ಚಿಕ್ಕಮಗಳೂರು

ಸಿಡಿಎ ಅಧ್ಯಕ್ಷರ ರಾಜಿನಾಮೆ: ಗೊಂದಲ

Published On :

ಕ.ಪ್ರ.ವಾರ್ತೆ, ಚಿಕ್ಕಮಗಳೂರು,  ಮೇ 29
ಆಗಾಗ ವಿವಾದದ ಸುಳಿಯಲ್ಲಿ ಸಿಲುಕುತ್ತಿರುವ ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಸಿಡಿಎ)ಕ್ಕೆ ಇದೀಗ ಮತ್ತೊಂದು ವಿವಾದ ಸುತ್ತಿಕೊಂಡಿದೆ.
ಇದರಿಂದ ಪ್ರಾಧಿಕಾರದ ಆಯುಕ್ತರ ಮತ್ತು ಅಧ್ಯಕ್ಷರ ನಡುವಿನ ಮುಸುಕಿನ ಗುದ್ದಾಟ ಬಯಲಿಗೆ ಬಂದಿದೆ. ಇದಕ್ಕೆ ಸಂದರ್ಭ ಕೂಡಿ ಬಂದಿದ್ದು- ನಿಗಮ, ಮಂಡಳಿಗಳ ನಾಮ ನಿರ್ದೇಶನ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ರಾಜಿನಾಮೆ ನೀಡಬೇಕೆಂದು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಇದೇ ಮೇ 14 ರಂದು ಹೊರಡಿಸಿರುವ ಆದೇಶ.
ಈ ಆದೇಶ ಪಾಲನೆ ಮಾಡಲು ಆಯುಕ್ತರು ತೆಗೆದುಕೊಂಡ ಕ್ರಮ ಹಾಗೂ ಅಧ್ಯಕ್ಷರು ರಾಜಿನಾಮೆ ಸ್ವೀಕರಿಸಲು ನಿರಾಕರಿಸಿರುವುದು, ಈ ಎಲ್ಲಾ ಬೆಳವಣಿಗೆಗಳು ಕಳೆದ ಒಂದು ವಾರದಿಂದ ನಡೆಯುತ್ತಿದ್ದರೂ, ಅದು ಬೆಳಕಿಗೆ ಬಂದಿದ್ದು ಬುಧವಾರ ಮಾತ್ರ.
ಸಿಎಂ ಸೂಚನೆ: ಕಳೆದ ಸರ್ಕಾರದ ಅವಧಿಯಲ್ಲಿ ನಿಗಮ, ಮಂಡಳಿಗಳಿಗೆ ನಾಮ ನಿರ್ದೇಶನಗೊಂಡಿದ್ದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ರಾಜಿನಾಮೆ ನೀಡಬೇಕೆಂದು ರಾಜ್ಯದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದರು. ಅದರಂತೆ ರಾಜಿನಾಮೆಯನ್ನು ಪಡೆಯಬೇಕೆಂದು ಪ್ರಧಾನ ಕಾರ್ಯದರ್ಶಿಗಳು ಸಂಬಂಧಿತ ನಿಗಮ, ಮಂಡಳಿಗಳ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಅಧ್ಯಕ್ಷರ ರಾಜಿನಾಮೆ ಇಲ್ಲ: ಅದರಂತೆ ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು, ಸರ್ಕಾರದ ಸುತ್ತೋಲೆಯನ್ನು ಅಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ಕಳುಹಿಸಿಕೊಟ್ಟಿದ್ದಾರೆ. ಈ ಪತ್ರಕ್ಕೆ ಸ್ಪಂದಿಸಿರುವ ನಾಮ ನಿರ್ದೇಶನ ಸದಸ್ಯರು ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡಿದ್ದಾರೆ. ಆದರೆ, ಅಧ್ಯಕ್ಷರಿಂದ ರಾಜಿನಾಮೆ ಪತ್ರವನ್ನು ಬಂದಿರುವುದಿಲ್ಲ. ಅದುದರಿಂದ ಆಯುಕ್ತರು ಸರ್ಕಾರದ ಸೂಚನೆ ಪತ್ರದ ಜೆರಾಕ್ಸ್ ಪ್ರತಿಯನ್ನು ರಿಜಿಸ್ಟರ್ ಪತ್ರದ ಮೂಲಕ ಕಳುಹಿಸಿಕೊಟ್ಟಿದ್ದರು. ಆಗಲೂ ಅಧ್ಯಕ್ಷರು ಸ್ವೀಕರಿಸಿಲ್ಲ. ಕಳುಹಿಸಿದ್ದ ರಿಜಿಸ್ಟರ್ ಪೋಸ್ಟ್ 7 ದಿನದ ನಂತರ ಪ್ರಾಧಿಕಾರಕ್ಕೆ ವಾಪಸ್ ಬಂದಿದೆ. ಆಗ, ಆಯುಕ್ತರು ಕಚೇರಿಯ ಸಿಬ್ಬಂದಿಯನ್ನು ಕಳುಹಿಸಿ ಸೂಚನಾ ಪತ್ರವನ್ನು ತಲುಪಿಸುವಂತೆ ಹೇಳಿದ್ದರು. ಅದಕ್ಕೆ ಅಧ್ಯಕ್ಷರು ಕಿವಿಗೊಡಲಿಲ್ಲ. ಆ ಸಂದರ್ಭದಲ್ಲಿ ಅಧ್ಯಕ್ಷರ ಮನೆ ಬಾಗಿಲಿಗೆ ಆ ಪತ್ರವನ್ನು ಅಂಟಿಸುವ ಪ್ರಯತ್ನವೂ ನಡೆದಿದೆ. ಕೊನೆಯಲ್ಲಿ ಪ್ರಾಧಿಕಾರದ ಅಧ್ಯಕ್ಷರ ಕೊಠಡಿಗೆ ಬುಧವಾರ ಸೂಚನಾ ಪತ್ರವನ್ನು ಅಂಟಿಸಲಾಯಿತು.
ಅಧ್ಯಕ್ಷರು ಹೇಳಿದ್ದೇನು: ಸಿಡಿಎ ಅಧ್ಯಕ್ಷ ಬಿ. ರಾಜಪ್ಪ ಅವರು ಇದಕ್ಕೆ ನೀಡಿರುವ ಕಾರಣ- ವಿಧಾನಸಭಾ ಚುನಾವಣೆ ಹಾಗೂ ವೈಯಕ್ತಿಕ ಕಾರಣಗಳಿಂದಾಗಿ ಸಿಡಿಎ ಕಚೇರಿಗೆ ಕಳೆದ ಎರಡು ತಿಂಗಳಿಂದ ಹೋಗಿಲ್ಲ. ಅಧ್ಯಕ್ಷರ ಸ್ಥಾನಕ್ಕೆ ನೀಡುವಂತೆ ಹೇಳುವ ಅಧಿಕಾರ ಆಯುಕ್ತರಿಗಿಲ್ಲ. ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು, ರಾಜ್ಯಪಾಲರು. ರಾಜಿನಾಮೆ ನೀಡುವಂತೆ ನನ್ನ ಹೆಸರಿಗೆ ಸರ್ಕಾರದಿಂದ ಪತ್ರ ಬರಲಿ, ಆಮೇಲೆ ರಾಜಿನಾಮೆ ನೀಡುತ್ತೇನೆ. ರಾಜಿನಾಮೆ ನೀಡುವಂತೆ ಈವರೆಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ಕನ್ನಡಪ್ರಭದೊಂದಿಗೆ ಮಾತನಾಡುವಾಗ ಹೇಳಿದರು.
ಆಯುಕ್ತರು, ಉದ್ದೇಶಪೂರ್ವಕವಾಗಿ ತರಾತುರಿಯಲ್ಲಿ ನನ್ನಿಂದ ರಾಜಿನಾಮೆ ಪಡೆಯಲು ಈ ರೀತಿಯಲ್ಲಿ ವರ್ತಿಸಲು ಹಲವು ಕಾರಣಗಳಿವೆ. ಈ ಸಂಬಂಧ ಅವರ ವಿರುದ್ಧ ಕಳೆದ ಡಿಸೆಂಬರ್ ತಿಂಗಳಲ್ಲೇ ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದೇನೆ. ನನ್ನಿಂದ ರಾಜಿನಾಮೆ ಪಡೆದು, ಮುಂದೆ ತಾವು ಏನಾ ಬೇಕಾದರೂ ಮಾಡಬಹುದೆಂದು ರಾಜಿನಾಮೆ ಪಡೆಯಲು ಇಷ್ಟೆಲ್ಲಾ ಕಸರತ್ತು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಆಯುಕ್ತರು ಹೇಳುವುದು: ಆದರೆ, ಈ ವಿಷಯದಲ್ಲಿ ಆಯುಕ್ತರು ಹೇಳುವುದು- ಸರ್ಕಾರದ ಆದೇಶ ಆಗಿದೆ. ಅದನ್ನು ಪಾಲನೆ ಮಾಡಬೇಕಾಗಿದ್ದು ನನ್ನ ಕರ್ತವ್ಯ ಅದರಂತೆ ಸರ್ಕಾರದ ಆದೇಶದ ಪ್ರತಿಯನ್ನು ಗಮನಕ್ಕೆ ತಂದಿದ್ದೇನೆ. ಆದರೆ, ಅವರು ಸ್ಪಂದಿಸದೆ ಇರುವುದರಿಂದ ಕೊಠಡಿಗೆ ಸೂಚನಾ ಪತ್ರವನ್ನು ಹಾಕಲಾಗಿದೆ ಎಂದು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಈ ಬೆಳವಣಿಗೆ ನೋಡಿದರೆ, ಸಿಡಿಎ ಅಧ್ಯಕ್ಷರ ಮತ್ತು ಆಯುಕ್ತರ ನಡುವೆ ಹೊಂದಾಣಿಕೆ ಇರಲಿಲ್ಲ ಎಂಬುದು ಬಹಿರಂಗಗೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.