ಮರಳು ಗಣಿಯಿಂದ ಹೇಮಾವತಿ ನೀರು ಕಲುಷಿತ: ಕ್ರಮಕ್ಕೆ ಆಗ್ರಹ
ಕ.ಪ್ರ.ವಾರ್ತೆ, ಮೂಡಿಗೆರೆ, ಏ.2
ಹೇಮಾವತಿ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಅತಿಯಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ನದಿಯಲ್ಲಿ ಹರಿಯುತ್ತಿರುವ ನೀರು ಸಂಪೂರ್ಣ ಕಲುಷಿತಗೊಂಡಿದೆ. ಈ ಕುರಿತು ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಕಿರುಗುಂದ ಗ್ರಾಮ ಪಂಚಾಯತ್ ಸದಸ್ಯ ರಮೇಶ್, ಉದುಸೆ ಅಣ್ಣೇಗೌಡ, ಜನ್ನಾಪುರ ರಾಘವೇಂದ್ರ, ಕುಮಾರ್ ಮತ್ತಿತರರು ಒತ್ತಾಯಿಸಿದ್ದಾರೆ.
ಈ ಕುರಿತು ಬುಧವಾರ ಹೇಳಿಕೆ ನೀಡಿದ ಅವರು, ಕಳೆದೊಂದು ತಿಂಗಳಿಂದ ಹೇಮಾವತಿ ನದಿ ನೀರು ಮಣ್ಣು ಮಿಶ್ರಿತವಾಗಿ ಹರಿಯುತ್ತಿದೆ. ಬೆಟ್ಟದಮನೆ, ಅಂಗಡಿ, ಅಗ್ರಹಾರ, ಜೇನುಬೈಲು ಮತ್ತಿತರ ಭಾಗಗಳಲ್ಲಿ ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳು ಕಾನೂನಿನ ಕಣ್ಣಿಗೆ ಮಣ್ಣೆರಚಿ ಅಕ್ರಮ ಮರಳು ಗಣಿಗಾರಿಕೆ ನಡೆಸುತ್ತಿದ್ದಾರೆ. ಮತ್ತೊಂದು ಕಡೆಗೆ ಮರಳು ದಂಧೆಕೋರರು ಅಧಿಕಾರಿಗಳಿಗೆ ಕಪ್ಪ ಒಪ್ಪಿಸಿ ರಾಜಾರೋಷವಾಗಿ ಅಕ್ರಮ ಮರಳು ಸಾಗಣೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕ್ರಮಕ್ಕೆ ಒತ್ತಾಯ: ದಂದೆಕೋರರಿಗೆ ಅಧಿಕಾರಿಗಳ ವರ್ಗ ಸಂಪೂರ್ಣ ರಕ್ಷಣೆ ಒದಗಿಸುತ್ತಿದೆ. ಜೆಸಿಬಿ, ಇಟಾಚಿ ಯಂತ್ರಗಳನ್ನು ಬಳಸಿ ಮರಳು ಗಣಿಗಾರಿಕೆ ನಡೆಯುತ್ತಿದೆ. ವಿಚಾರಿಸಿದವರಿಗೆ ಬೆದರಿಕೆ ಹಾಕು ಪ್ರಯತ್ನ ನಡೆಯುತ್ತವೆ. ಇಲ್ಲದಿದ್ದರೆ ಹಣ ಕೊಟ್ಟು ಬಾಯಿ ಮುಚ್ಚಿಸಲಾಗುತ್ತದೆ. ಕಿರುಗುಂದ ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಟ್ಟ ದೋಣಗೋಡು, ಬೆಟ್ಟದಮನೆ ಮತ್ತಿತರ ಪ್ರದೇಶದಲ್ಲಿ ಮರಳು ಗಣಿಗಾರಿಕೆ ನಿಷೇಧಿಸುವಂತೆ ನವೆಂಬರ್ನಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಆ ಬಳಿಕ ಉಪವಿಭಾಗಾಧಿಕಾರಿ ಅವರು ಸ್ಥಳ ಪರಿಶೀಲನೆ ನಡೆಸದೇ ಮರಳು ಗಣಿಗಾರಿಕೆಗೆ ಅವಕಾಶ ಕಲ್ಪಿಸಿರುವುದನ್ನು ತನಿಖೆ ನಡೆಸಿ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.
ಮಣ್ಣು ಮಿಶ್ರಿತ ನೀರು: ನದಿಯೊಳಗಿನಿಂದ ಮರಳು ತೆಗೆಯುತ್ತಿರುವುದರಿಂದ ನದಿ ನೀರು ಮಣ್ಣು ಮಿಶ್ರಿತಗೊಳ್ಳುತ್ತಿದೆ. ಕೊಟ್ಟಿಗೆಹಾರದಿಂದ ಮೂಡಿಗೆರೆ ತಾಲೂಕಿನ ಗಡಿಯುದ್ಧಕ್ಕೂ ಹೇಮಾವತಿ ನದಿ ನೀರು ಕುಡಿಯಲು ಯೋಗ್ಯವಾಗಿಲ್ಲ. ಈ ನೀರು ಕುಡಿಯುವ ಜನರಿಗೆ ಆರೋಗ್ಯ ಹದಗೆಡುವ ಅಪಾಯವಿದೆ. ಜಾನುವಾರುಗಳ ಪ್ರಾಣಕ್ಕೂ ಅಪಾಯವಿದೆ. ಆದ್ದರಿಂದ ನೀತಿ, ನಿಯಮ ಉಲ್ಲಂಘಿಸಿ ಮರಳು ಗಣಿಗಾರಿಕೆ ನಡೆಸುತ್ತಿರುವುದನ್ನು ತಡೆಗಟ್ಟಬೇಕು. ನದಿ ನೀರು ಮಲೀನಗೊಳ್ಳದಂತೆ ಎಚ್ಚರ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

