ಚಿಕ್ಕಮಗಳೂರು

ಜಿಲ್ಲೆಯ 56 ಅಭ್ಯರ್ಥಿಗಳ ಹಣೆ ಬರಹ ನಿರ್ಧಾರ

Published On :

ಕ.ಪ್ರ.ವಾರ್ತೆ  ,  ಚಿಕ್ಕಮಗಳೂರು  ,   ಮೇ 4
ಬಹಿರಂಗ ಪ್ರಚಾರಕ್ಕೆ ವಿರಾಮ ಹೇಳಿದರೂ ಅಭ್ಯರ್ಥಿಗಳಿಂದ ಮತ ಭೇಟೆ ಶನಿವಾರವೂ ಮುಂದುವರೆದಿತ್ತು. ಸಮಾಜದ ಮುಖಂಡರು, ಹಿರಿಯರನ್ನು ಸಂಪರ್ಕಿಸಿ ಆಶೀರ್ವಾದ ಪಡೆಯುವ ನೆಪದಲ್ಲಿ ಮತಯಾಚನೆ ಮಾಡಿದರು.
ಕೊನೆ ಕ್ಷಣದ ಈ ಕಸರತ್ತು ಪ್ರಮುಖವಾಗಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳಿಂದ ನಿರಂತರವಾಗಿ ಮುಂದುವರೆದಿತ್ತು.
ಇಷ್ಟು ದಿನ ಬಹಿರಂಗ ಪ್ರಚಾರದಲ್ಲಿ ಓಡಾಡಿದ್ದ ಪಕ್ಷದ ಕಾರ್ಯಕರ್ತರು ಮತ್ತು ಕಾಸಿಗಾಗಿ ಪ್ರಚಾರಕ್ಕಾಗಿ ಬಂದು ಮನೆಗಳ ಬಾಗಿಲು ತಟ್ಟುತ್ತಿದ್ದವರು ಎಂದಿನಂತೆ ಬಡಾವಣೆಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ನಗರದಲ್ಲಿ ಸಹಜ ಸ್ಥಿತಿ ಇತ್ತು.
ಚುನಾವಣಾ ಕರ್ತವ್ಯಕ್ಕೆ ನಿಯೋಜಿತ ಮತಗಟ್ಟೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬೆಳ್ಳಂಬೆಳಗ್ಗೆ ಮತದಾನದ ಸಾಮಾಗ್ರಿಗಳನ್ನು ಸ್ವೀಕರಿಸಲು ನಿಗದಿತ ಕೇಂದ್ರಕ್ಕೆ ಆಗಮಿಸಿದರು. ಎಲೆಕ್ಟ್ರಾನಿಕ್ ಮತಯಂತ್ರಗಳು ಹಾಗೂ ಮತದಾರರ ಪಟ್ಟಿ ಸೇರಿದಂತೆ ಇತರೆ ಸಾಮಾಗ್ರಿಗಳನ್ನು ಪಡೆದು ಪೊಲೀಸರ ಬಿಗಿ ಬಂದೋಬಸ್ತ್‌ನಲ್ಲಿ ಮತಗಟ್ಟೆ ಕೇಂದ್ರಗಳಿಗೆ ತೆರಳಿದರು.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಮತದಾನ ಕೇಂದ್ರಗಳಿಗೆ ಕರ್ತವ್ಯಕ್ಕೆ ನಿಯೋಜಿತ ಸಿಬ್ಬಂದಿಗಳು ಇಲ್ಲಿನ ಬೇಲೂರು ರಸ್ತೆಯಲ್ಲಿರುವ ಎಸ್‌ಟಿಜೆ ಕಾಲೇಜು ಆವರಣದಿಂದ ವಾಹನಗಳಲ್ಲಿ ತೆರಳಿದರು.
113 ಅತಿ ಸೂಕ್ಷ್ಮ: ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ 56 ಮಂದಿ ಸ್ಪರ್ಧೆ ಮಾಡಿದ್ದಾರೆ. ಇವರ ಮುಂದಿನ ರಾಜಕೀಯ ಭವಿಷ್ಯ ಭಾನುವಾರ ನಿರ್ಧಾರವಾಗಲಿದೆ. ಇಷ್ಟು ದಿನ ಪ್ರಚಾರಕ್ಕೆ ಬಂದಿದ್ದವರು ಸೇರಿದಂತೆ ಎಲ್ಲಾ ಮತದಾರರು ಭಾನುವಾರ ಮತದಾನ ಮಾಡಲಿದ್ದಾರೆ.
