ಶಿಕ್ಷಣದಂತೆ ಕ್ರೀಡೆಗೂ ಪ್ರಾಧಾನ್ಯತೆ ನೀಡಿ
ಕ.ಪ್ರ.ವಾರ್ತೆ ಚಿಕ್ಕಮಗಳೂರು ನ. 29
ರಾಜ್ಯಮಟ್ಟದ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗಳಿಸಿ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಅರ್ಹತೆ ಗಳಿಸಿರುವ ಸಿಂದಿಗೆರೆ ಗುರುಬಸವೇಶ್ವರ ಪ್ರೌಢ ಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ ಸುಪ್ರಿಯಾ ಅವರನ್ನು ಜಿಪಂ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಸನ್ಮಾನಿಸಿದರು.
ಜಿಲ್ಲಾ ಮುಖ್ಯೋಪಾಧ್ಯಾಯರ ಸಂಘದ ವತಿಯಿಂದ ಡಯಟ್ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ನಡೆದ ಸರಳ ಸಮಾರಂಭದಲ್ಲಿ ರೇಖಾ ಹುಲಿಯಪ್ಪಗೌ ಮಾತನಾಡಿದರು.
ಭರವಸೆ: ಕ್ರೀಡಾಪಟು, ಚಿತ್ರಕಾರ ಬಹುಮುಖ ಪ್ರತಿಭೆಯ ಸಿಂದಿಗೆರೆಯ ಶಾಲೆಯ ರೂವಾರಿ ಧನಂಜಯ ತನ್ನ ಕನಸನ್ನು ಮಕ್ಕಳ ಮೂಲಕ ನನಸು ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಖಾಸಗಿ ಶಾಲೆಗಳಲ್ಲಿ ಶೇ. 25 ರಷ್ಟು ಹೆಣ್ಣುಮಕ್ಕಳಿಗೆ ಅವಕಾಶ ನೀಡಬೇಕೆಂದು ಸರ್ಕಾರ ಆದೇಶಿಸುವುದಕ್ಕಿಂತ ಮುಂಚಿನಿಂದಲೂ ಇಲ್ಲಿ ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಸಾಮಾನ್ಯ ರೈತ ಕುಟುಂಬದ ಸುಪ್ರಿಯಾಳನ್ನು ಹೆಚ್ಚಿನ ಸೌಲಭ್ಯಗಳಿಲ್ಲದಿದ್ದರೂ ರಾಷ್ಟ್ರಮಟ್ಟಕ್ಕೆ ಅಣಿಗೊಳಿಸಿರುವುದಕ್ಕಾಗಿ ಅಭಿನಂದಿಸಿದ ರೇಖಾ, ಹೆಚ್ಚಿನ ತರಬೇತಿಗೆ ಅಗತ್ಯವಿರುವ ಉಪಕರಣಗಳನ್ನು ಯುವ ಜನಸೇವಾ ಇಲಾಖೆಯಿಂದ ಎರವಲು ಕೊಡುಸುವುದಾಗಿ ಭರವಸೆ ನೀಡಿದರು.
ಉತ್ತಮ ತರಬೇತಿ ಅಗತ್ಯ: ತಾಲೂಕು ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ರವಿಕುಮಾರ್ ಅಭಿನಂದನಾ ಭಾಷಣ ಮಾಡಿ, ಕಳೆದ 20 ವರ್ಷಗಳಲ್ಲಿ ವೈಯುಕ್ತಿಕ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸುತ್ತಿರುವ ಹಿರಿಮೆ ಸುಪ್ರಿಯಾಗೆ ಸಲ್ಲುತ್ತದೆ. ಕಳೆದ ಬಾರಿ 7ನೇ ತರಗತಿಯಲ್ಲಿದ್ದಾಗಲೂ ಈಕೆ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದು, ಈ ವರ್ಷ ದ್ವಿತೀಯ ಬಹುಮಾನ ಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಗುಂಪು ಆಟದಲ್ಲಿ ಆಲ್ದೂರು ಪೂರ್ಣಪ್ರಜ್ಞಾ ಶಾಲಾ ತಂಡ ಥ್ರೋಬಾಲ್ನಲ್ಲಿ ಬೆಳ್ಳಿ ಮತ್ತು ಕಂಚಿನ ಪದಕ ಜಿಲ್ಲೆಗೆ ತಂದುಕೊಟ್ಟಿದೆ ಎಂದರು.
