ಕೈಗಾರಿಕೆಗಳಿಂದ ಪರಿಸರಕ್ಕೆ ಹಾನಿ
ನರಸಿಂಹರಾಜಪುರ: ಬೃಹತ್ ಕೈಗಾರಿಕೆಯಿಂದ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ವಿಜ್ಞಾನ ಬೆಳೆದಂತೆಲ್ಲಾ ದೇಶ ಮುಂದುವರಿಯುತ್ತಿದ್ದರೂ, ಪರಿಸರ ಮಾತ್ರ ಹಾಳಾಗುತ್ತಿದೆ ಎಂದು ಪರಿಸರ ಪ್ರಶಸ್ತಿ ವಿಜೇತ ಮೈಸೂರು ಜಿಲ್ಲೆಯ ಹುಣಸೂರಿನ ಟಿ.ಸಿ. ದೇವನಾಥ್ ಕಳವಳ ವ್ಯಕ್ತಪಡಿಸಿದರು. ಅವರು ಗುರುವಾರ ಸಿಂಸೆ ಗ್ರಾಮದಲ್ಲಿರುವ ಸಂತ ನೋಬರ್ಟ್ ಕೈಗಾರಿಕೆ ಸಂಸ್ಥೆಯ ಆವರಣದಲ್ಲಿ ನಡೆದ ಪರಿಸರ ಸಂರಕ್ಷಣೆ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಹವಾಮಾನ ವೈಪರೀತ್ಯ: ಮನುಷ್ಯನ ದುರಾಸೆಯಿಂದ ಪರಿಸರ ನಾಶವಾಗಿ ಹವಾಮಾನ ವೈಪರೀತ್ಯ ಉಂಟಾಗುತ್ತಿದ್ದು, ಇದರಿಂತ ತಾಪಮಾನದಲ್ಲಿ ಏರಿಕೆ ಉಂಟಾಗಿದೆ. ಮುಂದಿನ ಜನಾಂಗಕ್ಕೆ ಪರಿಸರದ ಉಪಯೋಗ ಲಭಿಸಬೇಕಾದರೆ ಅರಣ್ಯ ಬೆಳೆಸಬೇಕಾಗಿದೆ. ಉತ್ತಮ ಪರಿಸರದಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಪರಿಸರ ಸಂರಕ್ಷಣೆಯಲ್ಲಿ ಯುವ ಜನರ ಪಾತ್ರ ಬಹಳ ಮುಖ್ಯ. ಯುವಕರು ಪರಿಸರ ಸಂರಕ್ಷಣೆಗೆ ಪಣ ತೊಡಬೇಕು ಎಂದು ಅವರು ಸಲಹೆ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಸಂತ ನೋಬರ್ಟ್ ಕೈಗಾರಿಕಾ ಸಂಸ್ಥೆಯ ನಿರ್ದೇಶಕ ಸಜಿ ಪರಕ್ಕಟ್ಟಿಲ್ ವಹಿಸಿದ್ದರು. ಪ್ರಾಂಶುಪಾಲ ಮೋಹನ್ ಉಪಸ್ಥಿತರಿದ್ದರು. ಮೋನಿಷಾ ಸ್ವಾಗತಿಸಿದರು. ತಬ್ರಿಸ್ ಕಾರ್ಯಕ್ರಮ ನಿರೂಪಿಸಿದರು. ಸೌಮ್ಯ ವಂದಿಸಿದರು.
