ಚಿಕ್ಕಮಗಳೂರು

ಮರ ಕಳ್ಳ ಸಾಗಾಣಿಕೆ: ತನಿಖೆಗೆ ಆಗ್ರಹ

Published On :

ಚಿಕ್ಕಮಗಳೂರು: ಜಿಲ್ಲೆಯ ಎನ್.ಆರ್. ಪುರ ತಾಲೂಕಿನ ಮೇಗರಮಕ್ಕಿ ಗ್ರಾಮದಲ್ಲಿ ಅಕ್ರಮವಾಗಿ ಮರಗಳ ಕಳ್ಳ ಸಾಗಾಣಿಕೆಯಾಗುತ್ತಿದ್ದು, ಈ ಕುರಿತು ತನಿಖೆ ನಡೆಸುವಂತೆ ಸಮಾಜ ಪರಿವರ್ತನಾ ಸಮುದಾಯದ ಮುಖಂಡ ಎಸ್.ಆರ್. ಹಿರೇಮಠ್ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಮೇಗರಮಕ್ಕಿಯ ಸಂತೋಷ್‌ಶೆಟ್ಟಿ ಎಂಬುವವರು ಅಕ್ರಮವಾಗಿ ಸಾಗುವನಿ ಮರ ಹಾಗೂ ಬೀಟೆ ಮರಗಳನ್ನು ಸಾಗಾಣಿಕೆ ಮಾಡುತ್ತಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಅರಣ್ಯಾಧಿಕಾರಿಗಳಿಗೆ ಗ್ರಾಮಸ್ಥರು ದೂರನ್ನು ಸಹ ನೀಡಿದ್ದಾರೆ. ಈ ಸಂಬಂಧ ಹೆಚ್ಚುವರಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಅರಣ್ಯ ಇಲಾಖೆಯ ವಿಜಿಲೆನ್ಸ್‌ನ ಹಿರಿಯ ಅಧಿಕಾರಿಗಳನ್ನು ಖುದ್ದಾಗಿ ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಶನಿವಾರ ತಿಳಿಸಿದರು.
ತನಿಖೆಗೆ ಆಗ್ರಹ: ಸಂತೋಷ್ ಶೆಟ್ಟಿ ಎಂಬುವವರು ಪ್ರಭಾವಿ ರಾಜಕೀಯ ವ್ಯಕ್ತಿಗಳ ಕುಮ್ಮಕ್ಕಿನಿಂದ ಲಕ್ಷಾಂತರ ರುಪಾಯಿ ಮೌಲ್ಯದ ಮರಗಳನ್ನು ಕಳ್ಳ ಸಾಗಾಣಿಕೆ ಮಾಡಿದ್ದಾರೆ. ಈ ಮರಗಳು ರಾಜಕೀಯ ವ್ಯಕ್ತಿಗಳ ಮನೆಗಳಿಗೆ ಸರಬರಾಜು ಆಗಿದೆ ಎಂಬ ಗುಮಾನಿ ಇದ್ದು, ಈ ಕುರಿತು ತನಿಖೆ ನಡೆಸಬೇಕು. ಸತ್ಯಾಸತ್ಯತೆ ಹೊರ ಬರಬೇಕು ಎಂದು ಆಗ್ರಹಿಸಿದರು.
ಸಂತೋಷ್ ಶೆಟ್ಟಿ ಅಕ್ರಮವಾಗಿ ಮರ ಸಾಗಾಣಿಕೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಪ್ರಕರಣದಲ್ಲಿ ಅರಣ್ಯ ಇಲಾಖೆ ಬಿ ರಿಪೋರ್ಟ್ ಸಲ್ಲಿಸಲಾಗಿದೆ. ಈ ವರದಿಯಲ್ಲಿ ಒಂದೆಡೆ ಸಂತೋಷ್‌ಶೆಟ್ಟಿ ತಲೆ ಮರಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಮತ್ತೊಂದೆಡೆ ಆತನನ್ನು ವಿಚಾರಣೆಗೆ ಒಳಪಡಿಸಿ ಬಿಡುಗಡೆ ಮಾಡಲಾಗಿದೆ ಎಂದು ದ್ವಂದ್ವವಾಗಿ ನಿಲುವು ವ್ಯಕ್ತಪಡಿಸಿದ್ದಾರೆ. ಅದುದರಿಂದ ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ತರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಎನ್.