ಸಿದ್ದುಗೆ ಶುಭ ಕೋರಿ ವಿಶೇಷ ಪೂಜೆ
ಕ.ಪ್ರ.ವಾರ್ತೆ ಕಡೂರು ಮೇ 12
ಹಿಂದುಳಿದ ವರ್ಗದ ನಾಯಕ ಸಿದ್ದರಾಮಯ್ಯನವರಿಗೆ ಒಳಿತಾಗಿ ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನೀಡಲೆಂದು ಮತ್ತು ಮಳೆ ಬರುವ ಮೂಲಕ ಬರಗಾಲದಿಂದ ತತ್ತರಿಸುತ್ತಿರುವ ಜನರ ಸಂಕಷ್ಟ ಪರಿಹಾರವಾಗಲೆಂದು ಕಡೂರು ಪಟ್ಟಣದ ಸುಭಾಷ್ ನಗರದ ಕುರುಬ ಸಮುದಾಯ ಸೇರಿದಂತೆ ಎಲ್ಲ ವರ್ಗಗಳ ಜನರು ಕೆ.ಎಂ.ರಸ್ತೆಯಲ್ಲಿರುವ ಶ್ರೀ ಉದ್ಬವ ಗಣಪತಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪ್ರಾರ್ಥನೆ ಸಲ್ಲಿಸಿದರು.
ಮಳೆಗಾಗಿ ಪ್ರಾರ್ಥನೆ: ವಿವಿಧ ಸಮಾಜದ ಮುಖಂಡರಾದ ಪುರಸಭಾ ಸದಸ್ಯ ರವಿಕುಮಾರ್, ಮುಖಂಡರಾದ ಬೇಕರಿ ರವಿ, ಬಾಳೆ ಕಾಯಿ ಶಶಿ, ರಿಯಾಜ್ ಅಹಮದ್ ಸೇರಿದಂತೆ ಮುಸ್ಲಿಂ ಭಾಂಧವರು ಮತ್ತಿತರರ ನೇತೃತ್ವದಲ್ಲಿ ನೂರಾರು ಮಂದಿ ಪೂಜೆಯಲ್ಲಿ ಪಾಲ್ಗೊಂಡು ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮಹೇಶ್ ಒಡೆಯರ್ ಮತ್ತಿತರ ಮುಖಂಡರು ಮಾತನಾಡಿ, ಮುಖಂಡರು, ಸೋಮವಾರ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಸಿದ್ರಾಮಯ್ಯನವರಿಗೆ ಎಲ್ಲ ರೀತಿ ಶುಭ ಸಿಗುವ ಮೂಲಕ ರಾಜ್ಯದ ಜನರಿಗೆ ಪೂರಕವಾಗಿ ಉತ್ತಮ ಹಾಗು ಪಾರದರ್ಶಕ ಆಡಳಿತ ನೀಡುವ ಶಕ್ತಿ ದಯಪಾಲಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇವೆ ಎಂದರು.
ಮೆರವಣಿಗೆ: ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭಾವಚಿತ್ರವಿರುವ ಆಳೆತ್ತರದ ಕಟೌಟನ್ನು ತೆರೆದ ವಾಹನದಲ್ಲಿ ಇರಿಸಿ ಕಡೂರು ಪಟ್ಟಣದ ಎಮ್ಮೇದೊಡ್ಡಿ ರಸ್ತೆ, ಮೂರ್ತಿಹಾಳ್, ಸುಭಾಷ್ ನಗರ, ಎಮ್ಮೇದೊಡ್ಡಮ್ಮ ದೇವಾಲಯದ ರಸ್ತೆ, ನಜೀರ್ಸಾಬ್ ಬಡವಾಣೆ, ಕೆ.ಎಂ.ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಜಯಘೋಷ ಕೂಗುವ ಮೂಲಕ ಮರವಣಿಗೆ ಮಾಡಲಾಯಿತು.
ಅಭಿಮಾನಿಗಳು ಜಯ ಘೋಷ ಹಾಕಿ ಪಟಾಕಿ ಸಿಡಿಸಿ ಸಂಭ್ರಮ ಪಟ್ಟು ಸಿಹಿ ಹಂಚುವ ಮೂಲಕ ಸಂತಸ ಹಂಚಿಕೊಂಡರು. ಪುರಸಭಾ ಸದಸ್ಯ ಕೆ. ಎನ್.ಜಯಣ್ಣ, ಆಟೋ ಅಣ್ಣಪ್ಪ, ನಾಗೇಶ್, ಶ್ರೀನಿವಾಸ್ ಮತ್ತಿತರು ಉಪಸ್ಥಿತರಿದ್ದರು.
ತಂಪಾದವೋ ಎಲ್ಲಾ ತಂಪಾದವೋ...
ಕ.ಪ್ರ.ವಾರ್ತೆ ಚಿಕ್ಕಮಗಳೂರು ಮೇ 12
ನಗರದಲ್ಲಿ ಭಾನುವಾರ ಮಧ್ಯಾಹ್ನ ಸುಮಾರು ಮೂರು ಗಂಟೆಗೂ ಅಧಿಕ ಕಾಲ ಮಳೆ ಸುರಿಯಿತು.
ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತವಾಗಿದ್ದವು. ಪಾದಚಾರಿಗಳಿಗೆ, ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿತ್ತು.
ಕಳೆದ 15 ದಿನಗಳಿಂದ ಪ್ರತಿ ದಿನ ಚಿಕ್ಕಮಗಳೂರು ನಗರ ಸೇರಿದಂತೆ ಸುತ್ತಮುತ್ತ ಮಳೆ ಬರುತ್ತಿದೆ. ಭಾನುವಾರವೂ ಮಳೆ ಮುಂದುವರೆದಿತ್ತು. ಗ್ರಾಮಾಂತರ ಪ್ರದೇಶದಲ್ಲೂ ಉತ್ತಮ ಮಳೆಯಾಗಿದೆ.
ಮಧ್ಯಾಹ್ನ 2 ಗಂಟೆಗೆ ಆರಂಭವಾದ ಮಳೆ ಸಂಜೆ 5 ಗಂಟೆಯಾದರೂ ನಿಂತಿರಲಿಲ್ಲ. 6 ಗಂಟೆಯವರೆಗೆ ತುಂತುರು ಬರುತ್ತಲೇ ಇತ್ತು. ಜಯನಗರ, ಮಾರ್ಕೇಟ್ ರಸ್ತೆ, ಸಂತೆ ಮಾರುಕಟ್ಟೆ ಸೇರಿದಂತೆ ಕೆಲವು ತಗ್ಗು ಪ್ರದೇಶಗಳಲ್ಲಿ ನೀರು ನಿಂತಿತ್ತು. ಒಳ ಚರಂಡಿ ಕಾಮಗಾರಿ ನಡೆದಿರುವ ಬಡಾವಣೆಗಳಲ್ಲಿ ರಸ್ತೆಗಳು ಕೆಸರುಮಯವಾಗಿದ್ದವು. ಈ ಪ್ರದೇಶದಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆಯಾಗಿತ್ತು.
3 ಗಂಟೆಗಳ ಕಾಲ: ಮುಂಗಾರು ಆರಂಭವಾಗುವ ಮೊದಲೇ ಮಳೆ ಬರುತ್ತಿರುವುದು ಜನರಿಗೆ ಸಮಾಧಾನ ತಂದಿದೆ. ಇತ್ತೀಚಿನ ದಿನಗಳಲ್ಲಿ ಇದೇ ಮೊದಲ ಬಾರಿಗೆ ಮೂರು ಗಂಟೆಗೂ ಅಧಿಕ ಕಾಲ ಮಳೆ ಬಂದಿದ್ದು, ಚಿಕ್ಕಮಗಳೂರು ತಾಲೂಕಿನಲ್ಲಿ ಮುಂಗಾರು ಮಳೆಯ ವೈಭವ ಕಂಡು ಬಂದಿತು. ಭಾನುವಾರ ರಜೆ ದಿನವಾಗಿದ್ದರಿಂದ ಹೆಚ್ಚಿನ ಜನ ಮನೆ ಬಿಟ್ಟು ಹೊರಗೆ ಬರಲೇ ಇಲ್ಲ.
ಇಲ್ಲಿನ ಮಾರ್ಕೇಟ್ ರಸ್ತೆಯಲ್ಲಿ ರಸ್ತೆ ಅಗಲೀಕರಣದ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಈ ರಸ್ತೆಯಲ್ಲಿರುವ ಮನೆಗಳ ತೆರವು ಕಾರ್ಯ ನಡೆಯುತ್ತಿದೆ. ಮನೆಗಳ ಮಣ್ಣು, ಕಲ್ಲುಗಳಿಂದ ಚರಂಡಿಗಳು ತುಂಬಿದ್ದರಿಂದ ಮಳೆಯ ನೀರು ರಸ್ತೆಯ ಮೇಲೆ ಹರಿದು ಹೋಗುತ್ತಿತ್ತು. ನಗರದಲ್ಲಿ ಶೇ. 80 ರಷ್ಟು ಒಳ ಚರಂಡಿ ಕಾಮಗಾರಿ ಮುಗಿದರೂ ಮಳೆಯ ನೀರು ಹೋಗಲು ಸಂಪರ್ಕ ಕಲ್ಪಿಸಿಲ್ಲ. ಇದರಿಂದಾಗಿ ಕೆಲವೆಡೆ ರಸ್ತೆಯಲ್ಲಿ ನೀರು ನಿಂತಿತ್ತು.
ಜಿಲ್ಲೆಯ ಮಲೆನಾಡಿನ ಕೆಲವೆಡೆ ಮಳೆ ಬಂದಿದ್ದು, ಮೂಡಿಗೆರೆಯಲ್ಲಿ ಸಂಜೆಯ ವೇಳೆಗೆ ಕೆಲ ಸಮಯ ಮಳೆ ಬಂದಿತು. ಬಳಿಕ ಮೋಡ ಕವಿದ ವಾತಾವರಣ ಮುಂದುವರೆದಿತ್ತು. ಕಡೂರು ಹಾಗೂ ತರೀಕೆರೆ ತಾಲೂಕಿನ ಕೆಲವೆಡೆ ಮೋಡ ಕವಿದ ವಾತಾವರಣ ಇತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

