ದಂಡಾವತಿ ಪರ ಇರುವವರಿಗೆ ಚೀಲನೂರು ಪ್ರವೇಶ ನಿಷೇಧ
ಪೊರಕೆ ಹಿಡಿದು ಹಾಲಪ್ಪರನ್ನು ತಡೆಗಟ್ಟಲು ಸಿದ್ಧರಾಗಿದ್ದ ಗ್ರಾಮಸ್ಥರು
ಕಪ್ರ ವಾರ್ತೆ, ಸೊರಬ, ಮೇ 2
ದಂಡಾವತಿ ಯೋಜನೆ ಪ್ರದೇಶಕ್ಕೆ ಕೆಜೆಪಿ ಅಭ್ಯರ್ಥಿ ಹಾಲಪ್ಪ ಪ್ರವೇಶಿಸದಂತೆ ತಡೆಗಟ್ಟಿದ ಘಟನೆ ಚೀಲನೂರು ಬಳಿ ಗುರುವಾರ ನಡೆದಿದೆ.
ದಂಡಾವತಿ ಯೋಜನೆ ವಿರೋಧಿ ಹೋರಾಟ ಸಮಿತಿ ಈ ಹಿಂದೆ ಯೋಜನೆ ಪರವಾಗಿರುವವರಿಗೆ ಯೋಜನಾ ಪ್ರದೇಶದಲ್ಲಿ ಪ್ರವೇಶವಿಲ್ಲ ಎಂದು ಘೋಷಿಸಿತ್ತು.
ಗುರುವಾರ ಕೆಜೆಪಿ ಅಭ್ಯರ್ಥಿ ಹಾಲಪ್ಪ ಚೀಲನೂರು ಗ್ರಾಮಕ್ಕೆ ಪ್ರಚಾರಕ್ಕಾಗಿ ಆಗಮಿಸುತ್ತಾರೆ ಎಂಬ ಸುದ್ದಿ ತಿಳಿದ ಕೂಡಲೆ ಗ್ರಾಮಸ್ಥರು ಹಾಗೂ ದಂಡಾವತಿ ಯೋಜನಾ ವಿರೋಧಿ ಹೋರಾಟ ಸಮಿತಿಯವರು ಪೊರಕೆ ಹಿಡಿದು ಗ್ರಾಮದೊಳಗೆ ಪ್ರವೇಶಿಸದಂತೆ ಕಾದು ನಿಂತಿದ್ದರು.
ಎಚ್ಚೆತ್ತ ಹಾಲಪ್ಪ: ಮುಂಜಾಗ್ರತಾ ಕ್ರಮವಾಗಿ ರಕ್ಷಣಾ ಇಲಾಖೆಯಿಂದ 2 ಹೆಚ್ಚುವರಿ ತುಕಡಿಗಳನ್ನು ಗ್ರಾಮಕ್ಕೆ ಹಾಕಲಾಗಿತ್ತಾದರೂ ಪರಿಸ್ಥಿತಿ ಅರಿತ ಹಾಲಪ್ಪ ಗ್ರಾಮಕ್ಕೆ ತೆರಳಲಿಲ್ಲ.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ದಂಡಾವತಿ ಯೋಜನೆ ವಿರೋಧಿ ಸಮಿತಿ ಅಧ್ಯಕ್ಷ ವಾಮದೇವಗೌಡ ಮಾತನಾಡಿ, ಕಾರ್ಯಸಾಧುವಲ್ಲದ ಯೋಜನೆ ರೂಪಿಸಿ ಈ ಭಾಗದ ಸರ್ವತೋಮುಖ ಅಭಿವೃದ್ಧಿ ಕುಂಠಿತಗೊಳಿಸಿದ ಕುಖ್ಯಾತಿ ಹಾಲಪ್ಪನವರಿಗಿದೆ. ಬಿಜೆಪಿ ಆಡಳಿತಕ್ಕೆ ಬಂದಂದಿನಿಂದಲೂ ಇಲ್ಲಿಯವರೆಗೆ ಮುಳುಗಡೆ ಪ್ರದೇಶಗಳ ಗ್ರಾಮಗಳಿಗೆ ಯಾವುದೇ ಸೌಲಭ್ಯ ಸಿಗದಂತೆ ನೋಡಿಕೊಳ್ಳಲಾಗಿದೆ. ವಿರೋಧಿ ಸಂಘಟನೆ ಒಡೆಯುವ ಹುನ್ನಾರವೂ ನಡೆದಿದೆ. ಇಲ್ಲಿನ ರೈತರಿಗೆ ಆಮಿಷವೊಡ್ಡಿ ಪ್ರಚಾರ ನಡೆಸುವ, ಮತ ನೀಡುವ ಕುರಿತು ಒತ್ತಡ ತರಲಾಗಿದೆ. ಸಂಘಟಿತ ಗ್ರಾಮಗಳನ್ನು ಒಡೆದು ಆಳುವ ನೀತಿ ಅನುಸರಿಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಯೋಜನೆ ಆಗಲು ನಾವು ಅವಕಾಶ ನೀಡುವುದಿಲ್ಲ. ಯೋಜನೆ ಪರವಾಗಿರುವವರಿಗೆ ಪ್ರವೇಶ ನೀಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೂರು ಹಿಂಪಡೆಯದಿದ್ದರೆ ಪ್ರತಿಭಟನೆ: ಇದೇ ವೇಳೆ ಬುಧವಾರ ರಾತ್ರಿ ಕುಪ್ಪೆ ಬಳಿ ನಡೆದ ಹಲ್ಲೆ ಪ್ರಕರಣದ ಕುರಿತು ಪ್ರಸ್ತಾಪ ಬಂದಿದ್ದು, ಅನಾವಶ್ಯಕ, ಸುಳ್ಳು ದೂರು ದಾಖಲಿಸಿ ನಮ್ಮ ಬೆಂಬಲಿಗರ ಮೇಲೆ ಎಫ್ಐಆರ್ ಹಾಕಲಾಗಿದೆ. ಕೂಡಲೆ ದೂರು ಹಿಂತೆಗೆದುಕೊಳ್ಳಬೇಕು, ಹಿಂಪಡೆಯದಿದ್ದರೆ ಅವರ ವಿರುದ್ಧ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ತೇಕರಪ್ಪ, ರಾಜಪ್ಪ, ಅಣ್ಣಪ್ಪ, ಕೆರೆಯಪ್ಪ, ಸೋಮಪ್ಪ, ಗಿರಿಜಮ್ಮ, ಸಂಗೀತಾ, ಜಯಮ್ಮ, ಪಾರ್ವತಮ್ಮ, ಬಂಗಾರಮ್ಮ, ಪ್ರಶಾಂತ್, ಮಾಸ್ತ್ಯಪ್ಪ, ಹಿರಿಯಣ್ಯಪ್ಪ, ಇನ್ನೂ ಅನೇಕರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

