ಚಿಕ್ಕಮಗಳೂರು

ಅತಂತ್ರ ಸ್ಥಿತಿಯಲ್ಲಿ 387 ಕುಟುಂಬಗಳು

Published On :

 ಆರ್. ತಾರಾನಾಥ್
ಕಪ್ರವಾರ್ತೆ,ಚಿಕ್ಕಮಗಳೂರು,ಮೇ17
ಜಿಲ್ಲೆಯ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಹೊರ ಹೋಗಲು ಇಚ್ಛಿಸಿರುವ 387 ಕುಟುಂಬಗಳು ಅತಂತ್ರ ಸ್ಥಿತಿಯಲ್ಲಿವೆ.
ಸ್ವಇಚ್ಛೆಯಿಂದ ಹೊರ ಹೋಗುವವರಿಗೆ ಪರಿಹಾರ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿತಾದರೂ ಅವರಿಗೆ ಈವರೆಗೆ ಪರಿಹಾರ ಸಿಕ್ಕಿಲ್ಲ. ಇಂದಿಲ್ಲಾ, ನಾಳೆ ಮನೆ ಮತ್ತು ತಲಾತಲಾಂತರದಿಂದ ಜೀವನಕ್ಕೆ ಆಶ್ರಯವಾಗಿದ್ದ ತೋಟಗಳನ್ನು ಬಿಟ್ಟು ಹೋಗಲು ತುದಿಗಾಲಲ್ಲಿ ನಿಂತಿರುವ ಇಲ್ಲಿನ ಜನರು ದಟ್ಟವಾದ ಕಾಡಿನಲ್ಲಿ ದಾರಿ ಕಾಣದಂತೆ ಜೀವನ ನಡೆಸುತ್ತಿದ್ದಾರೆ.
8 ವರ್ಷಗಳಿಂದ ಮೇನಾಮೇಷ: ಇದಕ್ಕೆ ಕಾರಣ, ಸರ್ಕಾರ. ಅವಶ್ಯಕತೆ ಇರುವ ಪರಿಹಾರದ ಹಣವನ್ನು ಸರ್ಕಾರ  ಬಿಡುಗಡೆ ಮಾಡಲು ಕಳೆದ 8 ವರ್ಷಗಳಿಂದ ಮೇನಾಮೇಷ ಎಣಿಸುತ್ತಿದೆ. ಇದರಿಂದಾಗಿ ಇಲ್ಲಿನ ಜನರು ಬೇಸತ್ತು ನ್ಯಾಯಾಲಯದ  ಮೆಟ್ಟಿಲು ಏರಿದ್ದು, ಇದಕ್ಕೆ ಸ್ಪಂದಿಸಿರುವ ನ್ಯಾಯಾಲಯ ಕಾನೂನು ಪ್ರಕಾರ ಕ್ರಮ ಕೈಗೊಳ್ಳಿ ಎಂದು ಸರ್ಕಾರಕ್ಕೆ ಸೂಚನೆ ನೀಡಿದೆ. ಆದರೂ ಕೂಡ ಸರ್ಕಾರ ಈವರೆಗೆ ಸ್ಪಂದಿಸಿಲ್ಲ.
ಆಗಿದ್ದೇನು?: ಚಿಕ್ಕಮಗಳೂರು, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಘೋಷಣೆಯಾದ ಬಳಿಕ ಅಲ್ಲಿನ ಜನರು ಜೀವನ ನಡೆಸಲು ತುಂಬಾ ತೊಂದರೆಯಾಗಿದೆ. ಆದುದರಿಂದ ಕೆಲವು ಕುಟುಂಬಗಳು ತಾವು ಸ್ವಇಚ್ಛೆಯಿಂದ ಹೊರಗೆ ಹೋಗುವುದಾಗಿ, ಅದಕ್ಕಾಗಿ ಪರಿಹಾರ ನೀಡುವಂತೆ ಅರ್ಜಿ ಸಲ್ಲಿಸಿದ್ದವು.
ಇದರ ಆಧಾರದ ಮೇಲೆ ಸರ್ಕಾರ 2005ರ ಏಪ್ರಿಲ್ 18 ರಂದು ಆದೇಶ ಹೊರಡಿಸಿ, ಸಂಬಂಧಿತ ಕುಟುಂಬಗಳಿಗೆ ಪರಿಹಾರ ಪಾವತಿಸಿ, ಅವರ ಜಮೀನುಗಳನ್ನು ಕುದುರೆಮುಖ ರಾಷ್ಟ್ರೀಯ ಉದ್ಯಾನವನಕ್ಕೆ ಸೇರ್ಪಡೆ ಮಾಡಲು ಆದೇಶಿಸಿತ್ತು.
 ಚಿಕ್ಕಮಗಳೂರು ಜಿಲ್ಲೆಯ ವ್ಯಾಪ್ತಿಯಲ್ಲಿ 35410.09 ಹೆಕ್ಟೇರ್ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಪ್ರದೇಶ ಇದ್ದು. ಇಲ್ಲಿ ಜನ ವಸತಿಯ 22 ಗ್ರಾಮಗಳಿವೆ. ಈ ಪ್ರದೇಶದಲ್ಲಿ 28 ಪರಿಶಿಷ್ಟ ಜಾತಿ, 318 ಪರಿಶಿಷ್ಟ ಪಂಗಡ ಹಾಗೂ ಇತರೆ 530 ಕುಟುಂಬಗಳಿವೆ.
