ಚಿಕ್ಕಮಗಳೂರು

ಮಲೆನಾಡಲ್ಲಿ ಮಳೆ: ಪ್ರಚಾರಕ್ಕೆ ತಡೆ

Published On :

ಕ.ಪ್ರ.ವಾರ್ತೆ    ಚಿಕ್ಕಮಗಳೂರು    ಏ. 8
ಬಿಸಿಲಿನ ಬೇಗೆಯಲ್ಲಿ ಬಸವಳಿದಿದ್ದ ಮಲೆನಾಡಿನಲ್ಲಿ ಮಂಗಳವಾರ ಮಧ್ಯಾಹ್ನ ಸುರಿದ ಮಳೆ ತಂಪೆರೆಯಿತು. ಚುರುಕುಗೊಳ್ಳುತ್ತಿರುವ ಚುನಾವಣಾ ಪ್ರಚಾರಕ್ಕೆ ಬ್ರೇಕ್ ಹಾಕಿತು.
ಕೆಲ ದಿನಗಳಿಂದ ಮಲೆನಾಡಿನ ಕೆಲವೆಡೆ ಸಂಜೆಯ ನಂತರದಲ್ಲಿ ಮಳೆ ಆಗಾಗ ಬಂದು ಹೋಗುತ್ತಿತ್ತು. ಆದರೆ, ಬಿಸಿಲಿನ ಝಳ ಕಡಿಮೆಯಾಗಿರಲಿಲ್ಲ. ಅದರಲ್ಲೂ ಚುನಾವಣಾ ಪ್ರಚಾರಕ್ಕಾಗಿ ಮನೆ ಮನೆಗಳಿಗೆ ತೆರಳುತ್ತಿರುವ, ರೋಡ್ ಶೋ ನಡೆಸುತ್ತಿರುವ ರಾಜಕೀಯ ಪಕ್ಷಗಳ ಕಾರ್ಯಕರ್ತರಿಗೆ ತುಂಬಾ ತೊಂದರೆಯಾಗುತ್ತಿತ್ತು.
ಮಂಗಳವಾರ ಮಧ್ಯಾಹ್ನದ ನಂತರ ಬಂದ ಮಳೆ ಚುನಾವಣಾ ಪ್ರಚಾರಕ್ಕೆ ತಾತ್ಕಾಲಿಕ ಬ್ರೇಕ್ ಹಾಕಿತು. ಮಳೆಯಿಂದಾಗಿ ಬಹಿರಂಗ ಪ್ರಚಾರವನ್ನು ಮೊಟಕುಗೊಳಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹಾಗೂ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ಮಂಗಳವಾರ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ಹಾಗೂ ಮೂಡಿಗೆರೆ ವಿಧಾನಸಭಾ ಕ್ಷೇತ್ರಗಳಲ್ಲಿ ಮತಯಾಚನೆ ನಡೆಸಿದರು.
ಕೆ. ಜಯಪ್ರಕಾಶ್ ಹೆಗ್ಡೆ ಅವರು ಹಿರೇಗೌಜ, ಬಿಳೇಕಲ್ಲು, ಉದ್ದೇಬೋರನಹಳ್ಳಿಯಲ್ಲಿ ಪ್ರಚಾರ ನಡೆಸಿ, ಸಖರಾಯಪಟ್ಟಣಕ್ಕೆ ತೆರಳಿದ ವೇಳೆಯಲ್ಲಿ ಮಧ್ಯಾಹ್ನದ ವೇಳೆಗೆ ಮಳೆ ಸುರಿಯಿತು. ಶೋಭಾ ಕರಂದ್ಲಾಜೆ ಅವರು ಮಲ್ಲಂದೂರಿನಲ್ಲಿ ಪ್ರಚಾರ ನಡೆಸಿ ಮೂಡಿಗೆರೆಗೆ ತೆರಳುವ ವೇಳೆಯಲ್ಲಿ ಮಳೆ ಆರಂಭವಾಯಿತು.
ಮೂಡಿಗೆರೆ ಅಡ್ಯಂತಾಯ ಬಯಲು ರಂಗಮಂದಿರದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ನಡೆಸಲು ಶಾಮಿಯಾನದ ಪೆಂಡಾಲ್ ಹಾಕಲಾಗಿತ್ತು. ಮಳೆಯಿಂದಾಗಿ ಶಾಮಿಯಾನ ಗಾಳಿಯಲ್ಲಿ ಹಾರಿ ಹೋಯಿತು. ಆಗ ಕಾರ್ಯಕ್ರಮವನ್ನು ಚರ್ಚ್‌ಹಾಲ್‌ಗೆ ಶಿಫ್ಟ್ ಮಾಡಲಾಯಿತು.
ಮೂಡಿಗೆರೆಯಲ್ಲಿ ಆಲಿಕಲ್ಲು, ಗುಡುಗು ಸಹಿತ ಸುಮಾರು 3 ಗಂಟೆಗೂ ಹೆಚ್ಚು ಕಾಲ ಮಳೆ ಸುರಿಯಿತು. ಬಲವಾಗಿ ಬೀಸಿದ ಗಾಳಿಗೆ ಕೆಲವೆಡೆ ಮನೆಗಳ ಹೆಂಚುಗಳು ಹಾರಿ ಹೋಗಿದ್ದು, ತಾಲೂಕು ಕಚೇರಿ ಆವರಣದಲ್ಲಿದ್ದ ಹೊರಟ್ಟಿಯ ಸುಧೀರ್, ದುರ್ಗದಹಳ್ಳಿಯ ಡಿ.ಎಂ. ನಾರಾಯಣಗೌಡ ಹಾಗೂ ತಾಲೂಕು ಕಚೇರಿಯ ಸಿಬ್ಬಂದಿ ಫ್ರಾನಿಸ್ಸ್ ಎಂಬವರಿಗೆ ಗಾಯಗಳಾದವು. ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು.
ಎನ್.ಆರ್. ಪುರ ತಾಲೂಕಿನ ಕೆಲವೆಡೆ ಗುಡುಗು ಸಹಿತ ಮಳೆಯಾಗಿದ್ದರೆ, ಕೊಪ್ಪದಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಬಂದಿತು. ಶೃಂಗೇರಿಯಲ್ಲಿ ಮಧ್ಯಾಹ್ನ 3 ಗಂಟೆಗೆ ಆರಂಭವಾದ ಮಳೆ ರಾತ್ರಿಯವರೆಗೆ ಸುರಿಯಿತು. ಚಿಕ್ಕಮಗಳೂರು ನಗರದಲ್ಲಿ ಸಂಜೆ ಆರಂಭವಾದ ಮಳೆ ರಾತ್ರಿವರೆಗೆ ನಿರಂತರವಾಗಿ ಸುರಿಯಿತು. ಒಟ್ಟಾರೆ ಮಂಗಳವಾರ ಮಲೆನಾಡಿನ ಬಹುತೇಕ ಭಾಗಗಳಲ್ಲಿ ಮಳೆ ಬಂದಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.