ಚುನಾವಣಾ ಸಿಬ್ಬಂದಿಗೆ ಅಭಿನಂದನೆ
ತರೀಕೆರೆ: ತಾಲೂಕಿನಲ್ಲಿ ಶಾಂತಿಯುತವಾಗಿ ವಿಧಾನಸಭಾ ಚುನಾವಣೆ ನಡೆಸುವಲ್ಲಿ ಸಹಕರಿಸಿದ ಎಲ್ಲರಿಗೂ ತಾಲೂಕು ಅಡಳಿತ ವತಿಯಿಂದ ಕೃತಜ್ಞತೆ ಅರ್ಪಿಸುವ ಸಮಾರಂಭವನ್ನು ಶುಕ್ರವಾರ ಮಿನಿ ವಿಧಾನ ಸೌಧದ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು. ಚುನಾವಣಾಧಿಕಾರಿಗಳು ಹಾಗೂ ಉಪವಿಭಾಗಾಧಿಕಾರಿ ಜಿ. ಅನುರಾಧ ಮಾತನಾಡಿ, ಇದೇ ಪ್ರಥಮ ಬಾರಿಗೆ ಸಾರ್ವತ್ರಿಕ ಚುನಾವಣೆಯನ್ನು ನಡೆಸಿದ್ದು, ಚುನಾವಣೆಯಲ್ಲಿ ಏನೊಂದು ಲೋಪ ಬಾರದಂತೆ, ಸುಗಮವಾಗಿ, ಕ್ರಮಬದ್ಧವಾಗಿ ಎಲ್ಲ ರೀತಿಯಲ್ಲೂ ಸಮರ್ಪಕವಾಗಿ ಚುನಾವಣೆ ನಡೆಸಲು ಸಹಕರಿಸಿದ ಸಾರ್ವಜನಿಕರಿಗೆ ತಾಲೂಕು ಅಡಳಿತ ಕೃತಜ್ಞತೆ ಅರ್ಪಿಸುತ್ತದೆ ಎಂದು ತಿಳಿಸಿದರು. ಸಹಾಯಕ ಚುನಾವಣಾಧಿಕಾರಿ, ತಹಸೀಲ್ದಾರ್ ರಂಜಿತ ಮಾತನಾಡಿ, ಸಹಾಯಕ ಚುನಾವಣಾಧಿಕಾರಿಯಾಗಿ ಇದು ಮೊದಲ ಚುನಾವಣೆಯಾಗಿದ್ದು, ಎಲ್ಲರ ಸಹಕಾರದಿಂದ, ಸಮಸ್ಯೆ ಬಾರದ ರೀತಿ ಸುಸೂತ್ರವಾಗಿ ಚುನಾವಣೆಯನ್ನು ನಡೆಸಲಾಗಿದೆ ಎಂದು ತಿಳಿಸಿದರು. ಚುನಾವಣಾ ಸಿಬ್ಬಂದಿಗಳಾದ ಜಡೇಶಂಕರ್ ಉಪಸ್ಥಿತರಿದ್ದರು. ಎಸ್. ಸುರೇಶ್ ಚಂದ್ರ ವಂದಿಸಿದರು.
ಸಿವಿಲ್ ನ್ಯಾ. ರೇಣುಕಾ, ಲಕ್ಷ್ಮೀಗೆ ಬೀಳ್ಕೊಡುಗೆ
ಚಿಕ್ಕಮಗಳೂರು: ಕಳೆದ ಮೂರು ವರ್ಷಗಳಿಂದ ನಗರದಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡಿರುವ ಸಿವಿಲ್ ನ್ಯಾಯಾಧೀಶರಾದ ಬಿ.ವಿ. ರೇಣುಕಾ ಮತ್ತು ಲಕ್ಷ್ಮೀ ಅವರಿಗೆ ವಕೀಲರ ಸಂಘದಿಂದ ಬೀಳ್ಕೊಡುಗೆ ನೀಡಲಾಯಿತು.
ನಗರದ ನ್ಯಾಯಾಲಯದ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಇಬ್ಬರೂ ನ್ಯಾಯಾಧೀಶರನ್ನು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಸವರಾಜ್ ಎ. ಪಾಟೀಲ್ ಮಾತನಾಡಿದರು. ರೇಣುಕಾರ ಅವಧಿಯಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದ್ದು ರಾಜ್ಯದಲ್ಲಿ ಜಿಲ್ಲೆ ಪ್ರಥಮ ಸ್ಥಾನ ಗಳಿಸಿದ್ದು ತಮಗೆ ಹೆಮ್ಮೆ ತಂದಿದೆ ಎಂದು ತಿಳಿಸಿದರು.
ರಾಷ್ಟ್ರೀಯ ವಕೀಲರ ಪರಿಷತ್ತಿನ ಸದಸ್ಯ ಎಸ್.ಎಲ್. ಬೋಜೇಗೌಡ ಮಾತನಾಡಿ, ಇಬ್ಬರೂ ನ್ಯಾಯಾಧೀಶರು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕೀರ್ತಿ ಸಂಪಾದಿಸಲಿ ಎಂದು ಹೇಳಿದರು.
ನ್ಯಾಯಾಧೀಶೆ ಬಿ.ವಿ. ರೇಣುಕಾ ಮಾತನಾಡಿ, ಕಳೆದ ಮೂರು ವರ್ಷಗಳಲ್ಲಿ ತಾವು ಸಲ್ಲಿಸಿರುವ ಸೇವೆ ತಮಗೆ ತೃಪ್ತಿ ತಂದಿದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ನ್ಯಾಯಾವಾದಿ ಎಸ್. ವೆಂಕಟೇಶ್ ಕಾರ್ಯಕ್ರಮವನ್ನು ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

