ಕೆ.ಎಂ. ರಸ್ತೆ ಸಂಚಾರ ಇರಲಿ ಎಚ್ಚರ!
ಕ.ಪ್ರ.ವಾರ್ತೆ ಚಿಕ್ಕಮಗಳೂರು ಮೇ 30
ವಾಹನ ಚಾಲಕರೇ ರಾತ್ರಿ ವೇಳೆ ಕೆ.ಎಂ. ರಸ್ತೆಯಲ್ಲಿ ಬರಬೇಡಿ...,
ಹಾಗಾದರೆ ಇಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆಯೇ, ಖಂಡಿತವಾಗಿಯೂ ಇಲ್ಲ. ನೀವು ಅಪ್ಪಿತಪ್ಪಿ ರಾತ್ರಿ ವೇಳೆಯಲ್ಲಿ ಈ ರಸ್ತೆಯಲ್ಲಿ ಹೋಗಬೇಡಿ, ಕಡೂರು- ಚಿಕ್ಕಮಗಳೂರು ರಸ್ತೆಯಲ್ಲಿರುವ ಲಕ್ಷ್ಮಿಪುರದ ಬಳಿ ರಸ್ತೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಸೇತುವೆ ಬಳಿ ಜವರಾಯ ಕಾದು ಕುಳಿತಿದ್ದಾನೆ. ಸ್ವಲ್ಪ ಎಚ್ಚರ ತಪ್ಪಿದರೆ ಅಪಾಯ ಖಚಿತ. ಈ ರೀತಿಯ ತೊಂದರೆ ಬಹಳಷ್ಟು ಮಂದಿ ಅನುಭವಿಸಿದ್ದಾರೆ. ಇದನ್ನು ಕೇಳುವವರಿಲ್ಲದಿದ್ದರಿಂದ ಹೇಳುವವರು ಸುಮ್ಮನಾಗಿದ್ದಾರೆ. ತೊಂದರೆಯ ನೋವನ್ನು ಸಹಿಸಿ ಮನೆಗಳಿಗೆ ತೆರಳಿದ್ದಾರೆ.
ಈ ರೀತಿಯ ಅನಾನುಕೂಲವನ್ನು ಎದುರಿಸಿದ್ದು ಸ್ಥಳೀಯರಿಗಿಂತ ಹೊರಗಿನವರೇ ಹೆಚ್ಚು. ಅದರಲ್ಲೂ ರಾತ್ರಿ ವೇಳೆಯಲ್ಲಿ ಈ ಸ್ಥಳದಲ್ಲಿ ಬಿದ್ದು, ಎದ್ದು ಹೋಗಿದ್ದಾರೆ. ಇದು, ಕೇವಲ ಒಂದೆರಡು ದಿನದ ಗೋಳಲ್ಲ, ಕಳೆದ ಒಂದು ವರ್ಷದಿಂದ ಈ ಸ್ಥಳದಲ್ಲಿ ಸಾರ್ವಜನಿಕರು ತೊಂದರೆ ಅನುಭವಿಸಿದ್ದಾರೆ. ಈಗಲೂ ಇದೇ ಪರಿಸ್ಥಿತಿ ಮುಂದುವರಿದಿದೆ.
40 ಲಕ್ಷ ರು. ಬೇಕು: ಈಗಿನ ರಸ್ತೆಗಳಿಗೆ ಡಾಂಬರ್ ಹಾಕಲಾಗುತ್ತಿದೆ. ಆದರೆ, ಕೆ.ಎಂ. ರಸ್ತೆಗೆ ಹಾಕಿದ್ದು ಸಿಮೆಂಟ್. 40 ಕಿ.ಮೀ. ಉದ್ದದ ಈ ರಸ್ತೆ ಇತ್ತೀಚಿನ ವರ್ಷಗಳಲ್ಲಿ ತುಂಬಾ ಹಾಳಾಗಿತ್ತು. ದ್ವಿಚಕ್ರ ವಾಹನಗಳು ಸೇರಿದಂತೆ ಎಲ್ಲಾ ರೀತಿಯ ವಾಹನಗಳಿಗೆ ಇಲ್ಲಿ ಸಂಚರಿಸುವುದು ಕಷ್ಟವಾಗುತ್ತಿತ್ತು. ಅದರಲ್ಲೂ ಜಿಲ್ಲೆಯ ಧಾರ್ಮಿಕ ಸ್ಥಳಗಳಿಗೆ ಉತ್ತರ ಕರ್ನಾಟಕದಿಂದ ಬರುವ ಭಕ್ತರು ಜಿಲ್ಲೆಯ ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಿದ್ದರು.
