ಜಿಲ್ಲೆಗೆ ಕಾಂಗ್ರೆಸ್ ಕೊಡುಗೆ ಏನು?
ಚಿಕ್ಕಮಗಳೂರು: ಇಂದಿರಾಗಾಂಧಿಯವರಿಗೆ ರಾಜಕೀಯದ ಪುನರ್ಜನ್ಮ ನೀಡಿರುವ ಮಲೆನಾಡಿನ ತವರೂರು ಚಿಕ್ಕಮಗಳೂರಿಗೆ ಕಾಂಗ್ರೆಸ್ ಪಕ್ಷದ ಕೊಡುಗೆ ಏನು ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಪ್ರಶ್ನೆ ಮಾಡಿದ್ದಾರೆ.
ನಗರದ ಜಿಲ್ಲಾ ಆಟದ ಮೈದಾನದಲ್ಲಿ ಭಾನುವಾರ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ನರೇಂದ್ರ ಮೋದಿ ಅವರು ಸ್ಥಳೀಯ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು.
ಇಂದಿರಾಗಾಂಧಿಯವರು ಈ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಅವರು ಕಷ್ಟದಲ್ಲಿದ್ದಾಗ ಅವರ ಸಹಾಯ ಮಾಡಿದಿರಿ. ಅವರು ಇಲ್ಲಿ ಗೆದ್ದು ಹೋದ ಮೇಲೆ ಇಲ್ಲಿಗೆ ಕೊಟ್ಟ ಕೊಡುಗೆಯಾದರೂ ಏನು ಎಂದು ಪ್ರಶ್ನಿಸಿದರು.
ಪ್ರತ್ಯೇಕ ಕೈಗಾರಿಕಾ ವ್ಯವಸ್ಥೆ: ಚಾಯ್ ವಾಲಾ, ಟೀ ವಾಲಾ ಹತ್ತಿರ ಬಂದಿದ್ದಾನೆ. ಕಾಫಿ ಮತ್ತು ಟೀ ಸ್ವಾಗತ ಕೋರುವ ಸಂಕೇತ. ಕಾಫಿ ಉದ್ಯಮ ಜಾಗತಿಕ ಆರ್ಥಿಕ ಕ್ಷೇತ್ರದಲ್ಲಿ ಖ್ಯಾತಿ ಪಡೆದಿದೆ. ಆದರೆ, ಇಲ್ಲಿ ಕಾಫಿ ಬೆಳೆಯುವವರ ಪರಿಸ್ಥಿತಿ ಸಂಕಷ್ಟದಲ್ಲಿದೆ. ಕಾಫಿ ಬೆಳೆಯುವಲ್ಲಿ ಉತ್ತಮ ತಂತ್ರಜ್ಞಾನ, ಸಂಶೋಧನೆಗಳು ನಡೆದಿಲ್ಲ. ಕಾಫಿಗೆ ಪ್ರತ್ಯೇಕವಾದ ಕೈಗಾರಿಕಾ ವ್ಯವಸ್ಥೆ ಮಾಡಿಕೊಡಬೇಕೆಂದು ಕೇಂದ್ರದ ಸಚಿವ ಜೈರಾಮ್ ರಮೇಶ್ ಅವರನ್ನು ಖುದ್ದಾಗಿ ಭೇಟಿ ಮಾಡಿದ ಸಂದರ್ಭದಲ್ಲಿ ತಿಳಿಸಿದ್ದೇನೆ ಎಂದರು.
ಅಡಕೆ ಬೆಳೆಗಾರರ ಸಮಸ್ಯೆಯ ಬಗ್ಗೆ ಅರಿವಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಡಕೆ ಬೆಳೆಗಾರರೊಂದಿಗೆ ಗುಜರಾತ್ಗೆ ಬಂದು ಸಮಸ್ಯೆಯನ್ನು ಗಮನಕ್ಕೆ ತಂದಿದ್ದಾರೆ. ಹಿಂದೂ ಸಂಪ್ರದಾಯದಲ್ಲಿ ನಮ್ಮ ಪುರ್ವಜರು ಅಡಕೆಗೆ ವಿಶೇಷ ಸ್ಥಾನಮಾನ ನೀಡಿದ್ದಾರೆ. ಬಿಜೆಪಿ ಪಕ್ಷ ಅಡಕೆ ಬೆಳೆಗಾರರ ಹಿತರಕ್ಷಣೆಗೆ ಬದ್ಧವಾಗಿದೆ ಎಂದು ಹೇಳಿದರು.
ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿ, 21ನೇ ಶತಮಾನ ಭಾರತೀಯರ ಶತಮಾನ. ಈಗಿನ ಸರ್ವೆ ಪ್ರಕಾರ ಬಿಜೆಪಿಗೆ ಬಹುಮತ ಬರಲಿದ್ದು, ನರೇಂದ್ರ ಮೋದಿ ಪ್ರಧಾನಿಯಾಗುವುದು ಖಚಿತ. ಹಣ, ಹೆಂಡ, ತೋಳ್ಬಲದಿಂದ ಗೆಲ್ಲಬಹುದೆಂಬ ಭ್ರಮೆಯಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ಈ ಚುನಾವಣೆಯಲ್ಲಿ ನಿರಾಶೆಯಾಗಲಿದೆ ಎಂದರು.
ದೇವೇಗೌಡರಿಗೆ ಮೋದಿ ಸ್ವಾಗತ
ಚಿಕ್ಕಮಗಳೂರು: ಮೋದಿಯವರು ಪ್ರಧಾನಮಂತ್ರಿಯಾದರೆ, ತಾವು ಕರ್ನಾಟಕದಲ್ಲಿ ಇರುವುದಾದರೂ ಹೇಗೆಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಹೇಳಿರುವುದಕ್ಕೆ ದೇವೇಗೌಡರು ಕರ್ನಾಟಕ ಬಿಟ್ಟರೆ ಗುಜರಾತ್ಗೆ ಬರಲಿ ಅವರಿಗೆ ಸ್ವಾಗತ ಕೋರುತ್ತೇನೆ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹೇಳಿದ್ದಾರೆ. ಇಲ್ಲಿನ ಜಿಲ್ಲಾ ಆಟದ ಮೈದಾನದಲ್ಲಿ ಭಾನುವಾರ ಮಧ್ಯಾಹ್ನ ನಡೆದ ಬಿಜೆಪಿ ಚುನಾವಣಾ ಪ್ರಚಾರದಲ್ಲಿ ಅವರು ಮಾತನಾಡಿ, ವಯೋವೃದ್ಧ ದೇವೇಗೌಡ ಹಾಗೂ ಅವರ ಪುತ್ರ (ಕುಮಾರಸ್ವಾಮಿ) ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಮೋದಿ ಪ್ರಧಾನಿಯಾದರೆ ಕರ್ನಾಟಕದಲ್ಲಿ ಇರುವುದಾದರೂ ಹೇಗೆಂದು ಅವರು ಹೇಳಿದ್ದಾರೆ. ಅವರು ಗುಜರಾತ್ಗೆ ಬರುವುದಾದರೆ, ಅವರು ಅಪೇಕ್ಷೆ ಪಟ್ಟರೆ ವೃದ್ಧಾಶ್ರಮ, ಫಾರಂ ಹೌಸ್ನಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗುವುದು.
ಅವರು ನನ್ನ ತಂದೆಯ ಸಮಾನ. ನಾನು ಅವರ ಮಗನಿಗೆ ಸಮಾನ. ಅವರ ಮಕ್ಕಳಿಗಿಂತ ಚೆನ್ನಾಗಿ ಅವರನ್ನು ನೋಡುತ್ತೇನೆ. ದೇವೇಗೌಡರ ಸೇವೆ ಸಲ್ಲಿಸಲು ಒಂದು ಅವಕಾಶ ಸಿಕ್ಕಂತಾಗುತ್ತದೆ ಎಂದು ವ್ಯಂಗ್ಯವಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

