ಪರಿಶಿಷ್ಟರಿಗೆ ರುದ್ರಭೂಮಿ ನೀಡಿ
ಕ.ಪ್ರ.ವಾರ್ತೆ ಕಡೂರು ನ.19
ಪ.ಜಾ. ಮತ್ತು ಪ.ಪ. ಅಭಿವೃದ್ಧಿಗೆ ರು. 1.15 ಕೋಟಿ ಬಿಡುಗಡೆ, ಪ.ಜಾತಿ ಮತ್ತು ಪಂಗಡದವರ ಸವಲತ್ತುಗಳು ಮೇಲ್ವರ್ಗದವರ ಪಾಲಾಗುತ್ತಿದ್ದು, ಸುಳ್ಳು ಜಾತಿಪತ್ರದ ಮೂಲಕ ಪರಿಶಿಷ್ಟರಿಗೆ ಅನ್ಯಾಯವಾಗುತ್ತಿದೆ. ಪರಿಶಿಷ್ಟರಿಗೆ ರುದ್ರಭೂಮಿ ಇಲ್ಲ.., ಪರಿಶಿಷ್ಟರ ಹೆಸರಲ್ಲಿ ಪಡೆದಿರುವ ಸವಲತ್ತಿನ ಕುರಿತು ತನಿಖೆ ನಡೆಸಬೇಕು ಇತ್ಯಾದಿ.. ಇತ್ಯಾದಿ...
ಕಡೂರು ತಾಲೂಕು ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಶಾಸಕ ವೈ.ಎಸ್.ವಿ. ದತ್ತ ಸಮ್ಮುಖದಲ್ಲಿ ಹಾಗೂ ತಹಸೀಲ್ದಾರ್ ತಿಮ್ಮಭೋವಿಯವರ ಅಧ್ಯಕ್ಷತೆಯಲ್ಲಿ ಜರುಗಿದ ಪ.ಜಾ. ಮತ್ತು ಪ.ಪ.ದವರ ಯೋಗ ಕ್ಷೇಮ ಸಮಿತಿ ಮತು ತಾಲೂಕು ಮಟ್ಟದ ತ್ರೈಮಾಸಿಕ ಸಭೆಯಲ್ಲಿ ಕೇಳಿ ಬಂದ ಆರೋಪ ಮತ್ತು ಮಾತುಗಳು.
ಸ್ಥಳಕೊಟ್ಟರೆ ನಿರ್ಮಾಣ: ರಾಷ್ಟ್ರದ ಸಂವಿಧಾನ ಶಿಲ್ಪಿ ಡಾ ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ತಾಪಂ ಮುಸಾಫಿರ್ ಖಾನೆ ಸ್ಥಳ ಬಿಟ್ಟು ಕೊಟ್ಟರೆ ಭವನ ನಿರ್ಮಾಣ ಮಾಡಬಹುದು. ಆದರೆ ಇದುವರೆಗೂ ಸಮಾಜ ಕಲ್ಯಾಣ ಇಲಾಖೆ ನಿರ್ಲಕ್ಷ್ಯ ವಹಿಸುತ್ತಾ ಬಂದಿದೆ ಎಂದು ಹಾಜರಿದ್ದ ಸುರೇಶ್ ಆರೋಪಿಸಿದರು.
ಆಗ ತಹಸೀಲ್ದಾರ್ ಜಾಗದ ಅನುಮೋದನೆಗಾಗಿ ಜಿಪಂಗೆ ಕಳುಹಿಸಲಾಗಿದೆ ಎಂದರು.
ದಸಂಸ ಮುಖಂಡ ಶೂದ್ರ ಶ್ರೀನಿವಾಸ್ ಮಾತನಾಡಿ, ಕಡೂರು ತಾಲೂಕಿನ ಚಿಕ್ಕಂಗಳ, ತಂಗಲಿ, ಹರುವನಹಳ್ಳಿ, ವೈ. ಮಲ್ಲಾಪುರ ಮಲ್ಲೇಶ್ವರ ಸೇರಿದಂತೆ ಎಲ್ಲಿಯೂ ಪರಿಶಿಷ್ಟರಿಗೆ ರುದ್ರ ಭೂಮಿ ಇಲ್ಲ.
