ಚಿಕ್ಕಮಗಳೂರು

ನಗರೋತ್ಥಾನ ಕಾಮಗಾರಿಗೆ ಸಿಕ್ಕಿತು ಕಾರ್ಯಾದೇಶ

Published On :

ಕ.ಪ್ರ.ವಾರ್ತೆ ಟಿ ಚಿಕ್ಕಮಗಳೂರು ಟಿ  ನ.11
ನಗರೋತ್ಥಾನ ಯೋಜನೆ ಕಾಮಗಾರಿಗೆ ಹಿಡಿದಿದ್ದ ರಾಜಕೀಯ ಗ್ರಹಣ ಅಂತೂ ಇಂತೂ ಕೈಬಿಟ್ಟಿದ್ದು, ಈ ವಾರದಲ್ಲಿ ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ.
ಈ ಕಾಮಗಾರಿಯನ್ನು ಬರುವ ಮಳೆಗಾಲದೊಳಗೆ ಪೂರ್ಣಗೊಳಿಸಬೇಕೆಂದು ಜಿಲ್ಲಾಧಿಕಾರಿಗಳು ಕಾರ್ಯಾದೇಶ ನೀಡುವ ಸಂದರ್ಭದಲ್ಲಿ ಗುತ್ತಿಗೆದಾರರಿಗೆ ತಿಳಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಅಂದರೆ 2012-13ನೇ ಸಾಲಿನಲ್ಲಿ ನಗರ ಮತ್ತು ಪಟ್ಟಣ ಪ್ರದೇಶಗಳ ರಸ್ತೆಗಳ ಅಭಿವೃದ್ಧಿಗೆ ನಗರೋತ್ಥಾನ ಯೋಜನೆಯಡಿ ಹಣ ಬಿಡುಗಡೆ ಮಾಡಲಾಗಿತ್ತು. ಅದರಂತೆ ಚಿಕ್ಕಮಗಳೂರು ನಗರಕ್ಕೆ 30 ಕೋಟಿ, ಇನ್ನುಳಿದಂತೆ ನಗರದ ಪುರಸಭೆ, ಪಟ್ಟಣ ಪಂಚಾಯ್ತಿಗಳಿಗೆ ತಲಾ 5 ಕೋಟಿ ಬಿಡುಗಡೆಯಾಗಿದ್ದು, ಈ ಕಾಮಗಾರಿಯ ಟೆಂಡರ್ ಪ್ರಕ್ರಿಯೆಯೂ ಸಹ ಪೂರ್ಣಗೊಂಡಿತ್ತು.
ಆರೋಪ, ಪ್ರತ್ಯಾರೋಪ: ಆದರೆ, ಕಾಮಗಾರಿ ಆರಂಭದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ, ಆ ನಂತರದಲ್ಲಿ ವಿಧಾನಸಭಾ ಚುನಾವಣೆ ನಡೆದು ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ನಗರೋತ್ಥಾನ ಕಾಮಗಾರಿಗೆ ಕಾರ್ಯಾದೇಶವನ್ನು ನೀಡುವುದನ್ನು ತಡೆ ಹಿಡಿಯಲಾಯಿತು. ಸರ್ಕಾರ ಬದಲಾಗುತ್ತಿದ್ದಂತೆ ಈ ಯೋಜನೆಯ ಮೇಲೆ ರಾಜಕೀಯದ ಕರಿ ನೆರಳು ಆವರಿಸಿಕೊಂಡಿತು. ನೂತನ ಸರ್ಕಾರ ಉದ್ದೇಶ ಪೂರ್ವಕವಾಗಿ ಈ ಯೋಜನೆಗೆ ತಡೆ ಹಾಕಿದೆ ಎಂದು ಬಿಜೆಪಿ ಆರೋಪಿಸಿ, ಈ ಸಂಬಂಧ ಪ್ರತಿಭಟನೆಯನ್ನು ಸಹ ನಡೆಸಿತ್ತು.
