ಚಿಕ್ಕಮಗಳೂರು

ಕೃಷಿ ಮೇಳಕ್ಕೆ ಆರಂಭದಲ್ಲೇ ವಿಘ್ನ

Published On :

ಕ.ಪ್ರ.ವಾರ್ತೆ  ಹಿರಿಯೂರು   ನ.16
ರೈತ ಸಂಘದ ಕಾರ್ಯಕರ್ತರು ಮತ್ತು ತೆಂಗು ಬೆಳೆಗಾರ ರೈತರ ಪ್ರತಿರೋಧ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರ ಗೈರು ಹಾಜರಿ ನಡುವೆಯೇ ತಾಲೂಕಿನ ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಮೇಳ ಕಾರ್ಯಕ್ರಮಗಳು ನೀರಸವಾಗಿ ಜರುಗಿದವು.
ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ, ತೋಟಗಾರಿಕಾ ಮಹಾವಿದ್ಯಾಲಯ ಹಾಗೂ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಕೃಷಿ ಮೇಳಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿ ಗೊಂದಲದ ಗೂಡಾಗಿ ಹೋಯಿತು.
ಆರಂಭದಲ್ಲೇ ವಿಘ್ನ: ನೀರಿಕ್ಷಿತ ಅತಿಥಿಗಳಾದ ಜಿಲ್ಲಾ ಉಸ್ತುವಾರಿ ಸಚಿವರು, ಆರು ತಾಲೂಕುಗಳ ಶಾಸಕರು, ಸ್ಥಳೀಯ ಜನಪ್ರತಿನಿಧಿಗಳ ಗೈರು ಹಾಜರಿ ಸಮಾರಂಭ ಪೇಲವಗೊಳ್ಳಲು ಕಾರಣವಾದರೆ, ಅಧಿಕಾರಿಗಳೇ ಉದ್ಘಾಟಿಸಿ ಶುರು ಮಾಡಿದ ಕಾರ್ಯಕ್ರಮದ ಆರಂಭದಲ್ಲೇ ವೇದಿಕೆ ಮೇಲೆ ರೈತ ಮುಖಂಡರು ನಡೆಸಿದ ಪ್ರತಿಭಟನೆ ವಿವಿಧ ತಾಲೂಕುಗಳಿಂದ ಬಂದಿದ್ದ ರೈತರು, ಸ್ವ-ಸಹಾಯ ಸಂಘಗಳ ಮಹಿಳೆಯರನ್ನು ವಿಚಲಿತಗೊಳಿಸಿತು.
ವೇದಿಕೆಯ ಮೇಲೆ ನಿಂತು ಮಾತನಾಡಿದ ರಾಜ್ಯ ರೈತ ಸಂಘದ ಹಿರಿಯ ಉಪಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ ತೆಂಗು ಬೆಳೆಗಾರರನ್ನು ವಂಚಿಸಿ ಸಚಿವ ಟಿ.ಬಿ. ಜಯಚಂದ್ರ ನೇತೃತ್ವದ ಸಂಪುಟ ಉಪಸಮಿತಿ ಮಾಡಿರುವ ಪರಿಹಾರದ ಶಿಫಾರಸ್ಸುಗಳ ವಿರುದ್ಧ ಖಂಡನೆ ವ್ಯಕ್ತಪಡಿಸಿದರು.
ಯಾವ ಮಾನದಂಡ: ರಾಜ್ಯದಲ್ಲಿಯೇ ಎರಡನೇ ಅತಿ ಹೆಚ್ಚು ತೆಂಗು ಬೆಳೆಗಾರರು ಇರುವ ಚಿತ್ರದುರ್ಗ ಜಿಲ್ಲೆಯನ್ನು ಯಾವ ಮಾನದಂಡದ ಆಧಾರದಲ್ಲಿ ಪರಿಹಾರ ಯೋಜನೆಯಿಂದ ಹೊರಗಿಡಲಾಯಿತು ಎಂದು ಪ್ರಶ್ನಿಸಿದರು.