ಶಿಕ್ಷಣಾಧಿಕಾರಿ ರಾಜೇಗೌಡ, ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಎಸ್.ಜಿ. ನಾಗೇಶ್, ಡಯಟ್ ಉಪ ಪ್ರಾಂಶುಪಾಲೆ ಉಮಾದೇವಿ, ಶಿಕ್ಷಣಾಧಿಕಾರಿ ಪರಮೇಶ್ವರಪ್ಪ, ಜಿಲ್ಲಾ ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ್, ಮಾಧ್ಯಮಿಕ ಶಿಕ್ಷಕರ ಸಂಘ ಅಧ್ಯಕ್ಷ ಚಂದ್ರೇಗೌಡ, ಗುರುಬಸವೇಶ್ವರ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಧನಂಜಯ ವೇದಿಕೆಯಲ್ಲಿದ್ದರು. ಉಮಾ ಮಹೇಶ್ವರಪ್ಪ ಸ್ವಾಗತಿಸಿ, ವಂದಿಸಿದರು.
ಅರಣ್ಯ ರಕ್ಷಣೆಗೆ ಮುಂದಾಗಿ
ಕ.ಪ್ರ.ವಾರ್ತೆ ಚಿಕ್ಕಮಗಳೂರು ನ. 29
ಅರಣ್ಯ ಸಂರಕ್ಷಣೆ ಮಾಡುವ ಕೆಲಸ ಪ್ರತಿಯೊಬ್ಬರಿಂದ ಆಗಬೇಕಾಗಿದೆ ಎಂದು ಜಿಪಂ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಕರೆ ನೀಡಿದ್ದಾರೆ.
ಜಿಲ್ಲಾಡಳಿತ, ಜಿಪಂ, ಅರಣ್ಯ ಇಲಾಖೆ ವತಿಯಿಂದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಅರಣ್ಯ ಹಕ್ಕು ಅಧಿನಿಯಮ- 2006 ನಿಯಮಗಳು 2008 ಮತ್ತು ತಿದ್ದುಪಡಿ ನಿಯಮಗಳು 2012 ರ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಉಪವಿಭಾಗದ ಸಮಿತಿ ಸದಸ್ಯರಿಗೆ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಅರಣ್ಯ ಸಂರಕ್ಷಣೆ ಮತ್ತು ಅರಣ್ಯ ವಾಸಿಗಳಿಗೆ ಸವಲತ್ತು ಕಲ್ಪಿಸುವ ಸಲುವಾಗಿ ಸರ್ಕಾರ ಕಾಯ್ದೆಗಳನ್ನು ರೂಪಿಸಿದೆ. ಈ ಕಾಯ್ದೆಯನ್ನು ಜಾರಿಗೆ ತರಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಕಾನೂನುಗಳ ಅರಿವು ಅಗತ್ಯ. ಅಧಿಕಾರಿಗಳು, ಜನಪ್ರತಿನಿಧಿಗಳು ಕಾರ್ಯಾಗಾರದ ಪ್ರಯೋಜನ ಪಡೆದು ಅವನ್ನು ಅನುಷ್ಠಾನಗೊಳಿಸಿ ಜನರಲ್ಲಿ ತಿಳಿವಳಿಕೆ ಮೂಡಿಸಬೇಕು ಎಂದರು.
ಸಮಿತಿ ರಚಿಸಿ: ಅಪರ ಜಿಲ್ಲಾಧಿಕಾರಿ ಕೆ.ಪಿ. ಹೊನಕೇರಿ ಮಾತನಾಡಿ, ಅರಣ್ಯಗಳಲ್ಲಿ ವಾಸಿಸುತ್ತಿರುವ ಜನರಿಗೆ ಸವಲತ್ತುಗಳನ್ನು ಕಲ್ಪಿಸುವ ಸಲುವಾಗಿ ಅನುಸೂಚಿತ ಬುಡಕಟ್ಟುಗಳ ಮತ್ತು ಇತರ ಪಾರಂಪರಿಕ ಅರಣ್ಯ ವಾಸಿಗಳ ಅಧಿನಿಯಮ- 2006 ಅನ್ನು ಸರ್ಕಾರ ಜಾರಿಗೆ ತಂದಿದೆ. 2008ರ ಕಾಯ್ದೆ ಮತ್ತು 2012ರ ತಿದ್ದುಪಡಿ ಕಾಯ್ದೆ ಕುರಿತು ಮೈಸೂರಿನ ಅಬ್ದುಲ್ ನಜೀರ್ಸಾಬ್ ರಾಜ್ಯ ಗ್ರಾಮೀಣ ತರಬೇತಿ ಸಂಸ್ಥೆಯ ಉಪನ್ಯಾಸಕ ನಟರಾಜ್ ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ಜಿಪಂ ಉಪಾಧ್ಯಕ್ಷೆ ಸುಜಾತ, ಸದಸ್ಯರಾದ ಕವಿತಾ, ಲೋಕೇಶ್, ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಎನ್. ವಿಠ್ಠಲ್, ಜಿಪಂ ಉಪ ಕಾರ್ಯದರ್ಶಿ ನಟರಾಜ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

