್ಲ. ಎಚ್.ಡಿ. ಕುಮಾರಸ್ವಾಮಿ ಅವರು ವೇದಿಕೆ ಬರುತ್ತಿದ್ದಂತೆ ಅಲ್ಲಿ ನೆರೆದಿದ್ದವರು ಅವರತ್ತ ಹೋಗಿ ಕೈ ಕುಲುಕಲು ಮುಗಿ ಬಿದ್ದಿದ್ದರಿಂದ ವೇದಿಕೆಯಲ್ಲಿದ್ದವರಿಗೆ ಕುಳಿತುಕೊಳ್ಳಲು ಆಗಲಿಲ್ಲ.
ಕುಮಾರಸ್ವಾಮಿ ಅವರು ಬರುತ್ತಿದ್ದಂತೆ ಕಾರ್ಯಕ್ರಮವನ್ನು ಉದ್ಘಾಟಿಸಿ ಕುಳಿತುಕೊಳ್ಳದೆ ಭಾಷಣ ಮಾಡಿ ತೆರಳಿದರು. ಕಾಂಗ್ರೆಸ್ ಹಾಗೂ ಬಿಜೆಪಿ ಕಚೇರಿಗಳಲ್ಲಿ ವಿವಿಧ ಪಕ್ಷಗಳ ಮುಖಂಡರ ಸೇರ್ಪಡೆ ಕಾರ್ಯಕ್ರಮ ನಡೆಯಿತು.  
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕಡೂರು ಪಟ್ಟಣದಲ್ಲಿ ಹಾಗೂ ತರೀಕೆರೆ ತಾಲೂಕಿನ ಬುಕ್ಕಾಂಬೂದಿಯಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದರು.
ಗುರುವಾರದಂದು ಕೇಂದ್ರ ಸಣ್ಣ ಹಾಗೂ ಮಾಧ್ಯಮ ಕೈಗಾರಿಕಾ ಸಚಿವರಾದ ಕೆ.ಎಚ್. ಮುನಿಯಪ್ಪನವರು ತರೀಕೆರೆ ವಿಧಾನಸಭಾ ಕ್ಷೇತ್ರ ಕಡೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಭಾಷಣ ಮಾಡಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.