ಚಿಕ್ಕಮಗಳೂರು

ಪ್ರವಾಸಿ ತಾಣಗಳಿಗೂ ತಟ್ಟಿತ್ತು ಬಿಸಿ

Published On :

ಕ.ಪ್ರ. ವಾರ್ತೆ  ಚಿಕ್ಕಮಗಳೂರು  ಮೇ 6
ಈ ಬಾರಿಯ ಸಮ್ಮರ್ ಹಾಲಿಡೇ ಚುನಾವಣಾ ಬಿಸಿಯಲ್ಲೇ ಕಳೆದು ಹೋಯಿತು. ಇದರಿಂದ ಪೋಷಕರು, ಮಕ್ಕಳು ರಜಾದ ಮೋಜನ್ನು ಮಿಸ್ ಮಾಡಿ ಕೊಂಡಿದ್ದಲ್ಲದೇ, ವ್ಯಾಪಾರಸ್ಥರಿಗೂ ನಷ್ಟವಾಗಿದೆ.
ಬೇಸಿಗೆ ಕಾಲದಲ್ಲಿ ಪ್ರವಾಸಿಗರು ಹೆಚ್ಚು ಭೇಟಿ ನೀಡಲು ಇಚ್ಛಿಸುವ ಪ್ರದೇಶ ಮಲೆನಾಡು. ಬೇಸಿಗೆಯ ಉರಿ ಬಿಸಿಲಿನಲ್ಲಿ ತತ್ತರಿಸುವ ಜನರು ಗಿರಿ ಶ್ರೇಣಿಯ ತಂಪಾದ ವಾತಾವರಣದಲ್ಲಿ ಸಮಯ ಕಳೆಯಲು ಇಷ್ಟಪಡುತ್ತಾರೆ. ಸರಣಿ ರಜೆಗಳು ಬಂತ್ತೆಂದರೆ ಇಂಥದ್ದೇ ಪ್ರದೇಶಗಳಿಗೆ ಭೇಟಿ ನೀಡಲು ಪ್ಲಾನ್ ಮಾಡಿಕೊಳ್ಳುತ್ತಾರೆ.
ಮಕ್ಕಳಿಗೆ ಬೇಸಿಗೆ ರಜೆ ಬಂತೆಂದರೂ ಪೋಷಕರು ಯಾವುದಾದರೂ ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದು ಸಹಜ. ಆದರೆ, ಈ ಬಾರಿ ಸರ್ಕಾರಿ ನೌಕರಿಯಲ್ಲಿರುವವರು ಹಾಗೂ ಅವರ ಮಕ್ಕಳ ಐಡಿಯಾ ಉಲ್ಟಾ ಹೊಡೆದಿದೆ.
ವಾರ್ಷಿಕ ಪರೀಕ್ಷೆಗಳು ಆರಂಭವಾಗುತ್ತಿದ್ದಂತೆ ರಾಜ್ಯ ವಿಧಾನಸಭಾ ಚುನಾವಣಾ ಅಧಿಸೂಚನೆ ಪ್ರಕಟವಾಯಿತು. ಈ ಸಂದರ್ಭದಲ್ಲಿ ಸರ್ಕಾರಿ ನೌಕರರಿಗೆ ಬಿಡುವಿರುವುದಿಲ್ಲ. ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಬ್ಯುಸಿಯಾಗಿರುತ್ತಾರೆ. ಕೆಲಸದ ಒತ್ತಡದಲ್ಲಿ ರಜೆ ಕೇಳಲೂ ಮನಸ್ಸು ಬರುವುದಿಲ್ಲ. ಕೇಳಿದರೂ ಕೊಡುವುದು ಕಷ್ಟ.
ಫಲಿತಾಂಶವೂ ಪ್ರಕಟ: ಚುನಾವಣಾ ಗೌಜು ಮುಗಿದ ಮಾರನೇ ದಿನವೇ ಎಸ್‌ಎಸ್‌ಎಲ್‌ಸಿ, ಪಿಯುಸಿ ಫಲಿತಾಂಶಗಳು ಪ್ರಕಟಗೊಂಡಿದ್ದರಿಂದ ಇನ್ನು ಪ್ರವಾಸಿ ಮೋಜು ಸಿಗುವುದು ಸುಳ್ಳು. ಇನ್ನೇನು ಶಾಲಾ, ಕಾಲೇಜುಗಳ ಪ್ರವೇಶ ಆರಂಭವಾಗಲಿದ್ದು, ಮಕ್ಕಳು ಮುಂದಿನ ಶೈಕ್ಷಣಿಕ ವರ್ಷದ ಆರಂಭದ ದಿನಗಳನ್ನು ಎದುರು ನೋಡುವ  ಕಾಲ ಸನ್ನಿಹಿತವಾಗುತ್ತಿದೆ.
ಗಿರಿ ಪ್ರದೇಶ: ಬೇಸಿಗೆ ಕಾಲದಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ.
