ಜಿಲ್ಲೆಯಲ್ಲಿ 494 ಮಂದಿ ಏಡ್ಸ್ಗೆ ಬಲಿ
ಚಿಕ್ಕಮಗಳೂರು: ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಎಚ್ಐವಿ ಸೋಂಕಿತರು ಇದ್ದಾರೆ. ಚಿಕ್ಕಮಗಳೂರು ಜಿಲ್ಲೆಯೊಂದರಲ್ಲೇ ದಾಖಲಾಗಿರುವ ಪ್ರಕಾರ ಕಳೆದ ಐದು ವರ್ಷಗಳಲ್ಲಿ ಈ ಸೋಂಕು ತಗಲಿದ ಸಂಖ್ಯೆ 2694 ಇದರಲ್ಲಿ ಈವರೆಗೆ 494 ಮಂದಿ ಮೃತಪಟ್ಟಿದ್ದಾರೆ.
ಈ ಸೋಂಕು ತಂದೆ, ತಾಯಿಗಳಿಗೆ ಮಾತ್ರವಲ್ಲ ಅವರ ಮಕ್ಕಳಲ್ಲೂ ಕಾಣಿಸಿಕೊಳ್ಳುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 14 ವರ್ಷದೊಳಗಿನ 106 ಮಕ್ಕಳಲ್ಲಿ ಎಚ್ಐವಿ ಸೋಂಕು ಇರುವುದನ್ನು ಪತ್ತೆ ಹಚ್ಚಲಾಗಿದೆ.
ಜಿಲ್ಲೆಯಲ್ಲಿ 2002 ರಿಂದ 2013ರ ಅಕ್ಟೋಬರ್ ಅಂತ್ಯದವರೆಗೆ 2,16,061 ಮಂದಿ ಎಚ್ಐವಿ ಪರೀಕ್ಷೆ ಮಾಡಿಕೊಂಡಿದ್ದು, ಈ ಪೈಕಿ 4,748 ಮಂದಿಗಳಲ್ಲಿ ಈ ಸೋಂಕು ಇರುವುದು ದೃಢಪಟ್ಟಿದೆ. 2008 ರಿಂದ ಕಳೆದ ಅಕ್ಟೋಬರ್ವರೆಗೆ 2,452 ಮಂದಿ ಎಆರ್ಟಿ ಕೇಂದ್ರದಲ್ಲಿ ನೋಂದಾಯಿಸಿಕೊಂಡಿದ್ದು, ಇವರಲ್ಲಿ 1,207 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ 569 ಪುರುಷರು, 579 ಮಹಿಳೆಯರು, 59 ಮಕ್ಕಳಿದ್ದಾರೆ.
ಬಯಲುಸೀಮೆಯಲ್ಲಿ ಹೆಚ್ಚು: ಜಿಲ್ಲೆಯಲ್ಲಿರುವ 2694 ಮಂದಿ ಎಚ್ಐವಿ ಸೋಂಕಿತರ ಪೈಕಿ ಬಯಲುಸೀಮೆ ತಾಲೂಕುಗಳಾದ ಚಿಕ್ಕಮಗಳೂರು, ಕಡೂರು ಹಾಗೂ ತರೀಕೆರೆ ತಾಲೂಕುಗಳಲ್ಲಿ ಹೆಚ್ಚು ಮಂದಿ ಇದ್ದಾರೆ.
ಚಿಕ್ಕಮಗಳೂರು ತಾಲೂಕು ಒಂದರಲ್ಲೇ 1151, ಕಡೂರು ತಾಲೂಕಿನಲ್ಲಿ 772, ತರೀಕೆರೆ ತಾಲೂಕಿನಲ್ಲಿ 392 ಮಂದಿ ಇದ್ದಾರೆ. ಇನ್ನುಳಿದಂತೆ ಮೂಡಿಗೆರೆ ತಾಲೂಕಿನಲ್ಲಿ 136, ಎನ್.ಆರ್. ಪುರ ತಾಲೂಕಿನಲ್ಲಿ 90, ಕೊಪ್ಪ ತಾಲೂಕಿನಲ್ಲಿ 106 ಹಾಗೂ ಶೃಂಗೇರಿ ತಾಲೂಕಿನಲ್ಲಿ 47 ಮಂದಿ ಇದ್ದಾರೆ.
