ಕಾಫಿ ಬೆಳೆಗಾರರ ಸಮಸ್ಯೆ ಶೀಘ್ರ ಪರಿಹಾರ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ನ. 22
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚನೆ ನಡೆಸಿ ಕಾಫಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಕೇಂದ್ರದ ಪೆಟ್ರೋಲಿಯಂ ಸಚಿವ ಡಾ. ಎಂ. ವೀರಪ್ಪ ಮೊಯ್ಲಿ ಭರವಸೆ ನೀಡಿದ್ದಾರೆ.
ನಗರದ ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟ ಶುಕ್ರವಾರ ಏರ್ಪಡಿಸಿದ್ದ ಕಾಫಿ ಬೆಳೆಗಾರರ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಫಿ ಬೆಳೆಗಾರರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ, ಅರಣ್ಯ, ಕಂದಾಯ, ಸಮಾಜ ಕಲ್ಯಾಣ ಸಚಿವರು ಸೇರಿದಂತೆ ಹಿರಿಯ ಅಧಿಕಾರಿಗಳು ಮತ್ತು ಪ್ಲಾಂಟೆಷನ್ ಪ್ರದೇಶಗಳಿಂದ ಪ್ರತಿನಿಧಿಸಿರುವ ಶಾಸಕರ ಸಭೆಯನ್ನು ಕರೆಯುವಂತೆ ತಿಳಿಸಲಾಗುವುದು ಎಂದು ಹೇಳಿದರು.
ಕೇಂದ್ರದ ಸಚಿವರೊಂದಿಗೂ ಸಹ ಈ ಕುರಿತು ಚರ್ಚಿಸಿ, ಪ್ರಧಾನಮಂತ್ರಿಯೊಂದಿಗೆ ಸಮಾಲೋಚನೆ ನಡೆಸಿ, ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಆತಂಕ ಬೇಡ: ಅರಣ್ಯದಲ್ಲಿ ವಾಸವಾಗಿರುವ ಜನರನ್ನು ಅತಂತ್ರ ಮಾಡಿ, ಪರಿಸರ ಉಳಿಸುವುದರಲ್ಲಿ ಅರ್ಥವಿಲ್ಲ. ಕಾಫಿ ಬೆಳೆ ಅರಣ್ಯಕ್ಕೆ ಪೂರಕವಾದುದು. ಕಾಫಿ ಬೆಳೆಗಾರರು ಅರಣ್ಯವನ್ನು ಒತ್ತುವರಿ ಮಾಡಿದ್ದರೆಂದು ಹೇಳಿ, ಅವರನ್ನು ಅಪರಾಧಿಗಳಂತೆ ನೋಡುವುದರಲ್ಲಿ ಅರ್ಥವಿಲ್ಲ. ಕರ್ನಾಟಕ ರಾಜ್ಯದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆ ಸರ್ವೇ ನಡೆಸಿ ಗಡಿ ಗುರುತು ಮಾಡಿದ್ದವು. ತದನಂತರ ಸರ್ವೇ ಕಾರ್ಯ ನಡೆಯದೆ ಹೋಗಿದ್ದರಿಂದ ಒತ್ತುವರಿ ಸಮಸ್ಯೆ ಎದುರಾಗಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಕಂದಾಯ ಮತ್ತು ಅರಣ್ಯ ಇಲಾಖೆಗಳು ಜಂಟಿ ಸರ್ವೇ ನಡೆಸಿ ಗಡಿಗಳನ್ನು ಗುರುತು ಮಾಡಬೇಕು. ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿ ಕ್ರಮಕ್ಕೆ ಮುಂದಾಗುವಂತೆ ತಿಳಿಸಲಾಗುವುದು ಎಂದರು.
ಮಾಜಿ ಸಚಿವ ಬಿ.ಎಲ್. ಶಂಕರ್ ಮಾತನಾಡಿ, ಭೂ ಸುಧಾರಣಾ ಕಾನೂನು ಪುನರ್ ಪರಿಶೀಲನೆಗಾಗಿ ಕೇಂದ್ರ ಸರ್ಕಾರ ಸಲಹೆ ಕೇಳಿದೆ. ಅದು ಕಾನೂನಾಗಿ ಜಾರಿಗೆ ಬರುವುದಿಲ್ಲ. ವಿಶ್ವ ಪರಾಂಪರಿಕ ತಾಣ ಹಾಗೂ ಗಾಡ್ಗೀಳ್ ವರದಿ ಜಾರಿಗೆ ಮುನ್ನಾ ಸಾರ್ವಜನಿಕರ ಸಲಹೆಗಳನ್ನು ಪಡೆದುಕೊಳ್ಳಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಸಂಸದ ಎಚ್. ವಿಶ್ವನಾಥ್ ಮಾತನಾಡಿ, ರಾಜ್ಯದಲ್ಲಿ ಅರಣ್ಯ ಹಕ್ಕು ಕಾಯ್ದೆ ಸಮರ್ಪಕವಾಗಿ ಜಾರಿಗೆ ತರಬೇಕು. ಈ ಸಂಬಂಧ ಅರಣ್ಯ, ಕಂದಾಯ ಇಲಾಖೆಯ ಸಚಿವರ ಸಭೆಯನ್ನು ಕರೆದು ಕ್ರಮಕ್ಕೆ ಮುಂದಾಗಬೇಕು ಎಂದು ಹೇಳಿದರು.
ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಕಂದಾಯ ಭೂಮಿಯನ್ನು ಡೀಮ್ಡ್ ಫಾರೆಸ್ಟ್ ಎಂಬುದಾಗಿ ಪರಿವರ್ತನೆ ಮಾಡಿದ್ದರಿಂದ ಒತ್ತುವರಿ ಎಂಬ ಹೊಸ ಸಮಸ್ಯೆ ಎದುರಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೆಜಿಎಫ್ ಅಧ್ಯಕ್ಷ ಡಾ. ಎನ್.ಕೆ. ಪ್ರದೀಪ್ ಮಾತನಾಡಿದರು. ಸಂಸದ ಡಿ.ಬಿ. ಚಂದ್ರೇಗೌಡ, ಶಾಸಕರಾದ ಸಿ.ಟಿ. ರವಿ, ಬಿ.ಬಿ. ನಿಂಗಯ್ಯ, ಎಚ್.ಕೆ. ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯರುಗಳಾದ ಮೋಟಮ್ಮ, ಗಾಯತ್ರಿ ಶಾಂತೇಗೌಡ, ಕೇಂದ್ರದ ಮಾಜಿ ಸಚಿವೆ ಡಿ.ಕೆ. ತಾರಾದೇವಿ, ಮಾಜಿ ಸಂಸದ ಡಿ.ಎಂ. ಪುಟ್ಟೇಗೌಡ, ಮಾಜಿ ಶಾಸಕರಾದ ಎಂ.ಪಿ. ಕುಮಾರಸ್ವಾಮಿ, ಐ.ಬಿ. ಶಂಕರ್, ಕೆಜಿಎಫ್ ಕಾರ್ಯದರ್ಶಿ ಮೋಹನ್ಕುಮಾರ್, ಸಂಘಟನಾ ಕಾರ್ಯದರ್ಶಿ ಡಿ.ಎಂ. ವಿಜಯ್, ಮಾಜಿ ಅಧ್ಯಕ್ಷ ಅತ್ತಿಕಟ್ಟೆ ಜಗನ್ನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಡಿ.ಎಲ್. ವಿಜಯಕುಮಾರ್, ಡಿ.ಎಸ್. ಸುಬ್ಬೇಗೌಡ, ಗೌರಮ್ಮ ಬಸವೇಗೌಡ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

