ಚಿಕ್ಕಮಗಳೂರು

ಛಲವಾದಿ ಸಂಘದಿಂದ ಅಂಬೇಡ್ಕರ್ ಜಯಂತಿ

Published On :

ಚಿಕ್ಕಮಗಳೂರು: ಸಂವಿಧಾನಶಿಲ್ಪಿ ಅಂಬೇಡ್ಕರ್ ದೀನ ದಲಿತರ ಉದ್ಧಾರಕ್ಕೆ ಧ್ವನಿಯಾಗಿದ್ದರು ಎಂದು ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಆರ್. ಚಂದ್ರು ಹೇಳಿದರು.
ನಗರದ ಛಲವಾದಿ ಮಹಾಸಭಾ ಜಿಲ್ಲಾ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಡಾ. ಬಿ.ಆರ್. ಅಂಬೇಡ್ಕರ್ 123 ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುರ್ಷ್ಪಾಚನೆ ಮಾಡಿ ಅವರು ಮಾತನಾಡಿದರು.
ಸಂಘದ ಕಾರ್ಯಾಧ್ಯಕ್ಷ ಯು.ಡಿ.ರಾಜಣ್ಣ ಮಾತನಾಡಿ, ಸಮಾನ ಪೌರತ್ವಕ್ಕೆ ಒತ್ತು ಕೊಟ್ಟು ಸಮಾಜದಲ್ಲಿ ಬಹಿಷ್ಕಾರ ಪದ್ಧತಿಗೆ ಶಿಕ್ಷೆ ನೀಡುವಂತಹುದು, ಸರ್ಕಾರಿ ನೌಕರಿಯಲ್ಲಿ ಸಮಾನ ಪ್ರಾತಿನಿಧ್ಯ, ತಾರತಮ್ಯಕ್ಕೆ ತಿಲಾಂಜಲಿ, ಪರಿಶಿಷ್ಟರಿಗಾಗಿ ಪ್ರತ್ಯೇಕತೆ ಸೇರಿದಂತೆ ಹತ್ತುಹಲವು ವಿಶೇಷತೆಗಳಿಗೆ ಆದ್ಯತೆ ನೀಡಿದ ಸರ್ವ ಸಮ್ಮತ ನಾಯಕ ಅಂಬೇಡ್ಕರ್ ಎಂದರು.
ಕಾರ್ಯಕ್ರಮದಲ್ಲಿ ಎಸ್.ನಟರಾಜ್, ಎಂ.ಎಸ್. ಮಂಜುನಾಥ್, ಡಿ.ಕೆ.ಸಿದ್ದರಾಜು, ಮಹೇಶ್ ಹಾಜರಿದ್ದರು.
--
ನಗರದಲ್ಲಿ ಹಲವೆಡೆ ಡಾ.ಅಂಬೇಡ್ಕರ್ ಜನ್ಮ ದಿನಾಚರಣೆ
ಚಿಕ್ಕಮಗಳೂರು: ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 123ನೇ ಜನ್ಮ ದಿನಾಚರಣೆ ಸೋಮವಾರ ನಗರದ ವಿವಿಧೆಡೆ ನಡೆಯಿತು.
ಜಿಪಂ ಕಚೇರಿ ಆವರಣದ ಅಂಬೇಡ್ಕರ್ ಪ್ರತಿಮೆ ಎದುರು ಜಿಲ್ಲಾಡಳಿತ ವತಿಯಿಂದ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ, ಅಂಬೇಡ್ಕರ್ ಸಂವಿಧಾನ ರಚಿಸಿದ್ದರಿಂದ ಭಾರತದಲ್ಲಿ ಇಂದು ಮುಕ್ತ ಹಾಗೂ ನ್ಯಾಯಯುತ ಚುನಾವಣೆ ನಡೆಯಲು ಸಾಧ್ಯವಾಗಿದೆ. ದಲಿತರು, ಹಿಂದುಳಿದವರು, ಬಡವರು, ಅಶಕ್ತರು ಸರ್ಕಾರರದ ಸವಲತ್ತುಪಡೆದು ನೆಮ್ಮದಿ ಮತ್ತು ಗೌರವದಿಂದ ಬದುಕುವಂತಾಗಿದೆ ಎಂದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಬಿ. ಕರುಣಾಕರ್ ಮಾತನಾಡಿ, ಸಂವಿಧಾನ ಶಿಲ್ಪಿಯ ಕನಸು ನನಸಾಗಬೇಕಾದರೆ ದಲಿತರು ಮತ್ತು ಹಿಂದುಳಿದ ವರ್ಗದವರು ಶೈಕ್ಷಣಿಕವಾಗಿ ಮುಂದುವರಿದು ಸ್ವಾವಲಂಬಿಗಳಾಗಿ ಬದುಕಲು ಮುಂದಾಗಬೇಕೆಂದರು.
