ಹುಡುಕ್ತಿದೀನಿ, ಮೋದಿ ಅಲೆ ಎಲ್ಲಿ?
ಕ.ಪ್ರ.ವಾರ್ತೆ ಟಿ ಚಿಕ್ಕಮಗಳೂರು ಟಿ ಏ.10
ರಾಷ್ಟ್ರದಲ್ಲಿ ಮೋದಿ ಅಲೆ ಬೀಸುತ್ತಿದೆ, ಹೀಗೆಂದು ಹೇಳುವವರಿಗೆ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಎಲ್ಲಿದೆ ಅಲೆ ಎಂದು ಪ್ರಶ್ನೆ ಮಾಡಿದ್ದಾರೆ.
ಈ ಚುನಾವಣೆಯಲ್ಲಿ ಮೋದಿ ಅಲೆ ಬೀಸುತ್ತಿದೆ ಎಂದು ಹೇಳುತ್ತಿದ್ದಾರೆ. ಆ ಅಲೆ ಎಲ್ಲಿದೆ ಎಂದು ಹುಡುಕುತ್ತಿದ್ದೇನೆ. ಅದು, ನನ್ನ ಕೈಗೆ ಈ ವರೆಗೆ ಸಿಕ್ಕಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ವ್ಯಂಗ್ಯವಾಡಿದರು.
ಅಲೆ ಎಂದರೆ ಇದಲ್ಲಾ, ನನ್ನ ಜೀವಮಾನದಲ್ಲಿ ಎರಡು ಬಾರಿ ರಾಜಕೀಯ ವಲಯದಲ್ಲಿ ಬೀಸಿದ್ದ ಅಲೆಯನ್ನು ಕಂಡಿದ್ದೆ. ಅದರಲ್ಲಿ ಒಂದು- 1971 ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ತೆಗೆದುಕೊಂಡಿದ್ದ ಗರೀಬಿ ಹಠವೋ ಅಲೆ. ಮತ್ತೊಂದು- ಇಂದಿರಾಗಾಂಧಿಯ ನಿಧನದ ನಂತರ 1984ರಲ್ಲಿ ರಾಜೀವ್ ಗಾಂಧಿ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಬೀಸಿದ ಅನುಕಂಪದ ಅಲೆ. ಅವುಗಳು ನಿಜವಾದ ಅಲೆಗಳು.
1984ರ ಲೋಕಸಭಾ ಚುನಾವಣೆಯಲ್ಲಿ 402 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲವು ಸಾಧಿಸಿತ್ತು. ಕರ್ನಾಟಕ ರಾಜ್ಯದಲ್ಲಿ ಮಂಡ್ಯ ಕ್ಷೇತ್ರ ಹೊರತುಪಡಿಸಿ ಇನ್ನುಳಿದ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿತ್ತು. ಆಗ ಮಂಡ್ಯದಿಂದ ತಾವು ಸ್ಪರ್ಧೆ ಮಾಡಿ ಪರಾಭವಗೊಂಡಿರುವುದಾಗಿ ಹೇಳುವುದನ್ನು ಕೃಷ್ಣ ಅವರು ಮರೆಯಲಿಲ್ಲ.
ಅರ್ಥವಿಲ್ಲದ ಮಾತು: ಬರಹಗಾರರು, ಕಲಾವಿದರನ್ನು ಏಕೆ ಪ್ರತ್ಯೇಕವಾಗಿ ನೋಡಬೇಕು. ಇದೊಂದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ದೇಶ. ಇಲ್ಲಿ ಪ್ರತಿಯೊಬ್ಬರೂ ತಾವು ನಂಬಿರುವ ಸಿದ್ಧಾಂತ, ವ್ಯಕ್ತಿಗಳ ಬಗ್ಗೆ ಮಾತನಾಡಲು, ಅಭಿಪ್ರಾಯ ವ್ಯಕ್ತಪಡಿಸಲು, ಹೇಳಿಕೆ ನೀಡಲು ಅವಕಾಶ ಇದೆ. ಹಾಗೆಯೇ ಸಾಹಿತಿಗಳು, ಬರಹಗಾರರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಸಾಹಿತ್ಯ ಮಡಿವಂತಿಕೆ ಕಳೆದುಕೊಳ್ಳುತ್ತದೆ ಎಂದು ಹೇಳುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದರು.
ರಾಜ್ಯ ಸರ್ಕಾರ ಕಳೆದ 10 ತಿಂಗಳಲ್ಲಿ ಉತ್ತಮ ಆಡಳಿತ ನೀಡಿದೆ. ಅನ್ನ ಭಾಗ್ಯ, ಕ್ಷಿರಭಾಗ್ಯ ಸೇರಿದಂತೆ ವಿವಿಧ ಜನೋಪಯೋಗಿ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಇದು, ಪಕ್ಷದ ಗೆಲುವಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಅಧಿಕಾರದಲ್ಲಿರುವಾಗ ಸರ್ಕಾರ ಎಡವುದು ಸಹಜ. ಕೇಂದ್ರ ಸರ್ಕಾರದಲ್ಲಿ ಕೆಲವು ಮಂದಿಗಳು ತಪ್ಪು ಮಾಡಿದ್ದಾರೆಂದು ಬಹಿರಂಗವಾಗುತ್ತಿದ್ದಂತೆ ಅವರ ವಿರುದ್ಧ ಕಾಂಗ್ರೆಸ್ ಕ್ರಮಗೊಂಡಿತ್ತು. ಇನ್ನು ಕೆಲವು ಪ್ರಕರಣಗಳು ನ್ಯಾಯಾಲಯದಲ್ಲಿವೆ. ಅದುದರಿಂದ ಅದರ ಬಗ್ಗೆ ಪ್ರಸ್ತಾಪಿಸುವುದು ಸರಿಯಲ್ಲ ಎಂದು ಹೇಳಿದರು.
ಸಹಜ ಏರಿಕೆ: ಬೆಲೆ ಏರಿಕೆ ಕುರಿತು ಕೇಳಿದ ಪ್ರಶ್ನೆಗೆ, ಬೆಲೆ ಏರಿಕೆ ಸ್ವಾಭಾವಿಕವಾಗಿ ಪರಿಣಾಮ ಬೀರುತ್ತದೆ. ಅದಕ್ಕೆ ಕಾರಣವೂ ಸಹ ಇದೆ. ಕಚ್ಚಾ ತೈಲವನ್ನು ಪೂರೈಕೆ ಮಾಡುವ ರಾಷ್ಟ್ರಗಳಲ್ಲಿ ಅವುಗಳ ಬೆಲೆ ಏರಿಕೆಯಾದಾಗ ನಮ್ಮ ದೇಶದಲ್ಲೂ ಬೆಲೆ ಏರಿಕೆಯಾಗುವುದು ಸಹಜ ಎಂದರು.
ರಾಜೀವ್ ಗಾಂಧಿ ಕಾಲದಲ್ಲೇ ಸಿಂಗಲ್ ಪಾರ್ಟಿ ಸರ್ಕಾರ ರಚನೆ ಕಾಲ ಮುಗಿಯಿತು. ತಮಿಳುನಾಡು, ಪಶ್ಚಿಮಬಂಗಾಳ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ರಾಜಕೀಯವಾಗಿ ಶಕ್ತಿಯುತವಾಗಿವೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