ಕೆ.ಎಂ. ರಸ್ತೆಯ ಡಾಂಬರೀಕರಣಕ್ಕೆ ಆಗ್ರಹಿಸಿ ಕಾಂಗ್ರೆಸ್ ನಿರಂತರವಾಗಿ ಪ್ರತಿಭಟನೆ ನಡೆಸಿತು. ಹಲವೆಡೆ ರಸ್ತೆ ತಡೆಯನ್ನು ನಡೆಸಿ ರಾಜ್ಯ ಸರ್ಕಾರದ ಗಮನ ಸೆಳೆಯಿತು. ಇದಕ್ಕೆ ಸಹಜವಾಗಿಯೇ ಅಂದು ಆಡಳಿತದಲ್ಲಿದ್ದ ಬಿಜೆಪಿಯವರು ಟೀಕೆ ಮಾಡಿದರು. ಇದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ನೀಡುವುದಾಗಿ ಹೇಳಿದರು.
ನಂತರದ ದಿನಗಳಲ್ಲಿ ರಾಜ್ಯ ಸರ್ಕಾರ ಕೆ.ಎಂ. ರಸ್ತೆಯ ಡಾಂಬರೀಕರಣಕ್ಕೆ 27 ಕೋಟಿ ರುಪಾಯಿ ಬಿಡುಗಡೆ ಮಾಡುವ ಮೂಲಕ ಪ್ರತಿಪಕ್ಷದವರ ಬಾಯಿ ಮುಚ್ಚಿಸಿತು. ತಕ್ಷಣವೇ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಯಿತು.
ವಿರೋಧ: ಕಾಮಗಾರಿಯ ಆರಂಭದಲ್ಲಿ ಕೆ.ಎಂ. ರಸ್ತೆಯಲ್ಲಿರುವ ಕೆಲವು ಮರಗಳನ್ನು ಬುಡ ಸಹಿತ ಕಿತ್ತು ಹಾಕಲಾಯಿತು. ಇದಕ್ಕೆ ಜೆಡಿಎಸ್ ತೀವ್ರ ವಿರೋಧ ವ್ಯಕ್ತಪಡಿಸಿತು. ಮಳೆ ನೀರು ಮರದಿಂದ ನಿರಂತರವಾಗಿ ರಸ್ತೆಯ ಮೇಲೆ ಬಿದ್ದರೆ ಆ ಸ್ಥಳದಲ್ಲಿ ರಸ್ತೆ ಹಾಳಾಗಲಿದೆ. ಅದುದರಿಂದ ಅಂತಹ ಮರಗಳನ್ನು ಕಡಿತಲೆ ಮಾಡುವಂತೆ ಲೋಕೋಪಯೋಗಿ ಇಲಾಖೆ ವರದಿ ನೀಡಿತ್ತು. ಇದೇ ಅವಕಾಶವನ್ನು ಬಳಸಿಕೊಂಡ ಕೆಲವು ಟಿಂಬರ್ ಮರ್ಚಟ್ಸ್ ಬುಡ ಸಮೇತ ಮರಗಳನ್ನು ಉರುಳಿಸಿ ತಮ್ಮ ಜೇಬುಗಳನ್ನು ತುಂಬಿಸಿಕೊಂಡರು.
