ಚಿಕ್ಕಮಗಳೂರು

ಜಿಲ್ಲೆಯಲ್ಲಿ 17 ಡೆಂಘೀ ಪ್ರಕರಣ ಪತ್ತೆ

Published On :

ಕಪ್ರವಾರ್ತೆ,ಚಿಕ್ಕಮಗಳೂರು,ಮೇ 25
ಜಿಲ್ಲೆಯಲ್ಲಿ ಕಳೆದ 4 ತಿಂಗಳ ಅವಧಿಯಲ್ಲಿ 20 ಮಲೇರಿಯಾ ಹಾಗೂ 17 ಡೆಂಘೀ ಪ್ರಕರಣ ದಾಖಲಾಗಿವೆ.
 ಕಳೆದ ವರ್ಷಕ್ಕೆ ಹೋಲಿಸಿದರೆ ಈ ಎರಡೂ ಸಾಂಕ್ರಾಮಿಕ ರೋಗಗಳ ಪ್ರಮಾಣದಲ್ಲಿ ಹೆಚ್ಚಳವಾಗಿದೆ.
 ಹಿಂದಿನ ವರ್ಷದಲ್ಲಿ ಕಳೆದ 4 ತಿಂಗಳಲ್ಲಿ ಒಂದೂ ಡೆಂಘೀ ಜ್ವರದ ಪ್ರಕರಣ ದಾಖಲಾಗಿಲ್ಲ. ಆದರೆ ಈ ವರ್ಷದಲ್ಲಿ ಜನವರಿಯಿಂದ ಏಪ್ರಿಲ್‌ವರೆಗೆ 14 ಪ್ರಕರಣ ದಾಖಲಾಗಿದ್ದರೆ, ಮೇ ತಿಂಗಳಲ್ಲಿ 3 ಪ್ರಕರಣಗಳು ದಾಖಲಾಗಿವೆ.
ತರೀಕೆರೆ 5: ಇವುಗಳಲ್ಲಿ ಕಡೂರು ತಾಲೂಕಿನಲ್ಲಿ 3, ತರೀಕೆರೆ ತಾಲೂಕಿನಲ್ಲಿ 5, ಕೊಪ್ಪ- 2, ಚಿಕ್ಕಮಗಳೂರು ತಾಲೂಕಿನಲ್ಲಿ 4 ಪ್ರಕರಣ ಏಪ್ರಿಲ್ ತಿಂಗಳೊಳಗೆ ದಾಖಲಾಗಿದ್ದು, ಮೇ ತಿಂಗಳಲ್ಲಿ ತರೀಕೆರೆ ತಾಲೂಕಿನ ಶಿವನಿ ಹಾಗೂ ಎನ್.ಆರ್.ಪುರ ಮತ್ತು ಕೊಪ್ಪ ತಾಲೂಕುಗಳಲ್ಲಿ ತಲಾ ಒಂದೊಂದು ಪ್ರಕರಣ ದಾಖಲಾಗಿದೆ.
ಕಳೆದ ವರ್ಷ ಜಿಲ್ಲೆಯಲ್ಲಿ 40 ಡೆಂಘೀ ಹಾಗೂ 145 ಮಲೇರಿಯಾ ಪ್ರಕರಣ ದಾಖಲಾಗಿದ್ದವು. ಆದರೆ ಕಳೆದ 4 ತಿಂಗಳಲ್ಲಿ 17 ಡೆಂಘೀ ಪ್ರಕರಣ ದಾಖಲಾಗಿವೆ. ಜಿಲ್ಲಾ ಆರೋಗ್ಯ ಇಲಾಖೆ ಹಲವು ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದರೂ, ಡೆಂಘೀ ಪ್ರಕರಣ ಹೆಚ್ಚಳವಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
 ಈ ವರ್ಷದಲ್ಲಿ ಸಮಾಧಾನಕಾರ ವಿಷಯವೆಂದರೆ ಜನವರಿಯಿಂದ ಮೇ ತಿಂಗಳೊಳಗೆ ಮಂಗನಕಾಯಿಲೆ, ವಾಂತಿ ಭೇದಿ ಪ್ರಕರಣ ಕಾಣಿಸಿಕೊಳ್ಳುತ್ತಿತ್ತು. ಆದರೆ ಈ ವರ್ಷ ಈವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.
ಹರಡುವ ಸಾಧ್ಯತೆ: ಈ ಸಂದರ್ಭದಲ್ಲಿ ಜಿಲ್ಲೆಯ ಹಲವೆಡೆ ಜಾತ್ರೆಗಳು ನಡೆಯಲಿದ್ದು, ಬೇರೆ ಕಡೆಗಳಿಂದ ವಲಸೆ ಬರುವ ಜನರಲ್ಲಿ ಈ ಸಾಂಕ್ರಾಮಿಕ ರೋಗ ಇದ್ದರೆ, ಬೇರೆಯವರಿಗೆ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಈವರೆಗೆ ದಾಖಲಾಗಿರುವ ಮಲೇರಿಯಾ ಹಾಗೂ ಡೆಂಘೀ ತಗಲಿದವರು ಗುಣಮುಖರಾಗಿದ್ದಾರೆ. ಸಾಂಕ್ರಾಮಿಕ ರೋಗಗಳು ಬರದಂತೆ  ಆರೋಗ್ಯ ಇಲಾಖೆ ಜಿಲ್ಲೆಯಲ್ಲಿ ಹಲವು ಮುಂಜಾಗ್ರತಾ ಕ್ರಮ ತೆಗೆದುಕೊಂಡಿದೆ.