ಇಲ್ಲಿ 43 ಪ್ರವಾಸಿ ತಾಣಗಳಿದ್ದು, ಇವುಗಳಲ್ಲಿ ಹೆಚ್ಚಿನ ಸ್ಥಳಗಳು ಗಿರಿ ಪ್ರದೇಶಗಳಲ್ಲಿವೆ. ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಕೆಮ್ಮಣ್ಣುಗುಂಡಿ ಸೇರಿದಂತೆ ಇತರೆ ಪ್ರದೇಶಗಳು ತಂಪು ತಂಪು ಕೂಲಾಗಿರುತ್ತದೆ. ರಜೆಯಲ್ಲಿ ಗಿರಿ ಪ್ರದೇಶಗಳಲ್ಲಿ ಪ್ರವಾಸಿಗರ ವಾಹನಗಳು ಸಾಲು ಸಾಲಾಗಿ ನಿಲ್ಲುತ್ತಿದ್ದವು. ಆದರೆ, ಈ ಬಾರಿ ಅವುಗಳ ಸಂಖ್ಯೆ ಕ್ಷೀಣಿಸಿತ್ತು. ಈ ವರ್ಷದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಛವಿಧಾನಸಭೆ ಪ್ರಯುಕ್ತ ಪ್ರವಾಸಿಗರು ಜಿಲ್ಲೆಗೆ ಬರಲೇ ಇಲ್ಲ.
ಪ್ರವಾಸಿಗರ ಸಂಖ್ಯೆ ಕ್ಷೀಣ: ಕಳೆದಾರು ವರ್ಷಗಳಲ್ಲಿ ಏಪ್ರಿಲ್‌ನಲ್ಲಿ ಬಂದ ಪ್ರವಾಸಿಗರ ಸಂಖ್ಯೆಯ ಅಂಕಿ ಅಂಶ ನೋಡಿದರೆ ಈ ವರ್ಷ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. 2007ರಲ್ಲಿ 4 ಲಕ್ಷ, 2008ರಲ್ಲಿ 6 ಲಕ್ಷ, 2009 ರಲ್ಲಿ 7 ಲಕ್ಷ ದೇಶೀಯ ಪ್ರವಾಸಿಗರು ಜಿಲ್ಲೆಗೆ ಆಗಮಿಸಿದ್ದರು. 2011ರಲ್ಲಿ ಈ ಸಂಖ್ಯೆ 10.27 ಲಕ್ಷಕ್ಕೆ ಏರಿಕೆಯಾಗಿತ್ತು. ಕಳೆದ ವರ್ಷ ಏಪ್ರಿಲ್ ಒಂದೇ ತಿಂಗಳಲ್ಲಿ 9.21 ಲಕ್ಷ ಮಂದಿ ಪ್ರವಾಸಿಗರು ಬಂದಿದ್ದರು. ಆದರೆ, ಈ ವರ್ಷದಲ್ಲಿ ಜಿಲ್ಲೆಗೆ ಬಂದಿರುವ ಪ್ರವಾಸಿಗರ ಸಂಖ್ಯೆ ಕೇವಲ 7.1 ಲಕ್ಷ ಮಾತ್ರ. ಅಂದರೆ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ 2.20 ಲಕ್ಷ ಮಂದಿ ಪ್ರವಾಸಿಗರು ಕಡಿಮೆಯಾಗಿದ್ದಾರೆ.
ವ್ಯಾಪಾರಸ್ಥರಿಗೂ ಲಾಸ್: ಚುನಾವಣೆ ಇರುವುದರಿಂದ ಪ್ರವಾಸಿಗರು ಜಿಲ್ಲೆಗೆ ಬರಲಿಲ್ಲ. ಇದರಿಂದ ಕೆಲವು ವ್ಯಾಪಾರಸ್ಥರಿಗೆ ಮಾತ್ರ ನಷ್ಟವಾಗಿದೆ.
ಪ್ರವಾಸಿ ಕಾರ್‌ಗಳು ಚುನಾವಣಾ ಪ್ರಚಾರಕ್ಕೆ ಬಳಕೆಯಾದವು. ಇನ್ನು ನಗರ ಪ್ರದೇಶಗಳ ಹೊಟೇಲ್ ಮತ್ತು ಬಾರ್‌ಗಳು ಹೌಸ್ ಫುಲ್ ಆಗಿದ್ದವು. ಆದರೆ, ಪ್ರವಾಸಿಗರಿಲ್ಲದೆ ಚಿಲ್ಲರೆ ವ್ಯಾಪಾರಸ್ಥರಿಗೆ ಬ್ಯುಸಿನೆಸ್ ಇಲ್ಲದಂತಾಗಿತ್ತು. ಇನ್ನು ಪ್ರವಾಸಿಗರನ್ನೇ ನಂಬಿ ಪ್ರವಾಸಿ ತಾಣದಲ್ಲಿ ಹೊಟೇಲ್ ಮತ್ತು ಅಂಗಡಿಗಳನ್ನು ನಡೆಸುತ್ತಿರುವವರಿಗೆ ತುಂಬಾ ನಷ್ಟವಾಗಿದೆ.

- ಆರ್. ತಾರಾನಾಥ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.