ಆರ್. ಪುರ ತಾಲೂಕಿನ ದ್ವಾರಮಕ್ಕಿ ಸಮೀಪದ ಬಡಗಬೈಲು ಎಂಬಲ್ಲಿ ಭಗವಾನ್ ಎಂಬ ಪ್ರಭಾವಿ ವ್ಯಕ್ತಿ ಕಳೆದ 10 ದಿನಗಳ ಹಿಂದೆ ಮಲ್ಲಂದೂರು ಮೀಸಲು ಅರಣ್ಯ ವ್ಯಾಪ್ತಿಯಲ್ಲಿನ ಸರ್ವೆ ನಂಬರ್ 117- 122ರಲ್ಲಿ ಅಕ್ರಮವಾಗಿ ಮರ ಕಡಿತಲೆ ಮಾಡಿದ್ದಾರೆ. ಈ ಪ್ರದೇಶಕ್ಕೆ ಶುಕ್ರವಾರ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದ್ದು, ಈ ಸಂಬಂಧದಲ್ಲಿ ಕೊಪ್ಪ ವಲಯದ ಅರಣ್ಯ ಸಂರಕ್ಷಣಾಧಿಕಾರಿ ಶಂಕರ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು ಎಂದು ಹೇಳಿದರು.
ಅಕ್ರಮ ಕಡಿತಲೆ: ಎನ್.ಆರ್. ಪುರ ತಾಲೂಕಿನ ಮತ್ತೊಂದು ಪ್ರಕರಣದಲ್ಲಿ ಶ್ರೀಮತಿ ರುಕ್ಮಿಣಿಯಮ್ಮ ಮತ್ತು ಮನು ಎಂಬುವವರ ವಿರುದ್ಧ ಚಾರ್ಜ್‌ಸೀಟ್ ಸಹ ದಾಖಲಾಗಿದೆ. ಇವರು 11 ಎಕರೆ, 5 ಗುಂಟೆ ಕಿರು ಅರಣ್ಯವನ್ನು ಅನಧಿಕೃತವಾಗಿ ಒತ್ತುವರಿ ಮಾಡಿದ್ದಾರೆ. ಅಲ್ಲಿನ ಮರಗಳನ್ನು ಅಕ್ರಮವಾಗಿ ಕಡಿತಲೆ ಮಾಡಿ ಅವುಗಳನ್ನು ಭದ್ರಾ ಹಿನ್ನೀರಿನಲ್ಲಿ ಮುಳುಗಿಸಿ ಸಾಕ್ಷ್ಯವನ್ನು ನಾಶಪಡಿಸಿದ್ದಾರೆ. ಈ ಬಗ್ಗೆ ಚಾರ್ಜ್‌ಸೀಟ್‌ನಲ್ಲಿ ಅರಣ್ಯ ಇಲಾಖೆ ಮಾಹಿತಿ ನೀಡಿದೆ ಎಂದು ತಿಳಿಸಿದರು.
ಮಲೆನಾಡಿನಲ್ಲಿ ಅರಣ್ಯ ಭೂಮಿ ಒತ್ತುವರಿ ಮಾಡಿ ಅಕ್ರಮವಾಗಿ ಮರಗಳನ್ನು ಕಡಿತಲೆ ಮಾಡುತ್ತಿರುವ ಬಗ್ಗೆ ಸ್ಥಳೀಯ ಗ್ರಾಮಸ್ಥರು  ಗಮನಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಈ ರೀತಿಯ ದೂರುಗಳು ಬಂದರೆ ಅರಣ್ಯ ಇಲಾಖೆಯವರು ಸ್ಪಂದಿಸಿ ವಾಸ್ತವಿಕತೆಯನ್ನು ಹೊರಗೆಳೆದು ತಪ್ಪಿತಸ್ತರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಾಜ ಪರಿವರ್ತನಾ ಸಮುದಾಯದ ಕಾರ್ಯಕರ್ತ ಐ.ಜಿ. ಪುರ್ಲೆ ಹಾಗೂ ಸಿ. ಯತಿರಾಜ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.