ಜಿಲ್ಲಾ ರಕ್ಷಣಾಧಿಕಾರಿ ಆರ್. ಚೇತನ್ ಮಾತನಾಡಿ, ಡಾ. ಅಂಬೇಡ್ಕರ್ ಅವರು ದಲಿತರು ಹಿಂದುಳಿದವರು, ಶೋಷಿತರ ಆಶಾಕಿರಣವಾಗಿದ್ದರು ಎಂದರು. ಅಪರ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಎಂ. ಪಾಟೀಲ್, ಜಿಪಂ ಸದಸ್ಯ ಜೆ.ಡಿ. ಲೋಕೇಶ್, ಮುಖಂಡ ಕೆ.ಟಿ. ರಾಧಾಕೃಷ್ಣ, ಈಶ್ವರ್, ಅಣ್ಣಯ್ಯ, ಹಿರೇಮಗಳೂರು ರಾಮಚಂದ್ರ ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳು ಹಾಜರಿದ್ದರು.
ಜಿಲ್ಲಾ ಕಾಂಗ್ರೆಸ್ ಕಚೇರಿ
ದೇಶದ ದಲಿತರು, ಶೋಷಿತರು, ಜನ ಸಾಮಾನ್ಯರ ಸ್ವಾಭಿಮಾನದ ಸಂಕೇತ ಡಾ. ಬಿ.ಆರ್. ಅಂಬೇಡ್ಕರ್ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಡಿ.ಎಲ್. ವಿಜಯಕುಮಾರ್ ಹೇಳಿದ್ದಾರೆ.
ಕಾಂಗ್ರೆಸ್ ಚುನಾವಣಾ ಪ್ರಚಾರ ಕಚೇರಿಯಲ್ಲಿ ನಡೆದ ಅಂಬೇಡ್ಕರ್ಜ್‌ಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಂಬೇಡ್ಕರ್ ಸಾಧನೆಯನ್ನು ಜಗತ್ತು ಕೊಂಡಾಡಿದೆ. ಅವರ ತತ್ವಾದರ್ಶಗಳನ್ನು ಜನರು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ದಲಿತರು, ಶೋಷಿತರು ಸೇರಿದಂತೆ ಎಲ್ಲ ವರ್ಗದವರ ಸಮಾನತೆಗಾಗಿ ಅಂಬೇಡ್ಕರ್ ತಮ್ಮ ಬದುಕನ್ನೇ ಸವೆಸಿದ್ದಾರೆ. ಜಗತ್ತು ಮೆಚ್ಚಿಕೊಂಡಿರುವ ಧೀಮಂತ ನಾಯಕ ಅಂಬೇಡ್ಕರ್. ದಲಿತರು, ಬಡವರು, ಕೂಲಿ ಕಾರ್ಮಿಕರು, ಶೋಷಿತ ವರ್ಗದ ಧ್ವನಿಯಾಗಿರುವ ಅಂಬೇಡ್ಕರ್ ನಮ್ಮೆಲ್ಲರಿಗೆ ಆದರ್ಶವಾಗಿದ್ದಾರೆ ಎಂದರು.
ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಎಲ್. ಮೂರ್ತಿ, ವಕ್ತಾರ ಎ.ಎನ್. ಮಹೇಶ್, ಮಹಾ ಪ್ರಧಾನ ಕಾರ್ಯದರ್ಶಿ ಕೆ. ಮಹಮದ್, ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ನಾಯ್ಡು, ಕೆಪಿಸಿಸಿ ಸದಸ್ಯ ಕೆ.ಎಂ. ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಧರ್ ಉರಾಳ್, ನಗರಸಭೆ ಸದಸ್ಯ ಸಿ.ಪಿ. ಲಕ್ಷ್ಮಣ್, ಮಹಮದ್ ಬದ್ರುದ್ದೀನ್, ಗಂಗಾಧರ್, ಮಹಮದ್ ಅಕ್ಬರ್, ಎಲ್.ವಿ. ಬಸವರಾಜು, ಕೆ.ಎಂ. ಕೃಷ್ಣಮೂರ್ತಿ, ಹಿರೇಮಗಳೂರು ಪುಟ್ಟಸ್ವಾಮಿ, ಎಂ.ಸಿ. ಶಿವಾನಂದಸ್ವಾಮಿ, ರೂಬೆನ್ ಮೋಸೆಸ್, ಲೋಕೇಶ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.