ಮತದಾನ ಶಾಂತಿಯುತವಾಗಿ ನಡೆಸಲು ಜಿಲ್ಲೆಯಲ್ಲಿ 3700 ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಿದ್ದಾರೆ. ಇಲ್ಲಿನ 1165 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದ್ದು, ಇವುಗಳಲ್ಲಿ 113 ಅತಿ ಸೂಕ್ಷ್ಮ, 226 ಸೂಕ್ಷ್ಮ ಹಾಗೂ ನಕ್ಸಲ್ ಪೀಡಿತ ಪ್ರದೇಶದಲ್ಲಿ 36 ಮತಗಟ್ಟೆಗಳಿದ್ದು, ಈ ಪೈಕಿ ಅತಿ ಸೂಕ್ಷ್ಮ ಹಾಗೂ ನಕ್ಸಲ್ ಪೀಡಿತ ಪ್ರದೇಶಗಳ ಮತಗಟ್ಟೆಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇದರ ಜತೆಗೆ ಸಿಪಿಎಂಎಫ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಮತದಾನದ ಪ್ರಮಾಣ ಹೆಚ್ಚಳ ಮಾಡಲು ಸ್ವೀಪ್ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಇದರಲ್ಲಿ ಸಂಘ ಸಂಸ್ಥೆಗಳು, ಸರ್ಕಾರಿ ನೌಕರರು ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡು ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸಿದರು. ಈ ಪ್ರಯತ್ನ ಎಷ್ಟರ ಮಟ್ಟಿಗೆ ಫಲಪ್ರದವಾಗಲಿದೆ ಎಂಬ ಪ್ರಶ್ನೆಗೆ ಮತದಾನ ಮುಕ್ತಾಯದ ನಂತರ ಫಲಿತಾಂಶ ತಿಳಿಯಲಿದೆ.
8.36 ಲಕ್ಷ ಮತದಾರರು: ಜಿಲ್ಲೆಯಲ್ಲಿ ಒಟ್ಟು 8,36,325 ಮತದಾರರು ಇದ್ದಾರೆ. ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ 1,91,074 ಮತದಾರರು ಇದ್ದಾರೆ. ಎರಡನೇ ಸ್ಥಾನ ಕಡೂರು ಕ್ಷೇತ್ರ. ಇಲ್ಲಿ 1,82,754 ಮತದಾರರು ಇದ್ದಾರೆ. ಮತದಾರರ ಸಂಖ್ಯೆಯ ಆಧಾರದ ಮೇಲೆ ಮತಗಟ್ಟೆಗಳನ್ನು ತೆರೆಯಲಾಗಿದೆ.
ಮತದಾನದ ವೇಳೆಯಲ್ಲಿ ಸಾರ್ವಜನಿಕರ ಮೇಲೆ ಕಣ್ಣಿಡಲು ಚಿಕ್ಕಮಗಳೂರು ನಗರದ ಆಜಾದ್ ಪಾರ್ಕ್ ಸೇರಿದಂತೆ ಕೆಲವು ವೃತ್ತಗಳಲ್ಲಿ ಪೊಲೀಸ್ ಇಲಾಖೆ ಸಿ.ಸಿ. ಟೀವಿ ಕ್ಯಾಮರಗಳನ್ನು ಅಳವಡಿಸಿದೆ. ಇದರ ಜತೆಗೆ ಅತಿ ಸೂಕ್ಷ್ಮ ಮತಗಟ್ಟೆಗಳಿಗೆ 178 ವೀಡಿಯೋ ಗ್ರಾಫರ್ಸ್‌ಗಳನ್ನು ನೇಮಕ ಮಾಡಲಾಗಿದೆ. 448 ಮೈಕ್ರೋ ಅಬ್ಸರ್‌ವರ್‌ಗಳನ್ನು ನೇಮಕ ಮಾಡಲಾಗಿದ್ದು, ಪೊಲೀಸ್ ಇಲಾಖೆ 119 ಮೊಬೈಲ್ ಸ್ಕ್ವಾಡ್ ನಿಯೋಜಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.