ಸಂಪ್ರದಾಯಗಳಿಗೆ ಮೂಢನಂಬಿಕೆ ಹಣೆಪಟ್ಟಿ
ಬಾಳೆಹೊನ್ನೂರು: ಭಾರತದಲ್ಲಿ ಸಂಸ್ಕೃತಿ, ಸಂಪ್ರದಾಯ, ನಂಬಿಕೆ ಹಾಗೂ ಮೂಢನಂಬಿಕೆ ಅಸ್ತಿತ್ವದಲ್ಲಿದ್ದು, ಇತ್ತೀಚೆಗೆ ಬುದ್ಧಿ ಜೀವಿಗಳು ಸಂಪ್ರದಾಯಗಳಿಗೆ ಮೂಢನಂಬಿಕೆಯ ಹಣೆಪಟ್ಟಿ ಕಟ್ಟಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಜಗದ್ಗುರು ರೇಣುಕಾಚಾರ್ಯ ಗುರುಕುಲದ ಕುಲಪತಿ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.
ಜಿಲ್ಲಾ ಮತ್ತು ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್, ಜಗದ್ಗುರು ರೇಣುಕಾಚಾರ್ಯ ಕೈಗಾರಿಕಾ ತರಬೇತಿ ಕೇಂದ್ರ, ಶ್ರೀ ವಾಣಿ ಕಲೆ ಮತ್ತು ಸಾಹಿತ್ಯ ಅಧ್ಯಯನ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಜಿಲ್ಲಾಮಟ್ಟದ ಚರ್ಚಾ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾಷಾ ಸಾಹಿತ್ಯವು ಅಭಿವೃದ್ಧಿಗೊಳ್ಳಲು ಭಗವಂತನೇ ಮೂಲ, ಆದ್ದರಿಂದ ಭಗವಂತನ ಸಾಕ್ಷಾತ್ಕಾರ ಮಾಡಿಕೊಳ್ಳಲು ಎಲ್ಲರೂ ಮಾತೃ ಭಾಷೆಗೆ ಶರಣಾಗಲೇಬೇಕು. ಮಾತೃ ಭಾಷೆ ಕನ್ನಡವಾದರೇ, ತಂದೆ ಭಾಷೆ ದೇವನಗಾರಿ ಭಾಷೆಯೆಂದೇ ಪ್ರಸಿದ್ಧವಾದ ಸಂಸ್ಕೃತ ಭಾಷೆಯಾಗಿರುತ್ತದೆ. ಜೀವಾತ್ಮನಿಗೆ ಪರಮಾತ್ಮರ ಸಂಬಂಧವೇ ಲೌಕಿಕ ಪ್ರಪಂಚವಾದರೇ ಜೀವಾತ್ಮನಿಗೆ ಪರಮಾತ್ಮನ ಅವಿನಭಾವ ಸಂಬಂಧವನ್ನು ಸಾಧಿಸಲು ಸದ್ಗುರು ಸಹಕಾರಿಯಾಗುತ್ತಾರೆ ಎಂದರು.
ಕಾನೂನಿಂದ ಸಾಧ್ಯವಿಲ್ಲ: ಭಾಷಾ ಪ್ರೇಮ ಆಧ್ಯಾತ್ಮ ಚಿಂತನೆ ಮನುಷ್ಯನ ಜೀವನಾಡಿಯಾಗಿದ್ದು, ಸಂಪ್ರದಾಯಗಳಿಗೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಗುಲ್ಲೆಬ್ಬಿಸುವುದು ಬೇಡ ಮೂಢನಂಬಿಕೆ, ಮೌಢ್ಯಕ್ಕೆ ಕಡಿವಾಣ ಹಾಕಲು ಕಾನೂನಿನಿಂದ ಸಾಧ್ಯವಿಲ್ಲ. ವಿವಿಧತೆಯಲ್ಲಿ ಏಕತೆ ಕಂಡ ಭಾರತದಲ್ಲಿ ಅನೇಕ ಧರ್ಮಗಳಿದ್ದು ಅವರವರ ಧರ್ಮಕ್ಕೆ ಅನುಗುಣವಾಗಿ ಮೂಲನಂಬಿಕೆಯನ್ನು ಪಾಲನೆ ಮಾಡಿಕೊಂಡು ಬರುತ್ತಿದ್ದಾರೆ ಎಂದು ಹೇಳಿದರು.