ಅಗಲೀಕರಣಕ್ಕೆ ಅನುದಾನ: ವಿರೋಧದ ನಡುವೆಯೇ ರಸ್ತೆಗೆ ಡಾಂಬರೀಕರಣ ಹಾಕುವ ಕೆಲಸ ಆರಂಭಗೊಂಡಿತು. ಈ ರಸ್ತೆಗೆ ಡಾಂಬರ್ ಹಾಕಲು ಹಣ ತಂದರು. ಆದರೆ, ಇಲ್ಲಿರುವ ಸೇತುವೆಗಳ ಅಗಲೀಕರಣಕ್ಕೆ ಅನುದಾನ ತರುವ ಕೆಲಸ ಅಂದು ಜನಪ್ರತಿನಿಧಿಗಳಿಂದ ಆಗಲಿಲ್ಲ.
ಈ ರಸ್ತೆಯಲ್ಲಿರುವ ಸ್ವರಸ್ವತಿ ಪುರದ ಬಳಿ ಸೇತುವೆಯ ಬಳಿ ಆರಂಭದಲ್ಲಿ ಗುಂಡಿ ಬಿದ್ದಿತ್ತು. ಇದರಿಂದ ವಾಹನಗಳ ಚಾಲಕರಿಗೆ ತೊಂದರೆಯಾಗುವುದನ್ನು ಮನಗಂಡು ಕಡೂರು ಉಪ ವಿಭಾಗದ ಲೋಕೋಪಯೋಗಿ ಇಲಾಖೆ ಇಲ್ಲಿನ ಸೇತುವೆ ನಿರ್ಮಾಣಕ್ಕೆ 40 ಲಕ್ಷ ರುಪಾಯಿಯ ಕ್ರಿಯಾ ಯೋಜನೆಯನ್ನು ಸಿದ್ದಪಡಿಸಿ ರಾಜ್ಯ ಸರ್ಕಾರಕ್ಕೆ ಕಳುಹಿಸಿತು.
ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷೆಯಿಂದಾಗಿ ಇದಕ್ಕೆ ಸಕಾಲದಲ್ಲಿ ಅನುಮೋದನೆ ಸಿಗಲಿಲ್ಲ. ಜತೆಗೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ವಿಧಾನಸಭಾ ಚುನಾವಣೆಯ ನೀತಿ ಸಂಹಿತೆಗಳು ಇದ್ದರಿಂದ ಅನುಮೋದನೆ ಸಿಗಲು ವಿಳಂಬವಾಯಿತು. ಇದೀಗ ಟೆಂಡರ್ ಕರೆಯಲಾಗಿದೆ.
ಆದರೆ, ಇಲ್ಲಿರುವ ಸತ್ಯಾಂಶವೇ ಬೇರೆ, ಟೆಂಡರ್ ಕರೆಯದೆ ಈ ಸೇತುವೆ ನಿರ್ಮಾಣಕ್ಕೆ ಮಾನವೀಯತೆ ದೃಷ್ಟಿಯಿಂದ ಗುತ್ತಿಗೆದಾರರನ್ನು ಕರೆ ತಂದು ಸ್ಥಳೀಯ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕೆಲಸ ಮಾಡಿಸುತ್ತಿದ್ದಾರೆ. ಟೆಂಡರ್ ಇಲ್ಲದೆ ಈ ಕಾಮಗಾರಿಗೆ ಹಣ ಹಾಕಲು ಗುತ್ತಿಗೆದಾರರು ಹಿಂದೆ ಮುಂದೆ ಯೋಚನೆ ಮಾಡುತ್ತಿದ್ದಾರೆ.
ಈಗ ಕರೆದಿರುವ ಟೆಂಡರ್ ಇವರಿಗೆ ಸಿಕ್ಕರೆ ಓಕೆ, ಇಲ್ಲವಾದರೆ ಈವರೆಗೆ ಖರ್ಚಾಗಿರುವ ಹಣ ಮರೆತುಕೊಳ್ಳಬೇಕಾಗುತ್ತದೆ. ಈ ಎಲ್ಲಾ ಕಾರಣದಿಂದಾಗಿ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಒಟ್ಟಾರೆ ಹಿರಿಯ ಅಧಿಕಾರಿಗಳು ತೋರಿದ ಉದಾಸೀನತೆಯಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

