ಚಿಕ್ಕಮಗಳೂರು

ಪ್ರತಿ ಗ್ರಾಪಂನಲ್ಲಿ ಮಳೆಮಾಪನ ಕೇಂದ್ರ ಸ್ಥಾಪನೆ

Published On :

ಕ.ಪ್ರ.ವಾರ್ತೆ, ಚಿಕ್ಕಮಗಳೂರು,  ಮೇ 31
ರೈತರಿಗಾಗುವ ಬೆಳೆನಷ್ಟ ಮತ್ತಿತರೆ ವಿವರಗಳನ್ನು ನಿಖರವಾಗಿ ಪಡೆದುಕೊಳ್ಳುವ ಉದ್ದೇಶಕ್ಕಾಗಿ ಪ್ರತಿ ಗ್ರಾಪಂನಲ್ಲಿ ಮಳೆಮಾಪನ ಕೇಂದ್ರವನ್ನು ಸ್ಥಾಪಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಇನ್ನು ಎರಡು ವರ್ಷಗಳಲ್ಲಿ ಈ ಪ್ರಕ್ರಿಯೆ ಜಿಲ್ಲೆಯಲ್ಲಿ ಪೂರ್ಣಗೊಳ್ಳಲಿದೆ ಎಂದು ಜಿಪಂ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಹೇಳಿದ್ದಾರೆ.
ಜಿಲ್ಲಾ ಪತ್ರಕರ್ತರ ಸಂಘ, ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆಸಿದ ಕೃಷಿ ಇಲಾಖೆ ಚಟುವಟಿಕೆಗಳ ಕುರಿತ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿ, ಈಗ ಹೋಬಳಿ ಕೇಂದ್ರದ ಒಂದೆರಡು ಕಡೆ ಮಾತ್ರ ಮಳೆಮಾಪನ ಕೇಂದ್ರಗಳಿರುವುದರಿಂದ ಮಳೆಯ ಅಂದಾಜು ದೊರೆಯುತ್ತಿಲ್ಲ.
ಇದರಿಂದಾಗಿ ರೈತರಿಗಾಗುವ ಬೆಳೆ ನಷ್ಟದ ವಿವರ ಸಮರ್ಪಕವಾಗಿ ದೊರೆಯದ ಕಾರಣ ಬೆಳೆ ವಿಮೆಯ ಅಂದಾಜು ಮಾಡುವುದು ಕಷ್ಟಕರವಾಗಿರುವುದರಿಂದ ಪ್ರತಿ ಗ್ರಾಪಂನಲ್ಲಿ ಒಂದು ಮಳೆಮಾಪನ ಕೇಂದ್ರವನ್ನು ಸ್ಥಾಪನೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಜಿಲ್ಲೆಯಲ್ಲಿ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಇನ್ನೆರಡು ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದರು.
ಶೈತ್ಯಾಗಾರ ಸ್ಥಾಪನೆ: ಕೃಷಿ ಇಲಾಖೆಯ ಚಟುವಟಿಕೆಗಳನ್ನು ಚುರುಕುಗೊಳಿಸಲು ಬಿ ಮತ್ತು ಸಿ ದರ್ಜೆಯ ಹುದ್ದೆಗಳು ಖಾಲಿ ಇರುವುದರಿಂದ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು, ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಳೆ ನಿಗಧಿ ಪಡಿಸುವಂತೆ, ಪ್ರತಿ ತಾಲೂಕು ಕೇಂದ್ರಗಳಲ್ಲಿ ಶೈತ್ಯಾಗಾರವನ್ನು ಸ್ಥಾಪಿಸುವಂತೆ, ರೈತರಿಗೆ ವಿತರಿಸುವ ಬಿತ್ತನೆ ಬೀಜಕ್ಕೆ ಶೇ. 75 ಸಹಾಯಧನ, ರಸಗೊಬ್ಬರದ ಮೇಲಿನ ಸಹಾಯಧನವನ್ನು ಹೆಚ್ಚಳ ಮಾಡುವಂತೆ ಮತ್ತು ಪ್ರತಿ ಹೋಬಳಿ ಕೇಂದ್ರದಲ್ಲಿಯೂ ಗೋದಾಮುಗಳನ್ನು ಸ್ಥಾಪಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಹೇಳಿದರು.
ರೈತ ಸಂಪರ್ಕ ಕೇಂದ್ರ: ಮುಂಗಾರು ಬೆಳೆ ಬಿತ್ತನೆಗೆ ರೈತರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಬೇಡಿಕೆಗನುಗುಣವಾಗಿ ಹೆಚ್ಚುವರಿಯಾಗಿ ರೈತ ಸಂಪರ್ಕ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಈಗಾಗಲೇ ಕಳಸಾಪುರದಲ್ಲಿ ಹೆಚ್ಚುವರಿ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದರು.
ರಸಗೊಬ್ಬರ ಮಾರಾಟ: ರಾಕ್ ಫಾಸ್ಫರಸ್ ರಸಗೊಬ್ಬರ ಮಾರಾಟದ ಬಗ್ಗೆ ದೂರು ಬಂದಿದ್ದರಿಂದ ಅದನ್ನು ಗೋದಾಮಿನಲ್ಲಿಯೇ  ಇರಿಸಿದ್ದು, ಅದನ್ನು ಪರೀಕ್ಷೆ ನಡೆಸಲು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಹೆಚ್ಚಿನ ದರಕ್ಕೆ ರಸಗೊಬ್ಬರವನ್ನು ಮಾರಾಟ ಮಾಡುವ ಕುರಿತು ದೂರುಗಳು ಬಂದರೆ ಮಾರಾಟಗಾರರ ಮೇಲೆ ಕ್ರಮ ತೆಗೆದುಕೊಂಡು ಅಂತಹ ಅಂಗಡಿಗಳನ್ನು ಮುಚ್ಚಿಸಲಾಗುವುದು ಎಂದು ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ನಿರಂಜನ್ ತಿಳಿಸಿದರು.