ನುಸಿ ಪೀಡೆ, ಬೆಂಕಿ ರೋಗಕ್ಕೆ ತುತ್ತಾಗಿ ಅತಿಹೆಚ್ಚು ಹಾನಿ ಅನುಭವಿಸಿರುವ ಪ್ರದೇಶವೂ ಚಿತ್ರದುರ್ಗ ಜಿಲ್ಲೆಯೇ ಆಗಿದ್ದರೂ, ಬಯಲು ಸೀಮೆಯ ಈ ಜಿಲ್ಲೆಯ ರೈತರನ್ನು ಕಡೆಗಣಿಸಿ ಕೇವಲ ಮಂಡ್ಯ ,ಹಾಸನ, ಚಾಮರಾಜನಗರ, ತುಮಕೂರು, ರಾಮನಗರದಂತಹ ರಾಜಕೀಯ ಲಾಬಿ, ಪ್ರಭಾವಗಳಿರುವ ಜಿಲ್ಲೆಗಳಿಗೆ ಮಣೆಹಾಕಿ ಬಡರೈತರೇ ತುಂಬಿ ಹೋಗಿರುವ ಚಿತ್ರದುರ್ಗಕ್ಕೆ ಅನ್ಯಾಯವೆಸಗಲಾಗಿದೆ ಎಂದು ಆರೋಪಿಸಿದರು.
ಕೂಡಲೇ ಶಿಫಾರಸುಗಳನ್ನು ಹಿಂಪಡೆದು, ಮರುಸಮೀಕ್ಷೆ ನಡೆಸಿ ವರದಿ ಪರಿಷ್ಕರಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ವಸ್ತು ಪ್ರದರ್ಶನ: ಇವತ್ತಿನ ಕೃಷಿ ಮೇಳ ಕೇವಲ ಅಧಿಕಾರಿಗಳು, ವರ್ತಕರು ರೂಪಿಸಿರುವ ವಸ್ತುಪ್ರದರ್ಶನದಂತಿದ್ದು, ಇದರಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ. ಬದಲಾಗಿ  ರೈತರ ಸಮಸ್ಯೆಗಳನ್ನು  ನಿವಾರಿಸುವ ಸಲುವಾಗಿ ಮೇಳಗಳನ್ನು ಆಯೋಜಿಸುವ ಚಿಂತನೆ ನಡೆಸಬೇಕೆಂದರು.
ಈ ಹಿನ್ನೆಲೆಯಲ್ಲಿ ಈ ಕೃಷಿ ಮೇಳವನ್ನು ತಾಲೂಕಿನ ರೈತರು, ರೈತ ಸಂಘಟನೆಗಳು ಸಂಪೂರ್ಣವಾಗಿ ಬಹಿಷ್ಕರಿಸಿದೆಯೆಂದು ತಿಳಿಸಿದರು. ಸಮಾರಂಭಕ್ಕೆ ಸಚಿವರು, ಶಾಸಕರು ಬರುತ್ತಾರೆ, ಅವರು ಬಂದಾಗ ನಮ್ಮ ನಿಲುವನ್ನು ತಿಳಿಸುವ ಉದ್ದೇಶದಿಂದ ಕೆಲವು ರೈತಮುಖಂಡರುಗಳು ಕಾರ್ಯಕರ್ತರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆಯೇ ಹೊರತು ನಮಗೂ ಈ ಮೇಳಕ್ಕೂ ಯಾವುದೇ ಸಂಬಂಧವಿಲ್ಲವೆಂದು ಸ್ಪಷ್ಟಪಡಿಸಿದರು.
ಹಾಗೆಯೇ ಸಮಾರಂಭಕ್ಕೆ ಬಂದು ರೈತ ಸಮಸ್ಯೆಗಳನ್ನು ಕೇಳದೆ ಗೈರು ಹಾಜರಾಗಿರುವ ಜನಪ್ರತಿನಿಧಿಗಳ ವಿರುದ್ದವೂ ಕಿಡಿಕಾರಿದರು. ರೈತ ಸಂಘದ ಜಿಲ್ಲಾಧ್ಯಕ್ಷ ನುಲೇನೂರು ಶಂಕರಪ್ಪ, ಮುಖಂಡ ಮಹದೇವಪ್ಪ, ಬಾಬು, ತಾಲೂಕು ರೈತ ಸಂಘದ ಅಧ್ಯಕ್ಷ ಎ. ಕೃಷ್ಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಕೆ.ಸಿ. ಹೊರಕೇರಪ್ಪ, ಕಾರ್ಯಾಧ್ಯಕ್ಷ ತುಳಸೀದಾಸ್, ಉಪಾಧ್ಯಕ್ಷ ಸಿದ್ದರಾಮಣ್ಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.