ಚಿಕ್ಕಮಗಳೂರು

ಮರಳು ಲಾರಿ ಅಡ್ಡಗಟ್ಟಿ ಪ್ರತಿಭಟನೆ

Published On :

ಕ.ಪ್ರ.ವಾರ್ತೆ ಶೃಂಗೇರಿ ನ.29
ತಾಲೂಕಿನ ಮೆಣಸೆ ಪಂಚಾಯಿತಿ ಕಿರ್ಕೋಡು ಗ್ರಾಮಸ್ಥರು ಕಿರ್ಕೋಡು ಕೊರಡ್ಕಲ್ ರಸ್ತೆ  ದುರಸ್ತಿಗೆ ಪಡಿಸಲು ಒತ್ತಾಯಿಸಿ ಶುಕ್ರವಾರ ಮರಳು ಲಾರಿಗಳನ್ನು ಅಡ್ಡಗಟ್ಟಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಸಮೀಪದ ಸುಡ್ಜರಿಹೊಂಡ ಎಂಬಲ್ಲಿ ಮರಳು ತುಂಬಲು ವಾಹನ ಬಂದಿದ್ದವು. ಕಳೆದ ವರ್ಷವೂ ಇದೇ ರೀತಿ ಇಲ್ಲಿ ಮರಳು ಗಣಿಗಾರಿಕೆ ಅವ್ಯಾಹತವಾಗಿ ನಡೆದು ರಸ್ತೆ ಸಂಪೂರ್ಣ ಹದಗೆಟ್ಟಿತ್ತು. ಇದರಿಂದ ಈ ಭಾಗದಲ್ಲಿ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿರುವುದರ ಜೊತೆಗೆ ಅಗತ್ಯ ಕೆಲಸಗಳಿಗೆ ಗ್ರಾಮಸ್ಥರು ಪರದಾಡುವ ಪರಿಸ್ಥಿತಿ ಉಂಟಾಗಿತ್ತು.
ರಸ್ತೆಗೆ ಕಲ್ಲು: ಇದರಿಂದ ಕೆರಳಿದ್ದ ಗ್ರಾಮಸ್ಥರು ಶುಕ್ರವಾರ ಬೆಳಗ್ಗೆ ಮರಳು ತುಂಬಿಸಲು ಲಾರಿಗಳು ಹೋಗುತ್ತಿರುವುದನ್ನು ಕಂಡು ಶಾಲಾ ಮುಂಭಾಗದಲ್ಲಿ ಕಲ್ಲುಗಳನ್ನು ರಸ್ತೆಗೆ ಅಡ್ಡ ಇಟ್ಟು ವಾಹನ ತಡೆದು ಪ್ರತಿಭಟಿಸಿದರು. ಸ್ಥಳಕ್ಕೆ ಧಾವಿಸಿದ ಎಂಜಿನಿಯರ್ ಸುನಿಲ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಅಧಿಕಾರಿಗಳು ತಮ್ಮ ಗಮನಕ್ಕೆ ಬಂದಿಲ್ಲವೆಂದು ಹೇಳಿದಾಗ ಗ್ರಾಮಸ್ಥರು ಮತ್ತಷ್ಟು ಆಕ್ರೋಶಗೊಂಡರು. ಅನುಮತಿ ನೀಡಿದವರು ಯಾರು ಎಂಬ ಪ್ರಶ್ನೆ ಉದ್ಘವಿಸಿ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಸ್ಥಳೀಯ ಪಂಚಾಯಿತಿ ಸದಸ್ಯರು, ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು.