ಸೊಳ್ಳೆ ನಿರ್ಮೂಲನೆಗೆ ಸಮೀಕ್ಷೆ: ಈವರೆಗೆ ಸುಮಾರು 3 ಸುತ್ತುಗಳಲ್ಲಿ  2,60,305 ಮನೆಗಳ ಹೊರ ಭಾಗದಲ್ಲಿರುವ ಸೊಳ್ಳೆಗಳ ನಿರ್ಮೂಲನೆಗಾಗಿ ಸಮೀಕ್ಷೆ ನಡೆಸಲಾಗಿದ್ದು, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಗ್ರಾಮಾಂತರ ಪ್ರದೇಶಗಳಲ್ಲಿ ಜಾಥಾ ಸೇರಿದಂತೆ ಹಲವು ಕಾರ್ಯಕ್ರಮ ನಡೆಸಲಾಗಿದೆ. ಕಳೆದ ವರ್ಷ 1,868 ಕಡೆಗಳಲ್ಲಿ 11,93,770 ಲವರ ಸೊಳ್ಳೆಗಳ ನಿರ್ಮೂಲನೆಗಾಗಿ ಲವರಹಾರಿ ಮೀನುಗಳನ್ನು ಬಿಡಲಾಗಿದೆ.
 ಸಾಮಾನ್ಯವಾಗಿ ಮಲೇರಿಯಾ ಹಾಗೂ ಡೆಂಘೀ ಈ ಸಂದರ್ಭದಲ್ಲಿ ಕಾಣಿಸಿಕೊಳ್ಳಲಿದೆ. ಆಗಾಗ ಬರುತ್ತಿರುವ ಮಳೆಯ ನೀರು ಒಂದೇ ಕಡೆಯಲ್ಲಿ ಒಂದು ವಾರಕ್ಕೂ ಹೆಚ್ಚು ದಿನ ಶೇಖರಣೆಯಾದರೆ ಅಲ್ಲಿ ಲವರ ಸೊಳ್ಳೆ  ಉತ್ಪದಾನೆಯಾಗಲಿದೆ.
 ಈ ಸೊಳ್ಳೆ ರಾತ್ರಿ ವೇಳೆ ಕಚ್ಚದೆ, ಹಗಲಿನಲ್ಲಿ ಕಚ್ಚುತ್ತದೆ. ಈ ಸೊಳ್ಳೆ ಕಚ್ಚಿದ ಕೆಲವೇ ದಿನದಲ್ಲಿ ಜ್ವರ ಬರಲಿದೆ. ಜ್ವರ ಬಿಡುವ ಲಕ್ಷಣ ಕಾಣಿಸಿಕೊಳ್ಳದೆ ಇದ್ದರೆ ಸಮೀಪದ ಆಸ್ಪತ್ರೆಗಳಲ್ಲಿ ತಕ್ಷಣವೇ ಚಿಕಿತ್ಸೆ ಪಡೆಯಬೇಕು. ಹಾಗೆ ಮಾಡುವುದರಿಂದ ಮುಂದಾಗಬಹುದಾದ ಅನಾಹುತ ತಪ್ಪಿಸಬಹುದು. ಉಪೇಕ್ಷೆ ಮಾಡಿದರೆ ಸಾವು ಖಚಿತ.
ಪರಿಹಾರ: ಮಲೇರಿಯಾ ಹಾಗೂ ಡೆಂಘೀ ಜ್ವರ ಬರದಂತೆ ಸಾರ್ವಜನಿಕರೇ ಮುಂಜಾಗ್ರತೆ ವಹಿಸಬೇಕು. ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಹಾಗೂ ಕುಡಿಯಲು ಬಳಸುವ ನೀರು ಬಹುದಿನಗಳವರೆಗೆ ಸಂಗ್ರಹವಾಗಿರದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ವಿಚಕ್ಷಣಾಧಿಕಾರಿ ಡಾ. ಆರ್. ದೊಡ್ಡಮಲ್ಲಪ್ಪ ಸಲಹೆ ನೀಡಿದ್ದಾರೆ.
 ಹಳೆಯ ಟೈರು, ತೆಂಗಿನ ಚಿಪ್ಪುಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ಎಚ್ಚರ ವಹಿಸಬೇಕು. ಶೇಖರಣೆಯಾದ ನೀರನ್ನು ಕೂಡಲೇ ಖಾಲಿ ಮಾಡಿಸಬೇಕು. ಕುಡಿಯಲು ಬಳಸುವ ನೀರು ಸರಿಯಾದ ರೀತಿಯಲ್ಲಿ ಮುಚ್ಚಿಡಬೇಕು. ನೀರಿನ ತೊಟ್ಟಿಯನ್ನು ಆಗಾಗ ಶುಚಿಗೊಳಿಸಬೇಕು ಎಂದು ಕನ್ನಡಪ್ರಭದೊಂದಿಗೆ ಮಾತನಾಡುವಾಗ ತಿಳಿಸಿದರು.
 ಇಲಾಖೆ ಎಷ್ಟೇ ಜಾಗೃತಿ ಕಾರ್ಯಕ್ರಮ ಕೈಗೊಂಡರೂ ಸಾರ್ವಜನಿಕರು ಹಲವು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ಸೊಳ್ಳೆ ಪರದೆ ಕಡ್ಡಾಯವಾಗಿ ಉಪಯೋಗಿಸಬೇಕು. ಹಗಲು ಹೊತ್ತಿನಲ್ಲಿ ಲವರಸೊಳ್ಳೆ  ಕಚ್ಚುವುದರಿಂದ ಮೈತುಂಬಾ ಬಟ್ಟೆ ಧರಿಸಬೇಕು. ನೀರು ಜಾಸ್ತಿ ಪ್ರಮಾಣದಲ್ಲಿ ಶೇಖರಣೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.