ಚಿಕ್ಕಮಗಳೂರು

ಜಮೀನು ಕಳೆದುಕೊಂಡವರಿಗೆ ರೈಲ್ವೆ ಹುದ್ದೆಗಳು

Published On :

ಕ.ಪ್ರ ವಾರ್ತೆ, ಚಿಕ್ಕಮಗಳೂರು, ಮೇ 17
ಕಡೂರು ರೈಲ್ವೆ ಮಾರ್ಗದ ಸಂಚಾರಕ್ಕಾಗಿ ಸುಮಾರು 180ಕ್ಕೂ ಹೆಚ್ಚು ರೈಲ್ವೆ ಟ್ರಾಕ್‌ಮನ್‌ಗಳ ಹುದ್ದೆಗಳು ಸೃಷ್ಟಿಯಾಗಲಿವೆ. ಈ ಹುದ್ದೆಗಳಿಗೆ ನೇಮಕ ಮಾಡುವಾಗ ಸ್ಥಳೀಯರಿಗೆ ಹಾಗೂ ರೈಲ್ವೆ ಮಾರ್ಗಕ್ಕಾಗಿ ಜಮೀನು ಕಳೆದುಕೊಂಡಿರುವ ಕುಟುಂಬದ ಸದಸ್ಯರಿಗೆ ಪ್ರಥಮ ಪ್ರಾಶಸ್ತ್ಯ ನೀಡುವಂತೆ ಸಂಸದ ಕೆ. ಜಯಪ್ರಕಾಶ್ ಹೆಗ್ಡೆಯವರು ಕೇಂದ್ರ ರೈಲ್ವೆ ಇಲಾಖೆಗೆ ಒತ್ತಾಯಿಸಿದ್ದಾರೆ.
ಈ ಸಂಬಂಧ ರೈಲ್ವೆ ಅಧಿಕಾರಿಯವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಸಂಸದರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಚಿಕ್ಕಮಗಳೂರು- ಕಡೂರು ರೈಲ್ವೆ ಮಾರ್ಗದ ನಡುವೆ ಬರುವ ಸಖರಾಯಪಟ್ಟಣ, ಬಿಸಲೇಹಳ್ಳಿ ಮತ್ತು ಕರ್ತಿಕೆರೆ ಗ್ರಾಮಗಳಲ್ಲಿ ರೈಲ್ವೆ ಮೇಲು ಸೇತುವೆ ನಿರ್ಮಿಸಿದ್ದು ಈ ಸ್ಥಳಗಳ ಸುತ್ತಮುತ್ತ ಇರುವ ಗ್ರಾಮಗಳ ಗ್ರಾಮಸ್ಥರಿಗೆ ಸಂಚರಿಸಲು ಅನುಕೂಲವಾಗುವಂತೆ ಮೇಲುಸೇತುವೆ ಹತ್ತಿರದಲ್ಲಿ ಪರ್ಯಾಯ ಮಾರ್ಗ ನಿರ್ಮಿಸುವ ಬಗ್ಗೆ ಕ್ರಮಕೈಗೊಳ್ಳುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ವಿವಿಧೆಡೆ ಭೂಮಿ ಬಳಕೆ: ಹೊಸದಾಗಿ ಚಿಕ್ಕಮಗಳೂರು ಮತ್ತು ಸಕಲೇಶಪುರ ಮಾರ್ಗದ ಯೋಜನೆಯ ಪ್ರಾರಂಭಿಕ ಹಂತದಲ್ಲಿ ಚಿಕ್ಕಮಗಳೂರು- ಬೇಲೂರು ಮಾರ್ಗವನ್ನು ಸರ್ವೇ ಮಾಡಿಸಲಾಗಿದ್ದು, ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಒಟ್ಟು 15 ಕಿ.ಮಿ. ದೂರದ ಮಾರ್ಗದಲ್ಲಿ ಒಟ್ಟು 161 ಎಕರೆ ಪ್ರದೇಶವನ್ನು ಬಳಸುವ ಉದ್ದೇಶವನ್ನು ಹೊಂದಲಾಗಿದೆ. ಈ ಪ್ರದೇಶಕ್ಕೆ ಒಟ್ಟು 7 ಗ್ರಾಮಗಳು ಸೇರಲಿದ್ದು ಅವುಗಳಲ್ಲಿ ಅಂಬಳೆ, ಬಾಣಾವರ, ಗಂಜಲಗೋಡು, ಹಾದಿಹಳ್ಳಿ, ಕಂಬಿಹಳ್ಳಿ, ಮಳಲೂರು ಮತ್ತು ತೇಗೂರು ಈ ಗ್ರಾಮಗಳ ಮಧ್ಯೆ ರೈಲು ಮಾರ್ಗ ಹಾದು ಹೋಗಲಿದೆ. ಹಾಗೆಯೇ ಹಾಸನ ಜಿಲ್ಲಾ ವ್ಯಾಪ್ತಿಗೆ ಬರುವ ಒಟ್ಟು 6 ಕಿ.ಮಿ. ವ್ಯಾಪ್ತಿಯಲ್ಲಿ 137 ಎಕರೆ ಪ್ರದೇಶವನ್ನು ಬಳಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ತಿಳಿಸಿದ್ದಾರೆ.