ಆಡಳಿತಾರೂಢ  ಕಾಂಗ್ರೆಸ್ ಪಕ್ಷ ಈ ಆರೋಪವನ್ನು ತಳ್ಳಿ ಹಾಕಿತ್ತು. ಇದು, ಕೇವಲ ಚಿಕ್ಕಮಗಳೂರಿಗೆ ಮಾತ್ರವಲ್ಲ, ಇಡೀ ರಾಜ್ಯದಲ್ಲಿ ಈ ಯೋಜನೆಯನ್ನು ತಡೆ ಹಿಡಿಯಲಾಗಿದೆ ಎಂಬ ಸಮಾಜಾಯಿಸಿ ನೀಡಿತ್ತು. ಹೀಗೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವಿನ ಗುದ್ದಾಟದಲ್ಲಿ ಸಾರ್ವಜನಿಕರು ಬಲಿಪಶು ಆಗಿದ್ದರು. ನಗರೋತ್ಥಾನ ಕಾಮಗಾರಿಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅ.7 ರಂದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆದಿತ್ತು. ಆದರೂ, ಕಾಮಗಾರಿ ಆರಂಭಗೊಂಡಿರಲಿಲ್ಲ.
ಜನರಿಗೆ ಕಿರಿ ಕಿರಿ: ನಗರದ ಎಲ್ಲಾ 35 ವಾರ್ಡ್ಗಳಲ್ಲಿ ಈ ಹಿಂದೆ ಒಳಚರಂಡಿ ವ್ಯವಸ್ಥೆ ಇರಲಿಲ್ಲ. ಇದನ್ನು ಮನಗಂಡ ಹಿಂದಿನ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಿತ್ತು. ಕಾಮಗಾರಿಯೂ ಸಹ ಆರಂಭಗೊಂಡು, ಮ್ಯಾನ್ ಹೋಲ್, ರಿಸಿವಿಂಗ್ ಚೇಂಬರ್ ಕೆಲಸ ಶೇ.85 ರಷ್ಟು ಪೂರ್ಣಗೊಂಡಿದೆ.
ಈ ವರ್ಷದಲ್ಲಿ  ಸತತವಾಗಿ ಸುರಿದ ಭಾರಿ ಮಳೆಯಿಂದಾಗಿ ಒಳ ಚರಂಡಿ ಕಾಮಗಾರಿ ನಡೆದ ಪ್ರದೇಶದಲ್ಲಿ ಸಾರ್ವಜನಿಕರು ಎರಡು ತಿಂಗಳ ಕಾಲ ಕೆಸರಿನಲ್ಲಿ ಓಡಾಡಿದರು. ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಸಂತಸದಲ್ಲಿದ್ದ ಜನರು ಕೆಸರುಮಯವಾದ ರಸ್ತೆಗಳನ್ನು ನೋಡಿ ಗುತ್ತಿಗೆದಾರರಿಗೆ ಹಿಡಿ ಶಾಪ ಹಾಕಿದರು. ಮಳೆ ಕಡಿಮೆಯಾಗುತ್ತಿದ್ದಂತೆ ರಸ್ತೆಗಳಿಗೆ ಯಾವಾಗ ಡಾಂಬರ್ ಹಾಕುತ್ತಾರೆಂದು ಕೇಳಲು ಆರಂಭಿಸಿದರು. ಕಾಮಗಾರಿ ಆರಂಭಿಸಲು ಕಾಂಗ್ರೆಸ್ ಅಡ್ಡಗಾಲು ಹಾಕಿದೆ ಎಂಬ ಕಾರಣವನ್ನು ಬಿಜೆಪಿಯವರು ನೀಡುತ್ತಾ ಬಂದರು.
ಕಳೆದ 9 ತಿಂಗಳಿಂದ ನಡೆಯುತ್ತಿದ್ದ ರಾಜಕೀಯ ಪಕ್ಷಗಳ ಆರೋಪ, ಪ್ರತ್ಯಾರೋಪಗಳಿಗೆ ನಗರೋತ್ಥಾನದ ಕಾಮಗಾರಿಗೆ ಕಾರ್ಯಾದೇಶ ನೀಡಿರುವುದು ಇತಿಶ್ರೀ ಬೀಳಲಿದೆ. ಚಿಕ್ಕಮಗಳೂರು ನಗರದೊಳಗೆ ಸುಮಾರು 165 ಕಿ.ಮೀ. ರಸ್ತೆಗಳು ಡಾಂಬರೀಕರಣಗೊಳ್ಳಲಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.