ಹಾಳಾದ ರಸ್ತೆ: ಆದರೂ ಗ್ರಾಮಸ್ಥರು ವಾಹನಗಳನ್ನು ಬಿಡಲು ಒಪ್ಪಲಿಲ್ಲ. ಸ್ಥಳೀಯರಾದ ರಮೇಶ್ ಮಾತನಾಡಿ, ಕಳೆದ ಬಾರಿ ರಸ್ತೆ ಸರಿಪಡಿಸಿಕೊಡುವುದಾಗಿ ಇಲ್ಲಿಂದ ಲೋಡ್‌ಗಟ್ಟಲೆ ಮರಳು ಸಾಗಿಸಿ ರಸ್ತೆ ದುರಸ್ತಿ ಮಾಡದೇ ಅಲ್ಪಸ್ವಲ್ಲ ಸರಿಯಿದ್ದ ರಸ್ತೆ ನಿರಂತರ ವಾಹನ ಸಾಗಟದಿಂದ ಹದಗೆಟ್ಟು, ಈ ಭಾಗದ ಜನರು ಓಡಾಡಲೂ ಪರದಾಡುವಂತಾಗಿದೆ ಎಂದರು.
ರಸ್ತೆ ಪಕ್ಕದಲ್ಲಿಯೇ ಶಾಲೆಯಿರುವುದರಿಂದ ಮರಳು ಸಾಗಾಟದ ವಾಹನಗಳಿಂದ ಶಾಲಾ ಆವರಣ ಸಂಪೂರ್ಣ ಧೂಳುಮಯ ಆಗುವುದಲ್ಲದೆ ಮಕ್ಕಳ ಅನಾರೋಗ್ಯಕ್ಕೂ ಕಾರಣವಾಗಿದೆ. ರಸ್ತೆ ದುರಸ್ತಿಪಡಿಸುವವರೆಗೆ ಯಾವುದೇ ಕಾರಣಕ್ಕೂ ನಾವು ಮರಳು ತೆಗೆಯಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಕೆಲಹೊತ್ತು ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಸ್ಥಳಕ್ಕೆ ಧಾವಿಸಿದ ತಹಸೀಲ್ದಾರ್ ದೇವಮ್ಮ ಪ್ರತಿಭಟನಾ ನಿರತರನ್ನು ಸಮಾಧಾನಪಡಿಸಿ, ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು. ನಂತರ ಮರಳು ಇರುವ ಪ್ರದೇಶಕ್ಕೆ ಹೋಗುವ ಮಾರ್ಗದ ನಡುವೆ ಚರಂಡಿ ತೋಡಿಸಿ ವಾಹನಗಳು ಮುಂದೆ ಹೋಗದಂತೆ ನಿರ್ಬಂಧ ವಿಧಿಸಿದರು. ಈ ಬಗ್ಗೆ ಸ್ಪಷ್ಟ ನಿರ್ಧಾರ ಬರುವವರೆಗೆ ಇಲ್ಲಿಂದ ಮರಳು ತೆಗೆಯದಿರಲು ಸೂಚಿಸಿದರು. ಗ್ರಾಮಸ್ಥರು ಇಲ್ಲಿಯ ರಸ್ತೆ ದುರಸ್ತಿಯಾಗುವವರೆಗೆ ಮರಳು ತೆಗೆಯದಂತೆ ಮನವಿ ಸಲ್ಲಿಸಿದರು.
ಗ್ರಾಮಸ್ಥರಾದ ಗುರುಮೂರ್ತಿ ಕೊರಡ್ಕಲ್, ಕೆ.ಪಿ. ಮಲ್ಲಪ್ಪ, ರವೀಂದ್ರ ಎಚ್.ಬಿ. ರವಿ, ಸಂಪತ್ ಕುಮಾರ್, ಉಮಾಕಾಂತ್ ಭಟ್, ಕೆ.ಎಸ್. ಸುಧಾಕರ್, ಗ್ರಾಪಂ ಅಧ್ಯಕ್ಷ ಶಂಕ್ರಪ್ಪ ನಾಯಕ್, ಉಪಾಧ್ಯಕ್ಷೆ ಇಂದಿರಾ ರವಿ,ನಾಗೇಶ್ ನಾಯಕ್, ರಾಜೇಶ್, ಶಂಕ್ರ, ಶಿವು, ಪ್ರಮೀಳ, ನಂದಿನಿ, ಸರಸ್ವತಿ, ಸವಿತಾ, ಜಾನಕಿ, ಅನ್ನಪೂರ್ಣ ಮೊದಲಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.