ಬ7ತ್ತನೆ ಬೀಜದ ಮಾಹಿತಿ: ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ಒಟ್ಟು 1.61 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿದ್ದು, ಮುಂಗಾರು ಹಂಗಾಮಿನಲ್ಲಿ ಒಟ್ಟು 14,545 ಕ್ವಿಂಟಲ್ ವಿವಿಧ ಬಿತ್ತನೆ ಬೀಜಗಳ ಅವಶ್ಯಕತೆ ಇದೆ. ಅದಕ್ಕನುಗುಣವಾಗಿ ಒಟ್ಟು 6,500 ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದ್ದು, ಇದುವರೆಗೆ 1,727  ಕ್ವಿಂಟಲ್ ಬಿತ್ತನೆ ಬೀಜವನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗಿದೆ ಎಂದು ರೇಖಾ ಹುಲಿಯಪ್ಪಗೌಡ ತಿಳಿಸಿದರು.
ಇದಲ್ಲದೆ ರಾಜ್ಯ ಬೀಜ ನಿಗಮ ಮತ್ತು ಇತರೆ ಸರಬರಾಜು ಸಂಸ್ಥೆಗಳಲ್ಲಿ ಬಿತ್ತನೆ ಬೀಜ ದಾಸ್ತಾನಿದ್ದು, ಅವಶ್ಯಕತೆಗನುಗುಣವಾಗಿ ಪೂರೈಕೆ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು ಅಲ್ಲದೆ ಬಿತ್ತನೆ ಬೀಜಗಳಿಗೆ ಯಾವುದೇ ಕೊರತೆಗಳಿಲ್ಲ ಎಂದು ಸ್ಪಷ್ಟಪಡಿಸಿದರು. 2011-12 ನೇ ಸಾಲಿನಲ್ಲಿ ಕಡೂರು ತಾಲೂಕಿನಲ್ಲಿ 11,162 ಹೆಕ್ಟೇರ್ ಪ್ರದೇಶದಲ್ಲಿ ಅನಾವೃಷ್ಟಿಯಿಂದ ಬೆಳೆ ಹಾನಿಯಾಗಿದ್ದು, ಈ ಪೈಕಿ 13,265 ಸಣ್ಣ ಮತ್ತು ಅತಿ ಸಣ್ಣ ರೈತರಿಗೆ 122.05 ಲಕ್ಷ ರು. ಪರಿಹಾರ ನೀಡಲಾಗಿದೆ ಎಂದರು.
ಚೆಕ್ ವಿತರಣೆಗೆ ಕ್ರಮ: 2012-13 ನೇ ಸಾಲಿನಲ್ಲಿ ಅನಾವೃಷ್ಟಿಯಿಂದ ತರೀಕೆರೆ, ಕಡೂರು, ಚಿಕ್ಕಮಗಳೂರು ತಾಲೂಕುಗಳ 19,465 ಹೆಕ್ಟೇರ್ ಪ್ರದೇಶದಲ್ಲಿ  ಬೆಳೆ ಹಾನಿಗೊಳಗಾಗಿದ್ದು, 37,492 ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಗುರುತಿಸಲಾಗಿದ್ದು ಸಂಬಂಧಿಸಿದ ತಹಸೀಲ್ದಾರ್‌ಗೆ ಅವರ ಪಟ್ಟಿ ನೀಡಿದ್ದು, ಚೆಕ್ ವಿತರಣೆಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ 16,000 ಟನ್ ಡಿಎಪಿ, 29,100 ಟನ್ ಕಾಂಪ್ಲೆಕ್ಸ್, 25,090 ಟನ್ ಎಂಒಪಿ, 27,000 ಟನ್ ಯೂರಿಯಾ ಗೊಬ್ಬರದ ಬೇಡಿಕೆ ಇದ್ದು, ಬೇಡಿಕೆಗನುಗುಣವಾಗಿ ದಾಸ್ತಾನು ಮಾರ್ಕೆಟಿಂಗ್ ಫೆಡರೇಷನ್‌ನಲ್ಲಿದೆ ಎಂದರು.
ಸುವರ್ಣ ಭೂಮಿ ಯೋಜನೆಯಡಿ 2011-12ನೇ ಸಾಲಿನಲ್ಲಿ 11,620 ಫಲಾನುಭವಿಗಳಿಗೆ 909,54 ಲಕ್ಷ ರು. ವಿತರಿಸಲಾಗಿದ್ದು, 2012-13ನೇ ಸಾಲಿನಲ್ಲಿ 7,144 ಫಲಾನುಭವಿಗಳಿಗೆ 526,11 ಲಕ್ಷ ರು. ವಿತರಿಸಲಾಗಿದ್ದು, ಈ ವರ್ಷವೂ ಈ ಯೋಜನೆಯನ್ನು ಮುಂದವರಿಸಲು ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಅವರು ಹೇಳಿದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಂ. ರಾಜಶೇಖರ್, ಜಿಪಂ ಸಿಇಒ ಶಿವಶಂಕರ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರಾಜು, ಕೃಷಿ ಅಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.