ರಾಜ್ಯೋತ್ಸವಗಳು ಕೇವಲ ನವೆಂಬರ್ ಮಾಹೆಗೆ ಸಿಮೀತವಾಗದೇ ನಿತ್ಯ ನಿರಂತರವಾಗಿ ಸರ್ಕಾರದ ಮುಖಾಂತರ ಪ್ರಾಮಾಣಿಕವಾಗಿ ನಡೆಸಿಕೊಂಡು ಬರಬೇಕೆಂದು ಕರೆ ನೀಡಿದರು.
ಜಿ.ಪಂ. ಸದಸ್ಯ ಮೊಹಮ್ಮದ್ ಇಫ್ತೆಖಾರ್ ಆದಿಲ್ ಮಾತನಾಡಿ, ಮಾತೃ ಭಾಷೆಯನ್ನು ಪೂಜಿಸಿ ಅನ್ಯ ಭಾಷೆಯನ್ನು ಗೌರವಿಸಬೇಕು. ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯವಹಾರ ಹಾಗೂ ಜ್ಞಾನ ಅಭಿವೃದ್ದಿಗೆ ಇತರೆ ಎಲ್ಲಾ ಭಾಷೆಗಳನ್ನು ಅಧ್ಯಯನ ಮಾಡಬೇಕು. ಹಾಗೂ ವಿದ್ಯಾರ್ಥಿಗಳಿಗೆ ಸ್ಪರ್ಧೆ ಏರ್ಪಡಿಸುವುದರಿಂದ ಪ್ರತಿಭೆಗಳನ್ನು ಅನಾವರಣಗೊಳಿಸಲು ಸಹಕಾರಿಯಾಗುವುದು ಎಂದರು.
ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಚಾರ್ಯ ಹೆಚ್.ಆರ್. ಆನಂದ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಅಧ್ಯಕ್ಷ ಹೆಚ್.ಎಂ. ಇಬ್ರಾಹಿಂ, ಹೋಬಳಿ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಶಹಾಬ್, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಹು.ವಾ. ಶ್ರೀವತ್ಸ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಭಾಸ್ಕರ್ ವೆನಿಲ್ಲಾ, ಕೊಪ್ಪ ತಾಲ್ಲೂಕು ಚುಸಾಪ ಅಧ್ಯಕ್ಷ ಸಿ.ವಿ. ರಾಜೇಶ್, ಜೇಸಿ ಅಧ್ಯಕ್ಷ ಮಂಜುನಾಥ್ ತುಪ್ಪೂರು, ಬಿಎಸ್‌ಎ ಸ್ಪೋಟ್ಸ್ ಕ್ಲಬ್ ಅಧ್ಯಕ್ಷ ಜಿ.ಎಂ. ಶಬ್ಬೀರ್ ಅಹಮ್ಮದ್ ಉಪಸ್ಥಿತರಿದ್ದರು.
ಭಾರತೀಯ ಸಂಪ್ರಾದಾಯಗಳು ನಂಬಿಕೆಯೋ- ಮೂಢನಂಬಿಕೆಯೋ ಎಂಬ ವಿಷಯದ ಕುರಿತಾಗಿ ನಡೆದ ಚರ್ಚಾಸ್ಪರ್ಧೆಯಲ್ಲಿ 20ಕ್ಕೂ ಹೆಚ್ಚು ವಿದ್ಯಾರ್ತಿಗಳು ಭಾಗವಹಿಸಿದ್ದರು.
ಸ್ಪರ್ಧೆಯಲ್ಲಿ ಬಿಜಿಎಸ್ ಕಾಲೇಜಿನ ಸ್ಯಾಮ್ಯುಯಲ್, ಐಟಿಐನ ಸುನೀಲ್, ಶೃಂಗೇರಿ ಜೆಸಿಬಿಎಂ ಕಾಲೇಜಿನ ಅನುಷಾ, ಸ್ವಾಗತ್ ಬಹುಮಾನ ಪಡೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