10 ಕೋಟಿ ಮೀಸಲು: ಈ ಪ್ರದೇಶಕ್ಕೆ ಒಟ್ಟು 9 ಗ್ರಾಮಗಳು ಸೇರಲಿದ್ದು, ಅವುಗಳಲ್ಲಿ ಅಗಸರಹಳ್ಳಿ, ಚಿನ್ನಾಪುರ, ಚಿಕ್ಕಮೇದೂರು, ಚಿನ್ನನಹಳ್ಳಿ, ಗೋಟರವಳ್ಳಿ ಹುಣಸೇಕೆರೆ, ಲಕ್ಷ್ಮೀಪುರ, ಮರೂರು ಮತ್ತು ನಿಡಗೂಡು ಈ ಗ್ರಾಮಗಳ ಮಧ್ಯೆ ರೈಲು ಮಾರ್ಗ ಹಾದು ಹೋಗಲಿದೆ. ಸದ್ಯದಲ್ಲಿ ಈ ಹೊಸ ಮಾರ್ಗಕ್ಕಾಗಿ ಪ್ರಸಕ್ತ ಸಾಲಿನ ಕೇಂದ್ರ ಬಜೆಟ್‌ನಲ್ಲಿ 10 ಕೋಟಿ ರು. ಗಳನ್ನು ಮೀಸಲಿಟ್ಟಿದ್ದು ಕಳೆದ ಸಾಲಿನಲ್ಲಿ ಉಳಿದಿರುವ ಮೊತ್ತವನ್ನು ಸೇರಿಸಿ ಕಾಮಗಾರಿಯನ್ನು ಶೀಘ್ರದಲ್ಲಿ ಪ್ರಾರಂಭಗೊಳಿಸಲಾಗುವುದು. ಈ ಕಾಮಗಾರಿಯ ನಿರ್ಮಾಣ ವೆಚ್ಚಕ್ಕಾಗಿ ರಾಜ್ಯ ಸರ್ಕಾರ ಶೇ.50 ರಷ್ಟು ಮೊತ್ತವನ್ನು ಭರಿಸುವುದಾಗಿ ಒಪ್ಪಿಗೆ ಸೂಚಿಸಿದೆ.
ಮೊದಲನೇ ಹಂತದ ಸರ್ವೇ: ಚಿಕ್ಕಮಗಳೂರು- ಕಡೂರು ರೈಲ್ವೆ ಯೋಜನೆ ಸಂಪೂರ್ಣ ಪೂರ್ಣವಾಗುವ ಹಂತದಲ್ಲಿದ್ದು ಸದ್ಯದಲ್ಲೇ ಸಾರ್ವಜನಿಕ ಸೇವೆಗೆ ಸಮರ್ಪಣೆಯಾಗಲಿದೆ. ಚಿಕ್ಕಮಗಳೂರು- ಬೇಲೂರು ಮಾರ್ಗದ ರೈಲ್ವೆ ಕಾಮಗಾರಿ ಮೊದಲನೇ ಹಂತದ ಸರ್ವೇ ಕಾರ್ಯ ಮುಗಿದಿರುತ್ತದೆ. ಎರಡನೇ ಹಂತದ ಸರ್ವೇ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ.
ಕಾಮಗಾರಿ ಅನುಷ್ಠಾನ: 2012-13 ನೇ ಸಾಲಿನಲ್ಲಿ ಸಂಸತ್ ಸದಸ್ಯರ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ಪ್ರಾಥಮಿಕ ಹಂತವಾಗಿ ಚಿಕ್ಕಮಗಳೂರು ಲೋಕಸಭಾ ವ್ಯಾಪ್ತಿಯ ಚಿಕ್ಕಮಗಳೂರು, ಆಲ್ದೂರು, ಮೂಡಿಗೆರೆ, ಕಳಸ ಮತ್ತು ಕೊಪ್ಪ ಬ್ಲಾಕ್ ಪ್ರದೇಶದಲ್ಲಿ ಸಾರ್ವಜನಿಕರಿಗೆ ಅವಶ್ಯವಾದ ಕುಡಿಯುವ ನೀರು, ರಸ್ತೆ, ಸಮುದಾಯ ಭವನ ಮುಂತಾದ ವಿವಿಧ ಕಾಮಗಾರಿಗಳ ವೆಚ್ಚಕ್ಕಾಗಿ ಒಂದು ಕೋಟಿ ರುಪಾಯಿಗಳನ್ನು ಮೀಸಲಿಟ್ಟಿದ್ದು ಈ ಮೊತ್ತಕ್ಕೆ ಅನುಗುಣವಾಗಿ ಸಂಬಂಧಪಟ್ಟ ಇಲಾಖೆಗೆ ಜಿಲ್ಲಾಧಿಕಾರಿಗಳ ಮುಖಾಂತರ ಅಂದಾಜು ಪಟ್ಟಿಯನ್ನು ಸಲ್ಲಿಸಿ ಕಾಮಗಾರಿ ಪೂರೈಸಲು  ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಉಳಿದಂತೆ ಎರಡನೇ ಹಂತವಾಗಿ ಶೃಂಗೇರಿ, ಕೊಪ್ಪ, ಎನ್.ಆರ್. ಪುರ, ತರೀಕೆರೆ, ಅಜ್ಜಂಪುರ ಮತ್ತು ಸಖರಾಯಪಟ್ಟಣ ಬ್ಲಾಕ್ ಪ್ರದೇಶಗಳಲ್ಲಿ ವಿವಿಧ ಕಾಮಗಾರಿಗಳಿಗೆ 1.50 ಕೋಟಿ ರುಪಾಯಿಗಳನ್ನು ಮೀಸಲಿಟ್ಟಿದ್ದು, ಈ ಮೊತ್ತಕ್ಕೆ ಅನುಗುಣವಾಗಿ ಸಂಬಂಧಪಟ್ಟ ಇಲಾಖೆಗೆ ಜಿಲ್ಲಾಧಿಕಾರಿಗಳ ಮುಖಾಂತರ ಕಾಮಗಾರಿಗಳನ್ನು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.