ಜಿಲ್ಲೆಯ ಇತರೆ ತಾಲೂಕುಗಳಿಗೆ ಹೋಲಿಕೆ ಮಾಡಿದರೆ, ಚಿಕ್ಕಮಗಳೂರು ತಾಲೂಕಿನಲ್ಲಿ 55 ಮಕ್ಕಳು ಎಚ್ಐವಿ ಸೋಂಕಿತರು ಇದ್ದಾರೆ. ಶೃಂಗೇರಿ ತಾಲೂಕಿನಲ್ಲಿ ಮಾತ್ರ ಯಾವುದೇ ಮಕ್ಕಳಲ್ಲಿ ಈ ಸೋಂಕು ಇಲ್ಲ.
ಇಳಿಮುಖ: 2002 ರಿಂದ 2013ರವರೆಗಿನ ಅಂಕಿ ಅಂಶ ನೋಡಿದರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಚ್ಐವಿ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ.
ಅಪ್ತ ಸಮಾಲೋಚನೆಗೆ ಒಳಪಟ್ಟವರ ಮತ್ತು ಪರೀಕ್ಷೆ ಮಾಡಿಸಿಕೊಂಡವರ ಸಂಖ್ಯೆಯಲ್ಲಿ 2003ರಲ್ಲಿ ಶೇ.15.52 ಮಂದಿಗಳಲ್ಲಿ ಈ ಸೋಂಕು ಕಾಣಿಸಿಕೊಂಡಿತ್ತು. 2006ರ ವೇಳೆಗೆ ಈ ಸಂಖ್ಯೆ ಶೇ.17.97ಕ್ಕೆ ಏರಿತ್ತು. ನಂತರ ವರ್ಷಗಳಲ್ಲಿ ಈ ಸಂಖ್ಯೆ ಇಳಿಮುಖವಾಗಿದ್ದು, 2012ರಲ್ಲಿ ಶೇ.2.26ಕ್ಕೆ ಇಳಿದಿದ್ದು, ಪ್ರಸಕ್ತ ಸಾಲಿನಲ್ಲಿ ಶೇ.1.65ಕ್ಕೆ ಇಳಿದಿದೆ.
ಅಂದರೆ ಕಳೆದ ವರ್ಷ ಎಚ್ಐವಿ ಸೋಂಕಿತರ ಸಂಖ್ಯೆ 524 ಇತ್ತು. ಈ ವರ್ಷದಲ್ಲಿ 372ಕ್ಕೆ ಇಳಿದಿದೆ. ಶೇಕಡವಾರು ಸಂಖ್ಯೆ ಇಳಿಮುಖವಾದರೂ ಸಹ ಪೂರ್ಣ ಪ್ರಮಾಣದಲ್ಲಿ ಈ ಸೋಂಕು ತಡೆಗಟ್ಟಲು ಸಾಧ್ಯವಾಗಿಲ್ಲ.
28 ಗರ್ಭೀಣಿ ಮಹಿಳೆಯರು: ಈ ಸಾಲಿನಲ್ಲಿ ಪ್ರಸೂತಿಗೆ ದಾಖಲಾಗಿದ್ದ ಮಹಿಳೆಯರ ಪೈಕಿ 28 ಮಂದಿಯಲ್ಲಿ ಈ ಸೋಂಕು ಇರುವುದು ದೃಢಪಟ್ಟಿದೆ.
ಗರ್ಭೀಣಿ ಮಹಿಳೆಯಲ್ಲಿ ಎಚ್ಐವಿ ಸೋಂಕು ಇದ್ದರೆ, ಅದು, ಹುಟ್ಟುವ ಮಕ್ಕಳಲ್ಲೂ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಆದರೆ, ಇದಕ್ಕೆ ಸಕಾಲದಲ್ಲಿ ಚಿಕಿತ್ಸೆ ಪಡೆದುಕೊಂಡರೆ ಮಗುವಿಗೆ ಈ ಸೋಂಕು ಹರಡುವುದನ್ನು ತಡೆಗಟ್ಟಬಹುದಾಗಿದೆ.
ಈ ಹಿಂದೆ ಮಹಿಳೆ ಪ್ರಸೂತಿಯ ವೇಳೆ ಮತ್ತು ನಂತರದಲ್ಲಿ ಹಾಲುಣಿಸುವ ವೇಳೆಯಲ್ಲಿ ಎಚ್ಚರ ವಹಿಸಬೇಕೆಂಬ ಸೂಚನೆ ನೀಡುವ ಜತೆಗೆ ಸೂಕ್ತವಾದ ಮುಂಜಾಗ್ರತಾ ಕ್ರಮದ ಬಗ್ಗೆ ಸೂಚನೆ ನೀಡಲಾಗುತ್ತಿತ್ತು. ಇದೀಗ ಮಹಿಳೆ ಗರ್ಭೀಣಿಯಾದ ದಿನದಿಂದಲೇ ಈ ಚಿಕಿತ್ಸೆ ನೀಡಲು ಅವಕಾಶ ಇದೆ. ಇದರ ಪ್ರಯೋಜನವನ್ನು ಹಲವು ಮಹಿಳೆಯರು ಪಡೆದುಕೊಂಡಿದ್ದಾರೆ.