ಹಿಂದೆ ಹೆಣ ಹೂಳಿದ ಜಾಗದಲ್ಲೇ ಮತ್ತೆ ಹೆಣ ಹೂಳಬೇಕಾದ ಸ್ಥಿತಿಯಿದೆ. ಈ ಬಗ್ಗೆ ಸರ್ಕಾರಿ ಜಮೀನು ಒತ್ತುವರಿ ಬಿಡಿಸಿ ಅಥವಾ ಖರೀದಿಸಿ ಪರಿಶಿಷ್ಟರಿಗೆ ಭೂಮಿ ಕೊಡಿಸಬೇಕು ಎಂದರು.
ಕ್ರಮಕ್ಕೆ ಸೂಚನೆ: ಆಗ ಶಾಸಕ ದತ್ತ ಈ ಕುರಿತು ತಹಸೀಲ್ದಾರರು ಸರ್ಕಾರಿ ಜಾಗ ಅಥವಾ ಜಾಗ ಇರದೇ ಇದ್ದಲ್ಲಿ ಖರೀದಿಸಿ ಕೊಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಉಡುಗೆರೆಯ ದಲಿತ ಅಂಗನವಾಡಿ ಕಾರ್ಯಕರ್ತೆ ಶಾರದಮ್ಮ ಮತ್ತು ವಕ್ಕಲಗೆರೆ ಅಂಗನವಾಡಿ ಕಾರ್ಯಕರ್ತೆ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಲಕ್ಷ್ಮಣ್, ಟಿ. ಮೂರ್ತಿ ದೂರಿದರು.
ಆಗ ಶಾಸಕ ದತ್ತ ಮಾತನಾಡಿ, ದಲಿತರೇ ದಲಿತರ ಮೇಲೆ ದೌರ್ಜನ್ಯ ಮಾಡುವ ವಿಚಾರ ಸೂಕ್ಷ್ಮವಾಗಿದ್ದು, ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳೋಣ ಎಂದರು.
ಸದಸ್ಯ ಟಿ.ಮೂರ್ತಿ ಮಾತನಾಡಿ, ಬೇರೆ ರಾಜ್ಯದಲ್ಲಿರುವ ಸಾಮಾನ್ಯ ವರ್ಗದವರು ಇಲ್ಲಿಗೆ ಬಂದು ಕಡೂರಿನಲ್ಲಿ ಭೋವಿ ಎಂದು ಈ ಹಿಂದೆ ಸರ್ಟಿಫಿಕೆಟ್ ಪಡೆದಿದ್ದಾರೆ ಎಂದಾಗ, ತಹಸೀಲ್ದಾರರು ಪ.ಜಾ. ಸರ್ಟಿಫಿಕೇಟ್ ನೀಡುವಾಗ ಅವರ ತಂದೆ ತಾಯಿ ಪೂರ್ವಿಕರ ಜಾತಿ ಪರಿಶೀಲಿಸಿ ನೀಡಲಾಗುವುದು ಎಂದರು.
ಸಭೆಯಲ್ಲಿ ಮಾತನಾಡಿದ ಶಾಸಕ ದತ್ತ, ಕಡೂರು ವಿಧಾನಸಭಾ ಕ್ಷೇತ್ರದ ಪ.ಜಾ.ಮತ್ತು ಪ.ಪ. ಪಂಗಡದವರ ಅಭಿವೃದ್ಧಿಗಾಗಿ ರು. 1.15 ಕೋಟಿ ಬಿಡುಗಡೆಯಾಗಿದೆ. ಇದರಲ್ಲಿ ಎಲ್ಲ ಪರಿಶಿಷ್ಟ ವರ್ಗಗಳಿಗೆ ಸಮಾನ ಅನುದಾನ ಹಂಚಿಕೆ ಮಾಡಿ ಸವಲತ್ತು ನೀಡುವ ಕುರಿತು ಪಟ್ಟಿ ತಯಾರಿಸಲಾಗುವುದು ಎಂದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ವಿಸ್ತರಣಾಧಿಕಾರಿ ಮಲ್ಲಿಕಾರ್ಜುನ್, ಸಿಡಿಪಿಒ, ಪೊಲೀಸ್ ಇಲಾಖೆ ಮತ್ತಿತರ ಇಲಾಖೆ ಅಧಿಕಾರಿಗಳು, ದಸಂಸ ಮುಖಂಡ ಇ. ನಾಗರಾಜ್, ಸಗುನಪ್ಪ, ಚೌಡಪ್ಪ ಕುಮಾರ್, ಲೋಕೇಶ್, ಕುಂದೂರು ನಾಗರಾಜ್ ಮೊದಲಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

