ಚಿಕ್ಕಮಗಳೂರು

ಆರ್ಥಿಕ ದಿವಾಳಿಯತ್ತ ಕೇಂದ್ರ ಸರ್ಕಾರ

Published On :

ಬಾಳೆಹೊನ್ನೂರು: ಪ್ರಸ್ತುತ ರಾಜ್ಯ ಸರ್ಕಾರ ಕೈಗೊಳ್ಳುತ್ತಿರುವ ಯೋಜನೆಗಳಿಗೆ ಯಾವುದೇ ಪೂರ್ವಭಾವಿ ಸಿದ್ಧತೆಗಳಿಲ್ಲದೆ ಯೋಜನೆಗಳು ಯಶಸ್ವಿಯಾಗಲು ವಿಫಲವಾಗುತ್ತಿದ್ದು, ಕೈಗೊಂಡ ಯೋಜನೆಗಳಿಗೆ ಹಣ ಹೊಂದಿಸಲಾಗದೇ ಸರ್ಕಾರ ಆರ್ಥಿಕ ದಿವಾಳಿತನದತ್ತ ಸಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಹೇಳಿದ್ದಾರೆ.
ಇಲ್ಲಿನ ನಾರಾಯಣಗುರು ಸಮುದಾಯ ಭವನದಲ್ಲಿ ಸೋಮವಾರ ನರಸಿಂಹರಾಜಪುರ ತಾಲೂಕು ಬಿಜೆಪಿ ಘಟಕ ಆಯೋಜಿಸಿದ್ದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಒಡೆದ ಮನೆ: ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ವಿಫಲವಾಗಿದ್ದು, ಕಾಂಗ್ರೆಸ್ನ ಆಂತರಿಕ ವಿದ್ಯಮಾನಗಳಿಂದ ರಾಜ್ಯದಲ್ಲಿ ಉತ್ತಮ ಆಡಳಿತ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಫಲರಾಗಿದ್ದಾರೆ. ಮುಖ್ಯಮಂತ್ರಿಗಳು ಏಕಾಂಗಿ ನಿರ್ಣಯ ಕೈಗೊಂಡು ಪಕ್ಷದಲ್ಲಿ ಭಿನ್ನಮತ ಭುಗಿಲೆದ್ದು ಕಾಂಗ್ರೆಸ್ ಒಡೆದ ಮನೆಯಾಗಿದೆ. ಯೋಜನಾಪೂರ್ವ ಚರ್ಚಿಸದೇ ಅನ್ನಭಾಗ್ಯ ಯೋಜನೆಯ ನಿರ್ಣಯ ಕೈಗೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.
ಮತ ಬ್ಯಾಂಕ್ ಉದ್ದೇಶದಿಂದ ರಾಜ್ಯದಲ್ಲಿ ಶಾದಿ ಭಾಗ್ಯ ಯೋಜನೆ ಜಾರಿಗೆ ತಂದು ನಾಗರಿಕ ಸಮಾಜದ ವಿಭಜನೆಗೆ ಮುಂದಾಗಿದ್ದಾರೆ. ನಂಬಿಕೆ ಸಂಸ್ಕೃತಿ ಆಧಾರದ ಮೇಲೆ ನಡೆಯುತ್ತಿರುವ ಹಿಂದೂ ಸಮಾಜವನ್ನು ಮೂಢನಂಬಿಕೆ ನಿಷೇಧ ಜಾರಿಗೆ ತರುವ ಮೂಲಕ ಹತ್ತಿಕ್ಕುವ ಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಭಯೋತ್ಪಾದನೆ ತಡೆಗಟ್ಟಿ: ಕೇಂದ್ರದ ಯುಪಿಎ ಸರ್ಕಾರ ಕೋಟ್ಯಂತರ ರು. ಹಗರಣಗಳಲ್ಲಿ ಸಿಲುಕಿಕೊಂಡಿದ್ದು, ಭಯೋತ್ಪಾದನೆ ತಡೆಗಟ್ಟಲು ವಿಫಲವಾಗಿದೆ. ಗಡಿಯಲ್ಲಿ ಯೋಧರ ಹತ್ಯೆ ನಡೆಯುತ್ತಿದ್ದರೂ ಸಹ ಸೈನಿಕರಿಗೆ ಆತ್ಮಸ್ಥೈರ್ಯ ತುಂಬುವ ಬದಲು ಅವರನ್ನು ಕುಗ್ಗಿಸುವ ಯತ್ನ ನಡೆಯುತ್ತಿದೆ ಎಂದು ಹೇಳಿದರು.
ಬೆಲೆ ಏರಿಕೆ ತಡೆಗಟ್ಟಲು ಕೇಂದ್ರ ಸರ್ಕಾರ ವಿಫಲವಾಗಿದ್ದು, ಜಾಗತಿಕ ಮಟ್ಟದಲ್ಲಿ ರುಪಾಯಿ ಅಪಮೌಲ್ಯದ ಬಗ್ಗೆ ಕ್ರಮಕೈಗೊಳ್ಳುತ್ತಿಲ್ಲ. ಇದರಿಂದ ದೇಶದ ಘನತೆ, ಗೌರವ ಕುಸಿತವಾಗುತ್ತಿದೆ. ಆದರೂ ಯಾವುದೇ ಕ್ರಮಕೈಗೊಳ್ಳದ ಯುಪಿಎ ಸರ್ಕಾರವನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತೊಲಗಿಸಬೇಕು ಎಂದು ಕರೆ ನೀಡಿದರು.
ಸಮರ್ಥ ಪ್ರಧಾನಿ ಆರಿಸಿ: ದೇಶಕ್ಕೆ ರಿಮೋಟ್ ಕಂಟ್ರೋಲ್ ಪ್ರಧಾನಿ ಬೇಡ ಎಂದ ಅವರು, ಎಲ್ಲಾ ವಿದ್ಯಾಮಾನಗಳನ್ನು ನಿಭಾಯಿಸಬಲ್ಲ ಸಮರ್ಥ ನಾಯಕನ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಚುನಾವಣೆ ಭಾರತ ಗೆಲ್ಲಿಸಿ ಎಂಬ ಧ್ಯೇಯದೊಂದಿಗೆ ನಡೆಯಲಿದೆ ಎಂದರು.
ನ.ರಾ.ಪುರ ತಾಲೂಕು ಬಿಜೆಪಿ ಅಧ್ಯಕ್ಷ ಭಾಸ್ಕರ್ ವೆನಿಲ್ಲಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಉಪಾಧ್ಯಕ್ಷೆ ಸುಜಾತ, ಮಾಜಿ ಅಧ್ಯಕ್ಷ ಪಿ.ಜೆ. ಆಂಟನಿ, ರೈತಮೋರ್ಚಾ ಅಧ್ಯಕ್ಷ ಕೆ.ಟಿ. ವೆಂಕಟೇಶ್, ಹೋಬಳಿ ಅಧ್ಯಕ್ಷ ಕೆ.ಕೆ. ವೆಂಕಟೇಶ್, ಹುಯಿಗೆರೆ ವಾಸು, ಮುಖಂಡರಾದ ಸಂಪತ್ ಕುಮಾರ್, ವಿ. ನೀಲೇಶ್, ಗಣೇಶರಾವ್, ಜಗದೀಶ್ಚಂದ್ರ, ಇಬ್ರಾಹಿಂ ಶಾಫಿ ಉಪಸ್ಥಿತರಿದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.