ಎಚ್ಐವಿ ಸೋಂಕು, ತಂದೆ ಅಥವಾ ತಾಯಿಗೆ ಮಾತ್ರ ಸೀಮಿತವಾಗಿಲ್ಲ. ಮಕ್ಕಳಲ್ಲೂ ಈ ಸೋಂಕು ಕಾಣಿಸಿಕೊಳ್ಳುತ್ತಿದೆ. ಈ ಸೋಂಕು ಇರುವ ಹಲವು ಕುಟುಂಬಗಳು ನಮ್ಮ ನಡುವೆ ಇವೆ. ಇದರ ಬಗ್ಗೆ ಹೇಳಿಕೊಂಡರೆ ಈ ಸಮಾಜ ತಮ್ಮನ್ನು ತಿರಸ್ಕರಿಸುತ್ತದೆ ಎಂಬ ಉದ್ದೇಶದಿಂದ ಈ ಬಗ್ಗೆ ಬಹಿರಂಗವಾಗಿ ಹೇಳಿಕೊಳ್ಳದೆ ಜೀವನ ನಡೆಸುತ್ತಿವೆ.
ದಿನಕ್ಕೆ 7400 ಜನರು ಸೋಂಕಿತರು
2011ರ ಸಮೀಕ್ಷೆಯಂತೆ ವಿಶ್ವದಲ್ಲಿ 34.2 ಮಿಲಿಯನ್ ಜನರು ಎಚ್ಐವಿಯಿಂದ ಸೋಂಕಿತರಾಗಿದ್ದಾರೆ ಹಾಗೂ ವಿಶ್ವದಲ್ಲಿ ಒಂದು ದಿನಕ್ಕೆ 7400 ಕ್ಕಿಂತಲೂ ಹೆಚ್ಚು ಜನರು ಎಚ್ಐವಿ ಸೋಂಕಿಗೆ ಒಳಗಾಗುತ್ತಿದ್ದಾರೆ.
ಇದರಲ್ಲಿ ಶೇ.97ಕ್ಕಿಂತಲೂ ಹೆಚ್ಚು ಜನರು ಕಡಿಮೆ ಮತ್ತು ಮಧ್ಯಮ ಆದಾಯ ಹೊಂದಿರುವ ದೇಶಗಳಲಿದ್ದಾರೆ (ಅಭಿವೃದ್ಧಿಶೀಲ ರಾಷ್ಟ್ರಗಳು).
7400ರಲ್ಲಿ ಸುಮಾರು 1200 ರಷ್ಟು 15 ವರ್ಷದೊಳಗಿನವರು. 6200 ರಷ್ಟು ವಯಸ್ಕರು 15 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರು, ಇದರಲ್ಲಿ ಶೇ.48 ರಷ್ಟು ಮಹಿಳೆಯರು, ಸುಮಾರು ಶೇ.40 ರಷ್ಟು 15 ರಿಂದ 24 ವಯಸ್ಸಿನೊಳಗಿನ ಯುವಕರು.
ಪ್ರಪಂಚದಲ್ಲಿ ಎಚ್ಐವಿ ಸೋಂಕಿತರ ಸಂಖ್ಯೆಯಲ್ಲಿ ಭಾರತ 3ನೇ ಸ್ಥಾನದಲ್ಲಿದೆ. ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆಯ ಅಂಕಿ ಅಂಶದ ಪ್ರಕಾರ ಭಾರತದಲ್ಲಿ 24 ಲಕ್ಷ ಜನ ಎಚ್ಐವಿ ಸೋಂಕಿತರೆಂದು ಕಂಡು ಬಂದಿದೆ. ಭಾರತದಲ್ಲಿ ಕರ್ನಾಟಕ ಐದನೇ ಸ್ಥಾನದಲ್ಲಿದೆ. ಅಂದರೆ, ಶೇ. 0.69 ರಷ್ಟು ಮಂದಿ ಸೋಂಕಿತರು ಇದ್ದಾರೆ.
-ಆರ್. ತಾರಾನಾಥ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