876 ಕುಟುಂಬಗಳ ಪೈಕಿ 355 ಕುಟುಂಬಗಳು ಸ್ವಇಚ್ಛೆಯಿಂದ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಹೊರ ಹೋಗಲು ಅರ್ಜಿ ಸಲ್ಲಿಸಿದ್ದು, ಇದಕ್ಕಾಗಿ ಪರಿಹಾರ ನೀಡುವಂತೆ ಕೇಳಿ ಕೊಂಡಿವೆ. ಇದರಲ್ಲಿ 75 ಕುಟುಂಬಗಳ ಆಸ್ತಿಯನ್ನು ಮೌಲ್ಯ ಮಾಪನ ಮಾಡಲಾಗಿದ್ದು, ಇವರಿಗೆ ಪರಿಹಾರ ನೀಡಲು ಬಿಡುಗಡೆಯಾದ ಅನುದಾನ 249.83 ಲಕ್ಷ. ಇದರಲ್ಲಿ  17 ಕುಟುಂಬಗಳಿಗೆ 206.96 ಲಕ್ಷ ಬಿಡುಗಡೆ ಮಾಡಲಾಗಿದೆ.
ಸರ್ಕಾರದಿಂದ ಅನುದಾನವಿಲ್ಲ: ಮೌಲ್ಯಮಾಪನ ಮಾಡಿರುವ ಕುಟುಂಬಗಳಿಗೆ 1872.31 ಲಕ್ಷ ಸರ್ಕಾರದಿಂದ ಬಿಡುಗಡೆಯಾಗಬೇಕಾಗಿದೆ. ಇದರ ಜತೆಗೆ 387 ಕುಟುಂಬಗಳಿಗೆ ಪಾವತಿಸಲು 134.80 ಕೋಟಿ ಅನುದಾನ ಬೇಕಾಗಿದೆ. ಸರ್ಕಾರದಿಂದ ಅನುದಾನ ಬಿಡುಗಡೆಯಾಗದೆ ಇದ್ದರಿಂದ ಇಲ್ಲಿನ ಕುಟುಂಬಗಳನ್ನು ಹೊರ ಹೋಗಲು ಆಗುತ್ತಿಲ್ಲ.
ಅತಂತ್ರ: ಸರ್ಕಾರದಿಂದ ಅನುದಾನ ಬಿಡುಗಡೆಯಾದರೆ ತೋಟ ಮತ್ತು ಮನೆಗಳನ್ನು ಬಿಟ್ಟು ಹೋಗಬೇಕಾಗುತ್ತದೆ ಎಂದು ಸ್ವಇಚ್ಛೆಯಿಂದ ಹೊರ ಹೋಗಲು ಮುಂದಾಗಿರುವ ಕುಟುಂಬಗಳು ತೋಟಗಳ ನಿರ್ವಹಣೆಯನ್ನು ಕೈಬಿಟ್ಟಿವೆ. ಇದರಿಂದಾಗಿ ಜೀವನ ನಡೆಸುವುದೇ ಕಷ್ಟವಾಗಿದೆ. ಅದುದರಿಂದ ಅನುದಾನ ಬಿಡುಗಡೆ ಮಾಡದಿರುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಇಲ್ಲಿನ ಕೆಲವು ಜನರು  ಹೈಕೋರ್ಟ್ ಮೆಟ್ಟಿಲು ಏರಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು, ವನ್ಯಜೀವಿ ವಿಭಾಗದ ಡಿಎಫ್‌ಓ ಹಾಗೂ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಇದಕ್ಕೆ  ಸ್ಪಂದಿಸಿರುವ ನ್ಯಾಯಾಲಯ ಭೂಸ್ವಾಧೀನ ಕಾಯ್ದೆಯ ಪ್ರಕಾರ ಪರಿಹಾರ ನೀಡುವಂತೆ  ಸೂಚನೆ ನೀಡಿದೆ. ಹೀಗಿದ್ದರೂ ಕೂಡ ಸರ್ಕಾರ ಈವರೆಗೆ ಸ್ಪಂದಿಸಿಲ್ಲ. ಸರ್ಕಾರದ ಮಾತನ್ನು ನಂಬಿ ಪರಿಹಾರಕ್ಕೆ ಅರ್ಜಿ ಸಲ್ಲಿಸಿರುವವರು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಆದರೆ, ಪರಿಹಾರ ಸಿಗುವ ಲಕ್ಷಣ ಕಾಣುತ್ತಿಲ್ಲ.
ಸರ್ಕಾರ  ಹಣ ಬಿಡುಗಡೆ ಮಾಡಿದ ನಂತರವಷ್ಟೇ 387 ಕುಟುಂಬಗಳ ಆಸ್ತಿಯನ್ನು ಮೌಲ್ಯ ಮಾಪನ ಮಾಡಬೇಕಾಗುತ್ತದೆ. ಈ ಕೆಲಸ ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಮಾಡಬೇಕಾಗಿದೆ. ಆದರೆ, ಇದಕ್ಕೂ ಕೂಡ ಸಾಕಷ್ಟು ಸಿಬ್ಬಂದಿಗಳಿಲ್ಲ. ಒಟ್ಟಾರೆ ಇಲ್ಲಿನ ಜನರ ಪರಿಸ್ಥಿತಿ ಹಾವು ಸಾಯಬಾರದು. ಕೋಲು ಮುರಿಯಬಾರದಂತಹ ಸ್ಥಿತಿಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.